ಮನೆ ಮನೆಗೆ ಸುದ್ದಿ ತಲುಪಿಸುವ ಸದ್ದಿಲ್ಲದ ಶ್ರಮಜೀವಿ
ಇಂದು ವಿಶ್ವ ಪತ್ರಿಕಾ ವಿತರಕರ ದಿನ
ಜಗತ್ತಿನ ಸಮಗ್ರ ವಿಷಯಗಳನ್ನು ಹೊತ್ತ ಪತ್ರಿಕೆಗಳನ್ನು ಪ್ರತಿದಿನ ಮನೆಗಳಿಗೆ ತಲುಪಿಸುವ ಪತ್ರಿಕಾ ವಿತರಕರಿಗೆ ಕೃತಜ್ಞತೆ ಸಲ್ಲಿಸುವ ದಿನ ಇಂದು. ಸೆಪ್ಟೆಂಬರ್ ೪ರಂದು ಪತ್ರಿಕಾ ವಿತರಕರ ದಿನವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಐದೂವರೆ ಲಕ್ಷಕ್ಕೂ ಹೆಚ್ಚು ಪತ್ರಿಕಾ ವಿತರಕರಿದ್ದಾರೆ. ರಾಜ್ಯದಲ್ಲಿ ಇವರ ಸಂಖ್ಯೆ ೪೦,೦೦೦ಕ್ಕೂ ಅಧಿಕವಿದೆ. ಇವರಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಒಂದು ದಿನವೂ ತಪ್ಪದೆ ಇದೇ ಕಾಯಕ ಮಾಡಿಕೊಂಡು ಬಂದಿರುವವರಿಗೆ ಪತ್ರಿಕೆಗಳು ಹಾಗೂ ಓದುಗರ ಪರವಾಗಿ ಈ ಮೂಲಕ ಒಂದು ಗುಡ್‌ಲಕ್ ಹೇಳೋಣ.
ಕೆ.ವಿ.ಪರಮೇಶ್
ಊರೆಲ್ಲ ಇನ್ನೂ ಗಾಢ ನಿದ್ದೆಯಲ್ಲಿರುವಾಗಲೇ ಇವರು ಲಗುಬಗೆಯಿಂದ ಎದ್ದು ಯಾವುದೋ ಬೀದಿಯ ಮೂಲೆಯಲ್ಲಿ ಪತ್ರಿಕೆಗಳನ್ನು ಜೋಡಿಸುತ್ತಿರುತ್ತಾರೆ. ಮಳೆಯಿರಲಿ, ಚಳಿಯಿರಲಿ ಇವರ ಸೈಕಲ್ ಅಥವಾ ಸ್ಕೂಟರ್‌ಗಳು ಪ್ರತಿದಿನ ಕರಾರುವಾಕ್ಕಾಗಿ ಒಂದೇ ಸಮಯಕ್ಕೆ ಪತ್ರಿಕೆಗಳನ್ನು ಹೊತ್ತು ಮನೆಮನೆಗೆ ಧಾವಿಸುತ್ತವೆ. ಜನರು ಬೆಳಗ್ಗೆ ಎದ್ದು ಮನೆಯ ಮುಂದೆ ನೀರು ಹಾಕುವುದಕ್ಕಿಂತ ಮೊದಲು ಗೇಟಿನೊಳಗೆ ಇವರು ಎಸೆದ ದಿನಪತ್ರಿಕೆ ಬಂದು ಬಿದ್ದಿರುತ್ತದೆ.
ದಿನಪತ್ರಿಕೆಗಳು ಮನೆಮನಮುಟ್ಟಲು ಇವರೇ ಜೀವಾಳ. ಇವರಿಲ್ಲದೆ ಜನರ ಕೈಗೆ ದಿನಪತ್ರಿಕೆ ಸಿಗುವುದಿಲ್ಲ. ಒಂದು ದಿನವೂ ತಪ್ಪದೆ ಜನರಿಗೆ ಸುದ್ದಿಯನ್ನು ಹಂಚುವ ಕಾಯಕನಿಷ್ಠೆಯ ಶ್ರಮಜೀವಿಗಳು. ಇಂದು ಜಗತ್ತಿನೆಲ್ಲೆಡೆ ಈ ಪತ್ರಿಕಾ ಯೋಧರನ್ನು ನೆನಪಿಸಿಕೊಳ್ಳುವ ದಿನ.
ನಿಸ್ವಾರ್ಥ ಸೈನಿಕರ ಸೇವೆಯಿದು
ಬೆಳಗ್ಗೆ ಕಾಫಿ ಕುಡಿಯುವಾಗ ಕೈಯಲ್ಲಿ ದಿನಪತ್ರಿಕೆ ಇಲ್ಲದಿದ್ದರೆ ಬಹಳಷ್ಟು ಮಂದಿಗೆ ಕಾಫಿ ರುಚಿಸುವುದಿಲ್ಲ. ಓದುಪ್ರಿಯರಿಗೆ ದಿನಪತ್ರಿಕೆಯ ಮೇಲೆ ಕಣ್ಣಾಡಿಸದೆ ದಿನವೇ ಆರಂಭವಾಗುವುದಿಲ್ಲ. ಆದರೆ ಹೀಗೆ ಬೆಳ್ಳಂಬೆಳಗ್ಗೆ ಪ್ರತಿ ಮನೆಗೂ ದಿನಪತ್ರಿಕೆಗಳು ತಲುಪಬೇಕು ಅಂದರೆ ಅದರ ಹಿಂದೆ ಪತ್ರಿಕಾ ವಿತರಕರು ಪಡುವ ಶ್ರಮ ಸಣ್ಣದಲ್ಲ. ಇವತ್ತೊಂದು ದಿನ ಸ್ವಲ್ಪ ಹೊತ್ತು ಜಾಸ್ತಿ ಮಲಗೋಣ ಎಂಬ ಸುಖವನ್ನು ಅನುಭವಿಸಲು ಯಾವತ್ತಿಗೂ ಆಗದವರು ಇದ್ದರೆ ಅವರು ಪತ್ರಿಕೆ ಹಂಚುವವರು ಮಾತ್ರ. ಪ್ರತಿದಿನ ಜಗತ್ತಿನಲ್ಲಿ ಲೋಕಸಂಚಾರ ಆರಂಭವಾಗುವುದಕ್ಕೂ ಮೊದಲೇ ಇವರು ತಮ್ಮ ಕೆಲಸ ಮುಗಿಸಿರುತ್ತಾರೆ. ಹೀಗಾಗಿ ಇವರ ಶ್ರಮ ಕಣ್ಣಿಗೆ ಬೀಳುವುದು ಅತ್ಯಂತ ವಿರಳ. ಒಂದು ದಿನ ಮನೆಗೆ ಪತ್ರಿಕೆ ಬಂದಿಲ್ಲ ಅಂದಾಗ ಮಾತ್ರ ಪತ್ರಿಕೆ ಹಂಚುವವರು ನೆನಪಾಗುತ್ತಾರೆ. ಒಂದರ್ಥದಲ್ಲಿ ಇವರು ತಮ್ಮ ಕೆಲಸಕ್ಕೆ ಮಾನ್ಯತೆ ಕೇಳದ ನಿಸ್ವಾರ್ಥ ಸೈನಿಕರಿದ್ದಂತೆ.
ರಜೆ ಇವರ ಪಾಲಿಗೆ ಮರೀಚಿಕೆ
ಬಹುತೇಕ ಎಲ್ಲ ಉದ್ಯೋಗಿಗಳಿಗೂ ವಾರಕ್ಕೆ ಒಂದು ಅಥವಾ ಎರಡು ರಜೆ ಸಿಕ್ಕರೆ ಇವರಿಗೆ ಇಡೀ ವರ್ಷಕ್ಕೆ ಸಿಗುವುದು ನಾಲ್ಕೈದು ರಜೆ ಮಾತ್ರ! ಪತ್ರಿಕಾರಂಗವನ್ನು ಸಂವಿಧಾನದ ನಾಲ್ಕನೆಯ ಆಧಾರ ಸ್ತಂಭ ಎನ್ನುವುದಿದೆ. ಆದರೆ, ಪತ್ರಿಕೆಗಳ ವಿತರಕರು ಪತ್ರಿಕಾರಂಗದ ಮೊದಲನೇ ಆಧಾರ ಸ್ತಂಭವಿದ್ದಂತೆ.
ಕಳೆದ ನಾಲ್ಕೈದು ದಶಕಗಳಲ್ಲಿ ಪತ್ರಿಕೋದ್ಯಮದಲ್ಲಿ ಸಾಕಷ್ಟು ತಾಂತ್ರಿಕ ಸುಧಾರಣೆಗಳು ಆಗಿವೆ. ಆದರೆ, ಪತ್ರಿಕೆ ಹಂಚುವ ವಿಧಾನ ಮಾತ್ರ ಜಗತ್ತಿನಲ್ಲೆಲ್ಲೂ ಬದಲಾಗಿಲ್ಲ. ಅದು ಸಂಪೂರ್ಣವಾಗಿ ಪತ್ರಿಕಾ ವಿತರಕರ ಶ್ರಮವನ್ನೇ ಅವಲಂಬಿಸಿದೆ. ಕೆಲ ದೇಶಗಳಲ್ಲಿ ಪತ್ರಿಕಾ ವಿತರಕರ ಕೊರತೆಯಿಂದ ಎಷ್ಟೋಪತ್ರಿಕೆಗಳೇ ನಿಂತು ಹೋಗಿವೆ.
ಬದುಕು ಕಟ್ಟಿಕೊಡುವ ಕಾಯಕ
ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ೫ ಲಕ್ಷಕ್ಕೂ ಹೆಚ್ಚು ಪತ್ರಿಕಾ ವಿತರಕರಿದ್ದಾರೆ. ಇವರ ಸಂಖ್ಯೆ ರಾಜ್ಯದಲ್ಲಿ ೪೦,೦೦೦ಕ್ಕೂ ಹೆಚ್ಚಿದೆ. ಇವರಲ್ಲಿ ೪೦-೫೦ ವರ್ಷಗಳಿಂದ ಒಂದು ದಿನವೂ ತಪ್ಪದೆ ಇದೇ ಕಾಯಕ ಮಾಡಿಕೊಂಡು ಬಂದಿರುವವರೂ ಇದ್ದಾರೆ. ಹೆಚ್ಚಿನವರು ಬೆಳಗ್ಗೆ ಪತ್ರಿಕೆ ಹಾಕುವ ಕೆಲಸ ಮಾಡಿ, ನಂತರ ಬೇರೆ ಬೇರೆ ಉದ್ಯೋಗಗಳನ್ನು ಮಾಡುತ್ತಾರೆ. ಅನೇಕ ಹುಡುಗರು ಮನೆಮನೆಗೆ ಪತ್ರಿಕೆ ಹಾಕಿದ ಹಣದಲ್ಲಿ ಓದಿ ಬದುಕು ಕಟ್ಟಿಕೊಂಡಿದ್ದಾರೆ.
ಮಾಜಿ ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ ಬಾಲ್ಯದಲ್ಲಿ ಪತ್ರಿಕೆ ಹಾಕುತ್ತಿದ್ದರು. ಪತ್ರಿಕಾ ವಿತರಕರದು ಇಂದಿಗೂ ಅಸಂಘಟಿತ ಉದ್ಯೋಗ. ಇವರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯಿಲ್ಲ. ಪಿಂಚಣಿ, ವಿಮೆ, ಅನಾರೋಗ್ಯಗಳ ಚಿಕಿತ್ಸೆಗೆ ನೆರವು ಹೀಗೆ ಯಾವುದೇ ಸೌಕರ್ಯಗಳನ್ನು ತಕ್ಕಮಟ್ಟಿಗೆ ಹೋರಾಡಿಯೇ ಪಡೆದುಕೊಂಡಿದ್ದಾರೆ. ಇವರದ್ದೇ ಒಂದು ಒಕ್ಕೂಟ ರಚನೆಯಾಗಿದ್ದು ಸರ್ಕಾರದೊಂದಿಗೆ ಪತ್ರಚಳವಳಿ ನಡೆಸುತ್ತಿದೆ. ಒಂದಷ್ಟು ಸಹಾಯವೂ ಸಿಕ್ಕಿದೆ. ಜನಸಾಮಾನ್ಯರೂ ಇವರ ಕಾಯಕನಿಷ್ಠೆಯನ್ನು ಕೃತಜ್ಞತೆಯಿಂದ ಸ್ಮರಿಸಬೇಕಿದೆ.
ಒಕ್ಕೂಟದ ಅಧ್ಯಕ್ಷರ ಕಳಕಳಿ
ಪತ್ರಿಕಾ ವಿತರಕರಿಗಾಗಿ ೨೦೧೮ರಲ್ಲಿಯೇ ಆಯವ್ಯಯದಲ್ಲಿ ಘೋಷಣೆಯಾಗಿದ್ದ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿನಿಧಿ ಇಂದಿಗೂ ಜಾರಿಯಾಗಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ ಘೋಷಿಸಿದ ಎರಡು ಕೋಟಿ ಬದಲಿಗೆ ೧೦ ಕೋಟಿ ರೂ ಕ್ಷೇಮ ನಿಧಿಯಾಗಿ ಸ್ಥಾಪಿಸಿದರೆ ನಮ್ಮ ಬದುಕು ಅಲ್ಪವಾದರೂ ಸುಧಾರಣೆ ಆಗಲಿದೆ. ಮಾಧ್ಯಮ ಅಕಾಡೆಮಿ, ಪ್ರೆಸ್ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘಗಳು ನೀಡುವ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿ ಪತ್ರಿಕಾ ವಿತರಕರಿಗೂ ಸಿಗುವಂತಾಗಲಿ. ಪತ್ರಿಕಾ ವಿತರಕರಿಗಾಗಿ ಒಂದು ಕಚೇರಿಗೆ ವ್ಯವಸ್ಥೆ ಖಾಲಿ ನಿವೇಶನ ಅಥವಾ ನಿವೇಶನವನ್ನು ಬಡ್ಡಿ ರಹಿತ ಸಾಲದಲ್ಲಿ ನೀಡಬೇಕು. ಎಲೆಕ್ಟ್ರಿಕಲ್ ಬೈಕ್ ಖರೀದಿಗೆ ಸರ್ಕಾರ ಬಡ್ಡಿರಹಿತ ಸಾಲ ನೀಡಬೇಕು. ಅಪಘಾತ ವಿಮೆ, ಕಾರ್ಮಿಕ ಕಲ್ಯಾಣ ಯೋಜನೆ ಅಡಿಯಲ್ಲಿ ೭೦ ವರ್ಷಕ್ಕೆ ಮೇಲ್ಪಟ್ಟ ವಿತರಕರನ್ನು ಪರಿಗಣಿಸಬೇಕಿದೆ ಎನ್ನುವುದು ಕರ್ನಾಟಕ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ. ಶಂಭುಲಿಂಗ ಅವರ ಮನವಿ.