For the best experience, open
https://m.samyuktakarnataka.in
on your mobile browser.

ಮಳೆಗಾಲದಲ್ಲಿ ಎಲ್‌ಟಿ ಕಂಬ ಯಮದೂತ

02:30 AM Jul 29, 2024 IST | Samyukta Karnataka
ಮಳೆಗಾಲದಲ್ಲಿ ಎಲ್‌ಟಿ ಕಂಬ ಯಮದೂತ

ರಾಜ್ಯದಲ್ಲಿ ಎಲ್ಲ ಕಡೆ ಮಳೆಯಾಗುತ್ತಿದೆ. ರೈತರಿಗೆ ಹೊಲದಲ್ಲಿ ಉಳುಮೆ ಮಾಡುವ ಉಮೇದು. ಆದರೆ ಹೊಲದಲ್ಲಿ ನೀರು ತುಂಬಿರುವಾಗ ಉಳುವೆ ಮಾಡುವುದು ಅಪಾಯ. ಹೊಲದ ಬದುವಿನ ಮೇಲೆ ಇರುವ ವಿದ್ಯುತ್ ಕಂಬವೇ ಯಮದೂತನಾಗುವ ಅಪಾಯವಿದೆ. ಕಂಬದಿಂದಲೇ ಬರುವ ವಿದ್ಯುತ್ ಹೊಲದಲ್ಲಿರುವ ನೀರಿನ ಮೂಲಕ ಹರಡಿಕೊಂಡುನ ಎತ್ತುಗಳು ಮತ್ತು ಉಳುಮೆ ಮಾಡುವ ರೈತನ ಪ್ರಾಣಕ್ಕೆ ಕುತ್ತು ತರುವ ಅಪಾಯವಿದೆ.
ಇತ್ತೀಚೆಗೆ ಕೊಡಗು ಜಿಲ್ಲೆ ಸೋಮವಾರಪೇಟೆ ದೊಡ್ಡಹಳ್ಳಿ ಗ್ರಾಮದಲ್ಲಿ ರೈತನೊಬ್ಬ ಉಳುಮೆ ಮಾಡುತ್ತಿದ್ದಾಗ, ಅವನ ಹೊಲದಲ್ಲಿದ್ದ ಕಂಬದಿಂದಲೇ ವಿದ್ಯುತ್ ಹರಡಿ ಸ್ಥಳದಲ್ಲೇ ಒಂದು ಎತ್ತು ಸತ್ತಿದೆ. ಸುದೈವದಿಂದ ರೈತ ಮತ್ತು ಮತ್ತೊಂದು ಎತ್ತು ಸಾವಿನಿಂದ ಪಾರಾಗಿದ್ದಾರೆ.
ಕಾರಣ ಏನು?
ಸಾಮಾನ್ಯವಾಗಿ ಹಳ್ಳಿಗಳಿಗೆ ವಿತರಣ ಟ್ರಾನ್ಸ್ಫಾರ್ಮರ್‌ನಿಂದ ಎಲ್‌ಟಿ ಮಾರ್ಗದಲ್ಲಿ ವಿದ್ಯುತ್ ನೀಡಲಾಗುವುದು. ೪೪೦ ವೋಲ್ಟ್ ಅಥವಾ ಅದಕ್ಕಿಂತ ಕಡಿಮೆ ವಿದ್ಯುತ್ ಇರಬಹುದು. ಕಂಬ ಸಾಮಾನ್ಯವಾಗಿ ಸಿಮೆಂಟ್‌ನಲ್ಲಿದ್ದು, ಇದರೊಳಗೆ ಕಬ್ಬಿಣದ ಸರಳು ಇರುತ್ತವೆ. ಹಿಂದೆ ಕಬ್ಬಿಣದ ಕಂಬಗಳನ್ನು ಬಳಸುತ್ತಿದ್ದರು. ಇವುಗಳು ಕೆಲವು ಕಡೆ ಇನ್ನೂ ಉಳಿದುಕೊಂಡಿದೆ. ಸಿಮೆಂಟ್ ಕಂಬಗಳಲ್ಲಿ ಗ್ರೌಂಡಿಂಗ್‌ಗೆ ಅವಕಾಶ ಇರುತ್ತದೆ. ಇದರಿಂದ ಕಂಬದ ಮೂಲಕ ವಿದ್ಯುತ್ ಹರಡಿಕೊಳ್ಳುವುದಿಲ್ಲ. ಆದರೆ ಎಂಜಿನಿಯರ್‌ಗಳ ಅಭಿಪ್ರಾಯದಂತೆ ಅದರಿಂದಲೂ ವಿದ್ಯುತ್ ಹರಡಿಕೊಳ್ಳುತ್ತಿದೆ. ಟಿಸಿಯಿಂದ ಬರುವ ವಿದ್ಯುತ್ ಪ್ರತಿ ಕಂಬದ ಮೇಲೂ ಇನ್ಸುಲೇಟರ್ ಮೂಲಕ ಮತ್ತೊಂದು ಕಂಬಕ್ಕೆ ಹೋಗುತ್ತದೆ. ಈ ಇನ್ಸಲೇಟರ್ ಪಿಂಗಾಣಿಯದಾಗಿರುವುದರಿಂದ ಕಂಬಕ್ಕೆ ವಿದ್ಯುತ್ ಸ್ಪರ್ಷ ಆಗದಂತೆ ನೋಡಿಕೊಳ್ಳುತ್ತದೆ. ಆದರೆ ಇದು ಒಡೆದಿರಬಾರದು. ಹಲವು ವರ್ಷ ಇದು ಬಾಳಿಕೆಯಿಂದ ಶಿಥಿಲಗೊಂಡಿರಬಹುದು. ಆದರೆ ಮಳೆಗಾಲ ಬರುವ ಮುನ್ನ ಇದನ್ನು ಪರೀಕ್ಷಿಸುವುದು ಒಳಿತು. ಇನ್ಸುಲೇಟರ್ ಹೋಗಿದ್ದರೆ ವಿದ್ಯುತ್ ತಂತಿ ಕಂಬದ ನೇರ ಸಂಪರ್ಕ ಕಲ್ಪಿಸಿಕೊಳ್ಳುತ್ತದೆ. ಮಳೆ ಬಂದು ಹೊಲದ ತುಂಬ ನೀರಿದ್ದಾಗ ಕಂಬದ ಮೇಲಿನ ವಿದ್ಯುತ್ ಕೆಳಗೆ ಹರಡಿಕೊಳ್ಳುವುದು ಸುಲಭ. ಇದು ಕಣ್ಣಿಗೆ ಕಾಣಿಸುವುದಿಲ್ಲ. ಸಾಮಾನ್ಯವಾಗಿ ಕಂಬದ ಸುತ್ತ ೫ ಮೀಟರ್‌ವರೆಗೆ ಹರಡಿಕೊಳ್ಳಬಹುದು. ಆಮೇಲೆ ದುರ್ಬಲಗೊಳ್ಳುತ್ತದೆ. ಈ ರೈತ ಎರಡೂವರೆ ಮೀಟರ್‌ನಲ್ಲಿದ್ದ ಎಂದು ಗೊತ್ತಾಗಿದೆ.
ಎಲ್‌ಟಿ ಮಾರ್ಗದಲ್ಲಿ ಎಲ್ಲೇ ವಿದ್ಯುತ್ ನೆಲದ ಸ್ಪರ್ಷ ಪಡೆದರೂ `ಟ್ರಿಪ್' ಆಗುವುದಿಲ್ಲ. ಹಿಂದೆ ಪ್ರತಿ ವಿತರಣ ಟ್ರಾನ್ಸ್ಫಾರ್ಮರ್‌ನಲ್ಲಿ ಮೂರು ತಂತಿಗಳಿಗೂ ಪ್ರತ್ಯೇಕ ಫ್ಯೂಸ್ ಇರುತ್ತಿತ್ತು. ಇದಕ್ಕಾಗಿ ಅತ್ಯಂತ ಸಣ್ಣ ತಾಮ್ರದ ಫ್ಯೂಸ್ ವೈರ್ ಬಳಸುತ್ತಿದ್ದರು. ಇದರಿಂದ ಎಲ್ಲೇ ದೋಷ ಉಂಟಾದರೂ ವಿದ್ಯುತ್ ಸಂಪರ್ಕ ಕಡಿದು ಹೋಗುತ್ತಿತ್ತು. ಈಗ ಈ ಫ್ಯೂಸ್ ವೈರ್ ಬಳಸುತ್ತಿಲ್ಲ. ಅದರಿಂದ ಫ್ಯೂಸ್ ಹೋಗುವುದೇ ಇಲ್ಲ. ಕಂಬದ ಮೂಲಕ ನೆಲಕ್ಕೆ ವಿದ್ಯುತ್ ಹರಡಿಕೊಂಡರೂ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದಿಲ್ಲ. ಹೀಗಾಗಿ ರೈತನ ಹೊಲದಲ್ಲಿರುವ ಕಂಬ ಯಮದೂತನಾಗುವುದು ನಿಶ್ಚಿತ. ಇದಕ್ಕೆ ಪರಿಹಾರ ಇಲ್ಲ ಎಂದು ಎಂಜಿನಿಯರ್‌ಗಳೇ ಹೇಳುತ್ತಾರೆ.
ಎಚ್‌ಟಿ-ಎಲ್‌ಟಿ
ಅತಿ ಹೆಚ್ಚು ವೋಲ್ಟೇಜ್ ವಿದ್ಯುತ್ ಮಾರ್ಗಗಳಲ್ಲಿ ಈ ಸಮಸ್ಯೆ ಇಲ್ಲ. ಅಲ್ಲಿ ಗ್ರೌಂಡಿಂಗ್ ಮತ್ತು ಸಂದೇಶ ರವಾನೆಗೆ ವ್ಯವಸ್ಥೆ ಇದೆ. ಅಲ್ಲಿ ಎಲ್ಲೇ ದೋಷ ಕಂಡು ಬಂದರೂ ವಿದ್ಯುತ್ ಸಂಪರ್ಕ ತಂತಾನೇ ನಿಂತು ಹೋಗುತ್ತದೆ. ಅಲ್ಲದೆ ಎಚ್‌ಟಿ ಮಾರ್ಗ ಎಲ್ಲ ಕಡೆ ಇರುವುದಿಲ್ಲ. ಅದನ್ನು ನಿರ್ವಹಿಸುವುದಕ್ಕೆ ಹೆಚ್ಚು ಸಿಬ್ಬಂದಿ ಬೇಕಿಲ್ಲ. ಎಲ್.ಟಿ. ವಿದ್ಯುತ್ ಮಾರ್ಗ ರಾಜ್ಯದಲ್ಲಿ ೩೯೩೫ ಕಿಮೀ ಇದೆ. ಇವುಗಳು ಬಹುತೇಕ ಗ್ರಾಮೀಣ ಪ್ರದೇಶದಲ್ಲಿವೆ. ಎಚ್.ಟಿ. ಮತ್ತು ಎಲ್‌ಟಿ ಮಾರ್ಗ ಪ್ರಮಾಣ ೧:೪ ರಷ್ಟು ಇರಬಹುದು. ೧:೨ ರಷ್ಟು ಇದ್ದರೆ ಉತ್ತಮ. ಅದರಿಂದ ವಿದ್ಯುತ್ ನಷ್ಟ ಕಡಿಮೆಯಾಗುತ್ತದೆ. ವಿತರಣ ಟ್ರಾನ್ಸ್ಫಾರ್ಮರ್‌ವರೆಗೆ ಎಚ್‌ಟಿ ಮಾರ್ಗ ವಿದ್ಯುತ್ ಕೊಂಡೊಯ್ಯುತ್ತದೆ. ಅಲ್ಲಿಂದ ಕಡಿಮೆ ವಿದ್ಯುತ್ತನ್ನು ಎಲ್‌ಟಿ ಮಾರ್ಗ ಕೊಂಡೊಯ್ಯತ್ತದೆ. ಇದು ಹೆಚ್ಚಿರಬಾರದು. ಟಿಸಿ ಸಮೀಪ ಇದ್ದರೆ ಎಲ್‌ಟಿ ನಿರ್ವಹಣೆ ಸುಲಭ. ಅದು ಕಿಮೀಗಳವರೆಗೆ ಎಳೆದಿದ್ದರೆ ವಿದ್ಯುತ್ ನಷ್ಟ ಅಧಿಕ. ಅಲ್ಲದೆ ನಿರ್ವಹಣೆ ಇರುವುದಿಲ್ಲ. ಲೈನ್‌ಮನ್‌ಗಳು ಕಾಡುಮೇಡುಗಳ ನಡುವೆ ಇವುಗಳನ್ನು ನೋಡಿಕೊಳ್ಳುವುದು ಕಷ್ಟ. ಹಣದ ಅನುಕೂಲ ಇದ್ದ ಕಡೆ ಕೇಬಲ್ ಬಳಸುವುದು ಉತ್ತಮ.
ರೈತನ ಪಾಡು
ವಿದ್ಯುತ್ ಒಂದು ಉಚಿತ ಎನ್ನುವುದನ್ನು ಹೊರತುಪಡಿಸಿದರೆ ಉಳಿದ ಎಲ್ಲ ಕೆಲಸಕ್ಕೂ ಹಣ ಕೊಡಬೇಕು. ರೈತನ ಬಳಿ ನಗದು ಇರುವುದಿಲ್ಲ. ವರ್ಷಕೊಮ್ಮೆ ಬರುವ ಬೆಳೆ, ಅದರಿಂದ ಬರುವ ಹಣ ಯಾವ ಮೂಲೆಗೂ ಸಾಲುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಅವನ ಹೊಲಕ್ಕೆ ಕಾಲಿಡಲು ಗಂ ಬೂಟ್ ಬಳಸಲು ಸಾಧ್ಯವೇ. ಎಷ್ಟೋ ಜನ ಈಗಲೂ ಹೊಲವನ್ನು ಭೂತಾಯಿ ಎಂದು ಚಪ್ಪಲಿ ಹಾಕಿ ಹೋಗೋಲ್ಲ. ಮಳೆಯಲ್ಲೇ ಉಳುಮೆ ಮಾಡಬೇಕು. ವಿದ್ಯುತ್ ಕಂಬದ ಮೂಲಕ ಅಪಾಯ ಇದೆ ಎಂದು ಗೊತ್ತಾದರೂ ಆತ ಅಸಹಾಯಕ. ಸರ್ಕಾರವೇ ಇದಕ್ಕೆ ಪರಿಹಾರ ಕಂಡು ಹಿಡಿಯಬೇಕು.
ಕೆಇಆರ್‌ಸಿ
ರಾಜ್ಯದಲ್ಲಿ ಕೆಇಆರ್‌ಸಿ ಸ್ವಾಯತ್ತ ಸಂಸ್ಥೆ ಇದೆ. ಹಿಂದೆ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ದರ ನಿಗಿಪಡಿಸುವ ಕೆಲಸವನ್ನು ಇದು ಕೈಗೊಳ್ಳುತ್ತಿತ್ತು. ಆಗ ರೈತರ ಸಂಘಟನೆಗಳು ಕೆಇಆರ್‌ಸಿ ನಡೆಸುತ್ತಿದ್ದ ಸಾರ್ವಜನಿಕ ವಿಚಾರಣೆಯಲ್ಲಿ ಹಾಜರಾಗಿ ಆಯೋಗವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದವು. ಸರ್ಕಾರ ೧೦ ಅಶ್ವಶಕ್ತಿವರೆಗೆ ವಿದ್ಯುತ್ ಉಚಿತ ಎಂದು ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದು ರೈತರು ಕೆಇಆರ್‌ಸಿ ಕಡೆ ತಲೆಹಾಕದಂತೆ ಮಾಡಿದವು. ರೈತರ ಸಾವು-ನೋವು ಸಂಭವಿಸಿದರೂ ಕೆಇಆರ್‌ಸಿ ತಲೆಕೆಡಿಸಿಕೊಂಡಿಲ್ಲ. ಇನ್ನು ಗ್ರಾಮೀಣ ಭಾಗದಲ್ಲಿ ನಡೆಯುವ ವಿದ್ಯುತ್ ಅಪಘಾತಗಳ ಬಗ್ಗೆ ಕೆಇಆರ್‌ಸಿ ಚಕಾರ ಎತ್ತಿಲ್ಲ. ವಿದ್ಯುತ್ ಸರಬರಾಜು ೨೪ ಗಂಟೆ ಇರಬೇಕು. ಅದೇರೀತಿ ಸುರಕ್ಷಿತವಾಗಿದೆಯೇ ಎಂಬುದನ್ನು ನೋಡುವುದು ಕೆಇಆರ್‌ಸಿ ಕರ್ತವ್ಯ. ಈ ಕರ್ತವ್ಯವನ್ನು ಆಯೋಗ ಮರೆತಿದೆ. ಇನ್ನು ಜನರ ಸಂರಕ್ಷಣೆಗೆ ಇರುವುದು ವಿದ್ಯುತ್ ಪರಿವೀಕ್ಷಕರು. ಅವರು ಪ್ರತಿ ವಿದ್ಯುತ್ ಅಪಘಾತದಲ್ಲೂ ಸರ್ಕಾರಕ್ಕೆ ವಿವರವಾದ ವರದಿ ನೀಡುತ್ತಿದ್ದಾರೆ. ಅವರ ವರದಿ ವಿದ್ಯುತ್ ಪ್ರಧಾನ ಕಾರ್ಯದರ್ಶಿ ಮತ್ತು ಕೆಇಆರ್‌ಸಿ ಕಚೇರಿಗಳಲ್ಲಿ ಧೂಳು ತಿನ್ನುತ್ತಿದೆ. ಇದು ಅನ್ನದಾತನ ಪರಿಸ್ಥಿತಿ.ರಾಜ್ಯದಲ್ಲಿ ೫ ವಿತರಣ ಕಂಪನಿಗಳಿವೆ. ಅತಿಹೆಚ್ಚು ಪಂಪ್‌ಸೆಟ್ ಹುಬ್ಬಳ್ಳಿ ಕಂಪನಿಯಲ್ಲಿದೆ. ಎಲ್‌ಟಿ ಮಾರ್ಗ ಅತಿ ಹೆಚ್ಚು ಕಲಬುರ್ಗಿ ಕಂಪನಿಯ ವ್ಯಾಪ್ತಿಯಲ್ಲಿದೆ. ಎಚ್‌ಟಿ-ಎಲ್‌ಟಿ ಮಾರ್ಗಗಳ ನಡುವೆ ಅಂತರ ತುಂಬ ಹೆಚ್ಚು. ತಾಳಮೇಳ ಇಲ್ಲ. ಹಿರಿಯ ಎಂಜಿನಿಯರ್ ಆಗಿದ್ದ ರುದ್ರಪ್ಪ ಗುಲ್ಬರ್ಗ ಕಂಪನಿಯ ಅಧ್ಯಕ್ಷರಾಗಿದ್ದಾಗ ಎಲ್‌ಟಿ ಮಾರ್ಗಗಳ ಸಮೀಕ್ಷೆ ನಡೆಸಿ ವರದಿ ಕೊಟ್ಟಿದ್ದರು. ಅದರಂತೆ ಕ್ರಮ ಕೈಗೊಂಡಿದ್ದರೆ ರೈತರ ಸುರಕ್ಷತೆ ಆಗುತ್ತಿತ್ತು. ಎಚ್‌ವಿಡಿಸಿ ಯೋಜನೆ ಮುಂದಕ್ಕೆ ಸಾಗಲೇಇಲ್ಲ. ಎಲ್‌ಟಿ ಮಾರ್ಗದ ಸಮಸ್ಯೆಗೆ ಪರಿಹಾರ ಇಲ್ಲ.