ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮಾತಿನ ಕಿಡಿ ಸಂಸದೀಯ ನಡವಳಿಕೆಗೆ ಸಂಚಕಾರ

02:30 AM Dec 21, 2024 IST | Samyukta Karnataka

ಲೋಕಸಭೆ ಮತ್ತು ಬೆಳಗಾವಿಯ ವಿಧಾನಸಭೆಯ ಮೇಲ್ಮನೆಯಲ್ಲಿ ತಲೆ ಎತ್ತಿನ ಮಾತಿನ ಕಿಡಿಯಿಂದ ಸದನದ ಒಳಗೆ ಹೊರಗೆ ಪ್ರತಿಭಟನೆ-ಸಂಘರ್ಷ ನಡೆಯುತ್ತಿರುವುದು ನಿಜಕ್ಕೂ ದುಃಖದ ಸಂಗತಿ. ಈ ಘಟನೆಗಳು ನಡೆಯಬಾರದಿತ್ತು. ಸಂಸತ್ತಿನಲ್ಲಿ ಸಂವಿಧಾನದ ಮೇಲೆ ಚರ್ಚೆ ನಡೆಯುವಾಗಲೇ ಮಾತಿನ ಚಕಮಕಿಯಿಂದ ಆರಂಭವಾಗಿ ಈಗ ದ್ವೇಷದ ವಾತಾವರಣ ರೂಪಿಸುವಷ್ಟು ವಿವಿಧ ಸ್ವರೂಪ ಪಡೆಯುತ್ತಿದೆ. ಅದೇರೀತಿ ರಾಜ್ಯ ವಿಧಾನಮಂಡಲದ ಮೇಲ್ಮನೆಯಲ್ಲಿ ಅದೇ ಚರ್ಚೆಯ ಸಮಯದಲ್ಲಿ ಸಚಿವೆಯ ಮೇಲೆ ಪ್ರತಿಪಕ್ಷದ ಸದಸ್ಯರೊಬ್ಬರು ಮಾಡಿದ ವೈಯುಕ್ತಿಕ ಆರೋಪ ಈಗ ರಾಜ್ಯಾದ್ಯಂತ ಪ್ರತಿಭಟನೆಗೆ ಕಾರಣವಾಗಿದೆ.
ಇದು ಮುಂದಿನ ದಿನಗಳಲ್ಲಾದರೂ ನಡೆಯತ್ತದೆ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುವುದು ಅಗತ್ಯ. ಡಾ. ಅಂಬೇಡ್ಕರ್ ಉತ್ತಮ ಸಂಸದೀಯ ಪಟು. ಅವರು ಹೆಸರು ಹೇಳುವಾಗಲೇ ನಮ್ಮ ಜನಪ್ರತಿನಿಧಿಗಳು ಸಂಸದೀಯ ನಡವಳಿಕೆಯನ್ನು ಮೀರಿದ್ದು ವಿಪರ್ಯಾಸ. ಹಿಂದೆ ಸಂಸತ್ತಿನಲ್ಲಿ ಜವಾಹರ ಲಾಲ್ ನೆಹರೂ ಮತ್ತು ರಾಂ ಮನೋಹರ ಲೋಹಿಯಾ ಇಬ್ಬರೂ ಇದ್ದರು. ಇಬ್ಬರ ವಿಚಾರಧಾರೆ ವಿಭಿನ್ನ. ಆದರೆ ಅವರು ಉತ್ತಮ ಸಂಸದೀಯ ಪಟುಗಳಾಗಿದ್ದರು. ವಿಷಯದ ಮೇಲೆ ಆಳವಾದ ಅಧ್ಯಯನ. ಸಕಾರಾತ್ಮಕ ನಿಲುವು ಚರ್ಚೆಯನ್ನು ಸಾರ್ಥಕಗೊಳಿಸುತ್ತಿತ್ತು. ಅದೇರೀತಿ ಅಟಲ್ ಬಿಹಾರಿ ವಾಜಪೇಯಿ. ಪ್ರತಿಪಕ್ಷದ ನಾಯಕರಾಗಿ ಅವರು ವರ್ತಿಸುತ್ತಿದ್ದ ರೀತಿ ಇಂದಿಗೂ ಅನುಕರಣೀಯ. ಅಂಥ ಭವ್ಯ ಪರಂಪರೆಯನ್ನು ಹೊಂದಿರುವ ಸಂಸತ್ತು ಸಂಸದೀಯ ನಡವಳಿಕೆಯಿಂದ ದೂರ ಸರಿಯಬಾರದು. ಇಡೀ ಜನಸ್ತೋಮ ಸಂಸತ್ತಿನ ಕಲಾಪಗಳನ್ನು ವೀಕ್ಷಿಸಿರುತ್ತಾರೆ. ಅವರಿಗೆ ಉತ್ತಮ ಸಂದೇಶ ನೀಡುವ ಕೆಲಸವನ್ನು ನಮ್ಮ ಸಂಸದರು ಮಾಡಬೇಕು.
ಅದೇರೀತಿ ಕರ್ನಾಟಕದ ಮೇಲ್ಮನೆಗೆ ದೊಡ್ಡ ಇತಿಹಾಸವಿದೆ. ಸ್ವಾತಂತ್ರ ಪೂರ್ವದಲ್ಲೇ ಮೈಸೂರು ಅರಸರ ಕಾಲದಲ್ಲಿ ತಲೆ ಎತ್ತಿದ ಪ್ರಜಾಪ್ರತಿನಿಧಿ ಸಭೆ ಸ್ವಾತಂತ್ರದ ನಂತರ ಮೇಲ್ಮನೆಯಾಯಿತು. ಅಲ್ಲಿಯ ಸದಸ್ಯರು ಹಿರಿಯರು. ಅವರು ಇತರರಿಗೆ ಮಾದರಿಯಾಗಬೇಕು. ಡಾ. ಎಂ.ಆರ್. ತಂಗಾ ಮತ್ತು ಡಾ. ವಿ.ಎಸ್. ಆಚಾರ್ಯ ಪ್ರಾತಃಸ್ಮರಣೀಯರು. ಅವರು ಸದನದಲ್ಲಿ ಎದ್ದು ನಿಂತರೆ ಮುಖ್ಯಮಂತ್ರಿಯಿಂದ ಹಿಡಿದು ಎಲ್ಲ ಸದಸ್ಯರು ಸದೇಕಚಿತ್ತದಿಂದ ಕೇಳುತ್ತಿದ್ದರು. ಅವರು ಸದನದ ಆಸ್ತಿಯಾಗಿದ್ದರು. ಅದೇರೀತಿ ವಿಧಾನಸಭೆಯಲ್ಲಿ ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ ಮಾತುಗಳು ಇಂದಿಗೂ ಅರ್ಥಪೂರ್ಣ. ಸ್ಪೀಕರ್ ಆಗಿ ಚಂದ್ರೇಗೌಡ ನಡೆದಿಕೊಂಡ ರೀತಿ ಕಣ್ಣಿಗೆ ಕಟ್ಟಿದಂತಿದೆ ಇಂಥ ಪರಂಪರೆ ಮುಂದುವರಿಯಬೇಕು.
`ಮಾತು ಮಾತು ಮಥಿಸಿದಾಗ ನಾದದ ನವನೀತ' ಎಂಬ ಕವಿವಾಣಿ ನಿಜವಾಗಬೇಕು ಎಂದರೆ ನಮ್ಮ ಪ್ರತಿನಿಧಿಗಳು ಮಾತಿನ ಮೇಲೆ ಹಿಡಿತ ಹೊಂದಿರಬೇಕು. ನಮ್ಮ ಪ್ರತಿನಿಧಿಗಳಿಗೆ ವಿಶೇಷ ಅಧಿಕಾರ ನೀಡಿ ಮುಕ್ತವಾಗಿ ಚರ್ಚಿಸಲು ಅವಕಾಶ ನೀಡಿದ್ದೇವೆ. ಅಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಸ್ಪೀಕರ್ ತೆಗೆದುಕೊಳ್ಳುವ ತೀರ್ಮಾನ ಅಂತಿಮ. ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಬರುವುದಿಲ್ಲ. ಇಷ್ಟು ಅಪರಿಮಿತ ಅಧಿಕಾರ ಹೊಂದಿದ ಜನಪ್ರತಿನಿಧಿಗಳು ಹೊಣೆಗಾರಿಕೆಯಿಂದ ವರ್ತಸಬೇಕೆಂದು ಜನ ಅಪೇಕ್ಷಿಸುತ್ತಾರೆ. ಇದುವರೆಗೆ ನಮ್ಮ ಮೇಲ್ಮನೆ ತನ್ನ ಭವ್ಯ ಪರಂಪರೆಯನ್ನು ಕಾಯ್ದುಕೊಂಡು ಬಂದಿದೆ. ಅದು ಮುಂದುವರಿಯಬೇಕು. ಪ್ರಜಾಪ್ರಭುತ್ವ ಸದೃಢಗೊಳ್ಳಬೇಕು ಎಂದರೆ ವಿಧಾಮಂಡಲ ಮತ್ತು ಸಂಸತ್ತು ಅರ್ಥಪೂರ್ಣವಾಗಿ ನಡೆಯಬೇಕು. ಇತ್ತೀಚಿನ ದಿನಗಳಲ್ಲಿ ಸಂಸತ್ತು ಮತ್ತು ವಿಧಾನಮಂಡಲಗಳ ಅಧಿವೇಶನ ಹೆಚ್ಚು ದಿನಗಳು ನಡೆಯುತ್ತಿಲ್ಲ. ಅರ್ಥಪೂರ್ಣ ಹಾಗೂ ಪರಿಣಾಮಕಾರಿಯಾದ ಚರ್ಚೆಗಳು ಕಂಡು ಬರುತ್ತಿಲ್ಲ. ಪ್ರತಿಪಕ್ಷಗಳ ಸದಸ್ಯರು ಪ್ರತಿ ವಿಷಯದ ಮೇಲೆ ಆಳವಾದ ಅಧ್ಯಯನ ನಡೆಸಿ ಅದನ್ನು ಸದನದಲ್ಲಿ ಮಂಡಿಸಬೇಕು. ಆಡಳಿತ ಪಕ್ಷದ ಸದಸ್ಯರನ್ನು ತಮ್ಮ ವಾಕ್ ಚಾರ‍್ಯದಿಂದ ಮನವೊಲಿಸಿಕೊಳ್ಳುವ ಕೆಲಸ ಮಾಡಬೇಕು. ಕೊನೆಯಲ್ಲಿ ಬಹುಮತದ ಆಧಾರದ ಮೇಲೆ ನಿರ್ಣಯ ಮೂಡಿ ಬರಬೇಕು. ಈಗ ಇಂಥ ವಾತಾವರಣ ಅಪರೂಪವಾಗುತ್ತಿದೆ. ಸಂಸತ್ತು ಮತ್ತು ವಿಧಾನಮಂಡಲ ಅಧಿವೇಶನ ನಡೆಸಲು ಲಕ್ಷಾಂತರ ರೂ ತೆರಿಗೆದಾರರ ಹಣ ವೆಚ್ಚವಾಗುತ್ತಿದೆ. ಆದರೂ ಬಡವರ ಕಣ್ಣೀರು ಒರೆಸುವ ಕೆಲಸ ನಡೆದರೆ ಶ್ರಮ ಸಾರ್ಥಕವಾಗುತ್ತದೆ. ಇಡೀ ಜಗತ್ತಿನಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದೇ ಎಂಬ ಹೆಗ್ಗಳಿಕೆ ನಮ್ಮದಾಗಿರುವಾಗ ಅದನ್ನು ಉಳಿಸಿಕೊಂಡು ಹೋಗುವುದು ಜನಪ್ರತಿನಿಧಿಗಳ ಕರ್ತವ್ಯ. ಇದುವರೆಗೆ ಶಾಸಕಾಂಗದ ನಡವಳಿಕೆಗೆ ನ್ಯಾಯಾಂಗ ಗೌರವ ನೀಡಿ ನಡೆದುಕೊಂಡು ಬಂದಿದೆ. ಜನಪ್ರತಿನಿಧಿಗಳಾಗಲು ಎಲ್ಲರಿಗೂ ಸಮಾನ ಅವಕಾಶಗಳಿವೆ. ಒಮ್ಮೆ ಚುನಾಯಿತರಾದವರು ಸಂಸದೀಯ ನಡವಳಿಕೆಯನ್ನು ಅನುಸರಿಸುವುದು ಕರ್ತವ್ಯ. ಅದಕ್ಕೆ ಚ್ಯುತಿ ಬಂದಾಗ ಅದನ್ನು ಸರಿಪಡಿಸಲು ಸ್ಪೀಕರ್ ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಇಂಥ ಸಂದರ್ಭದಲ್ಲಿ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಅರಿತು ವರ್ತಿಸುತ್ತಾರೆಂದು ಜನ ನಿರೀಕ್ಷಿಸುತ್ತಾರೆ. ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಅಗತ್ಯ. ಆರ್ಥಿಕವಾಗಿ ನಾವು ಸಾಕಷ್ಟು ಪ್ರಗತಿ ಕಂಡಿದ್ದೇವೆ. ಸಂಸದೀಯ ನಡವಳಿಕೆಯಲ್ಲಿ ನಾವು ಇತರರಿಗೆ ಮಾದರಿಯಾಗಬೇಕು. ನಮ್ಮ ವಿಧಾನಮಂಡಲದಲ್ಲಿ ಕೈಗೊಂಡ ತೀರ್ಮಾನಗಳು ಶಾಶ್ವತವಾಗಿ ಉಳಿಯಬೇಕು. ಸರ್ವರಿಗೆ ಸಮಪಾಲು-ಸಮಬಾಳು ನಮ್ಮ ಧ್ಯೇಯವಾಗಬೇಕು.

Next Article