ಮದ್ರಾಮಣ್ಣನ ಬಜೆಟ್ಟು.. ನಾವೆಲ್ಲ ಹೆಬ್ಬೆಟ್ಟು….
ಊರಿನ ಮಧ್ಯದಲ್ಲಿರುವ ಜಾಲಿಕಟ್ಟೆಯ ಮೇಲೆ ಹೋಟೆಲ್ ಶೇಷಮ್ಮ, ಯಂಗ್ಟಿ, ಕುಲ್ಡ್ಬಸವ, ಇರಪಾಪುರ ಮಾದೇವ, ಕೊಡ್ಲಿ ರಾಮಣ್ಣ, ಮೇಕಪ್ ಮರೆಮ್ಮ ಎಲ್ಲರೂ ಸೇರಿ ಬಜೆಟ್ ಬಗ್ಗೆ ಬಹಳ ಚರ್ಚೆ ಮಾಡುತ್ತಿರುವುದನ್ನು ಅವರಿಗೆ ಗೊತ್ತಾಗದ ಹಾಗೆ ಕನ್ನಾಳ್ಮಲ್ಲ ತನ್ನ ಮೊಬೈಲ್‌ನಲ್ಲಿ ಶೂಟ್ ಮಾಡಿಕೊಳ್ಳುತ್ತಿದ್ದ.
ಈಗಾಗಲೇ ನಾನು ಮದ್ರಾಮಣ್ಣನವರಿಗೆ ಮೆಸೇಜ್ ಮಾಡಿದ್ದೇನೆ. ಈ ಬಜೆಟ್‌ನಲ್ಲಿ ಮಂಡಾಳೊಗ್ಗಣ್ಣಿ ಮತ್ತು ಮಿರ್ಚಿಗೆ ಸಬ್ಸಿಡಿ ಘೋಷಣೆ ಮಾಡಿ ಎಂದು ತಿಳಿಸಿದ್ದೇನೆ. ಅದನ್ನು ಮಾಡಿದರೆ ನಮಗೆ ಅನುಕೂಲ ಎಂದು ಹೋಟೆಲ್ ಶೇಷಮ್ಮ ಹೇಳಿದಳು. ಇರಪಾಪುರ ಮಾದೇವ…ಅಯ್ಯೋ ಅವರು ಮೊದಲೇ ಮದ್ರಾಮಣ್ಣೋರು.. ಆವಾಗ ಹೂಂ ಅಂತಾರೆ ಆಮೇಲೆ ಊಹೂಂ ಅಂತಾರೆ..ನೋಡಿ ಬೇಕಾದರೆ ಎಂದು ತನ್ನ ವಾದ ಮಂಡಿಸಿದ. ಕೊಡ್ಲಿ ರಾಮಣ್ಣನಂತೂ ಇನ್ನು ಮುಂದೆ ಎಲ್ಲರ ಹೊಲಕ್ಕೆ ಪುಗಸೆಟ್ಟೆ ಬೋರ್ ಹಾಕಿಸಿಕೊಡುತ್ತೇನೆ ಎಂದು ಹೇಳಿದ್ದಾರೆ.
ಬೇಕಾದರೆ ಫೋನ್ ಮಾಡಿ ಕೇಳಿ ಎಂದು ಹೇಳಿದಾಗ…ಮೇಕಪ್ ಮರೆಮ್ಮ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದಳು. ಬೋರು ಹಾಕಿಸಿಕೊಟ್ಟರೆ ಏನು ಲಾಭ? ನೀವೇನೂ ದುಡಿಯುವವರಲ್ಲ ಏನಲ್ಲ…ನಾನಂತೂ ಮೇಕಪ್ ಸಾಮಾನುಗಳ ಬೆಲೆ ಕಡಿಮೆ ಮಾಡಿ ಎಂದು ಹೇಳಿದ್ದೇನೆ. ಗ್ಯಾರಂಟಿ ಅವರು ಮಾಡಿಯೇ ಮಾಡುತ್ತಾರೆ ಎಂದು ತನ್ನ ಸಿಟ್ಟನ್ನು ಹೊರಹಾಕಿದಳು. ಅವರು ಹನುಮಪ್ಪನ ಭಕ್ತರು ಹಾಗಾಗಿ ನಾವು ಹೇಳಿದ್ದು ಕೊಡುತ್ತಾರೆ. ಈಗಾಗಲೇ ಅವರು ಹಿಡಿದುಕೊಂಡು ಬರುವ ಸೂಟ್‌ಕೇಸ್ ತೆಗೆದುಕೊಂಡಿದ್ದಾರೆ. ಅದಕ್ಕೆ ಶುಕ್ರವಾರ ಮುಂಜಾನೆ ಎದ್ದು ಅರಿಶಿಣ ಕುಂಕುಮ ಏರಿಸಿ ಅದಕ್ಕೆ ಚೆಂಡೂವಿನ ಹಾರ ಹಾಕಿ ಅದನ್ನು ಹನುಮಪ್ಪನ ಪಾದಕ್ಕೆ ಇಟ್ಟು, ಊದಿನಕಡ್ಡಿ ಬೆಳಗಿ ಹಿಡಿದುಕೊಂಡು ಬರುತ್ತಿರುವ ಮದ್ರಾಮಣ್ಣ…ಅವರಿಗಿಷ್ಟು-ಇವರಿಗಿಷ್ಟು…ಅದಕ್ಕೆಷ್ಟು? ಇದಕ್ಕೆಷ್ಟು ಎಂದು ಹಂಚಲಿದ್ದಾರೆ ಎಂದು ಗೂಗಲ್ ಗುಂಡಪ್ಪ ತನ್ನದೇ ಆದ ರೀತಿಯಲ್ಲಿ ಹೇಳಿದ.
ಸುಮ್ಮನೇ ಶೇಕ್ ಮಹಮದ್‌ನ ಲೆಕ್ಕ ಯಾಕೆ ಒಂದು ಬಾರಿ ಸ್ಪೀಕರ್ ಆನ್ ಇಟ್ಟು ಅವರಿಗೆ ಕಾಲ್ ಮಾಡೋಣ ಎಂದು ಜಿಲಿಬಿಲಿ ಎಲ್ಲವ್ವ ಹೇಳಿದ ಮಾತಿಗೆ ಎಲ್ಲರೂ ಒಪ್ಪಿ ಮೊಬೈಲ್ ತೆಗೆದು ಕಾಲ್ ಮಾಡಿ ಸ್ಪೀಕರ್ ಆನ್ ಮಾಡಿದರು. ರಿಂಗಾಗಿ ಆ ಕಡೆಯಿಂದ ಅಲೋ ಎಂಬ ಮಾತು ಕೇಳಿದ ಕೂಡಲೇ…ಈ ಕಡೆಯಿಂದ ಸ್ವಾಮೀ ನಾವು…ಇಲ್ಲೇ ಇದ್ದಾರೆ ಎಲ್ಲರೂ….ಏನ್ ಸ್ವಾಮಿ ಎಂಗೆ ಬಜೆಟ್ಟು ಅಂದ ಕೂಡಲೇ ಆ ಕಡೆಯಿಂದ ಗ್ಯಾರಂಟಿ…… ಗ್ಯಾರಂಟಿ… ನೋಡೋಣ.. ಮಾಡೋಣ… ಬಜೆಟ್ ಅಂದರೆ ಬಜೆಟ್ಟು..ಅಂದ ಹಾಗೆ ನೀವೆಲ್ಲ ಯಾರು? ಬನ್ನಿ ಅಫೀಸಿಗೆ ಮಾತಾಡೋಣ ಎಂದು ಕಾಲ್ ಕಟ್ ಮಾಡಿದರು. ಈ ಗ್ಯಾಂಗ್ ಮಾತ್ರ…ಅಯ್ಯೋ ಮದ್ರಾಮಣ್ಣನ ಬಜೆಟ್ಟು- ನಾವೆಲ್ಲ ಹೆಬ್ಬೆಟ್ಟು ಅಂದು ಸುಮ್ಮನಾದರು.