ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

‘ಮಂಗಳೂರು ದಸರಾ’ ಮಹೋತ್ಸವ ಸಂಪನ್ನ; ಮಳೆ ನಡುವೆಯೂ ಕುಗ್ಗದ ಉತ್ಸಾಹ

09:46 AM Oct 14, 2024 IST | Samyukta Karnataka

ಮಂಗಳೂರು: ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ‘ಮಂಗಳೂರು ದಸರಾ’ ಭಾನುವಾರ ವಿಜೃಂಭಣೆಯ ಶೋಭಾಯಾತ್ರೆಯೊಂದಿಗೆ ಸಮಾಪನಗೊಂಡಿತು.
ಕುದ್ರೋಳಿ ದೇವಸ್ಥಾನ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಅದ್ದೂರಿಯ ದಸರಾ ಮೆರವಣಿಗೆ ಸಂಜೆ ಚಾಲನೆ ನೀಡಿದರು. ದೇಶ, ವಿದೇಶಗಳಿಂದ ಆಗಮಿಸಿದ ಭಕ್ತ ಸಮೂಹ ಆಕರ್ಷಕ ದಸರಾ ಮೆರವಣಿಗೆ ನೋಡಿ ಕಣ್ತುಂಬಿಕೊಂಡಿತು.
ಶ್ರೀಕ್ಷೇತ್ರದಿಂದ ಸಂಜೆ ಮೊದಲು ಗಣಪತಿ ವಿಗ್ರಹದ ಬಳಿಕ ನವದುರ್ಗೆಯವರ ಅಲಂಕೃತ ವಿಗ್ರಹಗಳನ್ನು ಮಂಟಪದಿಂದ ಹೊರಗೆ ತರಲಾಯಿತು. ಕೊನೆಯಲ್ಲಿ ಶಾರದಾ ದೇವಿಯ ವಿಗ್ರಹವನ್ನು ವಿದ್ಯುದ್ದೀಪಾಲಂಕೃತ ರಥದಲ್ಲಿ ಕುಳ್ಳಿರಿಸಲಾಯಿತು. ವಿಗ್ರಹಗಳ ಶೋಭಾಯಾತ್ರೆ ಮುಂದುವರಿಯುತ್ತಿದ್ದಂತೆ ವಿವಿಧ ಬಗೆಯ ಟ್ಯಾಬ್ಲೋಗಳು, ಕೇರಳದ ಮೈನವಿರೇಳಿಸುವ ಚೆಂಡೆ ವಾದ್ಯ, ಬೆಂಗಳೂರಿನ ವಾದ್ಯ ತಂಡ, ರಾಜ್ಯದ ನಾನಾ ಕಡೆಯಿಂದ ಆಗಮಿಸಿದ ಜಾನಪದ, ಸಾಂಸ್ಕೃತಿಕ ಹಿನ್ನೆಲೆಯ ನೃತ್ಯ ತಂಡಗಳು, ಮಹಾರಾಷ್ಟ್ರ ಕಲಾವಿದರ ಡೋಲ ನೃತ್ಯ, ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗ, ತ್ರಿಶೂರಿನ ಬಣ್ಣದ ಕೊಡೆಗಳು, ಚಿತ್ತಾಕರ್ಷಕ ಹುಲಿವೇಷಗಳು, ವೈವಿಧ್ಯಮಯ ವಾದ್ಯ ವೃಂದಗಳು ಸೇರಿದಂತೆ ೫೦ಕ್ಕೂ ಅಧಿಕ ಟ್ಯಾಬ್ಲೋಗಳು, ಇಸ್ಕಾನ್ ಭಜನಾ ತಂಡ, ಹಳದಿ ವಸ್ತ್ರಧಾರಿ ತಂಡದಿಂದ ಕೇರಳ ಶಿವಗಿರಿ ತೀರ್ಥಾಟನೆ ದೃಶ್ಯ ಗಮನ ಸೆಳೆಯುತ್ತಿತ್ತು. ಆಧ್ಯಾತ್ಮಿಕ, ಸಾಂಸ್ಕೃತಿಕ, ಇತಿಹಾಸಗಳನ್ನು ಬಿಂಬಿಸುವ ಸ್ತಬ್ಧಚಿತ್ರದೊಂದಿಗೆ ಮಂಗಳೂರಿನ ರಾಜಬೀದಿಗಳಲ್ಲಿ ಮುನ್ನಡೆಯಿತು.
ಈ ಬಾರಿಯೂ ದಸರಾ ಮಹೋತ್ಸವಕ್ಕೆ ಇಡೀ ಮಂಗಳೂರು ಪ್ರಮುಖ ರಸ್ತೆಯನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಹೊಣೆಯನ್ನು ಮಹಾನಗರ ಪಾಲಿಕೆ ಆಡಳಿತ ವಹಿಸಿಕೊಂಡಿತ್ತು. ಇದಲ್ಲದೆ ಅನೇಕ ಸಂಘಸಂಸ್ಥೆಗಳು ಕೂಡ ನಗರವನ್ನು ಶೃಂಗರಿಸುವಲ್ಲಿ ಪೈಪೋಟಿಗೆ ಇಳಿದಿದ್ದವು. ಇದರಿಂದಾಗಿ ಇಡೀ ಮಂಗಳೂರು ಪೇಟೆಯಲ್ಲಿ ದಸರಾ ಹಬ್ಬದ ವಾತಾವರಣ ಒಂಭತ್ತು ದಿನಗಳ ಕಾಲವೂ ಕಂಡುಬಂದಿತ್ತು.
ಅಪಾರ ಜನಸಾಗರ ನಡುವೆ ಶೋಭಾ ಯಾತ್ರೆಯು ಕಂಬಳ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ನಾರಾಯಣ ಗುರು ವೃತ್ತ, ಲಾಲ್‌ಭಾಗ್, ಬಲ್ಲಾಲ್‌ಬಾಗ್, ಪಿವಿಎಸ್ ವೃತ್ತ, ನವಭಾರತ ವೃತ್ತ, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ರಥಬೀದಿ, ಚಿತ್ರಾ, ಅಳಕೆಯಾಗಿ ಮರಳಿ ಕುದ್ರೋಳಿ ಕ್ಷೇತ್ರಕ್ಕೆ ಬುಧವಾರ ನಸುಕಿನ ಜಾವ ಆಗಮಿಸಿತು. ಬಳಿಕ ಪೂಜೆ ಬಲಿ, ಮಂಟಪ ಪೂಜೆ ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ಶ್ರೀ ಶಾರದೆ, ನವದುರ್ಗೆಯರ ಮೂರ್ತಿಗಳನ್ನು ಜಲಸ್ತಂಭನಗೊಳಿಸಲಾಯಿತು.
ಶಾಸಕ ವೇದವ್ಯಾಸ ಕಾಮತ್, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ಊರ್ಮಿಳಾ ರಮೇಶ್, ಡಾ. ಬಿ.ಜಿ. ಸುವರ್ಣ, ಲೋಲಾಕ್ಷ ಕರ್ಕೇರ, ಖಜಾಂಚಿ ಆರ್. ಪದ್ಮರಾಜ್, ಮಾಜಿ ಸಚಿವ ಬಿ. ರಮಾನಾಥ ರೈ, ಬಿ. ಮಾಧವ ಸುವರ್ಣ, ರವಿಶಂಕರ್ ಮಿಜಾರ್, ಎಂ. ಶೇಖರ್ ಪೂಜಾರಿ, ಜಗದೀಪ್ ಡಿ. ಸುವರ್ಣ, ಸಂತೋಷ್ ಕುಮಾರ್ ಜೆ., ದೇವೆಂದ್ರ ಪೂಜಾಆರಿ, ಡಾ. ಅನುಷಿಯ ಬಿ.ಟಿ. ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.
ಜನಸ್ತೋಮ..:
ದಸರಾ ಮಹೋತ್ಸವಕ್ಕೆ ಆರಂಭದಿಂದಲೂ ಜನಸಾಗರ ಹರಿದುಬಂದಿದೆ. ನವರಾತ್ರಿಯ ಒಂಭತ್ತು ದಿನ ಕೂಡ ಭಕ್ತರು ಪ್ರವಾಹೋಪಾದಿಯಲ್ಲಿ ಕುದ್ರೋಳಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ದಸರಾ ಮೆರವಣಿಗೆಗೆ ಬೆಳಗ್ಗಿನಿಂದಲೇ ಮಂಗಳೂರಿನತ್ತ ಜನತೆ ಆಗಮಿಸುವುದು ಕಂಡುಬಂತು. ಸಂಜೆಯಾಗುತ್ತಿದ್ದಂತೆ ಜನರು ಪ್ರವಾಹೋಪಾದಿಯಲ್ಲಿ ಆಗಮಿಸುತ್ತಿದ್ದರು. ಶೋಭಾಯಾತ್ರೆ ಸಾಗುವ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲಿನಿಂದ ಜನ ತಂಡವೇ ಮೇಳೈಸಿತ್ತು. ವರ್ಣಮಯ ಶೋಭಾಯಾತ್ರೆಯನ್ನು ಕಣ್ತುಂಬಿ ನೋಡುವುದರೊಂದಿಗೆ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿ ಸಂಭ್ರಮಿಸುತ್ತಿದ್ದರು.

Next Article