ಮತದಾನ ಹೆಚ್ಚಳಕ್ಕೆ ಏನು ಮಾಡಬೇಕು?
ದೇಶದಲ್ಲಿ ಕೆಲವು ಹಂತಗಳ ಮತ್ತು ಕರ್ನಾಟಕದಲ್ಲಿ ಮೊದಲ ಹಂತದ ಮತದಾನದ ನಂತರ ಈಗ ಕಡಿಮೆ ಮತದಾನವಾದ ಸ್ಥಳಗಳ ಬಗೆಗೆ ಚರ್ಚೆಯಾಗುತ್ತಿದೆ. ಬೆಂಗಳೂರಿನಂತಹ ಮಹಾನಗರಗಳು, ಪಟ್ಟಣಗಳು ಮತ್ತು ಸುಶಿಕ್ಷಿತರು ಇರುವ ಕಡೆಗಳಲ್ಲಿ ಕಡಿಮೆ ಮತದಾನವೇಕಾಯ್ತು? ಎಂದು ಕಾರಣಗಳನ್ನು ಹೆಕ್ಕಿ ತಗೆಯುವುದರ ಜೊತೆಗೆ ಅದಕ್ಕೆ ಕಂಡುಕೊಳ್ಳಬಹುದಾದ ಪರಿಹಾರಗಳ ಬಗೆಗೂ ಚರ್ಚಿಸಲಾಗುತ್ತಿದೆ. ಪ್ರಜಾಪ್ರಭುತ್ವದ ನೈಜ ಯಶಸ್ವಿಗೆ ದೇಶದ ಸರ್ವ ನಾಗರಿಕರು ಕ್ರಿಯಾಶೀಲವಾಗಿ ಮತದಾನದಂತಹ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಹಾಗೆಂದಾಗ ಮಾತ್ರ ಅದು ಅಕ್ಷರಶಃ ಪ್ರಾತಿನಿಧ್ಯಾತ್ಮಕವಾಗುತ್ತದೆ. ಅದಕ್ಕಾಗಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಭಾರತದ ಚುನಾವಣಾ ಆಯೋಗವು ವ್ಯಾಪಕವಾಗಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು, ಮತದಾರ ಸ್ನೇಹೀ ಕ್ರಮಗಳನ್ನು ಕೈಗೊಂಡಿರುತ್ತದೆ. ಆದರೂ ನಮಗಿನ್ನೂ ಮತದಾನದಲ್ಲಿ ಆ ಮ್ಯಾಜಿಕ್ ನಂಬರ್ ಪ್ರತಿಶತ ೧೦೦ನ್ನು ತಲುಪಲಾಗಿಲ್ಲ. ಅದಕ್ಕಾಗಿ ಅನೇಕ ಸಂವೇದನಾಶೀಲ ಪ್ರಜಾಪ್ರಭುತ್ವ ಪ್ರೇಮಿಗಳು ವಿಭಿನ್ನ ದೃಷ್ಟಿಕೋನಗಳಿಂದ ಕೊಟ್ಟಿರುವ ರಚನಾತ್ಮಕ ಸಲಹೆಗಳನ್ನು ಕ್ರೂಢೀಕರಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಬರದ ಭೀಕರತೆಗೊಳಗಾಗಿ ತಮ್ಮ ಮನೆಗಳಿಗೆ ಬೀಗ ಹಾಕಿ ಜನರುಗಳೇ ಹೋದದ್ದರಿಂದ ಹಳ್ಳಿಗಳೆಲ್ಲ ಭಿಕೋ ಎನ್ನುತ್ತಿವೆ. ಉತ್ತರ ಕರ್ನಾಟಕದ ಗಡಿಭಾಗದ ಲಕ್ಷಾಂತರ ಕಾರ್ಮಿಕರು ಕೆಲಸ ಹುಡುಕಿಕೊಂಡು ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ತೆಲಂಗಾಣಗಳಿಗೆ ವಲಸೆ ಹೋಗಿದ್ದಾರೆ. ಅವರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಆಯಾ ರಾಜ್ಯ ಸರ್ಕಾರಿ, ಖಾಸಗಿ ಸಂಸ್ಥೆಗಳು ವೇತನ ಸಹಿತ ರಜೆಯನ್ನೇನೋ ಘೋಷಿಸಿವೆ. ಆದರೆ ಅವರ ಪ್ರಯಾಣದ ವೆಚ್ಚವನ್ನು ಅವರೇ ಹಾಕಿಕೊಳ್ಳಬೇಕಾಗಿದೆ. ವೆಚ್ಚದ ಮಿತಿಯಿಂದಾಗಿ ಮತ್ತು ಚೆಕ್‌ಪೋಸ್ಟ್‌ಗಳಲ್ಲಿ ಇಟ್ಟಿರುವ ನಿಗಾದಿಂದಾಗಿ ವಲಸೆ ಕಾರ್ಮಿಕರಿಗೆ ಪ್ರಯಾಣ ಸೌಲಭ್ಯವನ್ನು ಒದಗಿಸಲು ಅಭ್ಯರ್ಥಿಗಳು ಹಾಗೂ ಪಕ್ಷಗಳು ಹಿಂದೇಟು ಹಾಕುತ್ತಿವೆ. ಭೀಕರ ಬರ, ದಾಖಲೆಯ ಉರಿಬಿಸಿಲು, ಪ್ರಯಾಣದ ವೆಚ್ಚದಿಂದಾಗಿಯೂ ಮತದಾರರು ಚುನಾವಣೆ ಬಗ್ಗೆ ನಿರಾಸಕ್ತಿ ಹೊಂದಿರುವ ಸಾಧ್ಯತೆ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಂತೆ ಇದು ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಅಷ್ಟಾಗಿ ಪರಿಣಾಮ ಬೀರದು ಎಂದು ಅಭ್ಯರ್ಥಿಗಳು ಗುಳೇ ಹೋದವರನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ಕಾರಣಗಳಿಂದ ಶೇಕಡವಾರು ಮತದಾನದ ಮೇಲೆ ಪರಿಣಾಮವಾಗುತ್ತದೆ. ಆದ್ದರಿಂದ ಇಂತಹ ಮತದಾರರಿಗೆ ಮತದಾನ ದಿನದ ಜೊತೆಗೆ ಹಿಂದೆ ಮತ್ತು ಮುಂದೆ ಒಂದೊಂದು ಅಂದರೆ ಒಟ್ಟು ೩ ಸಂಬಳ ಸಹಿತ ರಜೆ ಕೊಡಬೇಕು. ಅವರು ಹೋಗಿ ಬರುವ ಪ್ರಯಾಣದ ವೆಚ್ಚವನ್ನು ಭರಿಸಬೇಕು. ಅದನ್ನು ಉದ್ದಿಮೆಗಳೇ ಅಥವಾ ಸರಕಾರ ನೋಡಿಕೊಳ್ಳಬೇಕೆಂದು ಕಾರ್ಮಿಕರು ಬಯಸುತ್ತಾರೆ. ಇಲ್ಲವಾದರೆ ಇದಕ್ಕೆ ಪರ್ಯಾಯವಾಗಿ ಇಂತವರಿಗಾಗಿಯೇ ಪ್ರತ್ಯೇಕ ಅಂಚೆ ಮತದಾನದ ಸೌಲಭ್ಯವನ್ನು ಒದಗಿಸಬೇಕು.
ಪೂರ್ಣ ಪ್ರಮಾಣದ ಮತದಾನದ ಉದ್ದೇಶ ಸಾಧನೆಗಾಗಿ ಚಿಕ್ಕಮಗಳೂರು ಜಿಲ್ಲಾಡಳಿತವು ಒಂದು ವಿಶಿಷ್ಟ ಕ್ರಮ ಕೈಗೊಂಡಿತ್ತು. ರಾಜ್ಯದಲ್ಲಿ ಚುನಾವಣೆ ನಡೆಯುವ ದಿನಗಳಲ್ಲದೇ ಅದರ ಹಿಂದಿನ ದಿನಗಳಂದು ಹೋಂಸ್ಟೇ, ರೆಸಾರ್ಟ್ ಮತ್ತು ಹೋಟೆಲ್ ಬುಕಿಂಗ್‌ನ್ನು ನಿರ್ಬಂಧಿಸಿತ್ತು. ಚುನಾವಣೆ ದಿನದ ರಜೆಯ ಕಾರಣ ಮತದಾನ ಮಾಡದೇ ಜನರು ಹೋಂಸ್ಟೇ, ರೆಸಾರ್ಟ್ಗಳತ್ತ ಮುಖಮಾಡುವುದನ್ನು ತಪ್ಪಿಸಿ, ಮತದಾನವನ್ನು ತಪ್ಪದೇ ಮಾಡುವಂತೆ ಆಗಲು ಈ ಕ್ರಮವನ್ನು ಕೈಗೊಳ್ಳಲಾಗಿತ್ತು. ಇದನ್ನೇ ದೇಶದಾದ್ಯಂತ ಎಲ್ಲ ಪ್ರೇಕ್ಷಣೀಯ ಸ್ಥಳಗಳಿಗೂ ವಿಸ್ತರಿಸಬೇಕು. ಆ ದಿನ ಮತ್ತು ಮುನ್ನಾದಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಹೋಂಸ್ಟೇ, ರೆಸಾರ್ಟ್ ಮತ್ತು ಹೋಟೆಲ್‌ಗಳನ್ನು ಕಡ್ಡಾಯವಾಗಿ ಬಂದ್ ಮಾಡಿಸಬೇಕು. ಆ ದಿನಗಳಂದು ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ತೆರಳುವವರಿಗಾಗಿ ಸಾರಿಗೆ ವ್ಯವಸ್ಥೆಯನ್ನು ನಿರ್ಬಂಧಿಸಬೇಕು.
ಎಲ್ಲಕ್ಕೂ ಮುಖ್ಯವಾಗಿ ಚುನಾವಣಾ ದಿನಗಳನ್ನು ನಿರ್ಧರಿಸುವಾಗ ಆಯೋಗ ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ವಾರಾಂತ್ಯ ಮತ್ತು ಪ್ರಾರಂಭದಲ್ಲಿ ಅಂದರೆ ಶುಕ್ರವಾರ, ಶನಿವಾರ ಮತ್ತು ಸೋಮವಾರ ಅಥವಾ ಯಾವುದಾದರೂ ರಜೆಗಳಿದ್ದರೆ ಅವುಗಳ ಹಿಂದು ಮುಂದಿನ ದಿನಗಳಲ್ಲಿ ಮತದಾನವನ್ನು ಇಡಬಾರದು. ವಾರದ ಮಧ್ಯದ ದಿನಗಳಲ್ಲಿ ಮತದಾನದ ದಿನವನ್ನು ಘೋಷಿಸಬೇಕು. ಚುನಾವಣಾ ಕರ್ತವ್ಯಕ್ಕೆ ತಾತ್ಕಾಲಿಕವಾಗಿ ನೇಮಕಗೊಂಡ ಸಾವಿರಾರು ಜನರಿಗೆ ಮತದಾನದ ಅವಕಾಶ ಇದ್ದೂ ತಪ್ಪುತ್ತಿದೆ. ಚುನಾವಣಾ ಸಿಬ್ಬಂದಿ, ಮಾಸ್ಟರಿಂಗ್ ಸೆಂಟರ್ ಸಿಬ್ಬಂದಿ ಮತದಾನದಿಂದ ವಂಚಿತರಾಗುತ್ತಿದ್ದಾರೆ. ಇವರಿಗೆ ಅಂಚೆ ಮತದಾನದ ಸರಿಯಾದ ವ್ಯವಸ್ಥೆಯಾಗಬೇಕು. ದೀಪದ ಕೆಳಗಿನ ಕತ್ತಲಿನಂತೆ ಚುನಾವಣಾ ಕೆಲಸ ಮಾಡಿದ್ದರಿಂದ ಮತದಾನ ತಪ್ಪಿದಂತೆ ಆಗಬಾರದು.
ಇನ್ನು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕಗಳಲ್ಲಿ ಮಾತ್ರವಲ್ಲದೇ ಬೆಂಗಳೂರಿನಂತಹ ಪ್ರದೇಶಗಳ ಬೇಸಿಗೆ ತಾಪಮಾನ ವರುಷ ವರುಷವೂ ಹೆಚ್ಚುತ್ತಿದೆ. ಅದಕ್ಕಾಗಿ ಮತದಾರರಿಗೆ ನೆರಳು, ನೀರು, ತಂಪು ಪಾನೀಯದ ವ್ಯವಸ್ಥೆಯನ್ನು ಪ್ರತಿ ಕೇಂದ್ರದಲ್ಲೂ ಕಡ್ಡಾಯವಾಗಿ ಮಾಡಬೇಕು. ಸರತಿಯ ಸಾಲು ಸಹ ನೆರಳಿನಲ್ಲಿ ಸಾಗುವಂತೆ ಆಯೋಜಿಸಬೇಕು. ಇದರಿಂದ ಬಿಸಿಲು ಹೊಡೆತದಿಂದ, ಜನರು ಆರೋಗ್ಯ ಸಂಬಂಧಿತ ತೊಂದರೆಗಳಿಗೆ ಒಳಗಾಗುವುದನ್ನು ತಪ್ಪಿಸಬಹುದು. ಅದರಲ್ಲೂ ವಿಶೇಷವಾಗಿ ಅನಾರೋಗ್ಯಕ್ಕೊಳಗಾದವರು, ವೃದ್ಧರು, ಗರ್ಭಿಣಿಯರು ಹಾಗೂ ಅಂಗವಿಕಲರಿಗೆ ಹೆಚ್ಚಿನ ಕಾಳಜಿ ತೋರಿಸಬೇಕಾಗುತ್ತದೆ.
ತಮಗೆ ಮತಬಾರದಿರುವ ಕಡೆಗಳಲ್ಲಿ ಕೆಲ ಅಭ್ಯರ್ಥಿಗಳು/ಪಕ್ಷಗಳು ಹತಾಶೆಯಿಂದ ಮತದಾರರು ಮನೆ ಬಿಟ್ಟು ಹೊರಬಾರದಂತೆ ಭಯದ ವಾತಾವರಣವನ್ನು ಸೃಷ್ಟಿಸುತ್ತಾರೆ. ಅಥವಾ ತಮಗೇ ಮತ ಹಾಕಬೇಕು ಇಲ್ಲವಾದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಧಮಕಿ ಹಾಕುತ್ತಾರೆ. ಇದನ್ನು ಚುನಾವಣಾ ಆಯೋಗ ಮೊದಲೇ ಗ್ರಹಿಸಿ ಅಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನು ಕಲ್ಪಿಸಬೇಕು. ಮತದಾರರು ನಿರ್ಭೀತಿಯಿಂದ, ಮುಕ್ತವಾಗಿ ತಮಗೆ ಬೇಕಾದವರಿಗೆ ಮತ ಚಲಾಯಿಸಲು ಬೇಕಾದ ಮತದಾರ ಸ್ನೇಹೀ ವಾತಾವರಣವನ್ನು ನಿರ್ಮಿಸಬೇಕು. ಉದ್ದುದ್ದದ ಸಾಲುಗಳನ್ನು ನೋಡಿ ಮತದಾನ ಮಾಡಲು ಬಂದವರು ಮತದಾನ ಮಾಡದೇ ಹಿಂದಿರುಗಿ ಹೋಗುತ್ತಾರೆ. ಐಪಿಎಲ್ ಟಿಕೆಟ್‌ಗಾಗಿ ಬೇಕಾದರೆ ದಿನಗಟ್ಟಲೇ ನಿಲ್ಲುವ ಇವರಿಗೆ ಚುನಾವಣೆಯಲ್ಲಿ ಸರದಿ ಸಾಲಿನಲ್ಲಿ ಸ್ವಲ್ಪ ಹೊತ್ತು ಕಾಯುವ ವ್ಯವಧಾನ ಇರುವುದಿಲ್ಲ. ಇದನ್ನು ತಪ್ಪಿಸಲು ಮತದಾನ ಕೇಂದ್ರ /ಪೆಟ್ಟಿಗೆಗಳನ್ನು ಹೆಚ್ಚಿಸಬೇಕು.
ಇನ್ನೂ ಕೆಲ ಮತದಾರರು ವಿಶೇಷವಾಗಿ ಸುಶಿಕ್ಷಿತ, ಪಟ್ಟಣದ ಮತದಾರರು ತಮ್ಮನ್ನಾಳುವ ಪ್ರತಿನಿಧಿಗಳ ಬಗ್ಗೆ ಭ್ರಮ ನಿರಸಗೊಂಡು, ಯಾರು ಆಯ್ಕೆ ಆದರೂ ಅಷ್ಟೇ? ಎನ್ನುವ ಉದಾಸೀನತೆಯನ್ನು ಹೊಂದಿರುತ್ತಾರೆ. ಈ ಜಿಗುಪ್ಸೆಯ ಮನಸ್ಥಿತಿಯನ್ನು ಸರಿಪಡಿಸುವ ಜವಾಬ್ದಾರಿಯು ಪ್ರಜಾಪ್ರಭುತ್ವವನ್ನು ಪ್ರೀತಿಸುವ ಪ್ರತಿಯೊಬ್ಬ ವ್ಯಕ್ತಿ, ಅಭ್ಯರ್ಥಿ ಮತ್ತು ಪಕ್ಷಗಳ ಮೇಲಿದೆ. ಅವರೆಲ್ಲ ಜನರಿಗೆ ಪ್ರಜಾಪ್ರಭುತ್ವದ ಜೀವಾಳವಾಗಿರುವ ಮತದಾನದ ಬಗೆಗೆ ಭ್ರಮನಿರಸನವಾಗದಂತೆ ನೋಡಿಕೊಳ್ಳಬೇಕು. ಬೆಂಗಳೂರಿನ ಆಚೆ ಕರುನಾಡಿನ ವಿವಿಧೆಡೆಯಿಂದ ಬಂದವರು ಮತ್ತು ಬೇರೆ ಬೇರೆ ರಾಜ್ಯಗಳಿಂದ ಬಂದು ನೆಲೆಸಿದವರಲ್ಲಿ ಅನೇಕರ ಹೆಸರು ಬೆಂಗಳೂರಿನಲ್ಲಿ ಮತ್ತು ತಮ್ಮೂರಿನಲ್ಲಿ ಎರಡೂ ಕಡೆಯ ಮತಪಟ್ಟಿಗಳಲ್ಲಿ ಇದೆ. ತಮ್ಮೂರಿನ ಜೊತೆಗೆ ಭಾವನಾತ್ಮಕ ಸಂಬಂಧ ಹೊಂದಿರುವ ಬೆಂಗಳೂರಿಗೆ ಅಪರಿಚಿತರಾದ ಅವರು ಅಂಥಹವರು ಮತದಾನ ಮಾಡಲು ತಮ್ಮೂರಿಗೆ ತೆರಳುತ್ತಾರೆ. ಹೀಗಾಗಿ ಬೆಂಗಳೂರಿನ ಶೇಕಡಾವಾರು ಮತದಾನ ಕಡಿಮೆಯಾಗುತ್ತದೆ, ಎನ್ನುವ ವಾದವಿದೆ. ಒಬ್ಬ ವ್ಯಕ್ತಿಗೆ ಒಂದು ಕಾಲಕ್ಕೆ ಒಂದೇ ಸ್ಥಳದಲ್ಲಿ ಒಂದೇ ಓಟು ಇರುವಂತೆ ಒಂದು ದೋಷರಹಿತ ಮತಪಟ್ಟಿ ತಯಾರಾಗಬೇಕು. ಮತಚೀಟಿಯನ್ನು ಆಧಾರ ಸಂಖ್ಯೆಯೊಂದಿಗೆ ಜೋಡಿಸಬೇಕು.
ತಿಂಗಳುಗಟ್ಟಲೇ ಜಾಗೃತಿ ಅಭಿಯಾನದ ಹೊರತಾಗಿಯೂ ಬೆಂಗಳೂರಿನ ೩ ಲೋಕಸಭಾ ಕ್ಷೇತ್ರಗಳು, ಚಿಕ್ಕಬಳ್ಳಾಪುರ ಕ್ಷೇತ್ರದ ಯಲಹಂಕ ಮತ್ತು ಬೆಂಗಳೂರು ಗ್ರಾಮೀಣ ಕ್ಷೇತ್ರದ ಆರ್‌ಆರ್ ನಗರ ಸೇರಿ ಬೆಂಗಳೂರಿನ ಒಟ್ಟು ೨೭ ವಿಧಾನಸಭಾ ಕ್ಷೇತ್ರಗಳ ೯೭.೦೪ ಲಕ್ಷ ಮತದಾರರ ಪೈಕಿ ಕೇವಲ ೫೨.೭೪ ಲಕ್ಷ ಮತದಾರರು ಮಾತ್ರ ತಮ್ಮ ಹಕ್ಕನ್ನು ಚಲಾಯಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಟೀಕೆ-ಟಿಪ್ಪಣಿಗಳಿಗೇ ಸೀಮಿತರಾಗಿರುವ ಅರ್ಧದಷ್ಟು ಪ್ರಜಾಶೂರರು ಮತದಾನ ಕೇಂದ್ರಕ್ಕೇ ಬರಲಿಲ್ಲ. ಬಿಸಿಲು, ಉದ್ದನೇ ಸಾಲು ಇತ್ಯಾದಿ ನೆಪಗಳನ್ನು ಹೇಳಿದರು. ಚುನಾವಣಾ ಆಯೋಗದ ಆದೇಶದಂತೆ ಸರಕಾರಿ/ಅರೆಸರಕಾರಿ/ಖಾಸಗಿ ನೌಕರರಿಗೆಲ್ಲ ಮತದಾನ ಮಾಡಲು ಅನುಕೂಲವಾಗಲೆಂದು ಪ್ರತಿಸಲ ಸಂಬಳ ಸಹಿತ ರಜೆ ನೀಡುತ್ತಾರೆ. ಆದರೆ ರಜೆಯ ಮಜ ಉಡಾಯಿಸಲು ಮತದಾನದ ಹಿಂದಿನ ದಿನವೇ ಪ್ರವಾಸಕ್ಕೆ ತೆರಳುತ್ತಾರೆ. ಮತದಾನ ಮಾಡಲೆಂದೇ ಕೊಟ್ಟ ರಜೆಯ ದುರುಪಯೋಗವಿದು. ಮತದಾನ ಮಾಡದ ನೌಕರರಿಗೆ ಈ ರಜೆಯನ್ನು ಕೊಡಬಾರದು. ಮತದಾನ ಮಾಡದೇ ರಜೆಯನ್ನು ಅನುಭವಿಸುವವರಿಗೆ ಆ ದಿನದ ಸಂಬಳದ ಕಡಿತ ಮಾಡಬೇಕು. ಅವರ ಸೇವಾಪುಸ್ತಕದಲ್ಲಿ ಇದನ್ನು ನಮೂದಿಸಬೇಕು. ಮತದಾನ ಮಾಡದವರಿಗೆ ಯಾವುದೇ ಸರಕಾರಿ ಸೌಲಭ್ಯಗಳನ್ನು ಕೊಡಬಾರದು. ಅವರನ್ನು ವಾರ್ಷಿಕ ವೇತನ ಹೆಚ್ಚಳ, ವೇತನ ಪರಿಷ್ಕರಣೆ ಹಾಗೂ ಬಡ್ತಿಗಳಿಗೆ ಪರಿಗಣಿಸಬಾರದು. ಹೀಗೆ ಸಂಪೂರ್ಣ ಮತದಾನವಾಗಲು ಎಲ್ಲ ಉಪಾಯಗಳನ್ನು ಪ್ರಯೋಗಿಸಬೇಕು. ಬರೀ ಸಾಮೋಪಾಯದಿಂದ ಪ್ರತಿಶತ ೧೦೦ರಷ್ಟು ಮತದಾನ ಸಾಧ್ಯವಾಗುವುದಿಲ್ಲ.
ಎಲ್ಲಕ್ಕೂ ಮಿಗಿಲಾಗಿ ಪ್ರಜೆಗಳು ತಾವು ಚುನಾವಣೆಗಳಲ್ಲಿ ಮಾಡುವ ಮತದಾನವು ತನ್ನ ಉಳಿದೆಲ್ಲ ಸಂಗತಿಗಳಿಗಿಂತಲೂ ಅತ್ಯಂತ ಪ್ರಮುಖವಾದ ರಾಷ್ಟ್ರೀಯ ಕರ್ತವ್ಯವೆಂದು ತಿಳಿಯಬೇಕು. ಪ್ರಜಾಪ್ರಭುತ್ವದಲ್ಲಿ ಪ್ರತಿಸಲವೂ ಮತ ಚಲಾಯಿಸುವ ನಾಗರಿಕ ಪ್ರಜ್ಞೆಯನ್ನು ಸದಾ ಜಾಗೃತವಾಗಿ ಉಳಿಸಿಕೊಳ್ಳಬೇಕು. ಆ ನೈತಿಕ ಹೊಣೆಗಾರಿಕೆಯನ್ನು ಪ್ರತಿಯೊಬ್ಬರು ತಪ್ಪದೇ ಪರಿಪಾಲಿಸುವಂತಾಗಬೇಕು. ಅದೊಂದು ಬಿಡಲಾಗದ ಪವಿತ್ರ ಧಾರ್ಮಿಕ ಕಾರ್ಯವೆಂಬಂತೆ ಎಲ್ಲರೂ ಬದ್ಧತೆಯನ್ನು ಮೆರೆಯಬೇಕು.