ಮಾತು ಮತ್ತು ಕಥೆ…
ಕೈ ಗ್ಯಾಂಗಿನಲ್ಲಿ ಈಗ ಏನಿದ್ದರೂ ಮಾತು ಮತ್ತು ಕಥೆ. ಅವರು ಇವರನ್ನು ಭೇಟಿಯಾಗಿ ಮಾತುಕತೆ ನಡೆಸಿದರಂತೆ. ಇವರು ಅವರನ್ನು ಭೇಟಿಯಾಗಿ ಕಥೆಯಲ್ಲದೇ ಮಾತಷ್ಟೇ ಆಡಿದರಂತೆ. ಇನ್ನೊಬ್ಬರು ಮತ್ತೊಬ್ಬರನ್ನು ಭೇಟಿಯಾಗಿ ಬರೀ ಕಥೆ ಹೇಳಿದರಂತೆ. ಬರೀ ಇಂಥವೇ ನಡೆದಿವೆ. ಇದರ ಮಧ್ಯೆ ಯಾರು ಯಾರ ಜತೆಯಲ್ಲಾದರೂ ಮಾತುಕತೆ ನಡೆಸಲಿ ಕುರ್ಚಿ ಮಾತ್ರ ನನ್ನದೇ. ನನ್ನ ಬಿಟ್ಟು ಯಾರಿಗೂ ಕುರ್ಚಿ ಕೊಡುವುದಿಲ್ಲ ಎಂದು ತಿರುಬೋಕೇಸಿ ಹೇಳಿದ್ದಾನಂತೆ. ಇವರು ಅಲ್ಲಿ ನಿಜವಾಗಿಯೂ ಏನು ಮಾತನಾಡುತ್ತಾರೆ? ಮಾತಿನಲ್ಲಿ ಏನಾದರೂ ಅರ್ಥ ಇದೆಯಾ? ಅರ್ಥವಿದ್ದರೂ ಇನ್ನೇನಾದರೂ ಇದೆಯಾ? ಎಂದು ಸಿಟ್ಟಿಗೆದ್ದ ತಿಗಡೇಸಿ ಅವರು ಏನು ಮಾತನಾಡುತ್ತಾರೆ ಎನ್ನುವುದನ್ನು ರಿಕಾರ್ಡ್ ಮಾಡಿಕೊಂಡು ಅಮ್ಮೋರಿಗೆ ಕಳುಹಿಸಿ ನಮ್ಮ ಕಸಿನ್ ತಿರುಬೋಕೇಸಿಯನ್ನು ಕುರ್ಚಿ ಮೇಲೆ ಕೂಡಿಸಬೇಕು ಎಂದು ಬಯಲನುಮಪ್ಪನ ಗುಡಿಯಲ್ಲಿ ನಿಂತು ಮನಸ್ಸಿನಲ್ಲಿಯೇ ಶಪಥ ಮಾಡಿದ್ದಾನೆ. ಹೀಗಾಗಿ ಯಾರು ಯಾರ ಮನೆಗೆ ಹೋಗುತ್ತಾರೆ. ಎಷ್ಟು ಗಂಟೆಗೆ ಹೋಗುತ್ತಾರೆ ಎನ್ನುವುದನ್ನು ನನಗೆ ತಿಳಿಸಬೇಕು ಎಂದು ಕನ್ನಾಳ್ಮಲ್ಲ… ಗ್ವಾಡಿ ಮಾಬಳ್ಯಾ, ವಾಳದ ಫಕೀರವ್ವ, ದೂತಿ ಯಮನೂರಿ ಮುಂತಾದವರಿಗೆ ಏನು ಕೊಡಬೇಕೋ ಅದನ್ನು ಕೊಟ್ಟು ಅಪ್ಪಣೆ ಕೊಟ್ಟಿದ್ದಾನೆ. ಅವತ್ತೊಂದು ದಿನ ಮಧ್ಯರಾತ್ರಿ ಕಳೆದು ಹದಿನೈದು ನಿಮಿಷ ಆಗಿತ್ತೇನೋ ತಿಗಡೇಸಿ ಮೊಬೈಲ್ ರಿಂಗಾಯಿತು. ಸಾಹೇಬ್ರೆ… ಸಾಹೇಬ್ರೆ ಇಂಗಿಂಗೆ ಇಂಥವರು ಇಂಥವರ ಮನೆಗೆ ಓಗಿದಾರೆ ಅಂದ ಕೂಡಲೇ ಹೆಗಲಿಗೆ ಕ್ಯಾಮೆರಾ ಏರಿಸಿಕೊಂಡು, ಐ ಫೋನ್ ತೆಗೆದುಕೊಂಡ ತಿಗಡೇಸಿ ಸೀದಾ ಆ ಮನೆಗೆ ಹೋದ. ಸೆಕ್ಯುರಿಟಿ ಬಹಳ ಟೈಟ್ ಇತ್ತು. ತನ್ನ ಇನ್ನಿಬ್ಬರು ಶಿಷ್ಯರನ್ನು ಗೇಟಿನ ಮುಂದೆ ಜಗಳವಾಡಿದಂತೆ ಮಾಡಿ ಎಂದು ಹೇಳಿದ. ಅವರು ಹಾಗೆ ಮಾಡಿದ ಕೂಡಲೇ ಕಾವಲುಗಾರರು ಓಡಿಬಂದು ಜಗಳ ಬಿಡಿಸತೊಡಗಿದರು. ತಾನು ಚಂಗನೇ ಜಿಗಿದು ಒಳಗೆ ಹೋದ. ಕಿಟಕಿಯನ್ನು ಮೆಲ್ಲನೇ ಸರಿಸಿದ. ಒಳಗೆ ಅವರಿಬ್ಬರು ಕಾಣಿಸಿದರು. ಕೂಡಲೇ ಅಲರ್ಟ್ ಆಗಿ ಮೊಬೈಲ್‌ನಲ್ಲಿ ರಿಕಾರ್ಡ್ ಮಾಡಿಕೊಳ್ಳತೊಡಗಿದ. ಅವರು ಕಿವಿಕಿವಿಯಲ್ಲಿ ಮಾತನಾಡುತ್ತಿದ್ದರೇ ವಿನಹ ಜೋರಾಗಿ ಒಂದಕ್ಷರವೂ ಒದರಲಿಲ್ಲ. ಹೀಗಾಗಿ ತಿಗಡೇಸಿ ಬರೀ ಅದನ್ನು ರಿಕಾರ್ಡ್ ಮಾಡಿಕೊಂಡ. ಮಾತಿಲ್ಲದಿದ್ದರೇನಂತೆ. ಕಿವಿಯಲ್ಲಿ ಬಾಯಿ ಇಟ್ಟು ಮಾತನಾಡಿದರಲ್ಲ… ಇದನ್ನೇ ತೋರಿಸುತ್ತೇನೆ ಎಂದು ಹಿಂದಿನ ಗೇಟು ಜಿಗಿದು ಓಡಿ ಮನೆಗೆ ಬಂದ. ಈ ಕೆಲಸಕ್ಕೆ ನೇಮಿಸಲಾಗಿದ್ದ ಶಿಷ್ಯರನ್ನು ಕರೆದು ಖುಷಿಯಿಂದ ಹೆಚ್ಚೆಚ್ಚು ಹಣಕೊಟ್ಟ. ಅವರೆಲ್ಲರೂ ತೆಗೆದುಕೊಂಡು ಮನೆಗೆ ಹೋದರು. ಅಬ್ ಆಯೇಗಾ ಖೇಲ್ ಕಾ ಮಜಾ ಎಂದು ಮೊಬೈಲ್ ತೆಗೆದ ರಿಕಾರ್ಡ್‌ಗೆ ಹೋಗಿ ನೋಡಿದಾಗ ಅಲ್ಲಿ ಯಾವುದೂ ರಿಕಾರ್ಡ್ ಆಗಿರಲೇ ಇಲ್ಲ ಯಾಕೆಂದರೆ ತಿಗಡೇಸಿ ತನ್ನ ನೆಟ್ಟನ್ನು ಆನ್ ಮಾಡಿರಲಿಲ್ಲ.