ಮತ್ತೆ ಗಡಿಬಿಡಿ ಎಬ್ಬಿಸಿದ ಮಹಾ ಸರ್ಕಾರ
ಬೆಳಗಾವಿ: ಕರ್ನಾಟಕ ಗಡಿ ಭಾಗದ ಮರಾಠಿ ಭಾಷಿಕರ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಸರ್ಕಾರ ಯಾವುದೇ ರೀತಿಯ ಹೋರಾಟಕ್ಕೆ ಸನ್ನದ್ಧವಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಸ್ಪಷ್ಟಪಡಿಸಿದೆ.
ಮುಂಬಯಿಯ ವಿಧಾನಸೌಧದ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಬೆಳಗಾವಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮುಖಂಡರ ಸಭೆಯಲ್ಲಿ ಈ ವಿಷಯ ಸ್ಪಷ್ಟಪಡಿಸಲಾಯಿತು. ಅಬಕಾರಿ ಸಚಿವ ಶಂಭುರಾಜ ದೇಸಾಯಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಈ ಸಭೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಿಯೋಗ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಗಡಿ ಭಾಗದ ಮರಾಠಿ ಭಾಷಿಕರ ಬೇಡಿಕೆಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಕರ್ನಾಟಕ ಗಡಿ ಭಾಗದ ಮರಾಠಿಗರ ವಿವಿಧ ಸಮಸ್ಯೆ ಪರಿಹರಿಸಲು ಸರ್ಕಾರ ಬದ್ಧವಾಗಿದ್ದು ಈ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಹೋರಾಟ ಮಾಡಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಸಚಿವರು ಹೇಳಿದರು.
ಈ ವಿಷಯದಲ್ಲಿ ರಾಜ್ಯವು ಸಮನ್ವಯ ಸಚಿವರನ್ನು ನೇಮಿಸಿದೆ. ಅವರ ಮೂಲಕ ಗಡಿ ಮರಾಠಿ ಭಾಷಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುತ್ತಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಗಡಿ ಭಾಗದ ೮೬೫ ಹಳ್ಳಿಗಳ ಮರಾಠಿ ಭಾಷಿಕರ ಬೆನ್ನಿಗೆ ದೃಢವಾಗಿ ನಿಂತಿದೆ. ಈ ಗ್ರಾಮಗಳ ಮರಾಠಿ ಭಾಷಿಕರಿಗಾಗಿ ಮಹಾತ್ಮ ಫುಲೆ ಜನ್ ಆರೋಗ್ಯ ಯೋಜನೆ, ಮುಖ್ಯಮಂತ್ರಿಗಳ ವೈದ್ಯಕೀಯ ಸಹಾಯ ನಿಧಿಯ ಸೌಲಭ್ಯ ಪಡೆಯಲು ತಹಸೀಲ್ದಾರ್ ಶ್ರೇಣಿಯ ಅಧಿಕಾರಿಯನ್ನು ನೇಮಿಸಲಾಗಿದ್ದು ಶಿನೋಳಿಯಲ್ಲಿ ಕಚೇರಿ ಆರಂಭಿಸಲಾಗಿದೆ ಎಂದರು.