ಮತ್ತೆ ಮೊದಲಿನ ಹಾಗೆ ಮಾತಾಡು….
ಜನರ ತಲೆ ತಿನ್ನುವಲ್ಲಿ ಭಯಂಕರ ಹೆಸರು ಮಾಡಿದ್ದ ಡಾ. ತಿರ್ಮೂಲಿ ಹೆಸರು ತೆಗೆದರೆ ಸಾಕು ಜನರು ಗಡಗಡ ನಡುಗುತ್ತಿದ್ದರು. ಯಪ್ಪಾ ಅವನ ತಂಟೆಯೇ ಬೇಡ ಎಂದು ಸುಮ್ಮನಾಗುತ್ತಿದ್ದರು. ಗೆಳೆಯರು ಯಾಕೆ ತಿರ್ಮೂಲಿ ಹೀಗೇಕೆ ಮಾಡುತ್ತಿಯ ಎಂದು ಕೇಳಿದರೆ ಅದಕ್ಕೆ ನೂರೆಂಟು ನೆಪ ಹೇಳುತ್ತಿದ್ದ. ಎಲ್ಲರೂ ತಿರ್ಮೂಲಿ ಬಗ್ಗೆ ಹೇಳುತ್ತಿದ್ದರೆ ತಳವಾರ್ಕಂಟಿ ಮಾತ್ರ ಅಯ್ಯೋ ಇಂಥವರನ್ನೆಲ್ಲ ನಮ್ಮೂರಿನಲ್ಲಿ ಬಹಳ ಜನರನ್ನು ನೋಡಿದ್ದೇನೆ. ಎಷ್ಟೋ ಜನರನ್ನು ಸರಿಮಾಡಿದ್ದೇನೆ. ನನಗೆ ಒಂದು ನಿಮಿಷ ಸಾಕು ಆತನನ್ನು ಸರಿಮಾಡೋಕೆ ಎಂದು ಹೇಳಿದಾಗ ಉಳಿದವರು ಖೊಳ್ಳೆಂದು ನಕ್ಕರು. ಎಂಥೆಂಥ ಡಾಕ್ಟರ್ ಕಡೆ ಆಗಿಲ್ಲ ನೀ ಏನು ಮಾಡುತ್ತಿ ತಲಿ ಎಂದರು. ಬೇಕಾದರೆ ಬೆಟ್ ಕಟ್ಟಿ ಎಂದು ಅವರ ಕಡೆಯಿಂದ ಬೆಟ್ ಕಟ್ಟಿಸಿಕೊಂಡ ತಳವಾರ್ಕಂಟಿಯು ಅಂದಿನಿಂದ ತನ್ನ ಕಾಯಕ ಶುರುಮಾಡಿದ. ದಿನಾಲೂ ಡಾ. ತಿರ್ಮೂಲಿಯನ್ನು ಭೇಟಿಯಾಗುತ್ತಿದ್ದ. ಏನ್ ತಿರ್ಮೂಲಿ ಊಟ ಆಯಿತಾ ಅಂದರೆ…. ನಮ್ಮ ಮನೆಯಲ್ಲಿ ಆಯಿತು ನಿಂದು ಯಾರ ಮನೆಯಲ್ಲಿ ಆಯಿತು ಎಂದು ಎಡವಟ್ಟು ಪ್ರಶ್ನೆ ಕೇಳುತ್ತಿದ್ದ. ಹಾಂ…. ನಂದೂ ನಮ್ಮ ಮನೆಯಲ್ಲಿ ಆಯಿತು ಆದರೆ ಅವರದ್ದು ಬೇರೆಯವರ ಮನೆಯಲ್ಲಿ ಆಯಿತು ಅಂದ. ಅವರೆಂದರೆ ಯಾರು ಎಂದು ಕೇಳಿದರೆ…ಅವರೇ ಊಟ ಮಾಡಿದವರು ಎಂದು ಹೇಳಿ ತಳವಾರ್ಕಂಟಿಯನ್ನು ಯಾಮಾರಿಸುತ್ತಿದ್ದ. ಮರಳಿ ಯತ್ನವ ಮಾಡು ಎಂಬಂತೆ ತಳವಾರ್ಕಂಟಿ ಮತ್ತೆ ತಿರ್ಮೂಲಿ ಹತ್ತಿರ ಹೋಗಿ…ಓಹೋ ತಿರ್ಮೂಲಿ ಏನು ಚುನಾವಣೆಗೆ ನಿಲ್ಲುತ್ತೀರಂತೆ…ನಿಮ್ಮ ಹೆಸರು ಕೇಳಿಬರುತ್ತಿದೆ ಅಂದಾಗ…. ಲೊಂಡೆನುಮ ಚೆನ್ನಾಗಿ ಭಾಷಣ ಮಾಡುತ್ತಾನೆ ಎಂದು ಹೇಳಿದ. ಡಾ. ತಿರ್ಮೂಲಿ ಅವರೇ ನಿಮಗೆ ಕಿವಿ ಕೇಳಿಸುವುದಿಲ್ಲವೇ ಎಂದು ಕೇಳಿದರೆ… ಅಯ್ಯೋ ಅದರಲ್ಲೇನು ಇವತ್ತೇ ಬನ್ನಿ ನನ್ನ ದವಾಖಾನೆಗೆ ಎಲ್ಲ ಮಾಸ್ಟರ್ ಚಕಪ್ ಮಾಡುತ್ತೇನೆ ಎಂದು ಹೇಳಿದ. ಇವನ ಜತೆ ಏನು ಮಾತನಾಡುವುದು? ಎಲ್ಲರೂ ಹೇಳಿದ್ದು ನಿಜ. ಇವನ ಸಲುವಾಗಿ ನಾನು ಬೆಟ್ಟಿಂಗ್ ಹಣ ಕಳೆದುಕೊಳ್ಳುತ್ತೇನೇನೋ ಎಂದು ಮರುಗಿದ. ಬೆಳತನ ಯೋಚನೆ ಮಾಡಿ ಮರುದಿನ ಆಲದ ಗಿಡದ ಕೆಳಗೆ ಡಾ. ತಿರ್ಮೂಲಿಯನ್ನು ಸಂಧಿಸಿ ಅದು ಇದು ಮಾತನಾಡಿ.. ಕೊನೆಗೆ ತಿರ್ಮೂಲಿ ಅವರೇ ನಿಮಗೆ ಹಣ ಬೇಕೇ ಎಂದಾಗ…. ನಗುಮುಖ ಮಾಡಿ ಹಾಂ ಎಂದು ಹೇಳಿದ. ಹಾಗಿದ್ದರೆ ಇನ್ನು ಉಲ್ಟಾ ಪಲ್ಟಾ ಮಾತನಾಡುವುದನ್ನು ಬಿಡು ಎಂದು ಹೇಳಿದ. ಆತ ಓಕೆ ಅಂದ. ಮರುದಿನ ಬೆಟ್ ಕಟ್ಟಿದವರ ಎದುರು ತಿರ್ಮೂಲಿಯನ್ನು ನಿಲ್ಲಿಸಿ ಮಾತನಾಡಿದಾಗ ಎಲ್ಲವನ್ನೂ ಕರೆಕ್ಟಾಗಿ ಮಾತನಾಡಿದ. ಅವರೆಲ್ಲ ಬೆಟ್ಟಿಂಗ್ ದುಡ್ಡು ಕೊಟ್ಟಾಗ…. ಅದರಲ್ಲಿ ಅರ್ಧ ತಿರ್ಮೂಲಿಗೆ ಕೊಟ್ಟು ಇನ್ನರ್ಧ ಕಿಸೆಗೆ ಇಳಿಸಿದ ತಳವಾರ್ಕಂಟಿ ಇವತ್ತಿಂದ ನೀ ಮತ್ತೆ ಮೊದಲಿನ ಹಾಗೆ ಮಾತಾಡು ಎಂದು ಹೇಳಿ ಹೋದ.