ಮಾನವನಿಗಿಂತ ಪ್ರಬಲವಾದ ಇಚ್ಛಾಶಕ್ತಿ
ಜೀವಜಗತ್ತಿನಲ್ಲಿರುವ ಜೀವವರ್ಗಗಳಲ್ಲಿ ಅತ್ಯಂತ ಹಟಮಾರಿಯಾದ ಮತ್ತು ತನ್ನ ದಾರಿಬಿಟ್ಟು ಚಲಿಸದ ಒಂದು ವಸ್ತುವೆಂದರೆ, ಒಮ್ಮೆ ಒಂದು ಗೊತ್ತಾದ ಅಭ್ಯಾಸಕ್ಕೆ ಒಳಪಟ್ಟ ಸಸ್ಯ! ಒಂದು ಸಸ್ಯ ಶತಮಾನಗಳ ಕಾಲ ತನ್ನ ವೈಯಕ್ತಿಕ ಸ್ವಭಾವವನ್ನು ಉಳಿಸಿಕೊಂಡು ಬರುತ್ತದೆ. ಒಂದು ಸಸ್ಯದ ಇಚ್ಛಾಶಕ್ತಿಯೊಡನೆ ಹೋಲಿಸಿದಾಗ ಮನುಷ್ಯನ ಇಚ್ಛಾಶಕ್ತಿ ದುರ್ಬಲವೆಂದೇ ಕಾಣುತ್ತದೆ.
ಸೂರ್ಯನ ಬೆಳಕು ಮತ್ತು ನೀರನ್ನು ತಲುಪಲು ಸಸ್ಯಗಳು ನಡೆಸುವ ಪ್ರಯತ್ನದಲ್ಲಿ ಈ ಅಂಶವನ್ನು ನಾವು ಕಾಣಬಹುದು. ಭೂಮಿಯೊಳಗಿರುವ ಆಲೂಗೆಡ್ಡೆಯ ಬೀಜವೊಂದು ಸೂರ್ಯನ ಕಿರಣವನ್ನು ಸ್ಪರ್ಶಿಸಲು ತಾನಿದ್ದಲ್ಲಿಂದ ಸುಮಾರು ಇಪ್ಪತ್ತು ಅಡಿ ದೂರದವರೆಗೆ ತನ್ನ ಚಿಗುರುಗಳನ್ನು ವಿಸ್ತರಿಸುತ್ತದೆಯಂತೆ! ಸಸ್ಯಗಳು ರಾತ್ರಿ ಸಮಯದಲ್ಲಿ ನೀರನ್ನು ತಲುಪಲು ತಮ್ಮ ಹಂತದಿಂದ ಹಲವಾರು ಇಂಚುಗಳಷ್ಟು ಕೆಳಕ್ಕೆ ಬಾಗುತ್ತವೆ. ಆಶ್ರಯವಿಲ್ಲದ ಕಡೆಯಲ್ಲಿ ಬಳ್ಳಿಗಳು ಮೇಲೇರಲು ತನ್ನ ಚಿಗುರುಗಳ ಮೇಲೆಯೇ ಆಧರಿಸಿಕೊಂಡು ಮೇಲೇರುವ ಜೊತೆಜೊತೆಗೆ ತನಗೆ ಬೇಕಾದ ಆಧಾರವನ್ನು ಸೃಷ್ಟಿಸಿಕೊಳ್ಳುತ್ತದೆ. ಹೀಗೆ ಪ್ರಕೃತಿಯಲ್ಲಿನ ಪ್ರತಿಯೊಂದು ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕ್ಷಣ ಕ್ಷಣವೂ ಘಟಿಸುವ ಅನುಭವ ಪವಾಡಸದೃಶವಾಗಿರುತ್ತದೆ. ಸಸ್ಯಪ್ರೇಮಿಯಾದವನಿಗೆ ಈ ಅನುಭವಗಳ ಹಿಂದಿರುವ ಪ್ರಕ್ರಿಯೆ ಅಥವಾ ಪ್ರಕೃತಿಜ್ಞಾನವನ್ನು ಗುರುತಿಸಲು ಅಸಾಧ್ಯವೇನಲ್ಲ. ಸಸ್ಯಗಳನ್ನು ಬೆಳೆಸಿ, ಪೋಷಿಸುವಲ್ಲಿ ಪ್ರೀತಿ ತುಂಬಿರಬೇಕು ಮತ್ತು ಅವುಗಳು ಆ ಪ್ರೀತಿಯನ್ನು ಸ್ವೀಕರಿಸುತ್ತವೆ, ಅನುಭವಿಸುತ್ತವೆ ಮತ್ತು ಅದೇ ಪ್ರಮಾಣದಲ್ಲಿ ಸ್ಪಂದಿಸುತ್ತವೆ. ಗಿಡಮರಗಳ ಒಡನಾಟದಲ್ಲಿರುವ ಅಥವಾ ಅವುಗಳನ್ನು ಬೆಳೆಸಿದ ಯಾರಾದರೂ ಈ ಸತ್ಯವನ್ನು ಅರಿಯಬಹುದು.
ಒಂದು ಬೀಜ ತಾನು ಏನಾಗಬೇಕು ಮತ್ತು ತನ್ನ ಬೆಳವಣಿಗೆಯನ್ನು ಪೋಷಿಸುವುದು ಹೇಗೆ ಎಂಬುದನ್ನು ಹೇಗೆ ತಿಳಿದಿರುತ್ತದೆ? ಪಾದಚಾರಿ ಮಾರ್ಗದ ಸಂದುಗೊಂದಿನಲ್ಲೂ ಕೂಡಾ ಬೀಜ ಚಿಗುರೊಡೆಯುವುದಾದರೂ ಹೇಗೆ? ಬೆಳಕು ಮತ್ತು ತಾಪಮಾನ ತಡೆಹಿಡಿಯಲ್ಪಟಾಗ ಬೀಜ ತಾನು ಚಿಗುರೊಡೆಯುವ ಬೇರೆಯೇ ದಾರಿಯನ್ನು ಹೇಗೆ ಹುಡುಕಿಕೊಳ್ಳುತ್ತದೆ? ಸಮೂಲವಾಗಿ ನಾಶಗೊಳಿಸಲ್ಪಟ್ಟಾಗಲೂ ಅವು ಹೇಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆ? ಸಸ್ಯಗಳು ತಮ್ಮ ವಂಶವಾಹಿಗಳಲ್ಲಿ ಈ ಬುದ್ಧಿಮತ್ತೆಯ ಹಾಗೂ ಗುರುತ್ವಾಕರ್ಷಣ ಶಕ್ತಿಯ ಮೂಲಗಳನ್ನು ಹೊಂದಿರುವುದರಿಂದ ಈ ಎಲ್ಲಾ ಅಸಾಮಾನ್ಯ ಸಂದರ್ಭಗಳಲ್ಲೂ ಮತ್ತೆ ಬೆಳಕಿನಡೆಗೆ ಮುಖಮಾಡಿ ತಮ್ಮ ಜೀವಶಕ್ತಿಯನ್ನು ಪಡೆಯುವ; ಈ ಎಲ್ಲಾ ಅಡೆತಡೆಗಳಿಗೆ ಬಲಿಯಾಗದೆ ತಮ್ಮ ಜೀವಂತಿಕೆಯನ್ನು ಹೀಗೆ ಮುಂದುವರಿಸಿಕೊಂಡು ಬರುವ ಸಾಮರ್ಥ್ಯ ಏನನ್ನು ಸೂಚಿಸುತ್ತದೆ?
`ಸಂವಹನ' ಸರ್ವರೀತಿಯಲ್ಲೂ ಜೀವನದ ಕೀಲಿಕೈ. ಇದು ಏಕಕೋಶ ಜೀವಿಯಂಥ ಸರಳ ಹಾಗೂ ಅತ್ಯಂತ ಸಂಕೀರ್ಣಜೀವಿಯಾದ ಮಾನವನ ಮಧ್ಯೆಯೂ ಪರಸ್ಪರ ಸಂವಹನ ಸಾಧ್ಯವಾಗುತ್ತದೆ. ಇದು ಸೃಷ್ಟಿಯ ಹಿಂದಿರುವ ಮಹಾನ್ ಪ್ರಜ್ಞೆ ಹಾಗೂ ಪ್ರತಿಯೊಂದು ದೇಹದೊಳಗಿನ ಪ್ರತ್ಯೇಕ ವ್ಯವಸ್ಥೆಗಳು, ಅಂಗಾಂಗಗಳು, ಜೀವಕೋಶಗಳ ಮಧ್ಯೆ ಉಂಟಾಗುವ ಜ್ಞಾನ ಮತ್ತು ಮಾಹಿತಿಗಳ ವಿನಿಮಯವನ್ನು ಸೂಚಿಸುತ್ತದೆ. ಬೀಜಗಳು ತಮ್ಮ ಜೀವಕೋಶಗಳಲ್ಲಿ ಹೊಂದಿರುವ ಭವಿಷ್ಯದ ಜೀವನಯಾನದ ಚಿತ್ರಣ ಹಾಗೂ ಬುದ್ಧಿಮತ್ತೆ ಊಹೆಗೂ ನಿಲುಕದ್ದು.
ಸಸ್ಯಗಳು ಬೆಳಕು ಮತ್ತು ತೇವಾಂಶದ ಸಂವೇದನೆಗಳನ್ನು ಪಡೆಯುವುದರ ಜೊತೆಗೆ ಮೂಲರುಚಿಯನ್ನು ಸಹ ಗುರುತಿಸುತ್ತವೆ. ಮರಗಿಡಗಳ ಬೇರುಗಳು ಮಣ್ಣಿನ ವಿವಿಧ ಸತ್ವಯುತ ಗುಣಗಳನ್ನು ಮತ್ತು ರುಚಿಯನ್ನು ಸವಿಯಲು ಸಮರ್ಥವಾಗಿವೆ. ಕೀಟಗಳನ್ನೇ ತಿಂದು ಬದುಕುವ ಸಸ್ಯಪ್ರಬೇಧವೊಂದು ಮಂಜಿನ ಹನಿಯನ್ನು ಹೊರೆತುಪಡಿಸಿ ಇತರ ಯಾವುದೇ ದೇಹವೊಂದು ತನ್ನ ಮೇಲ್ಮೈಯನ್ನು ಸ್ಪರ್ಶಿಸಿದಾಗ ಅದರ ಎಲೆಗಳು ಬಾಗುತ್ತವೆ. ಸ್ಪರ್ಶಿಸಿದ ದೇಹದ ಅಥವಾ ಕೀಟ ಸಾರಜನಕಯುಕ್ತವಾಗಿದ್ದರೆ ಆ ಸಸ್ಯವು ಕೂಡಲೇ ತನ್ನ ಕಡು ಜೀರ್ಣಕಾರಿ ದ್ರವವನ್ನು ಸ್ರವಿಸಿ, ಅದನ್ನು ನಿಷ್ಕಿೃಯಗೊಳಿಸಿ ಭಕ್ಷಿಸುತ್ತದೆ! ಈ ಬುದ್ಧಿವಂತಿಕೆ ಹೇಗೆ ಸಾಧ್ಯವಾಯಿತು?
ಏಕಕೋಶ ಜೀವಿಗಳು ತಮ್ಮ ಪರಿಸರದ ರಾಸಾಯನಿಕ ಸ್ಥಿತಿಗತಿಯನ್ನು ಬದಲಿಸಿ ಪ್ರಮುಖ ಮಾಹಿತಿಯನ್ನು ರವಾನಿಸುವ ವಿಧಾನವನ್ನು ನಿರಂತರವಾಗಿ ಸಂಶೋಧನೆಮಾಡಿದಾಗ ವಿಕಸನಗೊಂಡದ್ದು “ಜೀವಕೋಶೀಯ ಸಂವಹನ.” ಬರ ಅಥವಾ ತಾಪಮಾನ ಏರಿಳಿತಗಳಂಥ ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಜೀವಕೋಶಗಳು ಒಂದು ರೀತಿಯ ವಿಶೇಷ ರಾಸಾಯನಿಕವನ್ನು ಸ್ರವಿಸುವ ಮೂಲಕ ಒಂದು ಗುಂಪಾಗಿ ಬದುಕಲು ಸಾಧ್ಯವಾಗುವಂತೆ ಪರಿಸರವನ್ನು ನಿರ್ಮಿಸಿಕೊಳ್ಳುತ್ತವೆ. ಇತರರ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಂದರ್ಭಗಳಲ್ಲಿ ಈ ರೀತಿಯ ಸ್ವಯಂ-ರಕ್ಷಣೆಯ ವಿದ್ಯಮಾನವನ್ನು ಆನೆಗಳ ಹಿಂಡುಗಳಲ್ಲಿ, ಬೂದು ತಿಮಿಂಗಲಗಳಂಥ ಸಂಕೀರ್ಣಜೀವಿಗಳಲ್ಲಿಯೂ ಕಾಣಬಹುದು. ಆದರೆ ಮಾನವ ತನ್ನ ಪ್ರಜ್ಞಾಮಟ್ಟವನ್ನು (ಬುದ್ಧಿವಂತಿಕೆಯಲ!) ವಿಚಲಿತಗೊಳಿಸುವುದರಿಂದ ಮನುಷ್ಯ ಅಪಾಯದ ಸಂದೇಶಗಳಿಗೆ ಗಮನ ನೀಡದಾಗ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಅವಿಶ್ರಾಂತವಾಗಿ ದುಡಿದ ಲೋಹಗಳು, ಯಂತ್ರಗಳು, ಮನುಷ್ಯನಂತೆಯೇ ದಣಿವನ್ನು ಅನುಭವಿಸುತ್ತವೆ! ದುಡಿದು ದಣಿದ ಸಂಗೀತೋಪಕರಣಗಳು ತಮ್ಮ ಕಂಪನಾ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಇದನ್ನು ವಿಜ್ಞಾನವು “ವಿರಾಮವಿಲ್ಲದ ಗಣನೀಯ ಕೆಲಸದ ನಂತರದ ಆಯಾಸ” (ಫೆಟೀಗ್ ಆಫ್ ಎಲಾಸ್ಟಿಸಿಟಿ) ಎಂದು ಗುರುತಿಸುತ್ತದೆ. ಲೋಹಗಳು, ಯಂತ್ರಗಳು, ಸಂಗೀತೋಪಕರಣಗಳೇ ಮುಂತಾದ ಸಾಧನಗಳು ವಿಶ್ರಾಂತಿ ದೊರೆತಾಗ ಮತ್ತೆ ಚೇತರಿಸಿಕೊಂಡು ಪುನಃ ಚೈತನ್ಯವನ್ನು ಪಡೆಯುತ್ತವೆ ಮತ್ತು ಹಿಂದಿನ ಸ್ಥಿತಿಸ್ಥಾಪಕತ್ವ ಗುಣ ಹಾಗೂ ಆರೋಗ್ಯವನ್ನು ಮರಳಿ ಪಡೆಯುತ್ತವೆ ಎಂಬುದು ವಿಜ್ಞಾನ ತೋರಿಸಿದ ಸತ್ಯ. ಲೋಹಗಳೂ ರೋಗಕ್ಕೆ ತುತ್ತಾಗುತ್ತವೆ. ತಾಮ್ರ ಮತ್ತು ಕಬ್ಬಿಣಕ್ಕೆ ತುಕ್ಕುಹಿಡಿಯುವ ಮತ್ತು ಕ್ರಮೇಣ ಹಾಳೆಯಿಂದ ಹಾಳೆಗೆ ಸೋಂಕಿನಂತೆ ಹರಡುವ ಪ್ರಕ್ರಿಯೆ ಇದೇ ಆಗಿದೆ. ಕೆಲವು ನಿರ್ದಿಷ್ಟ ರಾಸಾಯನಿಕಗಳ ಸಂಪರ್ಕಕ್ಕೆ ಬಂದಾಗ ವಿಷಪೂರಿತವಾಗುತ್ತವೆ ಕೂಡಾ. ಲೋಹಗಳು ಮತ್ತು ಕೆಲವು ಅದಿರುಗಳು ನಿರಂತರ ಒತ್ತಡಕ್ಕೆ ಒಳಗಾದಾಗ ದುರ್ಬಲವಾಗುವುದನ್ನು ಲೋಹಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ. ವಿಜ್ಞಾನವು ಹರಳುಗಳನ್ನು ಅಥವಾ ಸ್ಫಟಿಕಗಳನ್ನು ಜೀವಂತ ವಸ್ತುಗಳೆಂದು ಮತ್ತು ಸ್ಫಟಿಕೀಕರಣವು ಜೀವನ ಪ್ರಕ್ರಿಯೆಯ ಸಾಕ್ಷಿ ಎಂದು ಪರಿಗಣಿಸಲು ಆರಂಭಿಸಿದೆ. ಹರಳುಗಳು ತಮ್ಮದೇ ರಚನೆ ಹಾಗೂ ಆಕಾರಗಳನ್ನು ಹೊಂದುವ ಪ್ರಜ್ಞಾವಂತಿಕೆಯನ್ನು ಹೊಂದಿವೆ. ಪ್ರತಿಯೊಂದು ಹರಳೂ ಕೂಡಾ ಸಸ್ಯಗಳು ಮತ್ತು ಪ್ರಾಣಿಗಳಂತೆ ಅದರದ್ದೇ ಆದ ನಿಯಮ ಹಾಗೂ ಪದ್ಧತಿಗಳನ್ನು ಅನುಸರಿಸುತ್ತದೆ. ಅದರ ಸ್ಫಟಿಕೀಕರಣದ ವಿಧಾನ ಗಣಿತದಂತೆ ಪರಿಪೂರ್ಣವಾಗಿರುತ್ತದೆ ಹಾಗೂ ತನ್ನದೇ ವ್ಯಾಪ್ತಿಯನ್ನು ಹೊಂದಿದೆ.
ನಿರ್ಜೀವಿ ವಸ್ತುಗಳಲ್ಲಿಯೂ ಚೈತನ್ಯವಿದೆ ಎಂಬುದು ಪ್ರಾಚೀನ ನಂಬಿಕೆ. ಕೈಗಾರಿಕಾ ಕ್ರಾಂತಿ ಬಳಿಕದ ಆಧುನಿಕ ಜಗತ್ತು ಈ ನಂಬಿಕೆಯನ್ನು ಹಾಸ್ಯಾಸ್ಪದವನ್ನಾಗಿ ಕಂಡಿತ್ತು. ಆದರೆ ಆಧುನಿಕ ವಿಜ್ಞಾನ ಸಂಶೋಧನೆಗಳ ಫಲರೂಪವಾಗಿ ಇಂದು ಈ ದೃಷ್ಟಿಕೋನವನ್ನು ಸರಿಪಡಿಸಿಕೊಂಡಂತೆ ಕಾಣುತ್ತಿದೆ. ಜಗತ್ತು ಜೀವಂತವಾಗಿದೆ ಹಾಗೂ ಪ್ರಜ್ಞೆಯನ್ನು ಹೊಂದಿದೆ ಎಂಬುದನ್ನು ಅಣುಸಿದ್ಧಾಂತ, ಖಭೌತಶಾಸ್ತçವೇ ಮುಂತಾದ ಜ್ಞಾನಶಾಖೆಗಳಿಂದ ಅರಿತುಕೊಳ್ಳಲು ಆರಂಭಿಸಿದೆ. ಸೃಷ್ಟಿಯ ಯಾವುದೇ ವಸ್ತುವನ್ನು 'ಸತ್ತಿರುವ' ಅಥವಾ 'ಜೀವಚೈತನ್ಯವಿಲ್ಲದಿರುವ' ಎಂಬ ಮನೋಭಾವದಿಂದ ಕಾಣುತ್ತಿಲ್ಲ. ಅಂದರೆ; ಪ್ರಾಚೀನರು ನಂಬಿಕೊಂಡು ಬರುತ್ತಿದ್ದ 'ಅಣು-ರೇಣು-ತೃಣ-ಕಾಷ್ಠಗಳಲ್ಲೂ ಪರಮಾತ್ಮನಿದ್ದಾನೆ' ಎಂಬ ಸಿದ್ಧಾಂತ ಹಾಗೂ ನಂಬಿಕೆಯನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.