For the best experience, open
https://m.samyuktakarnataka.in
on your mobile browser.

ಮಾತು ಬಲ್ಲವನಿಗೆ ಜಗಳವೇ ಎಲ್ಲ….

02:30 AM Nov 04, 2024 IST | Samyukta Karnataka
ಮಾತು ಬಲ್ಲವನಿಗೆ ಜಗಳವೇ ಎಲ್ಲ…

ಇತ್ತೀಚಿಗೆ ಮದ್ರಾಮಣ್ಣ ಸೋದಿ ಮಾಮಾ ಅವರಿಗೆ ಮಾತುಮಾತಿಗೂ ಜಗಳವಾಗುತ್ತಿದೆ. ಅವರು ಏನಾದರೂ ಅಂದರೆ ಇವರು ಮತ್ತೊಂದು ಅನ್ನುತ್ತಾರೆ. ಈತ ಸ್ವಲ್ಪ ಕೆಮ್ಮಿದರೆ ಸಾಕು ಆಹಾ ಹೇಗೆ ಕೆಮ್ಮುತ್ತಿದ್ದಾರೆ… ಇದಕ್ಕೆಲ್ಲ ಅವರು ಮಾಡಿದ ಕೆಟ್ಟಕೆಲಸವೇ ಕಾರಣ ಎಂದು ಆತ ಅನ್ನುತ್ತಾರೆ. ಒಂದು ವೇಳೆ ಕಾರ್ಯಕ್ರಮದಲ್ಲಿ ಆತ ಎಡವಿದರೆ ಸಾಕು… ಮೊದಲಿನಿಂದಲೂ ಎಡವುತ್ತ ಬಂದವರಿಗೆ ಈಗ ಹೇಗೆ ಸೀದಾ ನಡೆಯಲು ಸಾಧ್ಯ? ಬರೀ ಎಡುವುದು ಜನರ ಮೇಲೆ ಹಾಕುವುದು ಎಂದು ಈತ ಹೂಂ ಕರಿಸುತ್ತಾನೆ. ಇದನ್ನೆಲ್ಲ ನೋಡಿದ ತಿಗಡೇಸಿ ತಡೆದುಕೊಳ್ಳಲು ಆಗದೇ ಸೋದಿಮಾಮಾನ ಹತ್ತಿರ ಹೋಗಿ… ಹೋಗಲಿಬಿಡಿ ಮಾಮೋರೆ… ಜಗಳವಾಡಬೇಡಿ… ಬೇರೆಯವರು ಇದರ ಫಾಯ್ದಾ ತೆಗೆದುಕೊಳ್ಳುತ್ತಾರೆ ಅಂದಾಗ…. ಓಯ್ ಊಟ ಬಲ್ಲವರಿಗೆ ರೋಗವೇ ಇಲ್ಲ-ಮಾತು ಬಲ್ಲವನಿಗೆ ಜಗಳವೇ ಎಲ್ಲ…ನೀನು ಅದ್ಭುತವಾಗಿ ಮಾತನಾಡುತ್ತೀಯ ಎಂದು ಇಡೀ ಜಗತ್ತು ಹೇಳುತ್ತದೆ. ನಾನು ಒಡಪು ಇಟ್ಟು ಹೇಳುವ ಮನುಷ್ಯ… ಅವರು ತಪ್ಪು ತಿಳಿದುಕೊಂಡರೆ ನಾನೇನೂ ಮಾಡಲು ಆಗುವುದಿಲ್ಲ. ನೀನು ಇಲ್ಲಿಂದ ತೊಲಗು ಎಂದು ಬೈಯ್ದು ಕಳಿಸಿದ್ದರು. ಅವರಂತೂ ಹಾಗಂದರು ಎಂದು ತಿಗಡೇಸಿ ಸೀದಾ ಮದ್ರಾಮಣ್ಣರ ಹತ್ತಿರ ಬಂದು.. ಮದ್ರಾಮಣ್ಣೋರೆ, ಮಾತು ಮಾತಿಗೂ ಸುಮ್ಮನೇ ಯಾಕೆ ಜಗಳ ಮಾಡುತ್ತೀರಿ? ಸುಮ್ಮನೇ ಇದ್ದು ಬಿಡಿ ಅವರೇ ಸುಮ್ಮನಾಗುತ್ತಾರೆ ಎಂದು ಹೇಳಿದಾಗ…ಆಂ…ಇನ್ನೊಂದ್ಸಲ ಏಳು ಎಂದು ಎರಡು ಸಲ ಕೇಳಿ…ಏಯ್ ತಿಗಡೇಸಿ..ನೀನೇನು ನಡುವೆ ಬರುತ್ತಿ ಈ ಮಾತನ್ನು ಆತನಿಗೆ ಹೇಳು ಎಂದು ಜಬರಿಸಿ ಕಳಿಸಿದ್ದ. ನೀನ್ಯಾಕೆ ಮಧ್ಯೆ ಹೋಗುತ್ತಿ? ಅವರು ಏನರ ಮಾಡಿಕೊಳ್ಳಲಿ ಎಂದು ತಿಗಡೇಸಿಯ ಜೀವದ ಗೆಳೆಯ ತಳವಾರ್ಕಂಟಿ ಹೇಳಿದಾಗ… ನಿಮ್ಮಂಥವರಿಂದಲೇ ಹೀಗೆ ಆಗುತ್ತಿದೆ ಎಂದು ಕಂಟಿಗೆ ಬಾಯಿಗೆ ಬಂದಂತೆ ಬೈಯ್ದ ತಿಗಡೇಸಿ ಎಂಟು ಹಗಲು ಎಂಟು ರಾತ್ರಿ ಯೋಚನೆ ಮಾಡಿ ಈಗ ಒಂದು ನಿರ್ಧಾರಕ್ಕೆ ಬಂದಿದ್ದಾನೆ. ತಾನು ಚಿಕ್ಕವನಿದ್ದಾಗ ಗಡ್ಡ ಎಳೆದವನಿಗೆ ಮಿಠಾಯಿ ಎಂಬ ಪಾಠದ ನೆನಪಾಯಿತು. ಈಗ ಗಡ್ಡ ಎಳೆದವನಿಗೆ ಅಂದರೆ ತನ್ನ ಪರಿಸ್ಥಿತಿ ಏನಾದೀತು ಎಂಬ ಯೋಚನೆ ಮಾಡಿ… ಕೊನೆಗೆ ಜಗಳ ಬಿಡಿಸಿದವನಿಗೆ ಮಿಠಾಯಿ ಎಂಬ ಟೈಟಲ್ ಇಟ್ಟುಕೊಂಡು ಡಿಟೇಲಾಗಿ ಬರೆದು ಎಲ್ಲೆಡೆ ಹ್ಯಾಂಡ್‌ಬಿಲ್ ಹಂಚಿದ್ದಾನೆ ಆದರೆ ಏನೇನೋ ಕೊಟ್ಟರೂ ಬರದವರು ಇನ್ನು ಮಿಠಾಯಿಗೆ ಆಸೆ ಪಡುತ್ತಾರಾ? ತಿಗಡೇಸಿಯನ್ನು ಆಸ್ಪತ್ರೆಗೆ ಸೇರಿಸುವುದು ಲೇಸು ಎಂದು ತಳವಾರ್ಕಂಟಿ ಅಂದುಕೊಳ್ಳುತ್ತಿದ್ದಾನೆ.