ಮರಳಿ ಮರಳಿ ಬರುತಿದೆ
ಚುನಾವಣಾ ಅಬ್ಬರದ ಪ್ರಚಾರಕ್ಕೆ ಜನ ಮನಸೋತಿದ್ದರು. ಪ್ರತಿಯೊಬ್ಬ ಅಭ್ಯರ್ಥಿಯ ಬಗ್ಗೆಯೂ ಅನೇಕ ಹೊಸ ವಿಷಯಗಳು ತಿಳಿದು ಆನಂದ ಪಟ್ಟಿದ್ದರು. ಇವನು ಇಷ್ಟು ಕೋಟಿ ತಿಂದ, ಅವನು ಅಷ್ಟು ಕೋಟಿ ತಿಂದ, ಇವನು ಉಪಯೋಗವಿಲ್ಲ, ಅವನು ಪ್ರಯೋಜನವಿಲ್ಲ ಎಂದು ಪ್ರತಿಯೊಬ್ಬ ಅಭ್ಯರ್ಥಿಯೂ ಎದುರಾಳಿಯ ಬಗ್ಗೆ ಸೊಗಸಾಗಿ ಭಾಷಣ ಮಾಡಿ ಸತ್ಯ ಆಚೆಗೆ ಹಾಕಿ ಬತ್ತಲು ಮಾಡಿ ನಿಲ್ಲಿಸಿದ್ದರು. ಯಾರೂ ಸರಿ ಇಲ್ಲ ಎಂಬುದು ಸಾರ್ವಜನಿಕರಿಗೆ ಸ್ಪಷ್ಟವಾಗಿತ್ತು. ಹಾಗಿದ್ದರೆ ನಾವು ಓಟು ಮಾಡುವುದು ಯಾರಿಗೆ? ೪೭ ವಿಧಾನಸಭಾ ಕ್ಷೇತ್ರಗಳಿಗೆ ಅನಗತ್ಯವಾಗಿ ಮತ್ತೆ ಚುನಾವಣೆ ನಡೆಸಬೇಕಾದ ಸಂಕಷ್ಟ. ನೂರಾರು ಕೋಟಿ ರೂಪಾಯಿಗಳ ವೃಥಾ ಖರ್ಚು. ಖರ್ಚು ಕೊಡುವವರು ಯಾರು? ನಾವೇ, ಅಮಾಯಕ ಪ್ರಜೆಗಳು!
ಕರ್ನಾಟಕದ ಮೂರು ಕ್ಷೇತ್ರಗಳಲ್ಲಿ ಬಿರುಸಿನ ಚುನಾವಣೆ ನಡೆದಿದೆ. ಫಲಿತಾಂಶಕ್ಕಾಗಿ ಕಾಲ ತುದಿಯ ಮೇಲೆ ಅಭ್ಯರ್ಥಿಗಳು ನಿಂತಿದ್ದಾರೆ. ಯರ‍್ಯಾರು ಎಷ್ಟೆಷ್ಟು ತಿನ್ನುತ್ತಾರೆ ಎಂಬುದೂ ಸಹ ಅವರೇ ದಾಖಲೆಗಳು ಕೊಟ್ಟಿದ್ದಾರೆ. ಅವರಿಗೆ ತಿನ್ನಲು ಮತ್ತೆ ಒಂದು ಅವಕಾಶ ಕೊಡಲು ನಾವು ಮತ ಹಾಕಬೇಕೇ ಎಂಬ ಪ್ರಶ್ನೆ ಧುತ್ ಎಂದು ಎದ್ದು ನಿಲ್ಲುತ್ತದೆ.
ಎಂ.ಪಿ. ಯಾಗಿ ಚುನಾಯಿತರಾದವರು ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಎಂ.ಎಲ್.ಎ. ಸ್ಥಾನಕ್ಕೆ ಚುನಾವಣೆಗೆ ನಿಂತರೆ ಅದೆಷ್ಟು ಕೋಟಿ ಮತ್ತೆ ಖರ್ಚು! ಇದನ್ನು ನಾವ್ಯಾಕೆ ಕೊಡಬೇಕು ಎಂಬುದೇ ಪ್ರಜೆಗಳ ಪ್ರಶ್ನೆ. ಯಾರು ಎಂ.ಪಿ. ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೋ ಅವರೇ ಆ ಖರ್ಚನ್ನು ಭರಿಸಬೇಕು. ಐದು ವರ್ಷ ನಾನಿರುತ್ತೇನೆ ಎಂದು ಹೇಳಿ ಓಟನ್ನು ಪಡೆದು ದಿಢೀರನೆ ರಾಜೀನಾಮೆ ಕೊಡುವ ಮೊದಲು ಜನಗಳನ್ನು ಒಂದು ಮಾತು ಕೇಳುವುದು ಬೇಡವೇ?
ನಮ್ಮ ವಿಶ್ವ ಜನಸಾಮಾನ್ಯರನ್ನು ಚುನಾವಣೆ ಸಮಯದಲ್ಲಿ ಸಮೀಕ್ಷೆಗಾಗಿ ಸಂಪರ್ಕಿಸಿದಾಗ ವಿವಿಧ ಪ್ರತಿಕ್ರಿಯೆ ಬಂತು. ಒಬ್ಬ ಗೃಹಿಣಿ ಹೇಳಿದ ಮಾತು:
“ಚುನಾವಣೆ ಆಗಾಗ ಬರ‍್ತಾ ಇರ‍್ಬೇಕು ಸಾರ್. ಮನೆಗೆ ರಾಜಕಾರಣಿಗಳೆಲ್ಲ ಬರ‍್ತಾರೆ, ಬಾಗಿಲು ತಟ್ತಾರೆ, ನಮಸ್ಕಾರ ಮಾಡ್ತಾರೆ. ಮಂತ್ರಿಗಳ್ನ ಯಾಚನಾ ಅವಸ್ಥೇಲಿ ನೋಡೋ ಸೌಭಾಗ್ಯ ನಮ್ಮದಾಗುತ್ತೆ”
“ಯಾವತ್ತಾದ್ರೂ ಮಂತ್ರಿಗಳನ್ನ ಆಫೀಸಲ್ಲಿ ನೋಡಿದ್ದೀರಾ?” ವಿಶ್ವ ಕೇಳಿದ.
“ಆಫೀಸ್ ಒಳಗಡೆ ನಮ್ಮನ್ನ ಸರ‍್ಸೋದೇ ಇಲ್ಲ. ಅಪಾಯಿಂಟ್‌ಮೆಂಟ್ ತಗೊಂಡು ಬನ್ನಿ ಅಂತಾರೆ. ವಿಧಾನಸೌಧಕ್ಕೆ ಕಾಲಿಡಬೇಕಾದ್ರೆ ಹತ್ತಾರು ಕಂಡೀಷನ್‌ಗಳಿವೆ. ಈಗ ನೋಡಿ, ಆರಾಮವಾಗಿ ಅವರೇ ನಮ್ಮನೆಗೆ ಬಂದು ಕೈ ಮುಗಿದು ಮಾತಾಡ್ಕೊಂಡು ಹೋದ್ರು”
“ಇದರಿಂದ ನಿಮ್ಗೆ ಏನು ತಿಳಿಯುತ್ತೆ?” ಎಂದ ವಿಶ್ವ.
“ಚುನಾವಣೆ ಮತ್ತೆ ಮತ್ತೆ ಬರ‍್ತಾ ಇದ್ರೆ ನಮ್ಮ ಮತ್ತು ರಾಜಕಾರಣಿಗಳ ನಡುವಿನ ಬಂಧನ ಬಲವಾಗುತ್ತೆ” ಎಂದಳು ಆಕೆ.
ವಿಶ್ವ ಮತ್ತೊಂದು ಕಡೆಗೆ ಓಡಿದ. ರಾಜಕೀಯ ವರಸೆಗಳನ್ನು ಕಂಡು ಬೇಸರ ಮಾಡಿಕೊಂಡಿದ್ದ ವ್ಯಕ್ತಿ ಅಲ್ಲಿದ್ದ.
“ನೀವೇನು ಹೇಳ್ತೀರ ಚುನಾವಣೆ ಬಗ್ಗೆ?” ಎಂದು ಮರುಚುನಾವಣೆ ಬಗ್ಗೆ ಕೇಳಿದಾಗ ಆತ ಕನಲಿದ.
“ಎಂ.ಎಲ್.ಎ. ಸತ್ತರೆ ಆ ಸ್ಥಾನಕ್ಕೆ ಮರು ಚುನಾವಣೆ ಮಾಡ್ಲಿ, ಒಪ್ತೀವಿ. ಬದುಕಿರೋವ್ರೇ ರಾಜೀನಾಮೆ ಕೊಡೋದ್ಯಾಕೆ? ಯಾರನ್ನ ಕೇಳಿ ರಾಜೀನಾಮೆ ಕೊಟ್ರು? ಮತ್ತೆ ಚುನಾವಣೆಯ ಖರ್ಚು ನಾವು ಮಾಡ್ಬೇಕು, ನಮ್ಮ ಖರ್ಚಲ್ಲಿ ಅವರು ಮೆರೀಬೇಕು. ಇದನ್ನ ಮೊದ್ಲು ನಿಲ್ಲಿಸ್ಬೇಕು. ಐದು ವರ್ಷಕ್ಕೆ ಅಂತ ಆಯ್ಕೆ ಆದವರು ಮತ್ತೆ ಯಾವ ಕಾರಣಕ್ಕೂ ರಾಜೀನಾಮೆ ಕೊಡಬಾರ‍್ದು. ಹಾಗಂತ ಕಾನೂನು ಮಾಡಿದರೆ ಒಳ್ಳೇದು”
“ಅದ್ಹೇಗೆ ಸಾಧ್ಯ?” ಎಂದು ವಿಶ್ವ ಕೇಳಿದ.
“ಕೆಲವು ಕಂಪೆನಿಗಳಲ್ಲಿ ಕೆಲ್ಸ ಕೊಡೋವಾಗ ಲಾಕಿ ಇನ್’ ಪೀರಿಯಡ್ ಮೂರು ವರ್ಷ ಇರುತ್ತೆ. ಆ ಮೂರು ವರ್ಷದ ಒಳಗಡೆ ಅವನು ಕೆಲ್ಸ ಬಿಟ್ರೆ ಕೊಟ್ಟ ಅಷ್ಟೂ ಸಂಬಳವನ್ನು ಬಡ್ಡಿ ಸಮೇತ ವಾಪಸ್ ಕೊಡಬೇಕಾಗುತ್ತೆ. ಆ ಭಯಕ್ಕೆ ಯಾರೂ ಕಂಪೆನಿ ಬಿಡುವುದಿಲ್ಲ” ಎಂದ ಆತ. “ಆದರೆ ಆ ರೀತಿಯ ಅಗ್ರಿಮೆಂಟ್ ಇತ್ತೀಚೆಗೆ ತೆಗೆದು ಹಾಕಲಾಗಿದೆ” ಎಂದ ವಿಶ್ವ. “ಖರ್ಚುಗಳು ವಿಪರೀತ, ತಿನ್ನೋ ಜನಕ್ಕೆ ಪರಮಾನಂದ. ಈಗ ಕರ್ನಾಟಕಾನೇ ತಗೊಳ್ಳಿ, ಮೂರು ಕ್ಷೇತ್ರಗಳಲ್ಲಿ ಮರು ಚುನಾವಣೆ ಆಯ್ತು. ಇಡೀ ಮಂತ್ರಿ ಮಂಡಲ ವಿಧಾನಸೌಧ ಮರೆತು ರಸ್ತೆ ರಸ್ತೆ ಅಲೀತಾ ಇತ್ತು. ಕಂಡ ಕಂಡವರಿಗೆ ಕೈ ಮುಗೀತಾ ಇತ್ತು. ವೈಯಕ್ತಿಕ ಗೆಲುವು ಎಂಬುದು ಒಂಥರಾ ಸವಾಲಿನ ಪ್ರಶ್ನೆ ಆಯ್ತು” “ಹೌದು, ಹೌದು, ನೀವು ಹೇಳೋದೆಲ್ಲ ಕರೆಕ್ಟಾಗಿದೆ. ನಮ್ಮ ಲೀಡರ್ ಒಬ್ಬರಿಗೆ ನಮ್ಮನೆ ನಾಯಿ ಕೈಲಿ ಷೇಕ್ ಹ್ಯಾಂಡ್ ಕೊಡಿಸಿದೆ” “ನಾಯಿಗೆ ಓಟ್ ಇದೆಯಾ?” “ಇಲ್ಲ ಸಾರ್, ಇದ್ದಿದ್ರೆ ಚೆನ್ನಾಗಿತ್ತು” ಎಂದ ಆತ. ಜನಕ್ಕೆ ಉಚಿತ ಕೊಡುಗೆಗಳು. ಎಷ್ಟು ಲಕ್ಷ ಖರ್ಚಾಗುತ್ತೆ ಯೋಚ್ನೆ ಮಾಡಿ” ಎಂದು ಆತ ಕೇಳಿದ. ವಿಶ್ವ ಆಟೋ ಡ್ರೈವರ್ ಒಬ್ಬನನ್ನು ಪ್ರಶ್ನೆ ಮಾಡಿದ. “ಸ್ವಾಮಿ, ಆಟೋ ಓಡಿಸ್ದೆ ಯಾಕೆ ನಿಂತಿದ್ದೀರ?” “ಎಲ್ಲಿ ಸಾರ್, ಜನಗಳೇ ಬರ‍್ತಾ ಇಲ್ಲ. ಎಲೆಕ್ಷನ್ನು ಅಂತ ಎಲ್ಲೆಲ್ಲೋ ಓಡಾಡ್ತಾರೆ” ಎಂದ. “ಆದ್ರೆ ಅವರು ಓಡಾಡೋಕೆ ವಾಹನ ವ್ಯವಸ್ಥೆ ಬೇಕಲ್ಲ?” ಎಂದು ವಿಶ್ವ ಕೇಳಿದ. “ಇದನ್ನ ಅಭ್ಯರ್ಥಿಗಳೇ ಮಾಡ್ಕೊಡ್ತಾರೆ. ಚಿತ್ರಾನ್ನ, ನೀರಿನ ಬಾಟೆಲ್, ದಿನಕ್ಕೆ ಐನೂರು ರೂಪಾಯಿ ಕೂಲಿ ಕೊಟ್ರೆ ಸಾಕು. ಆಟೋದಲ್ಲಿ ಆ ಜನ ಯಾಕೆ ಬರ‍್ತಾರೆ?” “ಈ ಸಲ ನಿಮಗೇನಾದ್ರೂ ಆಶ್ವಾಸನೆ ಸಿಕ್ಕಿದೆಯಾ?” ಎಂದ ವಿಶ್ವ. “ನಾನು ಬಾಡಿಗೆ ಆಟೋ ಓಡಿಸ್ತಾ ಇದ್ದೀನಿ. ಮನೆ ಮನೆಗೂ ಒಂದೊಂದು ಆಟೋನ ಕೊಡ್ತೀನಿ ಅಂತ ಅಭ್ಯರ್ಥಿಯೊಬ್ರು ಹೇಳಿದ್ದಾರೆ ಸಾರ್” “ಆಮೇಲೆ?” “ಬಿಟ್ಟಿಯಾಗಿ ಅಕ್ಕಿ, ಬೇಳೆ, ಮನೆ ಸಾಮಾನು ಎಲ್ಲಾ ಕೊಡ್ತೀವಿ” ಅಂದಿದ್ದಾರೆ. “ಇದರಿಂದ ಸಂತೋಷ ಆಯ್ತಾ?” “ಇಲ್ಲ ಸಾರ್, ಗಾಬರಿಯಾಯ್ತು” “ನಿಮಗ್ಯಾಕೆ ಗಾಬರಿ?” ಎಂದು ಕೇಳಿದೆ. “ಅಲ್ಲ, ಮನೆಗೇ ಬಂದು ನಮ್ಮ ತೆರಿಗೆ ದುಡ್ಡಲ್ಲೇ ನಮ್ಗೆ ದಿನಸಿ ಎಲ್ಲ ಕೊಟ್ಬಿಟ್ರೆ ನಾವು ದುಡಿಯೋಕೆ ಯಾಕೆ ಹೋಗ್ತೀವಿ? ೨೪ ಗಂಟೆ ಮನೇಲೇ ಬಿದ್ದರ‍್ತೀವಿ. ಕಾಯಿಲೆಗಳು ಹತ್ಕೊಳ್ಳುತ್ತೆ. ತಲೆ ಕೆಡುತ್ತೆ. ಹೆಂಡ್ತಿ ಜೊತೆ ಜಗಳ ಆಗುತ್ತೆ. ಜೀವನ ಎಕ್ಕುಟ್ಕೊಂಡು ಹೋಗುತ್ತೆ ಸಾರ್” ಎಂದು ಹಣೆ ಚೆಚ್ಚಿಕೊಂಡ. “ಲೀಡರ್‌ಗಳು ಪಕ್ಷಾಂತರ ಆಗೋ ಬಗ್ಗೆ ಏನ್ಹೇಳ್ತೀರ?” ಎಂದಾಗ ಆತ ಒಳ್ಳೆಯ ವಿಷಯವನ್ನೇ ಹೇಳಿದ. “
ಎ’ ಪಾರ್ಟೀಲಿರೋಂಥ ರಾಜಕಾರಣಿ ರಾತ್ರೋ ರಾತ್ರಿ ದಿಢೀರಂಥ ಬಿ’ ಪಾರ್ಟಿಗೆ ಸೇರ‍್ಬಿಟ್ರೆ ಪಾರ್ಟಿ ಕಾರ್ಯಕರ್ತರ ಕತೆ ಏನು? ಅವರೂ ಕೂಡ ಆ ಕಡೆಗೆ ಹೋಗ್ಬೇಕಾ? ಮದುವೆಯಾದ ಹೆಣ್ಣು
ಗಂಡಾಂತರ’ ಮಾಡಿ ಬೇರೆ ಗಂಡನ ಹಿಂದೆ ಓಡಿ ಹೋದಾಗ ಮನೆಯವರೆಲ್ಲ ಅವಳ ಹಿಂದೆ ಹೋಗೊಲ್ಲವಲ್ಲ?” ಎಂದು ಪ್ರಶ್ನಿಸಿದ. ಇದಕ್ಕೆ ವಿಶ್ವನ ಬಳಿ ಉತ್ತರ ಇರಲಿಲ್ಲ.