ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮತ್ತೆ ಮೋದಿಗೆ ಅಧಿಕಾರ ಉಳಿದದ್ದು: ಹಳೆಯದೇ

02:30 AM Jun 30, 2024 IST | Samyukta Karnataka

ಲೋಕಸಭೆ ಚುನಾವಣೆ ಫಲಿತಾಂಶ ಬಂದಿದೆ. ಮೋದಿಗೆ ಮತ್ತೆ ಅಧಿಕಾರ ಲಭಿಸಿದೆ. ಅದನ್ನು ಹೊರತುಪಡಿಸಿದರೆ ಮತ್ಯಾವ ಬದಲಾವಣೆ ಬಂದಿಲ್ಲ. ಕೆಲವರಲ್ಲಿ ಅದೇ ಖಾತೆಯೊಂದಿಗೆ ಅದೇ ಸಚಿವರು, ಅದೇ ಸ್ಪೀಕರ್, ಅದೇ ಪ್ರಧಾನ ಕಾರ್ಯದರ್ಶಿಗಳು, ರಾಷ್ಟ್ರೀಯ ರಕ್ಷಣಾ ಸಲಹೆಗಾರರು, ಗುಪ್ತಚರ ಪಡೆಯ ಮುಖ್ಯಸ್ಥರು ಎಲ್ಲರೂ ಹಳಬರೇ. ಬದಲಾವಣೆ ಏನೂ ಕಂಡು ಬರುತ್ತಿಲ್ಲ.
ಮೋದಿ ಅಧಿಕಾರಕ್ಕೆ ಬಂದರೂ ಈ ಬಾರಿ ಬಿಜೆಪಿ ಬಹುಮತ ಪಡೆದ ಏಕೈಕ ಪಕ್ಷವಲ್ಲ. ನಿತೀಶ್ ಮತ್ತು ನಾಯ್ಡು ಬೆಂಬಲ ಅಗತ್ಯವಾಯಿತು. ಅದರಿಂದ ಮೈತ್ರಿ ಪಕ್ಷಗಳೊಂದಿಗೆ ಮಾತುಕತೆ ಅನಿವಾರ್ಯವಾಯಿತು. ಸ್ಪೀಕರ್ ಆಯ್ಕೆಯಲ್ಲೂ ಇದೇ ಪ್ರಧಾನವಾಯಿತು. ಕಳೆದ ೨೦ ದಿನಗಳಿಂದ ಬಿಜೆಪಿ ಸಾಕಷ್ಟು ಅಡೆತಡೆಗಳನ್ನು ಎದುರಿಸಿದೆ. ನೀಟ್ ಪರೀಕ್ಷೆಗಳ ಅವಾಂತರ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅಂಧಕಾರದಲ್ಲಿರುವಂತೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ರೈಲು ದುರಂತ, ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ತಲೆ ಎತ್ತಿದ್ದ ಉಗ್ರವಾದಿಗಳ ದಾಳಿ, ಅಗತ್ಯವಸ್ತುಗಳ ಬೆಲೆ ಏರಿಕೆ, ಷೇರು ಮಾರುಕಟ್ಟೆ ಏರುಮುಖ ಕಂಡಿದ್ದರೂ ಡಾಲರ್-ರೂಪಾಯಿ ಅಂತರ ಕಡಿಮೆಯಾಗಿಲ್ಲ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಂಕ ಶೇ.೧೫ ರಷ್ಟು ಅಧಿಕಗೊಂಡಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬೆಜೆಪಿ ನಾಯಕರಲ್ಲಿ ಕಂಡು ಬಂದ ಅಹಂಕಾರವನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಸೂಚಿಸಲು ಯಾರೂ ಹೋಗಿಲ್ಲ. ಹಲವು ರಾಜ್ಯಗಳ ಬಿಜೆಪಿ ಘಟಕಗಳಲ್ಲಿ ಅಲ್ಲಲ್ಲಿ ಬಿರುಕು ಕಂಡು ಬಂದಿದೆ.
ಮೊದಲ ಅಧಿವೇಶನದಲ್ಲಿ ಹೆಚ್ಚು ಕಲಾಪ ಇರುವುದಿಲ್ಲ. ಸ್ಪೀಕರ್ ಆಯ್ಕೆ ಮತ್ತು ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣ. ಮೊದಲ ಅಧಿವೇಶನದಲ್ಲಿ ಅತ್ಯಂತ ಹಿರಿಯ ಸದಸ್ಯರನ್ನು ಹಂಗಾಮಿ ಸ್ಪೀಕರ್ ಮಾಡುವುದು ಸತ್ಸಂಪ್ರದಾಯ. ಅದರಂತೆ ಕೇರಳ ಕಾಂಗ್ರೆಸ್ಸಿನ ಕೆ. ಸುರೇಶ್ ಆಗಬೇಕಿತ್ತು. ಇವರು ೮ ಬಾರಿ ಸಂಸದರಾದವರು. ಸರ್ಕಾರ ಇದಕ್ಕೆ ಒಪ್ಪಲಿಲ್ಲ. ೭ ಬಾರಿ ಚುನಾಯಿತರಾದ ಬಿ. ಮೆಹ್ತಾಬ್ ಅವರನ್ನು ಹಂಗಾಮಿ ಸ್ಪೀಕರ್ ಮಾಡಿತು. ಪ್ರತಿಪಕ್ಷ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿತು. ಇದು ಅನಗತ್ಯ ವಿವಾದ. ಆಡಳಿತ ಪಕ್ಷ ಈ ವಿವಾದವನ್ನು ತಪ್ಪಿಸಬಹುದಾಗಿತ್ತು. ಆದರೆ ಬಿಜೆಪಿಗೆ ತನ್ನ ಹಿನ್ನಡೆಯನ್ನು ಮುಚ್ಚಿಡುವುದು ಅಗತ್ಯವಾಗಿತ್ತು. ಅದಕ್ಕಾಗಿ ಹಂಗಾಮಿ ಸ್ಪೀಕರ್ ವಿಷಯದಲ್ಲಿ ಪಟ್ಟು ಹಿಡಿಯಿತು. ಅಲ್ಲದೆ ಕಿರಣ್ ರಿಜುಜು ಅವರಿಗೆ ಸಂಸದೀಯ ವ್ಯವಹಾರಗಳು ಹೊಸತು. ಸ್ಪೀಕರ್‌ ಹುದ್ದೆಗೆ ಬಂದ ಓಂ ಬಿರ್ಲಾ ತುರ್ತು ಪರಿಸ್ಥಿತಿಯನ್ನು ಪ್ರಸ್ತಾಪಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡರು. ಈ ರೀತಿ ಹಿಂದೆ ಹಲವು ಘಟನೆಗಳು ನಡೆದಿವೆ. ೧೯೬೨ರ ಚೀನಾ ಯುದ್ಧ ಸೇರಿದಂತೆ ಹಲವು ಘಟನೆಗಳು ನಡೆದಿವೆ. ಎಲ್ಲದ್ದಕ್ಕೂ ಸ್ಪೀಕರ್ ಪ್ರಸ್ತಾಪಿಸುವುದು ಸರಿಯಾದ ಕ್ರಮವಲ್ಲ. ಮುಂದಿನ ದಿನಗಳಲ್ಲಿ ಪಾಕ್ ವಿರುದ್ಧ ಕ್ರಮವನ್ನೂ ಪ್ರಸ್ತಾಪಿಸಿ ಬಿಡಬಹುದು. ಇವುಗಳೆಲ್ಲ ಸಂತ್ಸಪ್ರದಾಯಕ್ಕೆ ಮಾರಕ ಎಂಬುದರಲ್ಲಿ ಸಂದೇಹವಿಲ್ಲ.
ಜಂಟಿ ಅಧಿವೇಶನವನ್ನು ಉದ್ದೇಶಿಸಿದ ಮಾತನಾಡಿದ ರಾಷ್ಟ್ರಪತಿಯವರು ಚುನಾವಣೆ ನಂತರ ಆಗಿರುವ ಬದಲಾವಣೆಗಳನ್ನು ಗುರುತಿಸುವ ಗೋಜಿಗೇ ಹೋಗಲಿಲ್ಲ. ಬಿಜೆಪಿ ಬಹುಮತ ಪಡೆಯದೇ ಹೋದುದು, ಮೈತ್ರಿ ಪಕ್ಷ ಆಡಳಿತಕ್ಕೆ ಬಂದಿರುವುದು, ೧೦ ವರ್ಷಗಳ ನಂತರ ಅಧಿಕೃತ ಪ್ರತಿಪಕ್ಷದ ನಾಯಕರು ಬಂದಿರುವುದನ್ನು ಪ್ರಸ್ತಾಪಿಸಬಹುದಾಗಿತ್ತು. ಚುನಾವಣೆಗೆ ಮುನ್ನ ಬಿಜೆಪಿ ಹೇಳಿದ ಮಾತು, ನಂತರ ಬಂದ ಬದಲಾವಣೆ ಉಲ್ಲೇಖಗೊಂಡಿಲ್ಲ. ಮೈತ್ರಿ ಸರ್ಕಾರ ಎಂಬುದು ಪ್ರಸ್ತಾಪವಾಗಿಲ್ಲ. ಹಣದುಬ್ಬರ, ಸಹಮತ, ಸಂಸದೀಯ ಸಮಿತಿ ಎಂಬ ಪದಗಳ ಉಲ್ಲೇಖಗೊಂಡಿಲ್ಲ. ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು ಎಂಬ ಪದಗಳು ನಾಪತ್ತೆಯಾಗಿವೆ. ಅದಕ್ಕೆ ಬದಲಾಗಿ ಸಾಮಾಜಿಕ ಮತ್ತು ಧಾರ್ಮಿಕ ಗುಂಪುಗಳು ಎಂಬ ಪದ ಚಾಲ್ತಿಗೆ ಬಂದಿದೆ. ಅಗ್ನಿವೀರ್ ಮತ್ತು ಏಕರೂಪ ನಾಗರಿಕ ಸಂಹಿತೆಯ ಪ್ರಸ್ತಾಪವಿಲ್ಲ. ಈ ಬಾರಿ ಭಾಷಣದಲ್ಲಿ ಭಾರತ ವಿಶ್ವಗುರುವಾಗಿಲ್ಲ, ವಿಶ್ವ ಬಂಧು ಮಾತ್ರ ಆಗಿದ್ದಾರೆ.
ಬಿಜೆಪಿ ದೃಷ್ಟಿಯಲ್ಲಿ ಏನೂ ಬದಲಾವಣೆ ಬಂದಿಲ್ಲ. ಅದೇ ಸಚಿವ ಸಂಪುಟ, ಕೆಲವರಂತೂ ಅದೇ ಖಾತೆಯ ಸಚಿವರು. ಏನೂ ಬದಲಾವಣೆ ಇಲ್ಲ. ಮುಂದಿನ ಬಜೆಟ್‌ನಲ್ಲಿ ನಿರುದ್ಯೋಗ, ಹಣದುಬ್ಬರ, ಮಹತ್ವ ಪಡೆಯುತ್ತದೆಯೇ ಇಲ್ಲವೆ ಎಂಬುದನ್ನು ಕಾದು ನೋಡಬೇಕು. ಸಂಸದೀಯ ನಡವಳಿಕೆಯಲ್ಲಿ ವಿಶ್ವಾಸವಿಟ್ಟವರಿಗೆ ತಾಳ್ಮೆ ಅಗತ್ಯ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ದಾಪುಗಾಲ ಹಾಕುತ್ತಿರಬಹುದು. ಸರ್ಕಾರ ಮಾತ್ರ ಇನ್ನೂ ಮಂದಗತಿಯಲ್ಲಿ ಸಾಗಿದೆ. ಬದಲಾವಣೆ ಏನೂ ಆಗಿಲ್ಲ.

Next Article