For the best experience, open
https://m.samyuktakarnataka.in
on your mobile browser.

ಮಂಡ್ಯ : ಕಾರಿನ ಮೇಲೆ ಮರ ಬಿದ್ದು ಯುವಕ ದುರ್ಮರಣ

04:17 PM May 07, 2024 IST | Samyukta Karnataka
ಮಂಡ್ಯ   ಕಾರಿನ ಮೇಲೆ ಮರ ಬಿದ್ದು ಯುವಕ ದುರ್ಮರಣ

ಮಂಡ್ಯ : ಬಿರುಗಾಳಿ ಸಹಿತ ಸುರಿದ ಮಳೆಗೆ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಯುವಕನೊಬ್ಬ ದುರ್ಮರಣ ಕ್ಕೀಡಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ನಗರದ ಆಸ್ಪತ್ರೆ ರಸ್ತೆಯಲ್ಲಿ ನಡೆದ ದುರಂತದಲ್ಲಿ ತಾಲೂಕಿನ ಜಿ.ಬೊಮ್ಮನಹಳ್ಳಿ ಗ್ರಾಮದ ರಾಮಯ್ಯನ ಪುತ್ರ ಕಾರ್ತಿಕ್ (28) ಸಾವನ್ನಪ್ಪಿದ ದುರ್ದೇವಿಯಾಗಿದ್ದು, ಈತನ ಜೊತೆ ಕಾರಿನಲ್ಲಿದ್ದ ಇಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ,
ಸೋಮವಾರ ರಾತ್ರಿ ಗಾಳಿ ಸಹಿತ ಮಳೆ ಬಿದ್ದ ವೇಳೆ ಮರ ಓಮ್ನಿ ಕಾರ್ ಮೇಲೆ ಬಿದ್ದ ಪರಿಣಾಮ ಕಾರ್ತಿಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಬೊಮ್ಮನಹಳ್ಳಿ ಗ್ರಾಮದ ಕಾರ್ತಿಕ್ ಹುಟ್ಟುಹಬ್ಬ ಮಂಗಳವಾರ ಇದ್ದ ಹಿನ್ನೆಲೆಯಲ್ಲಿ ಸ್ನೇಹಿತರಾದ ಸುನೀಲ್ ಮತ್ತು ಚೇರನಹಳ್ಳಿ ಮಂಜು ಜೊತೆ ಮಂಡ್ಯ ನಗರಕ್ಕೆ ಓಮ್ನಿ ಕಾರಿನಲ್ಲಿ (ka-11-ಎಂ 978 ) ಬಟ್ಟೆ ಖರೀದಿಸಲು ಬಂದಿದ್ದರು, ಸೋಮವಾರ ರಾತ್ರಿ 8 ಸಮಯದಲ್ಲಿ ಗಾಳಿ ಸಮೇತ ಮಳೆ ಆರಂಭಗೊಂಡಾಗ ನೂರಡಿ ಅಡಿ ರಸ್ತೆಯಿಂದ ಆಸ್ಪತ್ರೆ ರಸ್ತೆಯ ತಿರುವಿನಲ್ಲಿ ಮರ ಕಾರಿನ ಮೇಲೆ ಬಿದ್ದಿದೆ.
ತಕ್ಷಣ ಸಾರ್ವಜನಿಕರು ರಕ್ಷಣೆಗೆ ಮುಂದಾಗಿದ್ದು ಅಷ್ಟರಲ್ಲಿ ನಜ್ಜು ಗುಜ್ಜಾಗಿದ್ದ ಕಾರಿನಲ್ಲಿ ಸಿಲುಕಿದ್ದ ಕಾರ್ತಿಕ್ ಸಾವನ್ನಪ್ಪಿದ್ದನ್ನು, ಇನ್ನಿಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ.
ಪೂರ್ವ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನು ಮಿಮ್ಸ್ ಶವಗಾರಕ್ಕೆ ರವಾನಿಸಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದುರಂತದಲ್ಲಿ ಯುವಕ ಸಾವನ್ನಪ್ಪಿರುವುದಕ್ಕೆ ಅರಣ್ಯ ಇಲಾಖೆ ಮತ್ತು ನಗರಸಭೆ ಹೊಣೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ ನಗರ ಪ್ರದೇಶದ ಹಲವು ರಸ್ತೆಗಳಲ್ಲಿ ಮರಗಳನ್ನು ಬೆಳೆಸಲಾಗಿದ್ದು ಆದರೆ ಅದರ ನಿರ್ವಹಣೆಯನ್ನು ಅರಣ್ಯ ಇಲಾಖೆ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ, ಬೇರು ಗಟ್ಟಿ ಇಲ್ಲದ ಮರಗಳನ್ನು ಬೆಳೆಸಿರುವುದರಿಂದ ಗಾಳಿ ಮಳೆ ಬಿದ್ದ ಸಂದರ್ಭದಲ್ಲಿ ಮರಗಳು ಧರೆಗೆ ಉರುಳುತ್ತಿವೆ, ದೊಡ್ಡ ಗಾತ್ರದ ಮರಗಳ ಗೊಂಬೆಗಳು ರಸ್ತೆಗಳಿಗೆ ಚಾಚಿಕೊಂಡಿವೆ, ಅದೇ ರೀತಿ ಒಣಗಿದ ಕೊಂಬೆಗಳನ್ನು ಹಾಗೆ ಬಿಡಲಾಗಿದೆ, ಅರಣ್ಯ ಇಲಾಖೆ ಜೊತೆಗೆ ನಗರಸಭೆ ಬೇಜವಾಬ್ದಾರಿ ತೋರುತ್ತಿರುವುದರಿಂದ ಜೀವ ಬಲಿಯಾಗಿದೆ ಎಂದು ಕಿಡಿಕಾರಿದರು.