ಮದುವೆಯಾಗುವುದಾಗಿ ನಂಬಿಸಿ ಮೋಸ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ
ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ ಆರೋಪಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪುತ್ತೂರು ಕಬಕದ ನಿವಾಸಿ ನಿತೇಶ್(30) ಶಿಕ್ಷೆಗೊಳಗಾದವನು. ಈತನ ಜತೆಗೆ ಈತನ ತಂದೆ ರಾಮಣ್ಣ ಪೂಜಾರಿ(63) ಮತ್ತು ಭಾವ ನಿಖಿತಾಶ್ ಸುವರ್ಣ(40)ಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ನಿತೇಶ್ ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಸುತ್ತಾಡಿಸಿದ್ದ. ಬಳಿಕ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಅಲ್ಲದೆ ಆಕೆಯ ಮನೆಗೂ ಹೋಗಿ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದ. ಯುವತಿ ಮದುವೆಯಾಗಲು ಕೇಳಿಕೊಂಡಾಗ ನಿರಾಕರಿಸಿದ್ದ. ಪರಸ್ಪರ ಜಾತಿ ಬೇರೆಯಾಗಿರುವುದರಿಂದ ತಂದೆ ಮತ್ತು ಭಾವ ಮದುವೆಗೆ ಒಪ್ಪುತ್ತಿಲ್ಲ ಎಂದು ಹೇಳಿದ್ದ. ನಿತೇಶ್‌ನ ತಂದೆ ಮತ್ತು ಭಾವನ ಬಳಿ ಯುವತಿ ಕೇಳಿಕೊಂಡಾಗ ಅವರು ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಯುವತಿ 2019ರಲ್ಲಿ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದಳು. ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯಕ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ ಅವರು ಆರೋಪಿಯ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದರು. ಆ. 30ರಂದು ಆರೋಪಿ ನಿತೇಶ್‌ಗೆ ಭಾರತೀಯ ದಂಡಸಂಹಿತೆಯ ಕಲಂ 376(2) (ಎನ್) ಅಡಿಯಲ್ಲಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10,000 ರು. ದಂಡ, ಕಲಂ 417ರ ಅಡಿಯಲ್ಲಿ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000 ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ರಾಮಣ್ಣ ಪೂಜಾರಿ ಮತ್ತು ನಿಖಿತಾಶ್‌ಗೆ ಭಾರತೀಯ ದಂಡ ಸಂಹಿತೆಯ ಕಲಂ 504ರಡಿ 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000 ರು. ದಂಡ ಹಾಗೂ ಭಾ.ದಂ.ಸ ಕಲಂ 506ರಡಿ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10,000 ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ನೊಂದ ಯುವತಿಗೆ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ. ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಕೆಲವು ಸಾಕ್ಷಿಗಳ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕ ಬಿ.ಶೇಖರ ಶೆಟ್ಟಿ ನಡೆಸಿದ್ದರು. ಅನಂತರ ಸರ್ಕಾರಿ ಅಭಿಯೋಜಕ ಚೌಧರಿ ಮೋತಿಲಾಲ್ ಅವರು ಉಳಿದ ಸಾಕ್ಷಿಗಳ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು. ಒಟ್ಟು 16 ಮಂದಿ ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿತ್ತು. 88 ದಾಖಲೆಗಳನ್ನು ಗುರುತಿಸಲಾಗಿತ್ತು.