ಮಾನಹರಣದ ಹಿಂದೆ ದೊಡ್ಡ ಜಾಲ…
ರಾಜು ಮಳವಳ್ಳಿ
ಹಾಸನ ಜಿಲ್ಲೆಯ ಮಹಿಳೆಯರಲ್ಲಿ ತಲ್ಲಣವನ್ನುಂಟು ಮಾಡಿರುವ ಅಶ್ಲೀಲ ವಿಡಿಯೋಗಳುಳ್ಳ ಪೆನ್‌ಡ್ರೈವ್ ಹರಿದಾಟದಲ್ಲಿ ವ್ಯವಸ್ಥಿತ ಜಾಲವೊಂದು ಕರಾರುವಾಕ್ಕಾಗಿ ಕೆಲಸ ಮಾಡಿರುವ ಸಂಗತಿ ಬಯಲಾಗಿದೆ.
ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋಗಳುಳ್ಳ ಪೆನ್‌ಡ್ರೈವ್‌ಗಳನ್ನು ಪ್ರದೇಶ ವಾರು ವಿಭಜಿಸಿ ಹಂಚಲಾಗಿತ್ತೆಂಬ ಮಾಹಿತಿ ಇದೀಗ ಸಂಯುಕ್ತ ಕರ್ನಾಟಕ’ ಕ್ಕೆ ಲಭ್ಯವಾಗಿದೆ. ಪೆನ್‌ಡ್ರೈವ್‌ಗಳನ್ನು ಕಲೆಹಾಕಿದ್ದು ಹೇಗೆ? ಅವುಗಳಲ್ಲಿದ್ದ ವಿಡಿಯೋಗಳನ್ನು ವಿಂಗಡಿಸಿದ್ದು ಹೇಗೆ? ಯಾವ ಯಾವ ವಿಡಿಯೋಗಳನ್ನು ನಕಲು ಮಾಡಲಾಯಿತು? ನಕಲು ಮಾಡಿದ ವಿಡಿಯೋಗಳನ್ನು ಜೋಡಿಸಿದ್ದು ಹೇಗೆ? ಸಂಯೋಜಿತ ವಿಡಿಯೋಗಳುಳ್ಳ ಪೆನ್‌ಡ್ರೈವ್‌ಗಳನ್ನು ಎಲ್ಲೆಲ್ಲಿ ಹಂಚಲಾಯಿತು? ಯಾವ್ಯಾವ ತಾಲ್ಲೂಕಿನಲ್ಲಿ ಯಾವ್ಯಾವ ವಿಡಿಯೋಗಳನ್ನು ಹರಿಬಿಡಲಾಯಿತು? ಎಂಬೆಲ್ಲಾ ಮಾಹಿತಿಗಳು ಹೊರಬಿದ್ದಿವೆ. ಹಾಸನ ಜಿಲ್ಲೆಯ ಜನಪರ ಸಂಘಟನೆಗಳು ಹಾಗೂ ಕೆಲ ಸಂತ್ರಸ್ತೆಯರು ಮತ್ತವರ ಆಪ್ತರೊಡನೆ
ಸಂಯುಕ್ತ ಕರ್ನಾಟಕ’ ನಡೆಸಿದ ಮಾತುಕತೆಯ ವೇಳೆ ಇಂತಹದೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು ಪೆನ್‌ಡ್ರೈವ್ ಹಂಚಿಕೆಯ ಕಥನವೀಗ ಬಟಾಬಯಲಾಗಿದೆ.
ಏ.೨೧ರಂದು ಹಾಸನ ಜಿಲ್ಲೆಯಾದ್ಯಂತ ಅಶ್ಲೀಲ ವಿಡಿಯೋಗಳುಳ್ಳ ಪೆನ್‌ಡ್ರೈವ್‌ಗಳು ಸಾವಿರಾರು ಸಂಖ್ಯೆಯಲ್ಲಿ ಹಂಚಿಕೆಯಾಗಿದ್ದವು. ಬೀದಿಬೀದಿಗಳಲ್ಲಿ, ಉದ್ಯಾನವನಗಳಲ್ಲಿ ಪೆನ್‌ಡ್ರೈವ್‌ಗಳನ್ನು ಎಸೆಯಲಾಗಿತ್ತಲ್ಲದೆ, ಮನೆ ಮನೆಗೂ ಪೆನ್‌ಡ್ರೈವ್ ತಲುಪಿಸಲಾಗಿತ್ತು. ಆದರೆ, ಹೀಗೆ ಜಿಲ್ಲೆಯಾದ್ಯಂತ ಹಂಚಲಾದ ಪೆನ್‌ಡ್ರೈವ್‌ಗಳಲ್ಲಿದ್ದ ವಿಡಿಯೋಗಳು ಒಂದೇ ಆಗಿರಲಿಲ್ಲ, ಬೇರೆ ಬೇರೆಯಾಗಿದ್ದವೆಂಬುದು ಅಸಲಿ ವಿಚಾರ.
ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್‌ಗೌಡ ಅವರು ನಕಲು ಮಾಡಿಕೊಂಡಿದ್ದಾರೆನ್ನಲಾದ ಮೂಲ ಪೆನ್‌ಡ್ರೈವ್‌ನಲ್ಲಿ ೨೮೭೬ ವಿಡಿಯೋಗಳು ಇದ್ದವು ಎಂದು ಹೇಳಲಾಗುತ್ತಿದೆ. ಆದರೆ, ಅಷ್ಟೂ ವಿಡಿಯೋಗಳು ಒಮ್ಮಿಂದೊಮ್ಮಲೆ ಹಂಚಲ್ಪಡದೇ ಬಿಡಿಬಿಡಿಯಾಗಿ ಹಂಚಲಾಗಿರುವುದು ಸುಸ್ಪಷ್ಟ.
ತಾಲ್ಲೂಕುವಾರು ಹಂಚಿಕೆ…!: ಮೂಲ ಪೆನ್‌ಡ್ರೈವ್‌ನಲ್ಲಿ ನೂರಾರು ಸಂಖ್ಯೆಯಲ್ಲಿದ್ದ ವಿಡಿಯೋಗಳನ್ನು ಕುಲಂಕಷವಾಗಿ ಪರಿಶೀಲಿಸಿದ್ದ ಹಂಚಿಕೆ ತಂಡ’ ಮೊದಲಿಗೆ ಗುರುತಿಸಿದ್ದು ಆ ವಿಡಿಯೋಗಳಲ್ಲಿದ್ದ ಸಂತ್ರಸ್ತೆಯರನ್ನು..! ವಿಡಿಯೋಗಳಲ್ಲಿರುವ ಸಂತ್ರಸ್ತೆಯರು ಯಾರು? ಅವರು ಯಾವ ತಾಲ್ಲೂಕಿಗೆ ಸೇರಿದ್ದವರಾಗಿದ್ದಾರೆ? ಅಧಿಕಾರಿಗಳಿದ್ದರೆ ಅವರು ಯಾವ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು? ಎಂಬೆಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಪ್ರತಿಯೊಬ್ಬ ಸಂತ್ರಸ್ತೆಯರನ್ನು ಹಂಚಿಕೆ ತಂಡ ತಾಲ್ಲೂಕುವಾರು ಗುರುತಿಸಿದೆ ಎನ್ನಲಾಗಿದೆ. ಹೀಗೆ ಗುರುತಿಸಿದ ವಿಡಿಯೋಗಳನ್ನು
ಹಂಚಿಕೆ ತಂಡ’ ಜಿಲ್ಲೆಯಲ್ಲಿರುವ ಅಷ್ಟೂ ತಾಲ್ಲೂಕುವಾರು ವಿಂಗಡಿಸಿತೆನ್ನಲಾಗಿದೆ. ಆನಂತರ ಆಯಾ ತಾಲ್ಲೂಕುಗಳ ಸಂತ್ರಸ್ತೆಯರ ವಿಡಿಯೋಗಳನ್ನೆಲ್ಲಾ ಒಂದೆಡೆ ಗುಡ್ಡೆಹಾಕಿ ಪ್ರತ್ಯೇಕ ಪೆನ್‌ಡ್ರೈವ್‌ಗೆ ನಕಲು (ಕಾಪಿ) ಮಾಡಲಾಗಿದೆ ಎನ್ನಲಾಗಿದೆ. ಹಾಗೆ ನಕಲು ಮಾಡಲಾದ ಪೆನ್‌ಡ್ರೈವ್‌ಗಳನ್ನು ಒಂದಲ್ಲ ಎರಡಲ್ಲ ಸಾವಿರಾರು ಪೆನ್‌ಡ್ರೈವ್‌ಗಳಿಗೆ ಮರು ನಕಲು (ರೀಕಾಪಿ) ಮಾಡಿದ ಬಳಿಕ ಚನ್ನರಾಯಪಟ್ಟಣ, ಹೊಳೆನರಸೀಪುರ, ಹಾಸನ ನಗರ, ಹಾಸನ ತಾಲ್ಲೂಕು, ಅರಸೀಕೆರೆ, ಸಕಲೇಶಪುರ ..ಹೀಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ತಾಲ್ಲೂಕುವಾರು ಪೆನ್‌ಡ್ರೈವ್’ ಗಳನ್ನು ಸಾವಿರಾರು ಸಂಖ್ಯೆಯಲ್ಲಿ ಮನೆಮನೆಗೆ ಹಂಚಲಾಯಿತೆಂದು ತಿಳಿದುಬಂದಿದೆ. ದೊಡ್ಡ ಜಾಲದ ಸಂಚು: ಅಶ್ಲೀಲ ವಿಡಿಯೋಗಳುಳ್ಳ ಪೆನ್‌ಡ್ರೈವ್‌ಗಳ ನಕಲು, ವಿಭಜನೆ, ಮರು ನಕಲು ಮತ್ತು ದೊಡ್ಡ ಪ್ರಮಾಣದಲ್ಲಿ ಹಂಚಿದ ಕೃತ್ಯ ಒಬ್ಬಿಬ್ಬರದ್ದಲ್ಲ ಎಂಬುದು ಸಾಬೀತಾಗಿದೆ. ಸ್ಥಳೀಯ ಮುಖಂಡರು, ಯುವಕರ ದೊಡ್ಡ ಪಡೆಯನ್ನು ಇಟ್ಟುಕೊಂಡು ದೊಡ್ಡವರ
ಜಾಲ’ ವೇ ಈ ಪೆನ್‌ಡ್ರೈವ್ ಹಂಚಿಕೆಯಲ್ಲಿ ಕೆಲಸ ಮಾಡಿದೆ ಎನ್ನುವುದು ಹಾಸನ ಜಿಲ್ಲೆಯ ಪ್ರತಿಯೊಬ್ಬರ ಸ್ಪಷ್ಟ ಅನಿಸಿಕೆ. ಸಾವಿರಾರು ಪೆನ್‌ಡ್ರೈವ್‌ಗಳನ್ನು ತಯಾರಿಸಿ ಹಂಚಲು ಕೋಟ್ಯಂತರ ರೂಪಾಯಿ ಖರ್ಚಾಗಿದ್ದು ಈ ಕೃತ್ಯ’ಕ್ಕೆ ದೊಡ್ಡ ಕುಳವೊಂದು ಬಂಡವಾಳ ಹೂಡಿದ್ದರಿಂದಲೇ ಸಮರೋಪಾದಿಯಲ್ಲಿ ಸಾವಿರಾರು ವಿಭಜಿತ ಪೆನ್‌ಡ್ರೈವ್‌ಗಳನ್ನು ತಯಾರಿಸಿ ಹಂಚಲು ಸಾಧ್ಯವಾಗಿದೆ ಎಂಬ ಸ್ಥಳೀಯರ ಮಾತಲ್ಲಿ ಹುರುಳಿಲ್ಲ ಎನ್ನಲಾಗದು. ಮಾನಹರಣದ ರಾಜಕಾರಣ..: ಅಷ್ಟಕ್ಕೂ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚುವ ಮೂಲಕ ಸಂತ್ರಸ್ತೆಯರ ಮಾನಹರಣಕ್ಕೆ ರಾಜಕಾರಣವೇ ಕಾರಣವೆಂಬುದು ಗುಟ್ಟಾಗೇನೂ ಉಳಿದಿಲ್ಲ. ಮರ‍್ನಾಲ್ಕು ವರ್ಷಗಳ ಹಿಂದಿನದ್ದು ಎನ್ನಲಾದ ವಿಡಿಯೋಗಳನ್ನು ಚುನಾವಣಾ ಸಂದರ್ಭದಲ್ಲಿ ಕರಾರುವಾಕ್ಕಾಗಿ ವಿಂಗಡಿಸಿ ಹಂಚಿದ್ದರ ಮೂಲ ಗುರಿಯೇ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸುವುದೇ ಎಂಬುದು ಸ್ಪಷ್ಟವಾಗಿದೆ. ಜೆಡಿಎಸ್ ಸೋಲು ಬಯಸುವ ರಾಜಕೀಯ ಪಕ್ಷದ ನಾಯಕರೆಲ್ಲರೂ ಸೇರಿ ನಡೆಸಿರುವ ಸಂಚಿದು ಎಂಬುದು ಹಾಸನದ ಗಲ್ಲಿಗಲ್ಲಿಯಲ್ಲಿ ಕೇಳಿಬರುತ್ತಿರುವ ಮಾತು. ಆದರೆ, ಈ ಹಂಚಿಕೆಯ
ಮಹಾನಾಯಕ’ ಯಾರೆಂಬುದು ಮಾತ್ರ ಸ್ಪಷ್ಟವಾಗಿಲ್ಲವಾದರೂ ಪ್ರಭಾವಿಯೊಬ್ಬರ ಕೈವಾಡವಿರುವುದು ತಳ್ಳಿಹಾಕಲಾಗದ ಸತ್ಯ.
ತಲ್ಲಣಿಸುತ್ತಿದೆ ಮನ ಪ್ರತಿಕ್ಷಣ
ತಾಲ್ಲೂಕುವಾರು ವಿಡಿಯೋಗಳುಳ್ಳ ಪೆನ್‌ಡ್ರೈವ್‌ಗಳನ್ನು ಹಂಚಿದ್ದು ಅಮಾಯಕ ಸಂತ್ರಸ್ತೆಯರ ಪಾಲಿಗೆ ಜೀವನ್ಮರಣ’ದ ಸ್ಥಿತಿ ತಂದೊಡ್ಡಿದೆ. ಬದುಕಿನ ಅನಿವಾರ್ಯತೆಯೋ? ಅಧಿಕಾರದ ದರ್ಪದ ದೌರ್ಜನ್ಯವೋ? ಕೌಟುಂಬಿಕ ಒತ್ತಡವೋ? ಸಾಮಾಜಿಕ ಪಿತೂರಿಯೋ? ಮತ್ಯಾವುದೋ ಕಾರಣಕ್ಕೆ
ಲೈಂಗಿಕ ದೌರ್ಜನ್ಯ’ ಕ್ಕೆ ಒಳಗಾಗಿದ್ದ ಸಂತ್ರಸ್ತೆಯರ ವಿಡಿಯೋಗಳು ಅವರದ್ದೇ ಊರಿನ-ತಾಲ್ಲೂಕಿನ ಗಲ್ಲಿಗಲ್ಲಿಗಳಲ್ಲಿ ಹಂಚಲ್ಪಟ್ಟಿದ್ದರಿಂದ ಆ ಎಲ್ಲಾ ಶೋಷಿತ’ರ ಬದುಕೀಗ ಮೂರಾಬಟ್ಟೆಯಾಗಿದೆ. ಮನೆಬಿಟ್ಟು ಹೊರಬರಲಾರದ, ಮನೆಯಲ್ಲಿ ಇರಲಾರದ ತಳಮಳದಲ್ಲಿ ಪ್ರತಿ ಕ್ಷಣವೂ ಕುದ್ದುಹೋಗುತ್ತಿರುವ ಸಂತ್ರಸ್ತೆಯರ ಬದುಕೇ ಈಗ ಮರಣಶಯ್ಯೆಯಂತಾಗಿದೆ. ಅವರ ಮನದಾಳದ ಹಿಡಿಶಾಪ ದೌರ್ಜನ್ಯವೆಸಗಿದವನ ಮೇಲಷ್ಟೇ ಅಲ್ಲ ಅದಕ್ಕಿಂತಲೂ ದುಪ್ಪಟ್ಟು
ಗೌಪ್ಯ’ವಾಗಿದ್ದ ತಮ್ಮ ವಿಡಿಯೋಗಳನ್ನು ಹಂಚಿ ಮಾನ ಹರಾಜು ಮಾಡಿದ ಮಹಾನುಭಾವರ ಮೇಲೆ ನೆಟ್ಟಿರುವುದು ಸುಳ್ಳಲ್ಲ..!
ಗೃಹಿಣಿಯರೇ ಹೆಚ್ಚು..!
ಹಾಸನದ ಪೆನ್‌ಡ್ರೆöÊವ್‌ನಲ್ಲಿ ಚಿತ್ರಿತರಾಗಿರುವ ಬಹುತೇಕ ಹೆಣ್ಣುಮಕ್ಕಳು ಗೃಹಿಣಿಯರೆನ್ನಲಾಗಿದೆ. ಅಷ್ಟೇ ಅಲ್ಲ ಬಹುತೇಕರು ಜೆಡಿಎಸ್ ಪಕ್ಷದ ಸೇರಿದವರೆಂದೂ ತಿಳಿದುಬಂದಿದೆ. ಪಕ್ಷದ ವೇದಿಕೆಯಲ್ಲಿ ಸದಾ ಕಾಣಿಸಿಕೊಳ್ಳು ತ್ತಿದ್ದ ಕಾರ್ಯಕರ್ತೆಯರು, ಮುಖಂಡರ ಪತ್ನಿಯರು, ಕೆಳಹಂತದ ಮಹಿಳಾ ಸಂಘಟಕರೇ ಸಂತ್ರಸ್ತೆಯ ರಾಗಿದ್ದಾರೆ. ಕೆಲ ಪ್ರಖ್ಯಾತ ನಟಿಯರು-ನಿರೂಪಕಿಯರು-ಅಧಿಕಾರಿ-ನೌಕರ ವರ್ಗದವರೂ ಈ ಶೋಷಿತರ ಸಾಲಿಗೆ ಸೇರಿದ್ದಾರೆನ್ನಲಾಗಿದೆ. ಕೆಲವರ ಮೇಲೆ ಲೈಂಗಿಕ ದೌರ್ಜನ್ಯವಾಗಿದ್ದರೆ, ಮತ್ತೆ ಕೆಲವರನ್ನು ಕುಟುಂಬಸ್ತರೇ ಕೂಪಕ್ಕೆ ತಳ್ಳಿದ್ದೂ ಉಂಟು. ಮತ್ತೆ ಕೆಲವು ವ್ಯಯಕ್ತಿಕ ಕಾರಣಗಳಿಗಾಗಿ ಬಲಿಪಶುವಾದವರೂ ಬಹಳಷ್ಟು ಮಂದಿ ಇದ್ದಾರೆ. ಬದುಕಿನ ಒಂದು ಹಂತದಲ್ಲಿ ನಡೆದುಹೋದ ಈ ದೌರ್ಜನ್ಯ’ ಮಕ್ಕಳು ಎದೆಮಟ್ಟಕ್ಕೆ ಬೆಳೆದಿರುವ ಜೀವನದ ಈ ಹಂತದಲ್ಲಿ ಬಯಲಾಗಿರುವುದು ಈ ಗೃಹಿಣಿಯರ ಬದುಕನ್ನು
ಅತ್ತ ದರಿ ಇತ್ತ ಪುಲಿ’ ಯಂತಾಗಿಸಿದೆ.
ಮನೆ ಮಾರಾಟಕ್ಕಿದೆ..!
ಹಾಸನ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಈಗ ದಿಢೀರಾಗಿ ಮನೆಗಳು ಮಾರಾಟಕ್ಕಿವೆ. ಅದರಲ್ಲೂ ಹೊಳೆನರಸೀಪುರ ಪಟ್ಟಣದಲ್ಲಂತೂ ಇಪ್ಪತ್ತಕ್ಕೂ ಹೆಚ್ಚು ಮನೆಗಳು ಅಚಾನಕ್ಕಾಗಿ ಖಾಲಿಯಾಗಿದ್ದು `ಮನೆ ಮಾರಾಟಕ್ಕಿದೆ’ ಎಂಬ ನಾಮಫಲಕಗಳು ರಾರಾಜಿಸತೊಡಗಿವೆ. ಇನ್ನೊಂದಷ್ಟು ಮಂದಿ ಸಂತ್ರಸ್ತೆಯರು ಹುಟ್ಟೂರು ಬಿಟ್ಟು ಬೇರೆಲ್ಲೋ ಹೋಗಿದ್ದಾರೆನ್ನಲಾಗಿದ್ದು ಬಹುತೇಕರ ಮೊಬೈಲ್‌ಗಳು ಸ್ವಿಚ್‌ಆಫ್ ಆಗಿವೆ. ಮೂರಕ್ಕೂ ಹೆಚ್ಚು ಆತ್ಮಹತ್ಯಾ ಯತ್ನ ಪ್ರಯತ್ನಗಳು ನಡೆದಿವೆಯಾದರೂ ಸಕಾಲಿಕ ಎಚ್ಚರಿಕೆಯಿಂದಾಗಿ ಜೀವ ಉಳಿದಿದೆ. ಆದರೆ, ಬದುಕು… ಅದೇ ನೋವು..ಅದೇ ಸಂಕಟ.. ಅದೇ ಸಾಮಾಜಿಕ ನಿಂದನೆ…!