ಮಗನಿಗೆ ಗುರಿ ಇಟ್ಟ ಕೋವಿಗೆ ಪತ್ನಿ ಬಲಿ, ಪತಿ ಆತ್ಮಹತ್ಯೆ
ಮಂಗಳೂರು: ಮಗನಿಗೆ ಗುರಿಯಿಟ್ಟ ಕೋವಿ ಪತ್ನಿಗೆ ತಗಲಿ ಆಕೆ ಸಾವನ್ನಪ್ಪಿ, ಘಟನೆಯಿಂದ ನೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಕೋಡಿಮಜಲು ನಿವಾಸಿ, ರಾಮಚಂದ್ರ ಗೌಡ ಅಲಿಯಾಸ್ ಚಂದ್ರ(೫೩) ಕೊಲೆ ಕೃತ್ಯ ಎಸಗಿ ಆತ್ಮಹತ್ಯೆ ಮಾಡಿಕೊಂಡವರು. ಅವರ ಪತ್ನಿ ವಿನೋದಾ(೪೩) ಕೊಲೆಯಾದವರು. ಆರೋಪಿಯು ಪರವಾನಿಗೆ ಹೊಂದಿರುವ ತನ್ನದೇ ಕೋವಿಯಲ್ಲಿ ಕೃತ್ಯ ಎಸಗಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ರಾಮಚಂದ್ರ ಕಳೆದ ರಾತ್ರಿ ಊಟ ಮಾಡಿದ ಬಳಿಕ ಕ್ಷುಲ್ಲಕ ಕಾರಣ ಮುಂದಿಟ್ಟು ಮನೆಯಲ್ಲಿ ಜಗಳ ಆರಂಭಿಸಿದ್ದಾನೆ. ಬಳಿಕ ಗಲಾಟೆ ವಿಪರೀತಕ್ಕೆ ತಿರುಗಿದ್ದು, ರಾಮಚಂದ್ರ ಕೋವಿಯಿಂದ ಹಿರಿಯ ಮಗ ಪ್ರಶಾಂತ್‌ಗೆ ಗುರಿಯಿಟ್ಟಿದ್ದನೆನ್ನಲಾಗಿದೆ. ಈ ವೇಳೆ ಮಧ್ಯಪ್ರವೇಶಿಸಿದ ಪತ್ನಿ ವಿನೋದಾ ಕೋವಿಯನ್ನು ಸೆಳೆದುಕೊಳ್ಳಲು ಪ್ರಯತ್ನಿಸಿದಾಗ ಕೋವಿಯಿಂದ ಸಿಡಿದ ಗುಂಡು ಆಕೆಗೆ ತಗಲಿ ಸಾವನ್ನಪ್ಪಿದ್ದಾರೆ. ಘಟನೆಯಿಂದ ನೊಂದ ಪತಿ ರಾಮಚಂದ್ರ ರಬ್ಬರ್ ಶೀಟ್ ಮಾಡಲು ಬಳಸುವ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತಂತೆ ಪ್ರಶಾಂತ್ ಹೇಳಿಕೆಯಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.