ಮಸಾಜ್ ಪಾರ್ಲರ್ ದಾಳಿಕೋರರ ವಿರುದ್ಧ ಕ್ರಮ
ಅನೈತಿಕ ಕಾರ್ಯಾಚರಣೆ ನಡೆಸುವ ಪಾರ್ಲರ್‌ಗಳಿದ್ದರೆ ದೂರು ಕೊಡಿ, ಅದನ್ನು ಬಿಟ್ಟು ನಾವೇ ಕಾನೂನು ಕೈಗೆತ್ತಿಕೊಳ್ಳುತ್ತೇವೆ ಎನ್ನುವುದು ಸರಿಯಲ್ಲ
ಉಡುಪಿ: ಮಂಗಳೂರಿನಲ್ಲಿ ಮಸಾಜ್ ಪಾರ್ಲರ್ ಮೇಳೆ ದಾಳಿ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಉದ್ದೇಶಕ್ಕೆ ದಾಳಿಯಾಗಿದೆಯೊ ಗೊತ್ತಿಲ್ಲ. ಆದರೆ, ದಾಳಿ ಮಾಡಿದವರನ್ನು ತಕ್ಷಣ ಬಂಧಿಸಲು ಸೂಚಿಸಿದ್ದೇನೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಪೋಲಿಸರಿಗೆ ಸೂಚನೆ ಕೊಟ್ಟಿದ್ದೇನೆ. ಇಂಥ ಕೃತ್ಯಗಳು ನಡೆಯಬಾರದು ಮತ್ತು ಯಾರಿಗೂ ವ್ಯಾಪಾರ ಮಾಡಲು ಅಡ್ಡಿಪಡಿಸಬಾರದು. ಪ್ರತಿಯೊಬ್ಬರಿಗೂ ಕೆಲಸ ಮಾಡಿಕೊಳ್ಳುವ ಹಕ್ಕು ಇದೆ. ಯಾರು ಕೂಡಾ ಕಾನೂನು ಕೈಗೆತ್ತಿಕೊಳ್ಳಬಾರದು. ದಾಳಿ ಮಾಡಿದವರು ಯಾರು ಎಂದು ಗುರುತಿಸುತ್ತೇವೆ, ಏನು ಕ್ರಮ ಎನ್ನುವುದನ್ಬು ಇಲಾಖೆ ನಿರ್ಧರಿಸುತ್ತದೆ ಎಂದರು.
ಅನೈತಿಕ ಕಾರ್ಯಾಚರಣೆ ನಡೆಸುವ ಪಾರ್ಲರ್ ಗಳಿದ್ದರೆ ದೂರು ಕೊಡಿ, ಅದನ್ನು ಬಿಟ್ಟು ನಾವೇ ಕಾನೂನು ಕೈಗೆತ್ತಿಕೊಳ್ಳುತ್ತೇವೆ ಎನ್ನುವುದು ಸರಿಯಲ್ಲ. ದೂರು ಕೊಟ್ಟರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಉದ್ಯಮ ಮಾಡುವವರಿಗೆ ಕಾರ್ಪೊರೇಷನ್ ನವರು ಟ್ರೇಡ್ ಲೈಸೆನ್ಸ್ ಕೊಟ್ಟಿರುತ್ತಾರೆ. ಯಾವ ಕಂಡೀಶನ್ ಹಾಕಿ ಕೊಟ್ಟಿರುತ್ತಾರೆಯೋ ಅದನ್ನು ಪಾಲಿಸದಿದ್ದರೆ ಕ್ರಮ ತೆಗೆದುಕೊಳ್ಳುತ್ತಾರೆ. ನಿಯಮಾವಳಿ ಮೀರಿ ವರ್ತಿಸಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.