ಮಕ್ಕಳಿರಲವ್ವ ಬಾಜೂ ಮನಿತುಂಬ
ಪಕ್ಕದ ತಮಿಳಿನ ಸ್ಟೆನ್ನೆಪ್ಪ-ತೆಲುಗಿನ ಗಡ್ಡಪ್ಪ ಅವರು ಮನೆಯಲ್ಲಿ ಮಿನಿಮಮ್ ೧೬ ಚೈಲ್ಡ್ ಇರಬೇಕು. ಮನೆ ತುಂಬ ಮಕ್ಕಳು ಆಡುತ್ತಿರಬೇಕು. ಆಜೂ-ಬಾಜೂ ಮನೆಯ ವರಿಗೆ ನಿಮ್ಮ ಮನೆಮಕ್ಕಳದ್ದು, ನಿಮ್ಮ ಮನೆಯವರೆಗೆ ಅವರ ಮಕ್ಕಳದ್ದು ಕಲರವ ಅಲೆ ಅಲೆಯಾಗಿ ಕೇಳುತ್ತಿರಬೇಕು.
ಒಟ್ಟಾರೆ ಮಕ್ಕಳಿರಲ್ಲವ್ವ ಎಂದು ಹೇಳಿದ ಮಾತಿಗೆ ಆ ಭಾಗದಲ್ಲಿ ಭಯಂಕರ ರೆಸ್ಪಾನ್ಸ್ ಬಂದಿದೆ. ಅಲ್ಲಿನ ಗಂಡಸರೆಲ್ಲ ಪಟಾಕಿ ಸಿಡಿಸಿ, ಅವರ ಫೋಟೋ ಮೆರವಣಿಗೆ ಮಾಡುತ್ತಿದ್ದಾರೆ. ಮೈಮೇಲೆ ಖಬರಿಲ್ಲದೇ ಕುಣಿಯುತ್ತಿದ್ದಾರೆ. ಅವರವರ ಪತ್ನಿಯರು ಮಾತ್ರ… ಏನ್ ಅವು ಹಿಂಗೆ ಹೇಳಿವೆ.. ಅವುಗಳಿಗೆ ಬುದ್ಧಿ ಇಲ್ಲವೇ? ಇದ್ದರೆ ಎಲ್ಲಿಟ್ಟಿವೆ? ಇವೆಲ್ಲ ನಮಗೆ ಆಗಿ ಬರುವುದಿಲ್ಲ ಎಂದು ಹೂಂಕರಿಸುತ್ತಿದ್ದಾರೆ. ಈ ಸುದ್ದಿ ಇಲ್ಲಿಯ ಗಂಡಸರಿಗೆಲ್ಲ ಗೊತ್ತಾಗಿ.. ಹೌದ್ದ ಹುಲಿಯಾ… ಇದ್ದರೆ ಇರಬೇಕು ಅವರಂಗೆ ಎಂದು ಇಲ್ಲಿಂದಲೇ ಕೈ ಮುಗಿಯುತ್ತಿದ್ದಾರೆ.
ಆಫ್ ಪ್ರಗತಿಪರರಾದ ಕನ್ನಾಳ್ಮಲ್ಲ, ತಳವಾರ್ಕಂಟಿ, ತಿಗಡೇಸಿ ಮುಂತಾದವರು ಸಮಾವೇಶ ನಡೆಸಿ, ಇವರಿಬ್ಬರಿಗೆ ಡೆಮಾಕ್ರಸಿ ಗೊತ್ತಿಲ್ಲ. ಜನಸಂಖ್ಯೆ ಹೆಚ್ಚಿಸಿಕೊಂಡು ಎಲ್ಲವೂ ತಮ್ಮದು ಮಾಡಿಕೊಳ್ಳಬೇಕು ಎಂದು ಮಾಡಿದ್ದಾರೆ. ನಾವು ಇಲ್ಲಿ ಅದಕ್ಕೆ ಅವಕಾಶ ಕೊಡುವುದು ಬೇಡ ಎಂದು ಸಾರಿ.. ಸಾರಿ ಹೇಳಿದರು. ಸಮಾವೇಶದಲ್ಲಿ ಹಾಜರಿದ್ದ ಸುಮಾರು ೫೦ ಗಂಡಸರು ಎದ್ದು ನಿಂತು ಸಮಾವೇಶಕ್ಕೆ ವಿರುದ್ಧವಾಗಿ ಘೋಷಣೆ ಕೂಗಿದರು. ಅಲ್ಲಿನವರಿಗೆ ಜೈ ಜೈಕಾರ ಹಾಕಿದರು. ಊರಿನ ಒಂದು ಏಜಿನ ಮಂದಿ ಸಭೆಸೇರಿ ಇಲ್ಲಿಯೂ ಹಾಗೆ ಮಾಡಿ… ಇಲ್ಲಿನ ದೊರೆಗೆ ನಾವೆಲ್ಲರೂ ಮನವಿ ಮಾಡೋಣ ನೀವು ಮಕ್ಕಳಿರಲವ್ವ ಎಂದು ಒಂದು ಮಾತು ಹೇಳಿಬಿಡಿ ಎಂದು ರಿಕ್ವೆಸ್ಟ್ ಮಾಡಿಕೊಳ್ಳೋಣ… ಮನೆಯ ಹೆಂಗಸರು ಇದನ್ನು ವಿರೋಧಿಸಿದರೆ ಅವರಿಗೆ ಹಬ್ಬಕ್ಕೆ ಕೊಡಿಸುವುದನ್ನು ಹೆಚ್ಚಿಗೆ ಮಾಡೋಣ… ಎಷ್ಟೇ ತುಟ್ಟಿಯಾಗಲಿ, ಸಾಲ ಮಾಡಿ ಬಂಗಾರ ಕೊಡಿಸೋಣ. ಹಾಗೆ ಮಾಡಿದರೆ ಅವರು ಖುಷ್-ನಾವೂ ಖುಷ್ ಅಲ್ಲವೇ ಆದ್ದರಿಂದ ಅಮಾವಾಸ್ಯೆ ಮರುದಿನ ಎಲ್ಲರೂ ಹೋಗಿ ಮನವಿ ಮಾಡೋಣ ಎಂದು ನಿರ್ಧಾರ ಮಾಡಿದರು. ಈ ಸುದ್ದಿ ತಮಿಳು ಮತ್ತು ತೆಲುಗು ದೊರೆಗೆ ಗೊತ್ತಾಗಿ… ನೋಡ್ರೋ… ನೋಡ್ರೋ ಅವರು ಹೇಗೆ ನಮ್ಮ ಪರವಾಗಿ ಮಾತಾಡುತ್ತಾರೆ… ಸಂತೋಷ.. ಸಂತೋಷ ಏನೇ ಆಗಲಿ ಹದಿನಾರು… ಹದಿನಾರು… ಮಕ್ಕಳಿರಲ್ಲವ ಬಾಜೂ ಮನಿ ತುಂಬ ಎಂದು ಬಾಯ್ತಪ್ಪಿ ಅಂದರಂತೆ.