For the best experience, open
https://m.samyuktakarnataka.in
on your mobile browser.

ಮಕ್ಕಳಿರಲವ್ವ ಮನೆತುಂಬ… ಆಗ ಸಾಕು-ಈಗ ಬೇಕು

12:05 AM Oct 24, 2024 IST | Samyukta Karnataka
ಮಕ್ಕಳಿರಲವ್ವ ಮನೆತುಂಬ… ಆಗ ಸಾಕು ಈಗ ಬೇಕು

ಹೆಚ್ಚು ಮಕ್ಕಳನ್ನು ಹೊಂದಿರಿ. ಪ್ರತಿ ದಂಪತಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಬೇಕು.
ಇದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕಾಳಜಿಪೂರ್ವಕ ಮನವಿ… ಇದಕ್ಕೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮನ್ನಣೆ ಸೂಚಿಸಿ ಹದಿನಾರು ಮಕ್ಕಳವರೆಗೆ ಹೆರುವಂತೆ ಮನವಿ ಮಾಡಿಕೊಂಡಿದ್ದಾರೆ…!
ನೋಡಿ. ಕಾಲಚಕ್ರ ಹೇಗೆ ಬದಲಾಗಿದೆ ಎಂದು. ಎಪ್ಪತ್ತೆಂಟು ವರ್ಷಗಳ ಹಿಂದೆ ಕಡ್ಡಾಯವಾಗಿ ಕುಟುಂಬ ಯೋಜನೆ, ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಸೂಚಿಸಲಾಗಿತ್ತು… ಮನವೊಲಿಸಲಾಗುತ್ತಿತ್ತು… ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ನಾಣ್ಣುಡಿ ಬಹುಜನಪ್ರಿಯವಾಗಿತ್ತು. ನಾವಿಬ್ಬರು, ನಮಗಿಬ್ಬರೇ ಸಾಕು ಎಂಬುದು ನಿತ್ಯದ ಘೋಷ ವಾಕ್ಯದಂತಾಗಿತ್ತು.
ಆ ಕಾಲದಲ್ಲಿ ಸರ್ಕಾರಿ ಕಚೇರಿ, ಗೋಡೆ, ಮತ್ತು ಸಂಘ ಸಂಸ್ಥೆಗಳ ಕಂಪೌಂಡ್‌ಗಳ ಮೇಲೆಲ್ಲ ಕುಟುಂಬ ಯೋಜನೆ ಬರಹ ಕಡ್ಡಾಯವಿತ್ತು.
ಅಂದಿನ ಸಮಾಜ ವ್ಯವಸ್ಥೆ, ಹಿರಿಯರು, ಜನಪದೀಯ, ಗ್ರಾಮ್ಯ ಬದುಕು ಕಂಡ ಜನ ಮಕ್ಕಳಿರಲವ್ವ ಮನೆತುಂಬ' ಎಂದರೆ, ವಿದ್ಯಾವಂತರು, ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ಕಲಿತ ಮಕ್ಕಳು ಕೂಡಏನಿದು, ನಾಲ್ಕೆಂಟು, ಡಜನ್ ಮಕ್ಕಳು ನಮ್ಮ ಅಪ್ಪ ಅಮ್ಮನಿಗೆ' ಎಂದು ನಾಚಿಕೆ, ಗದರಿಕೆಯ ಮಾತುಗಳನ್ನು ಹುಸಿಕೋಪದೊಂದಿಗೆ ಆಡುತ್ತಿದ್ದ ಕಾಲವಿತ್ತು.
ಜನಸಂಖ್ಯೆಯೇ ಈ ದೇಶಕ್ಕೆ ಮಹಾಶಾಪ ಎನ್ನುವಂತೆ ಯೋಜಕರೆಲ್ಲ ಬಿಂಬಿಸಿದರು. ಎಲ್ಲಿಂದ ಕೊಡುವುದು ಸೌಲಭ್ಯ? ಅನ್ನ ಆಹಾರವೆಲ್ಲಿ? ಎಂದರೆ ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ಎನ್ನುವ ಪ್ರತ್ಯುತ್ತರವೂ ಬಂತು. ಸರ್ಕಾರದ ನೀತಿ ಧೋರಣೆಗಳೆಲ್ಲ ಜನಸಂಖ್ಯೆಯ ನಿಯಂತ್ರಣಕ್ಕಾಗಿಯೇ ರೂಪುಗೊಂಡವು.
ತುರ್ತು ಪರಿಸ್ಥಿತಿಯ ಕಾಲ ನೆನಪಿಸಿಕೊಳ್ಳಿ. ಅಂದು, ಲಕ್ಷಾಂತರ ಮಂದಿಗೆ ಬಲವಂತವಾಗಿ ಶಸ್ತ್ರಚಿಕಿತ್ಸೆ ನಡೆಸಿದ ಆರೋಪ ಬಂತು. ಭಾರೀ ಪ್ರತಿಭಟನೆಯೂ ನಡೆಯಿತು. ಈಗತಾನೆ ಮದುವೆಯಾದ ಅಥವಾ ಮದುವೆಯಾಗದವರಿಗೂ ಎಳೆದೊಯ್ದು ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎನ್ನುವ ಆಕ್ರೋಶ ವ್ಯಕ್ತವಾಯಿತು.
ಆದರೆ ಕಳೆದ ಎರಡು ಮೂರು ದಶಕಗಳಲ್ಲಿ, ಆತ ಅಕ್ಷರಸ್ಥನಿರಲಿ, ಅನಕ್ಷರಸ್ಥನೇ ಆಗಿರಲಿ; ಗ್ರಾಮೀಣ ವ್ಯಕ್ತಿಯೇ ಇರಲಿ, ಪಟ್ಟಣದವನೇ ಆಗಿರಲಿ. ಆತ ಒಂದು ಮಗು, ತಪ್ಪಿದರೆ ಎರಡು ಮಗು… ಮೂರು ಮಕ್ಕಳಾದರೆ ಊರ ಮಂದಿಯೆಲ್ಲ ಅಚ್ಚರಿ ಪಟ್ಟು ಅಣಕಿಸುತ್ತಿದ್ದರು. ಗೇಲಿ ಮಾಡುವ ಮಟ್ಟಿಗೆ ಜನ ತಮ್ಮಷ್ಟಕ್ಕೆ ತಾವೇ ಪರಿವರ್ತಿಸಿಕೊಂಡಿದ್ದರು.
ಆಗಲೇ ಎದ್ದ ಮಾತು, ಅಭಿವೃದ್ಧಿ ಎಂದರೆ ಏನು? ಜನಸಂಖ್ಯೆ ಅಭಿವೃದ್ಧಿಗೆ ಮಾರಕವೇ? ಸಮರ್ಥ ಬಳಕೆಗೆ ಯೋಜನೆ ಏಕಿಲ್ಲ ಎನ್ನುವ ಮಾತು. ಅಂದು ದೇಶಕ್ಕೆ ಜನಸಂಖ್ಯೆಯೇ ಶಾಪ ಎಂದವರು, ಇಂದು ಹೆಚ್ಚು ಮಕ್ಕಳನ್ನು ಹಡೆಯಿರಿ, ದೇಶದ ಭವಿಷ್ಯಕ್ಕಾಗಿ ಎಂದು ಕರೆ ನೀಡಲಾರಂಭಿಸಿದ್ದಾರೆ!
ಚಂದ್ರಬಾಬು ನಾಯ್ಡು ದಕ್ಷಿಣ ಭಾರತದ ರಾಜ್ಯಗಳಲ್ಲಿ ಮತ್ತು ಗುಡ್ಡಗಾಡು ಪ್ರದೇಶವಾದ ಅಸ್ಸಾಂ, ಉತ್ತರಾಖಂಡ, ಮೇಘಾಲಯ, ಮಣಿಪುರ ಇತ್ಯಾದಿ ಭಾಗಗಳಲ್ಲಿ ಜನಸಂಖ್ಯೆ ಗಮನಾರ್ಹವಾಗಿ ಕುಗ್ಗಿದೆ. ಮುಂದೆ ದುಡಿಯುವ ಕೈಗಳೇ ಇಲ್ಲವಾಗಬಹುದು ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಈಗ ಒಂದು ಲಕ್ಷ ಗರ್ಭಿಣಿಯರ ಪೈಕಿ, ಮಗು ಜನನದ ವೇಳೆ ಸರಾಸರಿ ನೂರ ಮೂವತ್ಮೂರು ಮಹಿಳೆಯರು ಸಾವನ್ನಪ್ಪುತ್ತಿರುವ ಅಂದಾಜಿದೆ. ಶಿಶು ಮರಣ ಒಂದು ಲಕ್ಷಕ್ಕೆ ಐದು ನೂರರ ಆಸುಪಾಸಿನಲ್ಲಿದೆ. ಅಷ್ಟು ಸುರಕ್ಷಿತ ಹೆರಿಗೆ ಈಗ. ಹಾಗೇ ಆರೈಕೆ ಕೂಡ. ಅದೇ ಧೈರ್ಯದಿಂದ ದಂಪತಿ ಒಂದು ಅಥವಾ ಎರಡು ಮಕ್ಕಳನ್ನು ಪಡೆಯುತ್ತಿರುವುದು.
ಮಧ್ಯಮ ವರ್ಗದವರಿರಲಿ ಅಥವಾ ಬಡವರಿರಲಿ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬೆಳೆಸಿದರೆ ತಮ್ಮ ಕರ್ತವ್ಯ ಮುಗಿಯಿತು ಮನೋಭಾವ ಮೂಡಿದೆ. ಸಂತಾನ ಶಕ್ತಿ ಕುಂದಿದೆ ಎನ್ನುವ ಆರೋಪವೂ ಈಗೀಗ ಕೇಳಿ ಬರಲಾರಂಭಿಸಿದೆ. ಇದಕ್ಕೆ ಜನರ ಜೀವನ ಶೈಲಿ, ವಿಶೇಷವಾಗಿ ದೋಷಪೂರಿತ ಆಹಾರ, ವಿಷಪೂರಿತ ವಾತಾವರಣ, ಪ್ರಕೃತಿ, ನೀರು, ಅನೈರ್ಮಲ್ಯ ಇತ್ಯಾದಿಗಳು ಕಾರಣ. ಜೊತೆಗೆ ಡಿಜಿಟಲ್ ಪ್ಲ್ಯಾಟ್‌ಫರ್ಮ್‌ನ ಕೊಡುಗೆಯೂ ಇದೆ.
ಅದು ಬಿಡಿ. ಕಳೆದ ಎಪ್ಪತ್ತು ವರ್ಷಗಳಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕಿತ್ತೋ ಅದಿಲ್ಲದ ಕಾರಣ ಈಗ ಮತ್ತಷ್ಟು ಗಂಭೀರ ಸಮಸ್ಯೆಯನ್ನು ದೇಶ ಎದುರಿಸುವಂತಾಗುತ್ತಿದೆ. ಅಂದು ಗ್ರಾಮೀಣ ಭಾಗದ ಸಂಪೂರ್ಣ ನಿರ್ಲಕ್ಷ್ಯ. ಪರಿಣಾಮ ಗ್ರಾಮೀಣ ಭಾಗದ ಜನ ನಗರವಾಸಿಗಳಾದರು. ಕರ್ನಾಟಕದಲ್ಲೇ ನೋಡಿ, ಗ್ರಾಮೀಣ ಭಾಗದಲ್ಲಿ ೨.೯೬ ಕೋಟಿ ಜನರಿದ್ದರೆ, ೩.೩೬ ಕೋಟಿ ಜನ ನಗರ ಪ್ರದೇಶದಲ್ಲಿದ್ದಾರೆ.
ಚಂದ್ರಬಾಬು ನಾಯ್ಡು ಮಕ್ಕಳನ್ನು ಹೆಚ್ಚು ಹೆರಿ ಎನ್ನುವ ಮನವಿ, ಗ್ರಾಮೀಣ ಪ್ರದೇಶಗಳೆಲ್ಲ ವೃದ್ಧಾಶ್ರಮವಾಗುತ್ತಿವೆ, ಯುವ ಜನ ರಹಿತವಾಗುತ್ತಿವೆ ಎನ್ನುವ ಮಾತುಗಳೆಲ್ಲ ನಿಜ. ಕರ್ನಾಟಕ, ಕೇರಳ, ಆಂಧ್ರ, ಮಹಾರಾಷ್ಟ್ರ ಎಲ್ಲ ರಾಜ್ಯಗಳಲ್ಲೂ ಗ್ರಾಮಗಳು ಬರಿದಾಗುತ್ತಿವೆ. ವೃದ್ಧಾಶ್ರಮಗಳಾಗುತ್ತಿವೆ. ಹಳ್ಳಿ ಬಿಟ್ಟು ನಗರ ಸೇರುವ, ನಗರ ತೊರೆದು ಬೃಹನ್ನಗರವಾಸಿಗಳಾಗುವ, ದೇಶ ಬಿಟ್ಟು ವಿದೇಶಕ್ಕೆ ಹೋಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ಇಷ್ಟೇ. ಗ್ರಾಮಗಳ ಬಗೆಗಿನ ದಿವ್ಯ ನಿರ್ಲಕ್ಷ್ಯ. ಗ್ರಾಮಗಳಲ್ಲಿ ಮೂಲಸೌಕರ್ಯಗಳೇ ಇಲ್ಲದಂತಾಗಿದೆ. ಸೃಜಿಸುವುದಕ್ಕೆ ಯಾವುದೇ ಖಚಿತ ಯೋಜನೆಗಳು ಹಿಂದೂ ಇರಲಿಲ್ಲ. ಈಗಲೂ ಇಲ್ಲ. ಎಲ್ಲರಿಗೂ ತಿಳಿದಿರುವಂತೆ ಗ್ರಾಮಗಳಲ್ಲಿ ಸೌಲಭ್ಯಗಳೇ ಇಲ್ಲ. ಕೃಷಿ ಉತ್ಪನ್ನಗಳ ಆದಾಯ ಕುಸಿತ ಮತ್ತು ನಗರಗಳ ವೈಭವೀಕರಣ ಇವೆಲ್ಲ ಇತರ ಪೂರಕ ಕಾರಣಗಳು.
ಕರ್ನಾಟಕದಲ್ಲಿಯೇ ಕಳೆದ ಐದು ವರ್ಷಗಳಲ್ಲಿ ಸಾವಿರಾರು ಗ್ರಾಮೀಣ ಪ್ರಾಥಮಿಕ ಶಾಲೆಗಳು ಮಕ್ಕಳಿಲ್ಲದೇ ಮುಚ್ಚಿವೆ. ಪ್ರೌಢ ಶಾಲೆಗಳಂತೂ, ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಇಲ್ಲವಾಗಿವೆ. ಇನ್ನು ರಸ್ತೆ ಸೌಲಭ್ಯ, ಕುಡಿಯುವ ನೀರು, ವಾಹನಗಳ ವ್ಯವಸ್ಥೆ, ಎಲ್ಲಕ್ಕೂ ಹೆಚ್ಚಾಗಿ ತಮ್ಮ ಭೂಮಿ ಉತ್ತು ಬಿತ್ತು ಬೆಳೆ ತೆಗೆವ ವಾತಾವರಣ, ಆ ನಂತರ ಬರುವ ಆದಾಯ ಇವನ್ನೆಲ್ಲ ಲೆಕ್ಕ ಹಾಕಿದಾಗ, ಊಹುಂ, ಗ್ರಾಮ ಸಾಕು; ನಗರದಲ್ಲಿ ಹತ್ತು ಸಾವಿರ ರೂಪಾಯಿ ಸಂಬಳ ಬಂದರೂ ಸರಿಯೇ ಎನ್ನುವ ಮಟ್ಟಕ್ಕೆ ಹಳ್ಳಿಯ ಜನ ಬಂದಿದ್ದಾರೆ.
ಇದು ಗ್ರಾಮಗಳ ಸ್ಥಿತಿಯಾದರೆ, ನಗರಕ್ಕೆ ಅಂಟಿಕೊಂಡಿರುವ ಹಳ್ಳಿಗಳ ಯುವಕ ಯುವತಿಯರು, ಮಹಿಳೆಯರೆಲ್ಲ ಜಮೀನು ಕಸುಬು ಬಿಟ್ಟು ಹಾಕಿ, ನಗರದಲ್ಲಿ ಕೂಲಿ ನಾಲಿ ಮಾಡಿ, ದಿನಕ್ಕೆ ಎಂಟುನೂರು-ಸಾವಿರ ಸಂಪಾದಿಸಿಕೊಂಡು ಅಂದಿನ ಹೊಟ್ಟೆ ಹಸಿವು ನೀಗಿಸಿಕೊಳ್ಳುತ್ತಿದ್ದಾರೆ. ಐದಾರು ತಾಸು ಕೆಲಸ ಮಾಡಿದರೆ ಸಿಗುವ ಆದಾಯ, ಜೀವನ ಪರ್ಯಂತ ದುಡಿದರೂ ಹಸಿವು ನೀಗಿಸಿಕೊಳ್ಳಲಾಗದ ಭಯಾನಕ ಸ್ಥಿತಿ ಗ್ರಾಮಗಳಲ್ಲಿ ನಿರ್ಮಾಣವಾಗಿದೆ. ಸರ್ಕಾರದ ಯೋಜನೆಗಳ್ಯಾವುವೂ ಗ್ರಾಮಾಂತರ ಜನರ ಸ್ಥಿತಿಯನ್ನು ಸುಧಾರಿಸಿಲ್ಲ. ಇಂತಹ ಸನ್ನಿವೇಶದಲ್ಲಿ ಮತ್ತೆ ಮಕ್ಕಳನ್ನು ಹೆಚ್ಚು ಹೆಚ್ಚು ಪಡೆಯಿರಿ ಎಂದರೆ ಯಾವ ವ್ಯಕ್ತಿ ಒಪ್ಪಿಯಾನು?
ನಿಜ. ೨೦೪೭ರ ಹೊತ್ತಿಗೆ ಬಹುತೇಕ ದಕ್ಷಿಣ ಭಾರತದಲ್ಲಿ ಈಗಿನ ಐವತ್ತೈದರ ಮೇಲ್ಪಟ್ಟ ಜನ ಮುದುಕರಾಗುತ್ತಾರೆ. ಹಾಗಂತ ಯುವಕರಿಲ್ಲ ಎನ್ನುವಂತಿಲ್ಲ. ಈ ಯುವಕರೆಲ್ಲ ವಲಸಿಗರಾಗಿದ್ದಾರೆ. ಸಮೀಕ್ಷೆ ಹೇಳುವ ಪ್ರಕಾರ ಪೋಷಕರ ವೃದ್ಧಾಪ್ಯ ಸಮಸ್ಯೆ ಬೃಹದಾಕಾರ. ಉತ್ಪಾದನೆ ಕುಸಿಯಲಿದೆ.
ಯಾರು ಹೊಣೆ ಇದಕ್ಕೆ? ಚಂದ್ರಬಾಬು ನಾಯ್ಡುರಂಥವರೇ.
ಕೇರಳದ ತಿರುವನಂತಪುರದ ಹಳ್ಳಿಯೊಂದರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳ ಜೀವನಾಡಿ. ಆಶ್ಚರ್ಯವಾಯಿತಾ? ಹೌದು. ಜಗತ್ತಿನ ಹಲವು ರಾಷ್ಟ್ರಗಳ ನೆಟ್‌ವರ್ಕ್, ಡಾಟಾ ಬೇಸ್, ಐಟಿ ಜಾಲವನ್ನು ಪರಿಪೂರ್ಣವಾಗಿ ಹೆಚ್ಚಿಸಿ, ಕುಗ್ರಾಮದಲ್ಲಿ ಅವೆಲ್ಲ ಲಭ್ಯವಾಗುವಂತೆ ಆ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. ಇದರೊಟ್ಟಿಗೆ ಉತ್ತಮ ರಸ್ತೆ, ಶಾಲೆ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ, ಆಸ್ಪತ್ರೆ ಹಾಗೇ ಶುದ್ಧ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯ ಎಲ್ಲವನ್ನೂ ಈ ಪಂಚಾಯ್ತಿಯಲ್ಲಿ ಪೂರೈಸಿ, ಹಿಂದುಳಿದ ಗುಡ್ಡಗಾಡು ಜನರನ್ನು ತರಬೇತುಗೊಳಿಸಿದ ಪರಿಣಾಮ ಇಡೀ ಹಳ್ಳಿಯಲ್ಲಿ ಒಬ್ಬರೂ ಊರು ಬಿಟ್ಟು ತೆರಳಿಲ್ಲ.
ಇದೇ ಮಾದರಿ ದೇಶದ ಉಳಿದೆಡೆ ಏಕಿಲ್ಲ? ಕೊರೊನಾ ವೇಳೆ ಐಟಿ ಮಕ್ಕಳೆಲ್ಲ ಲ್ಯಾಪ್‌ಟಾಪ್‌ಗಳೊಂದಿಗೆ ತಮ್ಮ ಗ್ರಾಮಗಳನ್ನು ಹುಡುಕುತ್ತ ಬಂದರು. ಆಗ ವರ್ಕ್ ಫ್ರಾಂ ಹೋಮ್ ನಡೆಯಲಿಲ್ಲವೇ? ಗ್ರಾಮೀಣ ನೆಟ್‌ವರ್ಕ್ ಬದಲಿಸಿದರೆ, ಮಾರುಕಟ್ಟೆ ಒದಗಿಸಿದರೆ, ಗ್ರಾಮೀಣ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರಕುವಂತೆ ಮಾಡಿದರೆ, ಐಟಿ-ಬಿಟಿ ಜಾಲ ನಿರ್ಮಿಸಿದರೆ, ಮೂಲಭೂತ ಸೌಕರ್ಯ ಕಲ್ಪಿಸಿ ನಗರದಲ್ಲಿ ದೊರೆಯುವ ಎಲ್ಲವೂ ಸಿಗುವಂತೆ ಮಾಡಿದರೆ ಏಕೆ ಯುವಕರು ಹಳ್ಳಿ ಬಿಟ್ಟು ಹೋಗುತ್ತಾರೆ? ವೃದ್ಧಾಶ್ರಮ ಏಕೆ ಬೇಕಾಗುತ್ತದೆ?
ಮಗ-ಮಗಳನ್ನು ಹೊಂದಿರುವ ದಂಪತಿ, ವೃದ್ಧಾಪ್ಯದಲ್ಲಿ ಆರೈಕೆ ಇಲ್ಲದೇ, ಸಮಾಜದ ನೈತಿಕ ಸ್ತರ ಕುಸಿಯುತ್ತಿದೆ. ಇದಕ್ಕೆ ಹೊಣೆ ಯಾರು? ಇದು ನಾಯ್ಡು, ಸ್ಟಾಲಿನ್ ಅವರಂತಹ ಆಡಳಿತ ಚುಕ್ಕಾಣಿ ಹಿಡಿದವರಿಗೆ ಗೊತ್ತಿಲ್ಲದ್ದೇನಲ್ಲ.
ಇದು ಭಾರತ ಅಷ್ಟೇ ಅಲ್ಲ. ಚೀನಾ, ಜಪಾನ್, ಫಿನ್‌ಲ್ಯಾಂಡ್‌, ಇಸ್ಟೋನಿಯಾ ಮುಂತಾದ ರಾಷ್ಟ್ರಗಳು ಇದೇ ಸಮಸ್ಯೆಯನ್ನು ಈಗ ಎದುರಿಸುತ್ತಿವೆ. ಅಲ್ಲೂ ಕೂಡ ಹೆಚ್ಚು ಹೆಚ್ಚು ಮಕ್ಕಳನ್ನು ಪಡೆಯಿರಿ. ಅವರ ಶಿಕ್ಷಣ, ಪೋಷಣೆ ಮತ್ತು ಪೌಷ್ಟಿಕ ಆಹಾರ ಜವಾಬ್ದಾರಿ ತಮ್ಮದು ಎನ್ನುತ್ತಿವೆ. ಹಾಂಕಾಂಗ್ ಪ್ರಧಾನಿ ಇತ್ತೀಚೆಗಷ್ಟೇ ಭಾರತಕ್ಕೆ ಬಂದು, ಜನಸಂಖ್ಯೆಯ ಬಗ್ಗೆ ಚಿಂತಿಸದಿರಿ, ನಮಗೆ ಮಾನವ ಸಂಪನ್ಮೂಲ ಹೆಚ್ಚೆಚ್ಚು ಬೇಕು ಎಂದಿದ್ದು ಗಮನಾರ್ಹ.
ನಮ್ಮ ದೇಶದ ಜಿಡಿಪಿ ಮತ್ತು ಅಭಿವೃದ್ಧಿ ಹೇಗಿದೆಯೋ ಹಾಗೇ ಅಲ್ಲಿ ಕೂಡ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮತ್ತು ಜನಸಂಖ್ಯೆಯ ಕುರಿತು ಪ್ರಧಾನ ಅಂಶವಿದೆ. ಅಭಿವೃದ್ಧಿ ಮಾನದಂಡದಲ್ಲಿ ಜನಸಂಖ್ಯೆ ನಿಯಂತ್ರಣವೂ ಕೂಡ ಒಂದು.
ಮೊನ್ನೆ ದೇಶದ ಆದಾಯ ಅನುದಾನ ಹಂಚಿಕೆ ವಿವಾದ ಉಂಟಾಯ್ತಲ್ಲ. ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶಕ್ಕೆ ಅದೇ ಮಾನದಂಡದಲ್ಲಿ ಹೆಚ್ಚು ಅನುದಾನವನ್ನು ನೀಡಲಾಗಿದೆ. ಕಡಿಮೆ ಜನಸಂಖ್ಯೆ ಇರುವ ಕಾರಣ ಕಡಿಮೆ ಅನುದಾನ.
ಹಾಗಂತ ಜನಸಂಖ್ಯೆ ಕಡಿಮೆಯಾಗಿರುವುದೆಲ್ಲ ಗ್ರಾಮಗಳಲ್ಲೇ. ದೇಶದ ಒಟ್ಟಾರೆ ಆದಾಯದ ಶೇಕಡಾ ೪೫ರಷ್ಟು ಹಣ ನಗರಗಳ, ಅದೂ ಬೃಹನ್ನಗರಗಳ ಜನರ ಸೌಲಭ್ಯ ಕಲ್ಪಿಸಲೇ ವ್ಯಯವಾಗುತ್ತಿದೆ. ಈ ಸ್ಥಿತಿಯಲ್ಲಿ ನಾಯ್ಡು, ಈಗಂತೂ ಪ್ರಭಾವಿ, ಅಭಿವೃದ್ಧಿಯ ಪರಿಕಲ್ಪನೆಯನ್ನು ಮೊದಲು ಬದಲಾಯಿಸಲಿ. ಗ್ರಾಮಗಳಲ್ಲಿ ಜನ ಏಕೆ ಉಳಿಯುತ್ತಿಲ್ಲ? ಹಳ್ಳಿಗಳೇಕೆ ಬರಿದಾಗುತ್ತಿವೆ ಎನ್ನುವುದನ್ನು ಪ್ರಾಂಜಲವಾಗಿ ಯೋಚನೆ ಮಾಡಲಿ. ಆದರೆ ಇಲ್ಲಿಯೂ ಕೂಡ ರಾಜಕಾರಣ ಮತ್ತು ಮತಬ್ಯಾಂಕ್!
ಸ್ಟಾಲಿನ್ ಹದಿನಾರು ಮಕ್ಕಳನ್ನಾದರೂ ಹಡೆಯಿರಿ ಎಂಬ ಕರೆಯ ಹಿಂದೆ, ಇಲ್ಲದಿದ್ದರೆ ಮುಂಬರುವ ವರ್ಷಗಳಲ್ಲಿ ತಮಿಳುನಾಡು ಲೋಕಸಭೆ ಮತ್ತು ವಿಧಾನಸಭೆ ಸ್ಥಾನಗಳು ಕಡಿಮೆಯಾಗುತ್ತವೆ ಎನ್ನುವ ಆತಂಕ. ಅವರಿಗೆ ಇರುವುದೆಲ್ಲ ಅಧಿಕಾರದ ಸುತ್ತಲೇ ಗಿರಕಿ ಹೊಡೆಯುವ ಆಲೋಚನೆ. ಇದಕ್ಕಾಗಿ ಜನಸಂಖ್ಯೆ ಹೆಚ್ಚಿಸಬೇಕಿದೆ !!
ನಿತ್ಯವೂ ಮಲೆನಾಡು, ಕರಾವಳಿ, ಗುಡ್ಡಗಾಡು ರಾಜ್ಯಗಳ ಜನತೆ ಅನಾರೋಗ್ಯಪೀಡಿತ, ಪ್ರವಾಹದಲ್ಲಿ ಸಿಲುಕಿದ ಜನರನ್ನು ಹತ್ತಾರು ಕಿಲೋ ಮೀಟರ್ ದೂರ ಹೊತ್ತು ತರುವ, ಅಥವಾ ಹೆಣ ಸಾಗಿಸುವ ದಾರುಣ ಚಿತ್ರಣ ವರದಿಯಾಗುತ್ತಿವೆ. ಶಾಲಾ ಮಕ್ಕಳು, ಶಾಲೆಗೆ ಓಣಿ-ಕಣಿವೆಯಲ್ಲಿ ಪ್ರಯಾಸದಿಂದ ಹೋಗುವ ಸ್ಥಿತಿ ಸಾವಿರಾರು ಹಳ್ಳಿಗಳಲ್ಲಿದೆ. ಶುದ್ಧ ಕುಡಿಯುವ ನೀರಿಲ್ಲದೇ ಕರ್ನಾಟಕದಲ್ಲೇ ನೂರಾರು ಮಂದಿ ಸಾವನ್ನಪ್ಪಿದ ಅಥವಾ ಆಸ್ಪತ್ರೆಗೆ ದಾಖಲಾದ ದಯನೀಯ ಸ್ಥಿತಿ ಇದೆ. ಆತ ಬೆಳೆದ ಉತ್ಪನ್ನಕ್ಕೆ ಮಾರುಕಟ್ಟೆ ಇಲ್ಲದೇ, ಅಥವಾ ದರ ಇಲ್ಲದೇ ಸಾಲ ಮರು ಪಾವತಿಯಾಗದ ಭೀಕರ ಸನ್ನಿವೇಶವಿದೆ.
ದುರಂತ ನೋಡಿ, ೨೩೪ ಮಿಲಿಯನ್ ಜನರು ಹಸಿವು ಬಡತನದಲ್ಲಿ ಬಳಲುತ್ತಿದ್ದಾರೆ.!
ದೇಶದ ಸೌಲಭ್ಯಗಳು ಮಧ್ಯವರ್ತಿಗಳ ಪಾಲಾಗುತ್ತಿದೆ. ಭ್ರಷ್ಟಾಚಾರದ ಸೂಚ್ಯಂಕ ಏರುತ್ತಲೇ ಇದೆ.. ಉದಾಹರಣೆಗೆ ಈಗಿರುವ ಬೆಳೆ ವಿಮೆ ಪರಿಹಾರವನ್ನೇ ನೋಡಿ, ಜನರ ರಕ್ತವನ್ನು, ದುಡಿಮೆಯನ್ನು ಹೀರುತ್ತಿವೆ. ರಾಜಧಾನಿಯಲ್ಲಿ ಇದೇ ಮಂತ್ರಿ ಮಹೋದಯರ ಪಕ್ಕ ಕುಳಿತು, ಕೋಟ್ಯಂತರ ರೂಪಾಯಿ ರೈತರಿಂದ ವಿಮೆ ಕಂತು ಪಡೆದು, ಲಾಭ ಗಿಟ್ಟಿಸುತ್ತಿರುವ ಯೋಜನೆಗೆ ಪ್ರಧಾನಿಯಿಂದ ಹಿಡಿದು ಪಂಚಾಯ್ತಿ ಅಧ್ಯಕ್ಷರವರೆಗೆ ಅಂಬಾಸಿಡರ್ ಆಗಿದ್ದಾರೆ!
ಹಾಗಾಗಿ ಹೆಚ್ಚು ಮಕ್ಕಳು ಯಾಕಾಗಿ, ಯಾರಿಗಾಗಿ ಪಡೆಯಬೇಕು? ಯಾರು ನೋವನ್ನು ಅನುಭವಿಸುತ್ತಾರೆ? ಮಾನವ ಸಂಪನ್ಮೂಲ, ಯುವ ಶಕ್ತಿ ಸದ್ಬಳಕೆಯಾಗದ ರಾಷ್ಟ್ರದಲ್ಲಿ ನಾಯ್ಡು ಮಾತು ತುಸು ಅಣಕ ಎನ್ನಿಸಿದರೂ, ಪರಿವರ್ತನೆಯ ಚಿಂತನೆಗೆ ಚಾಲನೆಯನ್ನಂತೂ ನೀಡಿದೆ. ಅಲ್ಲವೇ..?