ಮತ್ತೆ ನಿನ್ನ ಜತೆ ಆದಂತೆ ಆಯಿತು
ನಿಜಕ್ಕೂ ತಿಗಡೇಸಿ ದೊಡ್ಡ ಕನಸುಗಾರ. ಕನಸು ಕಾಣುವುದೆಂದರೆ ಆತನಿಗೆ ಎಲ್ಲಿಲ್ಲದ ಖುಷಿ. ಪ್ರತಿದಿನ ಕನಸು ಕಾಣುವುದು ಕನಸಿನಲ್ಲಿ ಬಡಬಡಿಸುವುದು ಆತನ ನಿತ್ಯದ ಪರಿಪಾಠವಾಗಿತ್ತು. ಆತನ ಪತ್ನಿ ತಿರುಕವೇಣಿಗೆ ಇವೆಲ್ಲ ಸಹಿಸಿಕೊಳ್ಳಲಾಗುತ್ತಿರಲಿಲ್ಲ. ಅವತ್ತು ಕಚೇರಿಯಲ್ಲಿ ಯಾರ ಜತೆ ಅದೇನು ಜಗಳವಾಡಿದ್ದನೋ ಏನೋ ರಾತ್ರಿ ಒಂದು ಹೊತ್ತಿನಲ್ಲಿ… ನಿನ್ನನ್ನು ಬಿಡುವುದಿಲ್ಲ. ನೀನು ಬೇಕಾದರೆ ಮುಖ್ಯಮಂತ್ರಿಗಳಿಗೆ ಹೇಳು.. ರಾಜ್ಯಪಾಲರಿಗೆ ಕಂಪ್ಲೇಂಟ್ ಮಾಡು. ವಿರೋಧ ಪಕ್ಷದವರಿಗೂ ತಿಳಿಸು. ಅವರೆಲ್ಲ ಎಲ್ಲ ಹಾದಿಬೀದಿಯಲ್ಲಿ ಜಗಳ ಮಾಡಲಿ… ನಾನು ಅಂಜುವುದಿಲ್ಲ… ಅಂಜುವುದಿಲ್ಲ… ಅಂಜುವುದಿಲ್ಲ ಎಂದು ಹೇಳಿದಾಗ ಗಾಬರಿಯಾದ ಆತನ ಹೆಂಡತಿ ಎಬ್ಬಿಸಿದಾಗ ಕಣ್ಣುಜ್ಜಿಕೊಳ್ಳುತ್ತ… ಅಯ್ಯೋ ಹಾಳದ್ದು ಕನಸು… ಅವನು ಏನೇನೋ ಅಂದ ಅದಕ್ಕೆ ನಾನೂ ಸುಮ್ಮನಿರಲಿಲ್ಲ ಎಂದು ಹೇಳಿದ. ತಿರುಕವೇಣಿ ತಮ್ಮ ತಾಯಿಗೆ ಈ ವಿಷಯ ಹೇಳುತ್ತಿದ್ದಳು. ಆಕೆ ಕರಿಲಕ್ಷಂಪತಿಯ ಹತ್ತಿರ ಕರೆದುಕೊಂಡು ಹೋಗಿ ತಾಯತ ತಂದುಕೊಟ್ಟಳು. ತಿಗಡೇಸಿ ಮಲಗಿದಾಗ ಆತನ ಹೆಂಡತಿ ಸಾವಕಾಶವಾಗಿ ಆತನ ಬಲರಟ್ಟೆಗೆ ಕಟ್ಟಿದಳು. ಸ್ವಲ್ಪದಿನ ಯಾವುದನ್ನೂ ಬಡಬಡಸದೇ ಸುಮ್ಮನೇ ಮಲಗುತ್ತಿದ್ದ. ಪೂರ್ತಿ ಅರಾಮಾಯಿತು ಎಂದು ಮನೆಮಂದಿಯೆಲ್ಲ ಸಮಾಧಾನಪಟ್ಟುಕೊಂಡರು. ಸಣ್ಣೆಂಕಣ್ಣನಿಗೆ ಈ ವಿಷಯ ಗೊತ್ತಾಗಿ… ಮೆಲ್ಲನೇ ಮನೆಕಡೆ ಬಂದು ಇದು ಅಂತಿಂತಹ ಕಾಯಿಲೆಯಲ್ಲ.. ನೀವು ದಾಸ್ರುಸೇನಪ್ಪನ ಕಣ್ಣಿಗೆ ತಿಗಡೇಸಿಯನ್ನು ಒಂದು ಸಲ ಹಾಕಿ ಎಂದು ಹೇಳಿಹೋದ. ಕಂಟ್ರಂಗಮ್ಮತ್ತಿ ಬಂದು… ಅಯ್ಯೋ ಇದೇನು ಮಾಡಿಕೊಂಡಿದ್ದಾನೋ… ರಾತ್ರಿ ಬಡಬಡಿಸಿದರೆ ಚಿಲಕಮುಕ್ಕಿ ನೀರು ಚಿಮುಕಿಸಿ ಎಂದು ಸಲಹೆ ಕೊಟ್ಟು ಹೋದಳು. ಅವತ್ತೊಂದು ದಿನ ರಾತ್ರಿ ಇದ್ದಕ್ಕಿದ್ದಂತೆ… ತಿಗಡೇಸಿಯು… ಹಾಂ… ಕಟ್ಟಿದೆ ಕಟ್ಟಿದೆ… ನಾನೇ ಫಸ್ಟು ಹಾಕಿದೆ… ಹಾಂ. ತಲೆಯಮೇಲೆಯೇ ಹಾಕಿದೆ. ಹಾಂ….ಎಂದು ಹೇಳುತ್ತ ಇದ್ದ. ಆತನ ಹೆಂಡತಿ ಎಬ್ಬಿಸಿದಾಗ… ಇದ್ದಕ್ಕಿದ್ದಂತೆ ಜೋರಾಗಿ ಅಳತೊಡಗಿದ… ಯಾಕೆ ಏನಾಯಿತು ಅಂದಾಗ… ಕನಸಿನಲ್ಲಿ ಲಗ್ನವಾದಂತೆ ಆಯಿತು ಅಂದಾಗ… ಅದಕ್ಯಾಕೆ ಅಳಬೇಕು ಎಂದು ಹೆಂಡತಿ ಕೇಳಿದಾಗ…. ಅಯ್ಯೋ ಆ ಲಗ್ನ ಮತ್ತೆ ನಿನ್ನ ಜತೆಯೇ ಆದಂತೆ ಆಯಿತು ಎಂದು ಅದಕ್ಕಿಂತ ಜೋರು ದನಿ ತೆಗೆದು ಅಳತೊಡಗಿದ ತಿಗಡೇಸಿ.