ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮರದಂತೆ ಹರವಾಗು, ನೆರವಾಗು

04:52 AM Aug 16, 2024 IST | Samyukta Karnataka

ಮರದ ಟೊಂಗೆಗಳು ಆ ಮರದ ಅರ್ಧ ಭಾಗವಾದರೆ ಇನ್ನುಳಿದ ಅರ್ಧ ಭಾಗ ಅದರ ಬೇರುಗಳಾಗಿರುತ್ತವೆ. ಮೇಲಿನ ಮರದಷ್ಟೇ ವಿಸ್ತಾರವಾಗಿ ಮರ ಕೆಳಭಾಗ ಭೂಮಿಯಲ್ಲಿ ವಿಸ್ತಾರವಾಗಿರುತ್ತದೆಂದು ಸಸ್ಯವಿಜ್ಞಾನಿಗಳು ಹೇಳುತ್ತಾರೆ. ಮರ ಎತ್ತರಕ್ಕೆ ಬೆಳೆಯಬೇಕಾದರೆ ಕೆಳಗಿನ ಬೇರುಗಳು ಗಟ್ಟಿಯಾಗಿರಬೇಕು ಎಂಬ ತತ್ವವನ್ನು ಮರ ನಮಗೆ ನೀಡುತ್ತದೆ. ಮೇಲಿನದು ಹಸಿರು ತಪ್ಪಲು ಪುಷ್ಪ ಫಲ ಎಲ್ಲವೂ ಸಿಗುವುದು ಕೆಳಗಿನಿಂದಲೇ ಎಂಬ ಇನ್ನೊಂದು ತತ್ವ ಮರ ನೀಡುತ್ತದೆ.
ಕುರಾನ್ ಮನುಷ್ಯನನ್ನು ಒಂದು ಒಳ್ಳೆಯ ಮರಕ್ಕೆ ಹೋಲಿಸಿದೆ. ಒಂದು ಒಳ್ಳೆಯ ಮರ ಸ್ವಾಭಾವಿಕವಾಗಿ ಒಬ್ಬ ಒಳ್ಳೆಯ ಮನುಷ್ಯನಂತೆ ಎಂದು ಹೇಳುತ್ತದೆ. ಕುರಾನಿನ ಅಧ್ಯಾಯ ಇಬ್ರಾಹಿಂ(೧೪:೨೪,೨೫)ದಲ್ಲಿ `ಒಂದು ಒಳ್ಳೆಯ ಮಾತು ಹೇಗೆ ಇರುತ್ತದೆ ಎಂಬುದನ್ನು ನೀವು ಬಲ್ಲಿರಾ….? ಅದರ ಉಪಮೆ ಹೀಗಿರುತ್ತದೆ. ಒಂದು ಉತ್ತಮ ಜಾತಿಯ ಮರ ಅದರ ಬೇರುಗಳು ನೆಲದೊಳಗೆ ಆಳವಾಗಿ ಸ್ಥಿರವಾಗಿ ನಾಟಿವೆ. ಟೊಂಗೆಗಳು ಆಕಾಶ ಮುಟ್ಟುತ್ತವೆ. ಅದು ಯಾವಾಗಲೂ ತನ್ನ ಒಡೆಯನ ಆಜ್ಞೆಯಿಂದ ಫಲಗಳನ್ನು ಕೊಡುತ್ತದೆ. ಜನರು ಇಂತಹ ಮರಗಳಿಂದ ಪಾಠ ಕಲಿಯಬೇಕು' ಎಂದು ಅಲ್ಲಾಹನು ಈ ಉದಾಹರಣೆಯನ್ನು ಕೊಡುತ್ತಾನೆ. ಮತ್ತೆ ಪೈಶಾಚಿಕ ಕೃತ್ಯದಲ್ಲಿ ತೊಡಗಿರುವ ಮಾನವ ಒಂದು ಕೆಟ್ಟ ಜಾತಿಯ ಮರದಂತೆ ಅದಕ್ಕೆ ಸ್ಥಿರತೆಯೆಂಬುದೇ ಇರುವುದಿಲ್ಲ.
ಅದು ಭೂಮಿಯ ಮೇಲ್ಭಾಗದಿಂದ ಕಿತ್ತೆಸೆಯಲ್ಪಡುತ್ತದೆ ಎಂಬ ಎಚ್ಚರಿಕೆಯನ್ನು ಅಲ್ಲಾಹನು ನೀಡಿದ್ದಾನೆ. ಮರಗಳು ಫಲವತ್ತತೆಯನ್ನು ಪ್ರತಿನಿಧಿಸುತ್ತವೆ ಅದಕ್ಕಾಗಿ ಅವುಗಳು ಜೀವನದ ಸಂಕೇತ. ಅವು ಯಾವಾಗಲೂ ಆಕಾಶದಿ ಎತ್ತರಕ್ಕೆ ಬೆಳೆಯಲು ಯತ್ನಿಸುತ್ತವೆ. ಅಂತೆಯೇ ಅವುಗಳನ್ನು ಅಲೌಕಿಕ ಎಂದು ಪರಿಗಣಿಸಲಾಗಿದೆ. ಇದನ್ನು ಮನುಷ್ಯನಾದವನು ತನ್ನ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಸಂಸ್ಕೃತಿಯನ್ನು ಆತ ಆಳವಾದ ನಂಬಿಕೆಯಲ್ಲಿ ಮರಗಳಂತೆ ಪೋಷಿಸಬೇಕು. ಎಲ್ಲಾ ಸಮಯದಲ್ಲಿ ಆತ ಮರಗಳಂತೆ ಸಮಸ್ತ ಜೀವಿಗಳಿಗೆ ಉಪಕಾರಿಯಾಗಬೇಕು.
ಒಂದು ಮರ ಒಂದು ಬೀಜದಿಂದ ಪ್ರಾರಂಭವಾಗಿ ಸಸ್ಯವಾಗಿ, ಮರವಾಗಿ, ಟೊಂಗೆ, ಎಲೆಗಳಿಂದ ಸಂಪದ್ಭರಿತವಾಗಿ ಬೆಳೆಯುತ್ತದೆ. ಒಂದು ಕಲ್ಲು (ಶಿಲೆ) ಎಂದು ಬೆಳೆಯುವುದಿಲ್ಲ. ಮೇಲೆ ಪ್ರಸ್ತಾಪಿಸಿದ ಕುರಾನಿನ ವಚನ ಮನುಷ್ಯನು ಮರದಂತೆ ಬೆಳೆಯಬೇಕು. ತಾರತಮ್ಯ, ಭೇದ ಭಾವವಿಲ್ಲದೆ ಮನುಷ್ಯನಿಗೆ ನೆರವಾಗುವಂತೆ ಮಾನವ ತನ್ನ ಸಾಮಾಜಿಕ ಜೀವನದಲ್ಲಿ ಇತರರಿಗಾಗಿ ಇರಬೇಕು. ತನ್ನ ನೈತಿಕ, ಧಾರ್ಮಿಕ ನಂಬಿಕೆಗಳನ್ನು ಸ್ಥಿರವಾಗಿ ಮರ-ಬೇರುಗಳಿಂದ ಗಟ್ಟಿಯಾಗಿರುವಂತೆ ದೃಢ ವಿಶ್ವಾಸಿಯಾಗಬೇಕು. ಮರವು ಮನುಷ್ಯನಿಗೆ ಫಲ, ಪ್ರಾಣವಾಯು, ನೆರಳು ಮುಂತಾದವುಗಳನ್ನು ನೀಡುವಂತೆ ಮನುಷ್ಯನು ಉದಾರಿಯಾಗಬೇಕು. ಮರ ಕೊಡುತ್ತದೆ. ಯಾವುದನ್ನು ಬಯಸುವುದಿಲ್ಲ. ಈ ಸಂಸ್ಕೃತಿಯನ್ನು ಮನುಷ್ಯನು ಅಳವಡಿಸಿಕೊಳ್ಳಬೇಕು. ತಾನು ಸಮಾಜದಲ್ಲಿ ಇತರರಿಗೆ ಉಪಯೋಗವಾಗುವಂತಿರಬೇಕು. ಕುರಾನಿನಲ್ಲಿ ಗಿಡಮರಗಳು ಅಲ್ಲಾಹನ ಪ್ರಾರ್ಥನೆಯಲ್ಲಿ ನಿಂತಿವೆ ಎಂಬ ವಿವರಣೆ ಇದೆ.

Next Article