ಮಂತ್ರಿಯಾಗುವ ಯೋಗ ಸಿಗಬಾರದೇ?
ವಿಶ್ವನ ಜೊತೆ ಮಾತಾಡುತ್ತಾ ಕೂತಿದ್ದೆ. ವಿಶಾಲು ಅನ್ಯಮನಸ್ಕಳಾಗಿ ಬೇರೆ ಏನೋ ಯೋಚಿಸುತ್ತಿದ್ದಳು.
“ಏನು, ಅಷ್ಟು ಗಾಢವಾದ ಆಲೋಚನೆ? ಹೊಸ ಸರ್ಕಾರ ಬಂತು ಅಂತಾನಾ? ಒಂದು ಲಕ್ಷ ನಷ್ಟ ಆಯ್ತು ಅಂತಾನಾ?” ಎಂದೆ.
“ಎರಡೂ ಅಲ್ಲ, ನಮ್ಮೆಜಮಾನ್ರು ಪ್ರಯೋಜನ ಇಲ್ಲವಲ್ಲ ಅಂತ ಯೋಚಿಸ್ತಿದ್ದೆ” ಎಂದು ವಿಶ್ವನನ್ನು ಬೈದಳು.
“ಮದ್ವೆ ಆದ ದಿನದಿಂದ ಇದನ್ನೇ ಹೇಳ್ತಾ ಇದ್ದೀಯ. ನಂಗೆ ಬರೋ ಸಂಬಳದಲ್ಲಿ ನಿನ್ನ ನಿಭಾಯಿಸ್ತಾ ಇದ್ದೀನಲ್ಲ ಸಾಲ್ದಾ?” ಎಂದ ಪತಿ ಮಹಾಶಯ.
ಆದ್ರೆ ನಾನು ಆ ಪ್ರಶ್ನೆಯನ್ನು ಅಲ್ಲಿಗೇ ಬಿಡ್ಲಿಲ್ಲ. “ಯಾಕೆ ವಿಶ್ವ ಸರಿ ಇಲ್ಲ? ವಿಶ್ವ ಓಟು ಮಾಡಿದ ಅಭ್ಯರ್ಥಿ ಗೆದ್ದಿದ್ದಾರೆ. ಮಂತ್ರಿ ಆಗಿದ್ದಾರೆ. ವಿಶ್ವನ ಕೈಗುಣ ಚೆನ್ನಾಗಿದೆ” ಎಂದೆ.
“ಅದರಿಂದ ನನ್ನ ಗಂಡನಿಗೆ ಬಂದ ಭಾಗ್ಯ ಏನು?” ಎಂದು ಬೇಸಿಕ್ ಪ್ರಶ್ನೆ ಎಸೆದಳು.
ವಿಶಾಲೂ ಮಾತು ನನಗೂ ನಿಜ ಅನ್ನಿಸಿತು. ಗೆದ್ದು ಮಂತ್ರಿ ಆದ ಮಹಾಶಯನ್ನ ಮತ್ತೆ ನೋಡಲು ಸಾಧ್ಯವೇ ಇಲ್ಲ. ಆತ ಮತದಾರನ ಮನೆ ಬಳಿಗಂತೂ ಬರುವುದಿಲ್ಲ. ಮತದಾರ ಮಂತ್ರಿಯ ಆಫೀಸಿಗೆ ಹೋದರೆ ದ್ವಾರಪಾಲಕ ಒಳಗೆ ಬಿಡುವುದಿಲ್ಲ.
“ಯರ‍್ಯಾರೋ ತಮ್ಮ ಹೆಂಡ್ತಿರ‍್ನ ಎಲೆಕ್ಷನ್‌ಗೆ ನಿಲ್ಲಿಸ್ತಾರೆ. ಕಾರ್ಪೊರೇಟರ್‌ಗಳ್ನ ಮಾಡ್ತಾರೆ. ಎಂ.ಎಲ್.ಎ. ಮಾಡ್ತಾರೆ” ಎಂದು ಕೆಲವು ಉದಾಹರಣೆಗಳನ್ನು ವಿಶಾಲು ಕೊಟ್ಟಳು.
“ಆದ್ರೆ ರಾಜಕೀಯ ಅನ್ನೋದು ಆಕೆಗೆ ಗೊತ್ತರ‍್ಬೇಕು. ಒಂದೇ ಸಲಕ್ಕೆ ಗೃಹಿಣಿ ಆದವಳು ಮಂತ್ರಿ ಸ್ಥಾನಕ್ಕೆ ಏರಿದರೆ ಕಷ್ಟ ಆಗುತ್ತೆ” ಎಂದೆ. ಆದರೆ ವಿಶಾಲೂ ಒಪ್ಪಲಿಲ್ಲ.
“ಹಾಗೇನಿಲ್ಲ, ಎಷ್ಟೋ ಸಲ ಮಹಿಳೆಯರು ದಿಢೀರನೆ ಜವಾಬ್ದಾರಿ ತಗೊಂಡು ನಿಭಾಯಿಸಿದ್ದಾರೆ. ಯಜಮಾನರು ಅಕಾಲ ಮರಣಕ್ಕೆ ತುತ್ತಾದಾಗ ಆ ಜಾಗಕ್ಕೆ ಹೆಂಡ್ತೀನ ನಿಲ್ಲಿಸ್ತಾರೆ. ಸಿಂಪತಿ ಓಟುಗಳಿಂದ ಆಕೆ ಸಖತ್ತಾದ ಮಾರ್ಜಿನ್‌ನಿಂದ ಗೆದ್ದು ಬಿಡ್ತಾಳೆ. ಬರಬರುತ್ತಾ ರಾಜಕಾರಣಿ ಆಗ್ತಾಳೆ” ಎಂದಳು. ವಿಶಾಲು ಮಾತಿಗೆ ನಾನು ಒಪ್ಪಲಿಲ್ಲ.
“ರಾಜಕಾರಣಿಯ ಕಷ್ಟ ನಿಮಗ್ಗೊತ್ತಾ? ಮೊದಲ ದಿನದಿಂದ ಕಡೇ ದಿನಗಳವರೆಗೂ ಬರೀ ಟೆನ್ಸನ್ನು, ಡಿಪ್ರೆಷನ್ನು, ದಿನಕ್ಕೆ ೪ ಮಾತ್ರೆ” ಎಂದೆ.
“ಗೆದ್ದವರಿಗೆ ಏನಿರುತ್ತೆ ಯೋಚ್ನೆ? ಎಲೆಕ್ಷನ್‌ಗೆ ನಿಲ್ತಾರೆ, ಗೆಲ್ತಾರೆ, ಆರಾಮವಾಗಿ ಎ.ಸಿ.ರೂಮಲ್ಲಿ ಕರ‍್ತಾರೆ. ಗೋಣೀಚೀಲದಲ್ಲಿ ದುಡ್ ತುಂಬಿಕೊಳ್ತಾರೆ” ಎಂದಳು.
“ಚುನಾವಣೆಗೆ ನಿಂತವನಿಗೆ ಮೊದಲ ಹಂತದಲ್ಲಿ ಟಿಕೆಟ್ ಸಿಗುತ್ತೋ ಇಲ್ವೋ ಅನ್ನೋ ಯೋಚ್ನೆ. ನಿದ್ದೆ ಇಲ್ದೆ ಒದ್ದಾಡ್ತಾನೆ” ಎಂದೆ. ನನ್ನ ವಾದಕ್ಕೆ ವಿಶ್ವ ಒಪ್ಪಿದ.
“ಹೌದೌದು, ಒದ್ದಾಡ್ಬಿಡ್ತಾರೆ. ಹಗಲು ರಾತ್ರಿ ಪಾರ್ಟಿ ಆಫೀಸ್‌ಗೂ, ಮನೆಗೂ, ದೇವಸ್ಥಾನಕ್ಕೂ ಓಡಾಡಿ ಓಡಾಡಿ ಸುಸ್ತ್ ಹೊಡೆದ್ಹೋಗ್ತಾರೆ” ಎಂದ.
“ಕಡೆಗೂ ಟಿಕೆಟ್ ಸಿಗುತ್ತೆ ಅಂತ ಇಟ್ಕೊಳ್ಳಿ. ಆಗ ಎಲೆಕ್ಷನ್‌ಗೆ ನಿಲ್ಬೇಕು. ಯಾವ ಕ್ಷೇತ್ರ ಕೊಡ್ತಾರೋ ಅನ್ನೋ ಯೋಚ್ನೆ, ಮತ್ತೆ ಟೆನ್‌ಶನ್” ಎಂದೆ.
“ಕರೆಕ್ಟು, ಒಬ್ಬೊಬ್ಬರಿಗೆ ಒಂದೊಂದು ಕ್ಷೇತ್ರ ಕೊಟ್ಬಿಡ್ತಾರೆ. ಯರ‍್ನೋ ತಗೊಂಡ್ಹೋಗಿ ಬೆಳಗಾವೀಲಿ ನಿಲ್ಲಿಸ್ತಾರೆ. ಇನ್ನು ಯರ‍್ನೋ ತಗೊಂಡ್ಹೋಗಿ ಬೆಂಗಳೂರು ಉತ್ತರ ಅಂತಾರೆ. ಹೊಸ ಕ್ಷೇತ್ರದಲ್ಲಿ ಟೆನ್‌ಶನ್ ಇದ್ದೇ ಇರುತ್ತೆ” ಎಂದ ವಿಶ್ವ.
“ನಿಂತ್ಮೇಲೆ ಮನೆ ಮನೆಗೂ ಹೋಗಿ ಓಟ್ ಕೇಳ್ಬೇಕು. ಎಲ್ಲರಿಗೂ ಕೈ ಮುಗೀಬೇಕು. ಕೈ ಮುಗಿದೂ ಮುಗಿದೂ ರೆಟ್ಟೆಗಳು ನೋವು ಬಂದು ರಾತ್ರಿ ಹೊತ್ತು ನೋವಿನ ಎಣ್ಣೆಯಿಂದ ಮಾಲಿಶ್ ಮಾಡಿಸ್ಕೋಬೇಕು” ಎಂದೆ.
“ಹೌದು, ಚುನಾವಣೆ ಟೈಮಲ್ಲಿ ಎಣ್ಣೆ ಸೇಲ್ಸ್ ಜಾಸ್ತಿ ಇರುತ್ತೆ” ಎಂದ ವಿಶ್ವ.
“ಚುನಾವಣೆ ಮುಗಿಯುತ್ತೆ. ಎಲೆಕ್ಷನ್ ರಿಸಲ್ಟ್ ಬರೋವರೆಗೂ ಕಾಯೋದಿದೆಯಲ್ಲ, ಅದು ಟಾರ್ಚರ್. ಮುಳ್ಳಿನ ಮೇಲೆ ನಿಂತ್ಹಾಗೆ. ಮನಸ್ಸು I.C.U. ನಲ್ಲಿರುತ್ತೆ. ಬಾಡಿ ರೆಸಾರ್ಟ್ಲ್ಲಿರುತ್ತೆ. ಯಾವಾಗ ಏನಾಗುತ್ತೋ ಅನ್ನೋ ಆತಂಕದಲ್ಲಿ ಬಿ.ಪಿ. ಜಾಸ್ತಿ ಆಗುತ್ತೆ”
ವಿಶಾಲೂ ಕೇಳುತ್ತಾ ಕೂತಿದ್ದಳು.
“ಹಾಂ.. ಸತ್ಯವಾದ ಮಾತು. ಮುಂದೆ ಹೇಳು” ಎಂದ ವಿಶ್ವ.
“ಚುನಾವಣೇಲಿ ಗೆದ್ವಿ ಅಂತ ಇಟ್ಕೊಳ್ಳಿ. ಎಂ.ಪಿ. ಅಥವಾ ಎಂ.ಎಲ್.ಎ. ಆಗಿ ಗೆದ್ದು ಪ್ರಮಾಣ ವಚನಕ್ಕೆ ಹೋದ್ಮೇಲೆ ನಮ್ಗೆ ಮಿನಿಸ್ಟರ್‌ಗಿರಿ ಸಿಗುತ್ತೋ ಇಲ್ಲವೋ ಅನ್ನೋ ಟೆನ್‌ಶನ್ನು”
ವಿಶಾಲು ಇದನ್ನು ಒಪ್ಪಿದ್ಲು.
“ನಿಜ.. ನಿಜ..! ಮಿನಿಸ್ಟರ್‌ಗಿರಿ ಸಿಗ್ಲಿ ಅಂತ ಎಷ್ಟು ಒದ್ದಾಡ್ತಾರೆ! ಟೆಂಪಲ್ ರನ್ ಮಾಡ್ತಾ ಬರೀ ದೇವಸ್ಥಾನಗಳಲ್ಲೇ ರ‍್ತಾರೆ. ಚುನಾವಣೇಲಿ ಗೆಲ್ಲೋಕೂ ಅಷ್ಟು ಕಷ್ಟ ಪಟ್ಟಿರೊಲ್ಲ” ಎಂದಳು.
“ಮಿನಿಸ್ಟರ್‌ಗಿರಿ ಸಿಕ್ತು ಅಂತ ಇಟ್ಕೊಳ್ಳಿ. ಯಾವ ಖಾತೆ ಕೊಡ್ತಾರೋ ಅಂತ ಮತ್ತೆ ಟೆನ್‌ಶನ್ ಶುರುವಾಗುತ್ತೆ. ಒಳ್ಳೇ ಖಾತೆ ಸಿಕ್ರೆ ಸಂತೋಷ ಆಗುತ್ತೆ” ಎಂದೆ.
“ಒಳ್ಳೇ ಖಾತೆ ಅಂದ್ರೆ ಏನು? ಖಾತೆಯಲ್ಲಿ ಒಳ್ಳೇದು ಕೆಟ್ಟದ್ದು ಇರೊಲ್ಲ” ಎಂದ ವಿಶ್ವ.