ಮಂಡ್ಯದಿಂದಲೇ ಎಚ್ಡಿಕೆ ಸ್ಪರ್ಧೆ ಇಂದು ಅಂತಿಮ ತೀರ್ಮಾನ
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪರ್ಧಿಸುವುದು ಬಹುತೇಕ ನಿಶ್ಚಿತವಾಗಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧೆಯ ಬಗ್ಗೆ ಒಂದಡೆ ಮಂಡ್ಯದ ಜೆಡಿಎಸ್ ಕಾರ್ಯಕರ್ತರ ಒತ್ತಡ ತೀವ್ರಗೊಳ್ಳುತ್ತಿದ್ದರೆ ಮತ್ತೊಂದೆಡೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಕ್ಷೇತ್ರ ತೊರೆಯದಂತೆ ದುಂಬಾಲು ಬಿದ್ದಿರುವ ಹಿನ್ನೆಲೆಯಲ್ಲಿ ಜಿಜ್ಞಾಸೆ ಏರ್ಪಟ್ಟಿದೆ. ಆದರೆ, ಬಿಜೆಪಿ ಕೇಂದ್ರೀಯ ನಾಯಕರ ಸೂಚನೆಯ ಹಿನ್ನೆಲೆಯಲ್ಲಿ ಮೈತ್ರಿ ಧರ್ಮ ಪಾಲನೆಯ ಭಾಗವಾಗಿ ಕುಮಾರಸ್ವಾಮಿ ಅವರೇ ಮಂಡ್ಯದಲ್ಲಿ ಸ್ಪರ್ಧಿಸುವುದು ಖಚಿತ ಎನ್ನಲಾಗಿದೆ.
ಮಂಗಳವಾರ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದ್ದು ಸಭೆಯಲ್ಲಿ ಮಂಡ್ಯ ಮತ್ತು ಕೋಲಾರ ಕ್ಷೇತ್ರದ ಸ್ಪರ್ಧಾಳುಗಳ ನಿರ್ಧಾರವಾಗಲಿದೆ. ಬುಧವಾರ ಅಧಿಕೃತವಾಗಿ ಮಂಡ್ಯ, ಕೋಲಾರ ಮತ್ತು ಹಾಸನದ ಜೆಡಿಎಸ್ ಹುರಿಯಾಳುಗಳ ಪಟ್ಟಿ ಪ್ರಕಟಗೊಳ್ಳಲಿದೆ.
ಸೋಮವಾರ ಕುಮಾರಸ್ವಾಮಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಫರ್ಧಿಸಿದರೆ ಚನ್ನಪಟ್ಟಣದಲ್ಲಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ. ಹಾಗಾಗಿ ಕ್ಷೇತ್ರ ತೊರೆಯುವುದು ಬೇಡ. ಹಾಗೊಂದು ವೇಳೆ ಕ್ಷೇತ್ರ ತೊರೆಯುವುದೇ ಆದಲ್ಲಿ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದನ್ನು ಖಚಿತಪಡಿಸಬೇಕೆಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು ತಾಕೀತು ಮಾಡಿದರೆನ್ನಲಾಗಿದೆ. ಇದಕ್ಕೆ ಪ್ರತಿಸ್ಪಂದಿಸಿದ ಎಚ್‌ಡಿಕೆ, `ಮಂಡ್ಯದಲ್ಲಿ ಸ್ಪರ್ಧಿಸುವಂತೆ ನನಗೆ ಬಿಜೆಪಿ ನಾಯಕರಿಂದ ಒತ್ತಡವಿದೆ. ನೀವು ಒಪ್ಪಿಗೆ ಕೊಟ್ಟರೆ ಮಾತ್ರ ಸ್ಪರ್ಧಿಸುತ್ತೇನೆ' ಎನ್ನುವ ಮೂಲಕ ಮನದಿಂಗಿತ ವ್ಯಕ್ತಪಡಿಸಿದರೆಂದು ತಿಳಿದುಬಂದಿದೆ.
ಈ ವೇಳೆ ಕುಮಾರಸ್ವಾಮಿ ನಿವಾಸದ ಮುಂದೆ ಜಮಾಯಿಸಿದ್ದ ಮಂಡ್ಯದ ಜೆಡಿಎಸ್ ಕಾರ್ಯಕರ್ತರು ಮಂಡ್ಯದಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸಿದರಲ್ಲದೆ, ಮಳವಳ್ಳಿಯ ಭರತ್ ಎಂಬಾತ ಕೈಕುಯ್ದುಕೊಂಡ ಘಟನೆಯೂ ನಡೆಯಿತು. ತಕ್ಷಣ ಆತನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಕಳುಹಿಸಲಾಯಿತು. ಮಂಗಳವಾರದ ಕೋರ್ ಕಮಿಟಿ ಸಭೆಯಲ್ಲಿ ಈ ಎಲ್ಲಾ ಗೊಂದಲಗಳಿಗೆ ತೆರೆ ಬೀಳಲಿದ್ದು ಸ್ಪಷ್ಟ ಚಿತ್ರಣ ಹೊರಬೀಳಲಿದೆ.