ಮಹಾಸಂಘದ ಮಹಾಮಹಿಮರು
ಅದ್ವಿತೀಯ ಸಂನ್ಯಾಸಿ ವಿದ್ವಾಂಸರ ತವರುಮನೆ ರಾಮಕೃಷ್ಣ ಮಿಶನ್ ರಾಷ್ಟ್ರೀಯ ಜಾಗೃತಿ, ಧರ್ಮ-ಸಂಸ್ಕೃತಿಯ ಪುನರುತ್ಥಾನ, ಮೌಲ್ಯಾದರ್ಶಗಳ ಗಂಗೋತ್ರಿಯಂತೆ. ಶ್ರೇಷ್ಠ ಪರಂಪರೆಯ ಮಾರ್ಗದರ್ಶನದಡಿ ಆಧ್ಯಾತ್ಮಪ್ರಸಾರದ ಯಜ್ಞದಲ್ಲಿ ನಿರತರಾಗಿರುವ ಸಾವಿರಾರು ಸಾಧುಗಳು ಶತವರ್ಷಗಳಿಂದೀಚೆಗೆ ಭಾರತಾಭ್ಯುದಯಕ್ಕೆ ಸಲ್ಲಿಸಿರುವ ಕಾಣಿಕೆ ಅನನ್ಯ. ಜೀವನದುದ್ದಕ್ಕೂ ಶ್ರೀರಾಮಕೃಷ್ಣ, ಶ್ರೀಮಾತೆ ಶಾರದಾದೇವೀ, ಸ್ವಾಮೀ ವಿವೇಕಾನಂದರ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಗರ್ವಿ ವ್ಯಕ್ತಿತ್ವದ ಮಗುಮನದ ಸಂತಸಮೂಹವನ್ನು ಮುನ್ನಡೆಸಿದ ಕೀರ್ತಿವಂತರು ಹಲವರು. ಪ್ರಖರ ರಾಷ್ಟ್ರೀಯತೆಯನ್ನೇ ಉಸಿರಾಗಿಸಿ, ದೇಸೀ ಚಿಂತನೆಯನ್ನು ಪಸರಿಸಿ, ಆತ್ಮೋದ್ಧಾರದಿಂದ ರಾಷ್ಟ್ರೋದ್ಧಾರವೆಂಬ ಸೂತ್ರದಿಂದ ವಿಶ್ವಕಲ್ಯಾಣದ ಮಹಾಹಿತವನ್ನು ಸಾಧಿಸಲು ತಮ್ಮ ಜೀವನವನ್ನು ಚಂದನದಂತೆ ತೇಯ್ದ ಸ್ವಾಮಿ ಅಖಂಡಾನಂದರು ಮತ್ತು ಸ್ವಾಮಿ ಪುರುಷೋತ್ತಮಾನಂದರು ಸರ್ವದಾ ಸ್ಮರಣೀಯ ಸಾಧುಸಿಂಹರು.
ಗುಡಿಕೈಗಾರಿಕೆಗಳ ಸಮರ್ಪಕ ಅನುಷ್ಠಾನ ಹಾಗೂ ನಿರ್ವಹಣೆಯ ಮೂಲಕ ಸ್ವಾವಲಂಬಿ ಭಾರತದ ಸುಂದರಚಿತ್ರಣವನ್ನಿತ್ತ ಮಾತೃಹೃದಯಿ ಮೇಧಾವಿ ಸ್ವಾಮಿ ಅಖಂಡಾನಂದರು ಶ್ರೀರಾಮಕೃಷ್ಣ ಪರಮಹಂಸರ ನೇರಶಿಷ್ಯ. ಸಂಪ್ರದಾಯದ ಗೆರೆ ದಾಟದ ವ್ಯಕ್ತಿ ತ್ಯಾಗಸೇವೆಗಳ ಉನ್ನತ ಆದರ್ಶಗಳಿಗೆ ತಲೆಬಾಗಿ ಜೀವಸೇವೆಯಲ್ಲೇ ಈಶಸೇವೆಯ ಪರಮಾನಂದ ಹೊಂದಬಹುದೆಂಬ ಸತ್ಯಕ್ಕೆ ಸಾಕ್ಷಿ ಸ್ವಾಮಿ ಅಖಂಡಾನಂದರು. ಕಲ್ಕತ್ತೆಯ ಅರ್ಚಕ ಹಾಗೂ ಸಂಸ್ಕೃತ ಅಧ್ಯಾಪಕ ಶ್ರೀಮಂತ ಗಂಗೋಪಾಧ್ಯಾಯ-ಸುಂದರಿದೇವಿ ದಂಪತಿಗಳಿಗೆ ಜನಿಸಿದ ಗಂಗಾಧರರಿಗೆ ಪ್ರಾಚೀನ ಪರಂಪರಾಗತ ಆಚಾರ ವ್ಯವಹಾರಗಳಲ್ಲೇ ಆಸಕ್ತಿ. ಇನ್ನೊಬ್ಬರ ಕಷ್ಟ, ದು:ಖಗಳಿಗೆ ಮರುಗಿ ಸಹಕರಿಸುವ ಉದಾರಮನದ ಬಾಲಕ ತನ್ನ ಸ್ನೇಹಿತರಿಗೆ ಬಟ್ಟೆ, ಭಿಕ್ಷುಕರಿಗೆ ಹೊಟ್ಟೆತುಂಬಾ ಊಟ ನೀಡುತ್ತಿದ್ದುದೇ ಸೇವಾದೃಷ್ಟಿಯ ವಿಕಾಸಕ್ಕೆ ನಾಂದಿ ಹಾಡಿತು. ಓದಿನಲ್ಲೂ ಮುಂದಿದ್ದ ಗಂಗಾಧರ ಶಿಕ್ಷಣದ ಬಳಿಕ ಸ್ವಲ್ಪ ಸಮಯ ಅಂಗಡಿಯಲ್ಲಿ ಕೆಲಸಕ್ಕಿದ್ದು ಕುಟುಂಬಕ್ಕೆ ಆಧಾರವಾದರೂ ಆಧ್ಯಾತ್ಮದ ಸೆಳೆತ ಬಲವಾಗಿತ್ತು. ದಕ್ಷಿಣೇಶ್ವರದ ಅರ್ಚಕ ಶ್ರೀರಾಮಕೃಷ್ಣರ ಭೇಟಿ ಹೊಸ ಹುರುಪಿತ್ತು, ಸಂಪ್ರದಾಯದ ಚೌಕಟ್ಟಿನಲ್ಲೇ ಮನಸ್ಸಿಗೆ ಬೇಲಿಹಾಕಿದ್ದ ತರುಣನಿಗೆ ಆಧುನಿಕ ಪ್ರಪಂಚಕ್ಕೆ ಯೋಗ್ಯವಾದ ಸಲಹೆ ಲಭಿಸಿ ವಿವೇಕಾನಂದರ ಸಖ್ಯವೂ ದೊರೆಯಿತು. ಪರಮಹಂಸರ ಯುಗಾಂತ್ಯದ ಬಳಿಕ ಬುದ್ಧಗಯೆ, ಹಿಮಾಲಯಕ್ಕೆ ತೆರಳಿ ವೇದಾಂತ ಅಧ್ಯಯನಗೈದು ಕೇದಾರ, ಬದರಿ, ಟಿಬೇಟಿಗೂ ಭೇಟಿಯಿತ್ತರು. ಜ್ಞಾನದ ಹುಡುಕಾಟದಲ್ಲಾದ ಸಾಧಕರ ಸಂಪರ್ಕದಿಂದ ದೊರೆತ ಅವರ್ಣನೀಯ ಆನಂದವನ್ನು ನಷ್ಟಗೊಳಿಸದೆ ಸಂನ್ಯಾಸ ಸ್ವೀಕರಿಸಿ ಸ್ವಾಮಿ ಅಖಂಡಾನಂದರಾದರು. ದುಡ್ಡು, ಬಟ್ಟೆಯ ಗಂಟು ಒಯ್ಯದೆ ವರ್ಷಗಟ್ಟಲೆ ಪ್ರವಾಸಗೈವ ವಿಶೇಷ ಸಾಮರ್ಥ್ಯದ ಸ್ವಾಮೀಜಿ ಭಗವದ್ಗೀತೆಯ ಶ್ರೀಧರಟೀಕಾ, ವ್ಯಾಕರಣ, ಆಯುರ್ವೇದ, ರಾಮಾಯಣ ಮೊದಲಾದ ಗ್ರಂಥಗಳ ಪರಿಪೂರ್ಣ ಅಭ್ಯಾಸ ನಡೆಸಿದರು. ಆರೋಗ್ಯ ಕೆಟ್ಟಾಗ ಶಾರದಾಮಾತೆಯ ಪದತಲದಲ್ಲಿ ಶಿರಬಾಗಿ ಅವರ ಮಮತೆಯ ಆರೈಕೆಯಿಂದ ಗುಣಮುಖರಾಗಿ ಮತ್ತೆ ಸಾಧನಾಪಥದತ್ತ ಮುಖಮಾಡುತ್ತಿದ್ದ ಸ್ವಾಮೀಜಿ ನಂಬಿಕೆ ಮತ್ತು ಭಗವಚ್ಚಿತ್ತ ಸಿದ್ಧಿಯ ಸಮಪಾಕ. ಸ್ವಾಮಿ ವಿವೇಕಾನಂದರ ವಿಜಯಯಾತ್ರೆಯ ಬಳಿಕ ರಾಮಕೃಷ್ಣ ಮಿಶನ್ ಕಾರ್ಯಗಳಿಗೆ ವೇಗ ದೊರಕಿ ಸ್ವಾಮಿ ಅಖಂಡಾನಂದರು ಜೀವಸೇವೆಯತ್ತ ಹೊರಳಿದರು. ವೈಯಕ್ತಿಕ ಆಧ್ಯಾತ್ಮ ಸಾಧನೆ ಸಂನ್ಯಾಸಧರ್ಮದ ಒಂದು ಭಾಗವಾದರೆ, ಬಡವರು, ಅನಕ್ಷರಸ್ಥರು, ಅಜ್ಞಾನಿಗಳಲ್ಲಿ ದೇವರನ್ನು ಕಂಡು ಅವರ ಯೋಗಕ್ಷೇಮದ ಮೂಲಕ ಭಗವದ್ದರ್ಶನ ಸಾಧ್ಯವೆಂಬುದನ್ನು ಬಲವಾಗಿ ನಂಬಿ ಅದರತ್ತ ಹೆಜ್ಜೆ ಹಾಕಿ ಯಶಸ್ವಿಯಾದರು.
ಖೇತ್ರಿ ರಾಜ ಅಜಿತ ಸಿಂಹರನ್ನು ಅನುಗ್ರಹಿಸಿದ ಸ್ವಾಮೀಜಿ, ಸಂಸ್ಥಾನದ ಮೂಲಕ ಶಿಕ್ಷಣ ಸಂಸ್ಥೆಯನ್ನು, ವೇದಶಾಲೆಯನ್ನು ಆರಂಭಿಸಲು ಪ್ರೇರಣೆಯಾದರು. ಭಾರತೀಯ ಚಿಂತನೆಯನ್ನು ಜಾಗೃತಗೊಳಿಸುವ ಶಿಕ್ಷಣವನ್ನು ನೀಡದ ಹೊರತು ದೇಶವು ಸ್ವಾತಂತ್ರ್ಯದ ಸವಿಯನ್ನು ಅನುಭವಿಸಲು ಸಾಧ್ಯವಿಲ್ಲವೆಂದು ಅರಿತು ದೇಸೀಶಿಕ್ಷಾ ಪದ್ಧತಿಯ ಪ್ರಸಾರಕ್ಕಾಗಿ ಸಂಸ್ಥಾನಕ್ಕೆ ಮಾರ್ಗದರ್ಶನವಿತ್ತರು. ಸ್ವಯಂ ಅಕ್ಕಿಮೂಟೆ ಹೊತ್ತು ಜನಸೇವೆಗೈದು ಅನಾಥಾಲಯ, ವಿದ್ಯಾಸಂಸ್ಥೆಗಳ ಸ್ಥಾಪನೆಗೆ ಒತ್ತು ನೀಡಿದ ಸ್ವಾಮೀಜಿ, ಹಳ್ಳಿಗಳು ಸ್ವಾವಲಂಬನೆಯತ್ತ ಹೆಜ್ಜೆ ಹಾಕಿದರೆ ರಾಷ್ಟçದ ಪ್ರಗತಿ ದೂರದ ಮಾತಲ್ಲವೆಂಬ ಕಲ್ಪನೆಯನ್ನು ಸಾಕಾರಗೊಳಿಸಲು ಗುಡಿಕೈಗಾರಿಕೆ, ಕೃಷಿ, ಮಹಿಳಾ ಸ್ವಉದ್ಯೋಗವನ್ನು ಪ್ರೋತ್ಸಾಹಿಸಿದರು. ಆಧ್ಯಾತ್ಮದ ಔನ್ನತ್ಯ ತಲುಪಿದ ಸಾಧಕ ಯಾವ ಕಾರ್ಯವನ್ನೂ ಕೀಳೆಂದು ಭಾವಿಸದೆ ಎಲ್ಲವನ್ನೂ ಭಗವಂತನಿಗರ್ಪಿಸಿ ಕೃತಕೃತ್ಯನಾಗುವುದೇ ಸಂನ್ಯಾಸದ ಉದ್ದೇಶವೆಂಬುದನ್ನು ಸ್ವಯಂ ನಿರೂಪಿಸಿ, ರಾಮಕೃಷ್ಣ ಮಹಾಸಂಘದ ತೃತೀಯ ಅಧ್ಯಕ್ಷರಾಗಿ ಸಾಮಾಜಿಕ ವಿಕಾಸವೇ ಆಧ್ಯಾತ್ಮದ ಗುರಿಯೆಂದು ಸಾರಿದರು. ಜೀವಸೇವಾತತ್ವಕ್ಕೆ ಹೊಸ ಹೊಳಹನ್ನಿತ್ತು, ವಿಶಿಷ್ಟ ಕಾರ್ಯಚಟುವಟಿಕೆ ಮತ್ತು ಸಂಘಟನಾತ್ಮಕ ನೀತಿಗಳ ಮೂಲಕ ರಾಮಕೃಷ್ಣ ಮಿಶನ್ನಿನ ವೇಗಕ್ಕೆ ಕಾರಣರಾದ ಸ್ವಾಮಿ ಅಖಂಡಾನಂದರ ಸಂನ್ಯಾಸದೀಕ್ಷಾ ದಿನ ಚಿರಸ್ಮರಣೀಯ.
ಸಾಮಾಜಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ಮೌಲಿಕ, ರಾಷ್ಟ್ರೀಯ ವಿಚಾರಗಳನ್ನು ಯುವಮನಗಳಿಗೆ ತಲುಪಿಸುತ್ತಿರುವ ರಾಮಕೃಷ್ಣ ಮಿಶನ್ ಪರಂಪರೆಯಲ್ಲಿ ಬೆಳೆದು, ದಿವ್ಯತ್ರಯರ ಪುಣ್ಯಜೀವನ ಕಥಾಮೃತವನ್ನು ಕನ್ನಡಿಗರಿಗೆ ಒದಗಿಸಿದ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರು, ನಗುಮೊಗದ ಸಂತರೆಂದೇ ಸುಪ್ರಸಿದ್ಧರು. ಉಡುಪಿಯ ಸಾಲಿಗ್ರಾಮದ ಜನಾರ್ದನ ಬಾಯರಿ-ಲಕ್ಷ್ಮೀ ಅಮ್ಮ ದಂಪತಿಗಳಿಗೆ ಜನಿಸಿದ ರಾಮಚಂದ್ರ ಬಾಯರಿ, ವಿದ್ಯಾ ವಿನಯಸಂಪನ್ನ ಕುಶಾಗ್ರಮತಿ ವಿದ್ಯಾರ್ಥಿ. ಶಿಕ್ಷಣದ ಬಳಿಕ ಕೆಲಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸುವ ವೇಳೆ ಓದಿದ ರಾಮಕೃಷ್ಣ ವಚನವೇದ, ದರ್ಶಿಸಿದ ಬೇಲೂರು ಮಠ, ಕಾಳಿಮಂದಿರ ಬದುಕಿನಲ್ಲಿ ಹೊಸ ತಿರುವಿತ್ತಿತು. ಆಧ್ಯಾತ್ಮಿಕ ಹಸಿವಿಂಗಿಸಲು ಬೆಂಗಳೂರಿನ ರಾಮಕೃಷ್ಣ ಆಶ್ರಮಕ್ಕೆ ತೆರಳಿ ಸ್ವಾಮಿ ಯತೀಶ್ವರಾನಂದರ ಮಾರ್ಗದರ್ಶನದಡಿ ಯೋಗ್ಯ ತರಬೇತಿ ಪಡೆದು ಸ್ವಾಮಿ ಪುರುಷೋತ್ತಮಾನಂದರಾದರು. ದಿನದ ಬಹುಪಾಲು ಸಮಯವನ್ನು ಜ್ಞಾನಯಜ್ಞಕ್ಕೆಂದೇ ಮೀಸಲಿಟ್ಟು, ಮೂವತ್ಮೂರು ವರ್ಷಗಳ ಕಾಲ ಬೆಂಗಳೂರನ್ನು ಕೇಂದ್ರವಾಗಿಸಿ ವಿವೇಕಾನಂದ ಬಾಲಕ ಸಂಘ, ವಿವೇಕಾನಂದ ಯುವಕ ಸಂಘ ಸ್ಥಾಪಿಸಿ ಎಳೆಯರ ಮನದಲ್ಲಿ ಸದ್ವಿಚಾರಗಳ ಬೀಜ ಬಿತ್ತಿದ ಸ್ವಾಮೀಜಿ ತರುಣರನ್ನು ರಾಷ್ಟ್ರೀಯ ವಿಚಾರಗಳೆಡೆ ಆಕರ್ಷಿಸುತ್ತಿದ್ದ ರೀತಿ ಅನನ್ಯ. ಅರುವತ್ತು ದಾಟಿದವರಿಗೆ ಆಧ್ಯಾತ್ಮವೆಂಬ ಭಾವನೆಯನ್ನು ದೂರೀಕರಿಸಿ ತಮ್ಮ ಸರಳಸಹಜ ನಿರೂಪಣಾಶೈಲಿಯಿಂದ ಜಿಜ್ಞಾಸುಗಳ ವಿಶ್ವಕೋಶವಾದರು. ಪೊನ್ನಂಪೇಟೆ ಆಶ್ರಮದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿ ಆಧ್ಯಾತ್ಮ ಮೇಳ ಹಾಗೂ ನೈತಿಕ ಶಿಕ್ಷಣ ತರಬೇತಿ ಕಾರ್ಯಾಗಾರ ಕೈಗೊಂಡು ಸಂಪಾದಿಸಿದ ಜನಪ್ರೀತಿ ಅಪಾರ. ಆತ್ಮೀಯ ಭಾವ, ಮಗುವಿನ ನಗು, ಆಬಾಲವೃದ್ಧರೊಡನೆ ಸಮನಾಗಿ ಬೆರೆಯುವ ಮನೋಭಾವ, ಸಿರಿಕಂಠದ ಭಜನೆ, ಉತ್ಕೃಷ್ಟ ವಿಚಾರಗಳ ಉಪನ್ಯಾಸಗಳಿಂದ ಭಾರತಸತ್ವಜಾಗೃತಗೊಳಿಸಿದ ಸ್ವಾಮೀಜಿಯ ಮಾತುಗಳು ಜೇನಿನ ಹೊಳೆಯಂತೆ, ನಿರ್ಮಲಗಂಗೆಯಂತೆ, ಕಾಮಧೇನುವಿನ ಕ್ಷೀರದಂತೆ.
ವಿವೇಕಾನಂದರು ಬೆಳಗಾವಿಗೆ ಭೇಟಿಯ ವೇಳೆ ತಂಗಿದ್ದ ಕಟ್ಟಡವನ್ನು ಸರಕಾರ ಮಠಕ್ಕೆ ಹಸ್ತಾಂತರಿಸುವಾಗ ಅದರ ಸ್ಥಿತಿ ಶೋಚನೀಯವಾಗಿತ್ತು. ಸಹಜ ವಿರೋಧ, ಅನಾದರಗಳನ್ನು ತೃಣೀಕರಿಸಿ ಕಾಲಿಗೆ ಚಕ್ರ ಕಟ್ಟಿದಂತೆ ಓಡಾಡಿ ಸೌಧದ ಪುನರುತ್ಥಾನಗೈದು ಸ್ಮರಣೀಯ ಕಾರ್ಯದ ಭಾಗೀದಾರರಾದ ಸ್ವಾಮೀಜಿ, ಸರ್ವೋತ್ಕೃಷ್ಟ ಲೇಖಕರೆಂಬುದು ಜನಜನಿತ. ಸ್ವಾಮಿ ವಿವೇಕಾನಂದರ ಜೀವನಕಥನದ ಅತ್ಯುತ್ಕೃಷ್ಟ ಕೃತಿಗಳೆಂಬ ಗೌರವಕ್ಕೆ ಪಾತ್ರವಾದ ವೀರಸಂನ್ಯಾಸಿ, ವಿಶ್ವವಿಜೇತ, ವಿಶ್ವಮಾನವ, ಯುಗಾವತಾರ ಶ್ರೀ ರಾಮಕೃಷ್ಣ, ಶ್ರೀಶಾರದಾದೇವಿ ಜೀವನಗಂಗಾ, ಕಬೀರ ಬೀರಿದ ಬೆಳಕು, ಶಕ್ತಿಶಾಲಿ ವ್ಯಕ್ತಿತ್ವ ನಿರ್ಮಾಣ, ಯಶಸ್ಸಿನ ರಹಸ್ಯ, ಹಸ್ತಾಮಲಕ ಸ್ತೋತ್ರಮ್, ಪ್ರಯತ್ನವೇ ಪರಮೇಶ್ವರ, ಬ್ಯುಲ್ಡ್ ಯುವರ್ ಪರ್ಸನಾಲಿಟಿ, ವೀರ ನರೇಂದ್ರ, ಮ್ಯಾನ್ ಆ್ಯಂಡ್ ಮನಿ, ಸಿಕ್ರೆಟ್ ಆಫ್ ಕಾನ್ಸಂಟ್ರೇಶನ್ ಮೊದಲಾದ ಅನೇಕ ಬೋಧಪ್ರದ ಪುಸ್ತಕಗಳನ್ನೂ, ಧ್ವನಿಮುದ್ರಿಕೆಗಳನ್ನೂ ಹೊರತಂದ ಸ್ವಾಮೀಜಿ ಕನ್ನಡಿಗರ ಪಾಲಿಗೆ ವಿವೇಕಸುಧೆ ಒದಗಿಸಿದ ವಿದ್ಯಾವಾರಿಧಿ. ಲಕ್ಷಾಂತರ ವಿದ್ಯಾರ್ಥಿಗಳ ಜೀವನದಲ್ಲಿ ಹೊಸಬೆಳಕು ಮೂಡಿಸಿ, ಬದುಕಿನ ಗುರಿನಿರ್ಣಯಕ್ಕೆ ಅವಕಾಶವಿತ್ತ ವಿದ್ಯಾರ್ಥಿಗೊಂದು ಪತ್ರ ಪುಸ್ತಕ ಅದೆಷ್ಟೋ ಮನಸ್ಸುಗಳನ್ನು ಅರಳಿಸಿ ಮಹೋನ್ನತ ಆದರ್ಶದತ್ತ ಹೆಜ್ಜೆ ಹಾಕುವಂತೆ ಮಾಡಿದೆ. ಗುರಿಯತ್ತ ಧಾವಿಸಿ ಸಫಲ ಜೀವನದ ಸವಿಯುಣ್ಣುವ ದೀಕ್ಷೆಯನ್ನು ನಾಡಶಿಲ್ಪಿಗಳಿಗಿತ್ತ ಮಹಾಗುರು ಪುರುಷೋತ್ತಮಾನಂದರು ಅನೇಕ ಸ್ವಯಂಸೇವಾ ಸಂಘಟನೆಗಳು, ಸತ್ಸಂಗ ಕೇಂದ್ರಗಳು, ಚಿಂತನಾ ಕೂಟಗಳ ಲೋಕಾರ್ಪಣೆಗೆ ಕಾರಣರಾಗಿ ಸ್ವತಂತ್ರ ಆಶ್ರಮಗಳ ಸ್ಥಾಪನೆಗಳಿಗೂ ಪ್ರೇರಣೆಯಿತ್ತರು. ತಮ್ಮ ನಲ್ವತ್ತೈದು ವರ್ಷಗಳ ಸಂನ್ಯಾಸ ಜೀವನದಲ್ಲಿ ಸಮಾಜಕ್ಕೆ ಅನಂತ ಆತ್ಮವಿಶ್ವಾಸವನ್ನಿತ್ತು ಮಾತೃಮಮತೆಯಿತ್ತು ಸಲಹಿದ ಸ್ವಾಮಿ ಪುರುಷೋತ್ತಮಾನಂದರ ಜನ್ಮದಿನ ಉದ್ಯಾನಕ್ಕೆ ಸಿದ್ಧರಾಗಿರುವ ಪ್ರತಿಯೊಬ್ಬರಿಗೂ ಸ್ಫೂರ್ತಿಪರ್ವ.