For the best experience, open
https://m.samyuktakarnataka.in
on your mobile browser.

ಮಧುಮೇಹ-ಮನಸ್ಸಿದ್ದರೆ ಮಂಗಮಾಯ…

02:59 AM Nov 14, 2024 IST | Samyukta Karnataka
ಮಧುಮೇಹ ಮನಸ್ಸಿದ್ದರೆ ಮಂಗಮಾಯ…

ನ. ೧೪, ವಿಶ್ವ ಮಧುಮೇಹ ದಿನಾಚರಣೆ. "ಅಡೆತಡೆಗಳನ್ನು ಮುರಿಯುವುದು, ಅಂತರವನ್ನು ಮೊಟಕುಗೊಳಿಸುವುದು" ಎಂಬ ಧ್ಯೇಯವಾಕ್ಯದೊಂದಿಗೆ ಪ್ರಸಕ್ತ ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಧುಮೇಹದ ಕುರಿತು ಜಾಗೃತಿ ಮೂಡಿಸುವ ಲೇಖನವಿದು.

ಮಧುಮೇಹ ಅಂದರೆ ಡಯಾಬಿಟಿಸ್ ಆಧುನಿಕ ಕಾಲಘಟ್ಟದ ಬಹುದೊಡ್ಡ ಸಮಸ್ಯೆ. ಭಾರತೀಯರಲ್ಲಿ ಹೆಚ್ಚುತ್ತಲೇ ಇರುವ ಇದನ್ನು ತಡೆಗಟ್ಟುವುದು ಹಾಗೂ ದೂರವಿರುವುದಕ್ಕೆ ಮಾಡಬೇಕಾದುದ ಕೆಲಸಗಳೇನು ಎಂಬುದರ ಬಗ್ಗೆ ಗಂಭೀರ ಚಿಂತನೆಗಿದು ಸಕಾಲ. ಮನಸ್ಸು ಮಾಡಿ ಸರಿಯಾದ ಜೀವನಶೈಲಿಯನ್ನು ಅನುಸರಿಸಿದರೆ ಇದರ ಅಪಾಯದಿಂದ ದೂರವಿರುವುದು ಖಂಡಿತ ಸಾಧ್ಯ.
ಡಯಾಬಿಟಿಸ್ ಕಾಯಿಲೆ ವಂಶವಾಹಿನಿಗಳ ಮುಖಾಂತರ ಮುಂದಿನ ಪೀಳಿಗೆಗೆ ವರ್ಗಾವಣೆಗೊಳ್ಳಬಹುದು, ಆದ್ದರಿಂದಲೇ ಈ ಕಾಯಿಲೆಗಳನ್ನು ಆರಂಭದಲ್ಲಿಯೇ ತಡೆಗಟ್ಟುವುದು ಬಹಳ ಮುಖ್ಯ. ಚಿಕ್ಕ ವಯಸ್ಸಿನಲ್ಲಿ ಡಯಾಬಿಟಿಸ್ ತಗುಲಿದರೆ ಅದಕ್ಕೆ ಟೈಪ್-೧ ಡಯಾಬಿಟಿಸ್ ಅನ್ನುವರು, ಇವರಿಗೆ ಜೀವನಪರ್ಯಂತ ಇನ್ಸುಲಿನ್ ಇಂಜಕ್ಷನ್ ತೆಗೆದುಕೊಳ್ಳವುದು ಕಡ್ಡಾಯ.
ಚಿಕ್ಕ ಪ್ರಾಯದಲ್ಲಿಯೇ ಜಂಕ್ ಆಹಾರ, ಅತಿಯಾದ ಚಾಕಲೇಟ್ ಸೇವನೆ, ಕೇಕ್ ಸೇವನೆ, ಕರಿದ ಪದಾರ್ಥಗಳನ್ನು ಯಥೇಚ್ಛವಾಗಿ ಭುಂಜಿಸುವುದು, ಕ್ಲಾಸುಗಳಲ್ಲಿ ಮೊದಲನೇ ರ‍್ಯಾಂಕ್ ಪಡೆಯಬೇಕೆಂಬ ಮಿತಿ ಮೀರಿದ "ಎಕ್ಸಪೇಕ್ಟೇಶನ್", ಆಟ ಆಡದಿರುವಿಕೆ, ವ್ಯಾಯಾಮದ ಕೊರತೆ, ವಂಶಪಾರ್ಯಂಪರತೆ-ಹೌದು! ಇವೆಲ್ಲವುಗಳೂ ಟೈಪ್-೧ ಡಯಾಬಿಟಿಸ್ ಕಾಣಿಸಿಕೊಳ್ಳಲು ಅಪಾಯಕಾರಿಯಾದ ಅಂಶಗಳು. ಇಂತಹವರಿಗೆ ಮಾನಸಿಕ ಆರೋಗ್ಯ ಬೆಂಬಲ, ಒತ್ತಡ ನಿರ್ವಹಣೆ ಮತ್ತು ಸಮುದಾಯ ಸಂಪರ್ಕಗಳಿಗೆ ಆದ್ಯತೆ ನೀಡುವುದು ಬಹಳ ಮುಖ್ಯ.
ರಕ್ತದಲ್ಲಿ ಸಕ್ಕರೆ ಪ್ರಮಾಣ ಖಾಲಿ ಹೊಟ್ಟೆಯಲ್ಲಿ ಸುಮಾರು ೭೦ ರಿಂದ ೧೧೦ ರವರೆಗೆ ಇದ್ದರೆ ಅದು ನಾರ್ಮಲ್ ಎಂದು ಪರಿಗಣಿಸಲಾಗುತ್ತದೆ. ಬರೀ ಒಂದು ಸಲ ರಕ್ತದ ಸಕ್ಕರೆ ಪ್ರಮಾಣ ಮಾಡಿ ಖಂಡಿತವಾಗಿಯೂ ಡಯಾಬಿಟಿಸ್ ಕಾಯಿಲೆ ತಗುಲಿದೆ ಎಂದು ಹೇಳಲಾಗದು. ಕನಿಷ್ಟ ಎರಡು ಅಥವಾ ಮೂರು ಬಾರಿ, ಖಾಲಿ ಹೊಟ್ಟೆಯಲ್ಲಿ, ಊಟವಾದ ಎರಡು ಗಂಟೆ ನಂತರ ರಕ್ತದಲ್ಲಿಯ ಸಕ್ಕರೆ ಪ್ರಮಾಣ ಗಮನಿಸಿದಾಗ ವೈದ್ಯರು ನಿಖರವಾಗಿ ಸಕ್ಕರೆ ಕಾಯಿಲೆಯ ರೋಗ ನಿದಾನ ಮಾಡಬಲ್ಲರು.
ಎಲ್ಲಕ್ಕೂ ಹೆಚ್ಚಿನ ರಕ್ತದ ತಪಾಸಣೆ ಅಂದರೆ ಎಚ್.ಬಿ.ಎ.ಒನ್.ಸಿ ಅಂಶ. ಇದು ೫.೭% ಅಥವಾ ಇದರ ಕೆಳಗೆ ಕಡ್ಡಾಯವಾಗಿ ಇರಲೇಬೇಕು. ಅಂದರೆ ಮಾತ್ರ ಸಕ್ಕರೆ ಕಾಯಿಲೆ ಇಲ್ಲ ಎಂದು ನಿಖರವಾಗಿ ಹೇಳಬಹುದು. ಈ ಪ್ರಮಾಣ ರೋಗಿಯ ಕಳೆದ ಮೂರು ತಿಂಗಳಿನ ಸಕ್ಕರೆ ಪ್ರಮಾಣದ ಸೂಚನೆ. ಈ ಪ್ರಮಾಣ ೫.೭% ನಿಂದ ೬.೪% ಇದ್ದರೆ ಇದಕ್ಕೆ "ಪ್ರೀ ಡಯಾಬಿಟಿಸ್" ಎನ್ನುವರು. ಈ ಸಂದರ್ಭದಲ್ಲಿ ರಭಸವಾದ ಶಾರೀರಿಕ ವ್ಯಾಯಾಮ, ಸಿಹಿ ಪದಾರ್ಥಗಳನ್ನು ತ್ಯಜಿಸುವುದು-ಇವುಗಳನ್ನು ಮಾಡದಿದ್ದರೆ, ನಿಮಗೆ ಡಯಾಬಿಟಿಸ್ ಕಾಯಿಲೆ ಎರಗುವುದು ಶತಸಿದ್ಧ. ಇದರ ಪ್ರಮಾಣ ೬.೫% ಅಥವಾ ಅದಕ್ಕೂ ಮೇಲೆ ಇದ್ದರೆ ನೀವು ಯಾವ ಹೆಚ್ಚಿನ ತಪಾಸಣೆ ಮಾಡಿಸುವ ಅಗತ್ಯ ಇರದು, ಏಕೆಂದರೆ ಈ ಪ್ರಮಾಣ ನಿಮಗೆ ಡಯಾಬಿಟಿಸ್ ಕಾಯಿಲೆ ತಗುಲಿದೆ ಎಂದು ದೃಢಪಡಿಸುತ್ತದೆ.
ಮನಸ್ಸು ಮತ್ತು ಡಯಾಬಿಟಿಸ್
ಡಯಾಬಿಟಿಸ್ ರೋಗ ಒಂದು ರೀತಿಯಲ್ಲಿ "ಸೈಕೋ ಸೋಮ್ಯಾಟಿಕ್" (ಮನೋ ದೈಹಿಕ) ಎಂದು ನಿಶ್ಚಿತವಾಗಿದೆ. ಡಯಾಬಿಟಿಸ್ ಕಾಯಿಲೆಯನ್ನು ನಿಯಂತ್ರಣದಲ್ಲಿ ತರಲು ಬಹಳ ಪ್ರಭಾವಕಾರಿ. ಒತ್ತಡವನ್ನು ನಿರ್ವಹಿಸಿ, ತತ್ತರಿಸ ಬೇಡಿ, ಮನವನ್ನು ನಿಯಂತ್ರಿಸಿ. ಅನೇಕರು ಮಾನಸಿಕ ಒತ್ತಡಗಳಾದ ಆರ್ಥಿಕ ದುಃಸ್ಥಿತಿ, ಮನೆ ಕಟ್ಟುವುದು, ಸಾಲ ಮಾಡುವುದು, ಎಲ್ಲೆ ಮೀರಿದ ಟಾರ್ಗೆಟ್ ನಿರ್ವಹಣೆ, ವಿವಾಹ ವಿಚ್ಛೇದನ, ಸಕಾಲಕ್ಕೆ ನೌಕರಿಯಲ್ಲಿ ಪ್ರಮೋಶನ್ ದೊರಕದಿರುವುದು, ಲೈಂಗಿಕ ದೌರ್ಬಲ್ಯ, ಸಂಬಂಧಿಕರ ಹಠಾತ್ ಸಾವು-ಇಂತಹ ಒತ್ತಡಗಳಿಂದ ಡಯಾಬಿಟಿಸ್ ರೋಗ ಸ್ಫೋಟಗೊಳ್ಳುವುದನ್ನು ಮನೋರೋಗ ತಜ್ಞರು ಕಂಡಿದ್ದಾರೆ.
ಇಂದೇ ಅಡೆತಡೆಗಳನ್ನು ಮುರಿಯಿರಿ, ತಡವರಿಸದಿರಿ, ಯೆಥೇಚ್ಛ ಭೋಜನ ಮಾಡಬೇಡಿ, ಸಿಡಿಮಿಡಿಗೊಳ್ಳದಿರಿ-ಇಂತಹ ಮಂತ್ರಗಳಿಂದ ಡಯಾಬಿಟಿಸ್ ಕಾಯಿಲೆ ಕಡಿತಗೊಳಿಸಿ.

ಎಚ್.ಬಿ.ಎ.ಒನ್.ಸಿ. ಶೀಘ್ರ ಕೆಳ ತರಲು ಹೀಗೆ ಮಾಡಿ…
ರಭಸವಾದ ನಡಿಗೆ, ಜಿಮ್‌ಗೆ ಹೋಗುವುದು, ಸೈಕಲ್ ತುಳಿಯುವುದು, ಸ್ಕಿಪಿಂಗ್, ಈಜು, ಓಡುವುದು, ಬೆಟ್ಟಗಳನ್ನು ಏರುವುದು.
ಮಾನಸಿಕ ಒತ್ತಡದ ನಿರ್ವಹಣೆ-"ಪ್ರೋಗ್ರೇಸಿವ್ ರಿಲ್ಯಾಕ್ಸೇಶನ್" (ನಿಧಾನವಾಗಿ, ನಿಯಮಿತವಾಗಿ ನಿಮ್ಮ ಸ್ನಾಯು, ಮಾಂಸಖಂಡಗಳನ್ನು ಸಡಿಲಿಸುವುದು), ಮನೋರೋಗ ತಜ್ಞರ ಜೊತೆಗೆ ಆಪ್ತ ಸಮಾಲೋಚನೆ, ಕೌನ್ಸೆಲಿಂಗ್, ಗ್ರೂಪ್ ಸೈಕೋಥೆರಪಿ, ಯೋಗ, ಪ್ರಾಣಾಯಮ, ಕಪಾಲ ಭಾತಿ, ಎಲ್ಲರೊಟ್ಟಿಗೆ ಬೆರೆಯುವುದು, "ಮೂಲತಃ ಮಾನವ ಸಂಘ ಜೀವಿ" ಎಂದು ನಂಬುವುದು.
ಹಿತಮಿತವಾದ ಆಹಾರ ಸೇವನೆ, ಪ್ರತಿದಿನ ನಿಯಮಿತವಾಗಿ, ಸಕಾಲಿಕವಾಗಿ ಆಹಾರ ಸೇವನೆ, ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸುವುದು, ಯಥೇಚ್ಛವಾಗಿ ಹಣ್ಣು, ಕಾಯಿಪಲ್ಯೆಗಳ ಸೇವನೆ. ಇದಕ್ಕೆ ಆಂಗ್ಲ ಭಾಷೆಯಲ್ಲಿ "ರಫ್ಪೇಜ್" ಎಂದು ಸಂಬೋಧಿಸುವರು. (ನಾರಿನ ಪದಾರ್ಥಗಳ ಸೇವನೆ)
ಸಮತೋಲನ ಆಹಾರ, ತೂಕ ನಿಯಂತ್ರಣ.
ನಿಮ್ಮ ಸಕ್ಕರೆ ಪ್ರಮಾಣ ದಿನಂಪ್ರತಿ ವೀಕ್ಷಿಸಿ
ದಿನಕ್ಕೆ ಕನಿಷ್ಠ ೭ ರಿಂದ ೮ ಗಂಟೆಯ ನಿದ್ರೆ ಮತ್ತು ಬೇಗ ಎದ್ದು ಸೂರ್ಯ ಕಿರಣಗಳಿಗೆ ಮೈ ಒಡ್ಡುವಂತೆ ವ್ಯಾಯಾಮ.
ವೈದ್ಯರು ಸೂಚಿಸಿದ ಔಷಧಿಗಳನ್ನು ಚಾಚೂ ತಪ್ಪದೇ ನಿಯಮಿತವಾಗಿ, ಸಕಾಲಕ್ಕೆ ಸೇವಿಸುವುದು.
ಮದ್ಯ ಸೇವನೆ ವರ್ಜಿಸಿ.