ಮಗಳು ಪುಷ್ಪವತಿ, ಹನ್ನೆರಡರ ಹೊಸ್ತಿಲು…
ಅಮ್ಮ ಎಂದು ಗಲಾಟೆ ಮಾಡುತ್ತಾ ರಂಪ ಮಾಡುತ್ತಿದ್ದ ಮಗಳು ಈಗ ಬದಲಾಗ್ತಾ ಇದ್ದಾಳೆ. ಅದೆಷ್ಟೇ ಕಾಲಚಕ್ರ ಬದಲಾಗುತ್ತಿದೆಯಾದರೂ ಹೆಣ್ಣು ಮಕ್ಕಳು ಒಂದು ಹಂತದಲ್ಲಿ ದಿಢೀರ್ ಆಗಿ ಬದಲಾಗಿಬಿಡುತ್ತಾರೆ. ಅದೂ ಹನ್ನೆರಡರ ಕಾಲದ ಮೆಟ್ಟಿಲು ಮೆಟ್ಟುತ್ತಿದ್ದಾರೆ ಅನ್ನುವಾಗ ಮಗಳು ಕನ್ಯೆಯಾಗಿ ಅರಳುವ ವಯೋಮಾನ. ಅದರ ಅರಿವು ತಾಯಂದಿರಿಗೂ ಹಾಗೂ ಮಗಳಿಗೂ ಅಗತ್ಯವಿರುತ್ತದೆ.
ಅರಳುವ ಹೂವು ಮಗಳು: ಹೆಣ್ಣುಮಗಳು ಕನ್ಯೆಯಾಗುವ ಸಮಯ ಸರಾಸರಿ ಹನ್ನೆರಡರಿಂದ ಹದಿಮೂರು ವಯಸ್ಸು. ಇತ್ತೀಚಿನ ದಿನಗಳ ಯಾಂತ್ರಿಕ ಜೀವನಶೈಲಿಯಿಂದ ಸ್ವಲ್ಪ ಬೇಗ ಅನ್ನುವ ಹಾಗೆ ಹೆಣ್ಣು ಮಕ್ಕಳು ಮೈನೆರೆಯುತ್ತಿದ್ದಾರೆ. ಹಾಗಾಗಿ ಕ್ರಮೇಣ ಬದಲಾಗುವ ಮಗಳ ಶರೀರದ ಬಗ್ಗೆ ಪೋಷಕರು ಗಮನವಿರಿಸಬೇಕಾಗುತ್ತದೆ. ಸ್ತ್ರೀತ್ವದ ಲಕ್ಷಣಗಳಲ್ಲಿ ಮೈ ನೆರೆಯುವ ಸಂದರ್ಭ ಮೊದಲಿಗೆ ಸ್ತನಗಳು ಬೆಳವಣಿಗೆಗೊಳ್ಳುವುದು ಕಾಣಬರುತ್ತದೆ. ಕಂಕುಳು ಹಾಗೂ ಜನನಾಂಗದಲ್ಲಿ ರೋಮಗಳ ಹುಟ್ಟುವಿಕೆ, ಗರ್ಭಾಶಯದ ಬೆಳವಣಿಗೆಗಳು ಋತುಚಕ್ರದ ಆರಂಭಿಕ ಲಕ್ಷಣಗಳಾಗಿವೆ. ಜನನಾಂಗದಲ್ಲಿ ಸ್ರವಿಸುವಿಕೆ ಮತ್ತು ಸದಾ ದ್ರವತ್ವದಿಂದ ಕೂಡಿರುವುದನ್ನು ಗಮನಿಸಬಹುದು. ಮೃದು ಕಾಂತಿಯೇರುವ ಚರ್ಮ, ತಲೆ ಕೂದಲ ಬೆಳವಣಿಗೆ.. ನಡವಳಿಕೆಯಲ್ಲೂ ಸಂಪೂರ್ಣ ಬದಲಾವಣೆ ಚಂಚಲ ಮನಸ್ಸು, ದೇಹದೊಳಗಿನ ಮನಸ್ಸು ಮನಸ್ಸಿಗೆ ತಕ್ಕ ದೇಹ ಇದು ಪ್ರಾಕೃತಿಕ ಸತ್ಯ, ಸ್ತ್ರೀ ಸಹಜ ಕಾಮನೆ, ಭಾವನೆ, ಸ್ವಭಾವಗಳ ಅಭಿವ್ಯಕ್ತಿ ಉಂಟಾಗುವ ಸಮಯ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಮಾನವ ದೇಹದ ಪ್ರಕೃತಿ ಸಹಜ ಕ್ರಿಯೆಗಳ ಮಾಹಿತಿ ಇರಬೇಕು. ನಾಚಿಕೆ, ಮರೆ, ಅಸಹ್ಯ ಭಾವನೆಗಳು ಇರಬಾರದು. ಅವಳ ಸ್ತ್ರೀತ್ವಕ್ಕೆ ಅರ್ಥ, ಮೆರುಗು, ಹಾರೈಕೆ ಎಲ್ಲವೂ ಅಗತ್ಯವಿದೆ. ಅದರಲ್ಲೂ ಅಮ್ಮಂದಿರು ಹಾಗೂ ಅಜ್ಜಿಯಂದಿರ ಪಾತ್ರಗಳು ಇಲ್ಲಿ ಬಹು ಮುಖ್ಯವಾದದ್ದು.
ಋತುಚಕ್ರ: ಇದು ಬರೀ ನಾಲ್ಕು ದಿನಗಳ ಬದುಕಲ್ಲ. ಸುಮಾರು ಹನ್ನೆರಡು ವಯಸ್ಸು ತಲುಪುವ ಹೊತ್ತಿಗೆ ಹುಡುಗಿಯೂ ಮಾತೃತ್ವಕ್ಕೆ ಯೋಗ್ಯ ಶರೀರವನ್ನು ಪಡೆಯುತ್ತಾಳೆ. ಗರ್ಭಾಶಯ ಮತ್ತು ಇತರ ಸಂತಾನೋತ್ಪಾದಕ ಅಂಗಗಳು ಗರ್ಭಧಾರಣೆಗೆ ಯೋಗ್ಯ ರಚನೆ ಕಾರ್ಯಗಳ ನಿರ್ವಹಣೆಯನ್ನು ಪ್ರಾರಂಭಿಸುತ್ತವೆ. ಇದು ಒಂದು ದಿನದ ಕಾರ್ಯವಲ್ಲ, ಹುಟ್ಟಿನಿಂದ ಸರಿಸುಮಾರು ಹನ್ನೆರಡು ವರ್ಷಗಳ ನಿರಂತರ ಬೆಳವಣಿಗೆಯಿಂದ ಆದದ್ದು. ಬರೋಬ್ಬರಿ ಒಂದು ತಿಂಗಳಲ್ಲಿ ಗರ್ಭಾಶಯದಲ್ಲಿ ಶೇಖರಿಸಲ್ಪಡುವ ರಕ್ತವರ್ಣವುಳ್ಳ ಮುಟ್ಟಿನ ಸ್ರಾವದ ಆ ನಾಲ್ಕು ದಿನಗಳು ಹೊರಗೆ ಸ್ರವಿಸಿ ಮತ್ತೊಮ್ಮೆ ಗರ್ಭಧಾರಣೆಗೆ ಯೋಗ್ಯವಾದ ಅಂಡಾಶಯಗಳು ಸಿದ್ಧವಾಗಲು ಸಹಾಯಕವಾಗುತ್ತದೆ. ಹೀಗೆ ನಿರಂತರ ಒಂದು ಮಾಸ ಅಥವಾ ತಿಂಗಳಿನ ಅವಧಿಯಲ್ಲಿ ಮತ್ತೆ ಇನ್ನೊಂದು ಸುತ್ತು ಮರುಕಳಿಸುತ್ತದೆ. ಈ ರೀತಿಯಲ್ಲಿ ಇಡೀ ತಿಂಗಳಲ್ಲಿ ನಡೆಯುವ ನಿಲ್ಲದ ಪ್ರಕ್ರಿಯೆಯೇ ಋತುಚಕ್ರ. ಇದು ಮುಂದೆ ಸರಿಸುಮಾರು ಐವತ್ತು ವಯಸ್ಸು ತಲುಪುವವರೆಗೂ ನಡೆಯುವ ಶಾರೀರಿಕ ಸ್ವಾಭಾವಿಕ ಕ್ರಿಯೆ. ಈ ಸ್ವಾಭಾವಿಕ ಪ್ರಕ್ರಿಯೆ ನಿಯಮಿತವಾಗಿ ನಡೆಯದ್ದಿದ್ದಲ್ಲಿ ಸ್ತ್ರೀಯರಲ್ಲಿ ವಿಕೃತಿ ಮೈ ತಳೆಯುವುದರೊಂದಿಗೆ ಬಂಜೆತನ ಆಗುವ ಸಾಧ್ಯತೆಯೂ ಹೆಚ್ಚು.
ದೈಹಿಕ ಮತ್ತು ಮಾನಸಿಕ ಆರೈಕೆ: ಋತುಚಕ್ರ ಹೆಣ್ಣು ಮಗಳ ಬದುಕಿನ ಒಂದು ಸಂಧಿ ಕಾಲ. ಹಾಗಾಗಿ ಮನೆ ಅಡುಗೆಯಲ್ಲಿದೆ ಅವಳ ಆರೋಗ್ಯ. ಮೂರು ಹೊತ್ತಿನಲ್ಲೂ ಮನೆಯ ತಾಜಾ ಆಹಾರ ಸಾಧ್ಯವಾದಷ್ಟು ಬಿಸಿ ಮಾಡಿ ಬಳಸಬೇಕು. ಫ್ರಿಡ್ಜ್ನ ಶೈತ್ಯದಲ್ಲಿಟ್ಟ ದೋಸೆ, ಇಡ್ಲಿ, ಚಪಾತಿ ಹಿಟ್ಟು ಮತ್ತೆ ಮತ್ತೆ ಬಿಸಿ ಮಾಡಿ ಉಣ್ಣುವ ತಂಗಳು, ಅಂಗಡಿಯ ಬ್ರೆಡ್, ಮೈದಾ ತಿನಿಸುಗಳು, ಕುರುಕುಲು ತಿಂಡಿಗಳು, ರಸ್ತೆ ಬದಿಯ ಚಾಟ್ಸ್‌ಗಳ ಬಳಕೆ ಖಂಡಿತವಾಗಿಯೂ ರೋಗಕಾರಕ, ಹೆಚ್ಚಾಗುತ್ತಿರುವ ನಿಯಮಿತ ಋತು ಚಕ್ರಕ್ಕೆ ಹಾಗೂ ಹಲವು ಸ್ತ್ರೀ ರೋಗಗಳಿಗೆ ಇವುಗಳು ನೇರ ಕಾರಣವೆನ್ನಬಹುದು.
ಮೈ ನೆರೆಯುವ ಲಕ್ಷಣ ಕಂಡುಬರುವಾಗ ಅಥವಾ ಮೈ ನೆರೆದ ನಂತರ, ಮುಂದೆಯೂ ಸ್ತ್ರೀ ಆರೋಗ್ಯದ ಗುಟ್ಟು ಸಮತೋಲಿತ ತೈಲೋಪಯೋಗದಲ್ಲಿದೆ. ಅದರಲ್ಲೂ ಎಳ್ಳೆಣ್ಣೆಯನ್ನು ದಿನಕ್ಕೆ ಒಂದು ಎರಡು ಹೊತ್ತಿನ ಬಿಸಿ ಆಹಾರದಲ್ಲಿ ಅನ್ನ, ದೋಸೆ, ಚಪಾತಿ, ತಾಜಾ ಆಹಾರಗಳಲ್ಲಿ ಬಳಸುವುದು ಸೂಕ್ತ. ಎರಡು ಚಮಚ ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ಶೇಂಗಾ ಎಣ್ಣೆ, ಕುಸುಬೆ ಎಣ್ಣೆ, ಹರಳೆಣ್ಣೆಗಳ ಬಳಕೆ ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಬಳಸುವುದು ಉತ್ತಮ. ಪೇಟೆಯಲ್ಲಿ ಸಿಗುವ ಅಗ್ಗದ ರಿಫೈನ್ಡ್ ಎಣ್ಣೆ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಫಿಲ್ಟರ್ಡ್ ಅಥವಾ ಕಚ್ಚಾ ಎಣ್ಣೆಯ ಬಳಕೆ ಅಡುಗೆಯಲ್ಲಿರಲಿ. ಆಹಾರದಲ್ಲಿ ಬಳಸುವ ಎಣ್ಣೆ ಗರ್ಭಾಶಯಕ್ಕೆ ಬಲಕಾರಕ ಮತ್ತು ಇತರ ಜನನಾಂಗಗಳ ಪೋಷಣೆಗೆ ಉಪಕಾರಿ. ತಿಂಗಳ ಸ್ರಾವ ಹೊಟ್ಟೆ, ಸೊಂಟ ನೋವಿಲ್ಲದೆ ಆಗಲು ಸಹಾಯ ಮಾಡುತ್ತದೆ. ಮನೆಯಲ್ಲಿ ಮಾಡಬಹುದಾದ ಎಳ್ಳುಂಡೆ, ಉಚ್ಚೆಳ್ಳು, ಕೊಬ್ಬರಿ, ಒಣ ಹಣ್ಣುಗಳು, ಚಿಗಳಿ ಉಂಡೆಗಳ ಬಳಕೆ ಸ್ತನ ಚರ್ಮ, ಮೂಳೆಗಳಿಗೆ ಪೋಷಕ. ಇವುಗಳನ್ನು ಮಕ್ಕಳು ಬೆಳಗಿನ ಉಪಾಹಾರದಲ್ಲಿ ಸಂಜೆ ಶಾಲೆಯಿಂದ ಬಂದ ನಂತರ ಹಾಲಿನೊಂದಿಗೆ ಸೇವಿಸಬಹುದು. ಮೈ ನೆರೆಯುವ ಮತ್ತು ನಂತರದ ಮೂರು ತಿಂಗಳು ಇವುಗಳನ್ನು ಸೇವಿಸಿದರೆ ತುಂಬಾ ಒಳ್ಳೆಯದು. ಸ್ವಲ್ಪ ಜೀರಿಗೆ ಹಾಕಿ ಕುದಿಸಿದ ನೀರನ್ನು ಆಹಾರದ ಜೊತೆಗೆ ಕುಡಿಯಲು ಇಡೀ ತಿಂಗಳು ಕೊಡಬಹುದು. ಶರೀರಕ್ಕೆ ನಿತ್ಯವೂ ೧೦ ನಿಮಿಷ ಎಳ್ಳೆಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು ಶರೀರದ ಕ್ರಿಯೆಗಳನ್ನು ಮತ್ತು ಋತುಚಕ್ರವನ್ನು ಸರಿದೂಗಿಸುವ ಒಂದು ದಿನಚರಿ.
ಶಾಲೆಯ ಒತ್ತಡದ ಪಠ್ಯಕ್ರಮವನ್ನು ಮಗಳ ಮೇಲೆ ಹೇರಿ, ರಾತ್ರಿ ಇಡೀ ನಿದ್ದೆಗೆಟ್ಟು ಅವಳ ಆರೋಗ್ಯ ಹಾಳು ಮಾಡದಿರಿ. ರಾತ್ರಿ ಬೇಗ ಮಲಗಿ ಮುಂಜಾನೆ ಬೇಗ ಎದ್ದು ಓದುವಂತೆ ಪ್ರೋತ್ಸಾಹಿಸಿ. ಅವಳಿಗೆ ಅಂತಹ ಅನುಕೂಲಕರ ವಾತಾವರಣವನ್ನು ಮನೆಯಲ್ಲಿ ಸೃಷ್ಟಿಸಿ. ತಪ್ಪಿದಲ್ಲಿ ಉಂಟಾಗುವ ಮಾನಸಿಕ ಒತ್ತಡ, ರಾತ್ರಿ ಜಾಗರಣೆ ಅವಳ ಮುಟ್ಟಿನ ಏರುಪೇರಿಗೆ ನೇರ ಕಾರಣವಾಗುತ್ತದೆ.
ಆ ನಾಲ್ಕು ದಿನಗಳ ದಿನಚರಿ ಹೇಗಿರಬೇಕು?: ಬಾಹ್ಯ ಸ್ವಚ್ಛತೆಗೆ ಆದ್ಯತೆ ನೀಡಿ, ಮುಟ್ಟು ಆದಾಗ ಸಕಾಲದಲ್ಲಿ ಸಾನಿಟರಿ ಪ್ಯಾಡ್ ನ್ಯಾಪ್ಕಿನ್‌ಗಳನ್ನು ಬದಲಾಯಿಸಲು ತಿಳಿಸಿಕೊಡಿ. ಬೆಚ್ಚನೆಯ ನೀರು ಉಪಯೋಗಿಸಲು ತಿಳಿಸಿ, ಶಾಲೆಯಲ್ಲಿ ನಡೆಯಬಹುದಾದ ಆಕಸ್ಮಿಕ ಸ್ರಾವ ಬಟ್ಟೆಗಂಟುವ ಕಲೆಗಳ ಬಗ್ಗೆ ಎಚ್ಚರಿಕೆಯನ್ನು ಮನವರಿಕೆ ಮಾಡಿಕೊಡಿ. ಹಾಗೆಯೇ ರಾಸಾಯನಿಕಯುಕ್ತ ನ್ಯಾಪ್ಕಿನ್‌ಗಳ ಹಗಲು-ರಾತ್ರಿಯ ನಿರಂತರ ಬಳಕೆ ಜನನಾಂಗದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ. ನವೆ ಉಂಟಾಗಬಹುದು. ಹಾಗಾಗಿ ತುಂಬಾ ಎಚ್ಚರ ವಹಿಸಬೇಕು. ಮುಟ್ಟಿನ ಬಗ್ಗೆ ಇರುವ ಪ್ರಾಚೀನ ಮೂಢನಂಬಿಕೆಯನ್ನು ಮಕ್ಕಳ ಮೇಲೆ ಹೇರಬೇಡಿ. ಇದರಿಂದ ಅವರು ಹೆಣ್ಣಾಗಿ ಹುಟ್ಟಿದ್ದೇ ತಪ್ಪು ಎಂಬ ಭಾವನೆ ಮೂಡುವುದು ಹಾಗೂ ಅವರ ದೇಹದ ಮೇಲೆ ಅವರಿಗೇ ಅಸಹ್ಯ ಮೂಡಬಹುದು. ಮಕ್ಕಳಿಗೆ ಸ್ವಚ್ಛತೆ ಬಗ್ಗೆ ತಿಳಿ ಹೇಳಿ. ಆ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ತಲೆ ಸ್ನಾನ ಕೂಡದು, ಇದರಿಂದ ರಕ್ತಸ್ರಾವ ಹೆಚ್ಚಾಗಬಹುದು ಹಾಗೂ ನಿಶ್ಶಕ್ತಿಯು ಉಂಟಾಗುವ ಸಂಭವ ಹೆಚ್ಚು. ಈ ಸಂದರ್ಭದಲ್ಲಿ ಈಜುವುದು, ಟಬ್ ಬಾತ್ ಹಿತವಲ್ಲ, ಇವೆಲ್ಲವೂ ರಕ್ತಸ್ರಾವದ ಏರಿಳಿತಕ್ಕೆ ಕಾರಣವಾಗಬಹುದು. ದೈಹಿಕವಾಗಿ ವ್ಯಾಯಾಮ, ಆಟ, ಸೈಕಲ್ ತುಳಿತ, ನೃತ್ಯ ಇತ್ಯಾದಿಗಳನ್ನು ಮುಟ್ಟು ಇರುವಷ್ಟು ದಿನ ನಿಲ್ಲಿಸಿದಲ್ಲಿ ಒಳಿತು.
ಋತುಚಕ್ರ ಸಾಮಾನ್ಯ ಸಮಸ್ಯೆಗಳು ಹಾಗೂ ಆರೈಕೆ: ದಿನಾಲು ಕಾರಂಜಿಯಂತಿರುವ ಬಾಲಕಿಯರು, ಮುಟ್ಟಿನ ದಿನಗಳಲ್ಲಿ ಗುಡ್ಡವನ್ನೇ ಹೊತ್ತು ಕೂತವರ ಹಾಗೆ ಬಳಲಿ ಬಿಡುತ್ತಾರೆ, ಮನಸ್ಥಿತಿಯ ಏರುಪೇರಾಗುವುದು, ಬೇಗ ಕೋಪ ಬರುವುದು, ಕಿರಿಕಿರಿಯಾಗುವುದು ಸಾಮಾನ್ಯ. ಈ ಹೊತ್ತಿನಲ್ಲೇ ಮನೆಯವರ ಕಾಳಜಿ, ಆರೈಕೆ, ಪ್ರೀತಿಯನ್ನು ಪ್ರತಿ ಜೀವ ಬಯಸುವುದು. ಅದನ್ನು ದೊಡ್ಡವರು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ನಿಭಾಯಿಸಬೇಕಾಗುತ್ತದೆ. ಇಡೀ ತಿಂಗಳಿನ ಆಹಾರ, ನಿದ್ರೆ ಎಷ್ಟು ಆರೋಗ್ಯಕ್ಕೆ ಪೂರಕವಾಗಿರುತ್ತದೋ ಹಾಗೆಯೇ ಮುಟ್ಟಿನ ಆ ನಾಲ್ಕು ದಿನಗಳು. ಆ ನಾಲ್ಕು ದಿನಗಳು ಸರಿಯಾಗಿ ಸ್ರವಿಸಿ ಗರ್ಭಾಶಯ ಶುದ್ಧವಾದಲ್ಲಿ ಮಾತ್ರ ಮುಂದಿನ ತಿಂಗಳಿನ ಆರೋಗ್ಯ. ಹಳೆಯ ಸ್ರಾವ ಉಳಿದಲ್ಲಿ ಮತ್ತೊಮ್ಮೆ ಅನಾರೋಗ್ಯ. ಮುಟ್ಟಿನ ದಿನಗಳ ಹಿಂದು-ಮುಂದು ಹೊಟ್ಟೆ ನೋವು, ತಲೆ ನೋವು, ಸೊಂಟ ನೋವು, ಕಾಲುಗಳ ಸೆಳೆತ, ಸ್ತನಗಳಲ್ಲಿ ಗಂಟು ಸುಸ್ತು, ಬಿಳಿ ಮುಟ್ಟು, ಅತಿ ಸ್ರಾವ ಇವುಗಳು ಸಾಮಾನ್ಯವಾಗಿ ಆಗುವ ಏರುಪೇರುಗಳು. ಹಾಗಾಗಿ ಹಿರಿಯರು ತಮ್ಮ ಮಗಳ ಆರೋಗ್ಯವನ್ನು ಗಮನಿಸುತ್ತಲೇ ಇರಬೇಕು. ಇಂತಹ ಸಂದರ್ಭದಲ್ಲಿ ತಕ್ಷಣ ವೈದ್ಯರ ಸಹಾಯ ಪಡೆಯುವುದು ಉತ್ತಮ.
ಮುಟ್ಟು ಹೆಣ್ಣಿಗೆ ಇರುವಂತಹ ವಿಶೇಷವಾದ ಶಕ್ತಿ. ಇದೊಂದು ಪ್ರಕೃತಿ ನಿಯಮ, ಹಸಿವು, ಬಾಯಾರಿಕೆ ಆಗುವ ವಿಸರ್ಜನೆ ಇದ್ದಹಾಗೆ ತಿಂಗಳ ಮುಟ್ಟು ಕೂಡ. ಈಗಿನ ೨೧ನೇ ಶತಮಾನದಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದ್ದರೂ ಹಳ್ಳಿ ಜನರು, ಹಳೆಯ ಸಂಪ್ರದಾಯವನ್ನೇ ಅಂಟಿಕೊಂಡವರು ಇನ್ನೂ ತಿಂಗಳ ಮುಟ್ಟಿನ ಬಗ್ಗೆ ತಾತ್ಸಾರ, ಮೂಢನಂಬಿಕೆಗಳಿಂದ ಹೊರಬರದೆ ಇರುವುದು ವಿಷಾದನೀಯ ವಿಚಾರ. ಅದರಲ್ಲಿಯೂ ವಿದ್ಯಾವಂತ ಹೆಣ್ಣು ಮಕ್ಕಳು ಇಂತಹ ಸಂಪ್ರದಾಯವನ್ನು ಪಾಲಿಸುವುದು ಇನ್ನೂ ಆಶ್ಚರ್ಯಕರ ವಿಷಯವಾಗಿದೆ. ವೇದಗಳ ಕಾಲದಲ್ಲಿಯೂ ಯಾವುದೇ ಗ್ರಂಥದಲ್ಲಿಯೂ ಮುಟ್ಟನ್ನು ಮೈಲಿಗೆ ಎಂದು ಹೇಳಲಿಲ್ಲ. ಈ ಮಡಿ ಮೈಲಿಗೆಯನ್ನು ಹುಟ್ಟಿಸಿಕೊಂಡವರು ಈ ಬುದ್ಧಿಹೀನ ಜನಗಳೇ ಹೊರತು ದೇವರು ಹಾಗೂ ಧರ್ಮ ಗ್ರಂಥಗಳು ಅಲ್ಲ. ದುರ್ಬಲ ಮನಸ್ಸಿನ ಹೆಂಗಸರು ಈ ಮೌಢ್ಯಗಳಿಗೆ ಬೇಗ ಶರಣಾಗುತ್ತಾರೆ.
ಕೊನೆ ಹನಿ: "ಸರಿಯಾಗಿ ಸಾಗುವ ಋತುಚಕ್ರ ಸ್ತ್ರೀಗೆ ದೈವದತ್ತ ಆರೋಗ್ಯ ಮಾಪಕ"