ಮಾಮು ಮಕ್ಕಳಿಗೆ ಶನಿಕಾಟ
ನಮ್ಮ ಮಾಮು ಮಕ್ಕಳಿಗೆ ಏಳರಾಟ ಆರಂಭ ವಾಗಿದೆಯೇ? ಯಾಕೆಂದರೆ ನಾವು ಮಾಮು ಮಕ್ಕಳು… ಮಾಮು ಮಕ್ಕಳು ನಮಗಿಲ್ಲ ಶನಿಕಾಟ…
ಉಳಿದವರಿಗೆ ಏಳ ರಾಟ ಎಂದು ಬೀಗಿದ್ದ ಮಾಮು ಮಕ್ಕಳ ಮುಖ ಸಪ್ಪೆ.. ಸಪ್ಪೆ. ನನಗೆ ಮಾಮು ಮಕ್ಕಳ ಮುಖ ನೋಡಲು ಆಗುತ್ತಿಲ್ಲ.. ಆಗುತ್ತಿಲ್ಲ ಎಂದು ಮೇಕಪ್ ಮರೆಮ್ಮ ಸೆರಗಿನಿಂದ ಕಣ್ಣೀರು ಒರೆಸಿಕೊಂಡು ದುಃಖಿಸಿದಳು. ಎಲ್ಲ ಬಿಟ್ಟು ಮಾಮುನ ಮಕ್ಕಳಿಗೆ ಹೀಗೇಕೆ ಆಯಿತು…. ಇದು ಹೋಗಲಿ ಆ ಮಾಮುನ ಮಗ ಮೂರನೇ ಸಲ ಢಮಾರ್. ಇದೆಲ್ಲ ಬೇಕಿತ್ತಾ ನಿಮಗೆ ಅನ್ನುವವರೂ ಯಾರಿಲ್ಲ… ಅವರ ದೊಡ್ಡಪ್ಪನಂತೂ ತಮ್ಮ ಅನುಜನಿಗೆ ಕರೆ ಮಾಡಿ… ಇವೇನೋ ಇವು..ನಮ್ಮವು ಹಾಗಾದವು… ನಿಮ್ಮದು ಒಂದೇ ಇದ್ದರೂ ಹೀಗಾಯಿತು ಯಾಕೆ? ಅಂದಾಗ…ಅನುಜನು ನೀವೇನಾದರೂ ಲಿಂಬೆಹಣ್ಣಿನ ಗದ್ದಲ ಎಬ್ಬಿಸಿದಿರಾ ಎಂದು ಕೇಳಿದಾಗ… ಛೆ…ಛೆ ಎಂದು ಸುಮ್ಮನಾದ. ಇತ್ತ ಮದ್ರಾಮಣ್ಣನವರು ನೋಡಿದ್ರೆನಪಾ…. ಅವರು ಇದ್ದದ್ದು ಬತ್ತಿ ಹೋಗುವ ಹಾಗೆ ಕಣ್ಣೀರು ಹಾಕಿದರು. ಆ ಕಣ್ಣೀರಿನಿಂದಲೇ ಹೊಲಗಳಿಗೆ ನೀರಾವರಿ ಮಾಡಬಹುದು ಎಂದರು. ಬೇಕಾದರೆ ಡ್ಯಾಂ ಕಟ್ಟಬಹುದು ಅಂದರು. ಆದೆಲ್ಲ ಆಗುವ ಮಾತೇನ್ರೀ… ಅಂದರೆ ಅದಕ್ಕೆ ದನಿ ಗೂಡಿಸಿದ ಬಂಡಿಸಿವು… ಕಣ್ಣೀರಿನ ಕಥೆಯೂ-ಕಂದನ ಚುನಾವಣೆಯ ವ್ಯಥೆಯೂ ಎಂದು ಹಾಡಿದಾಗ ಎಲ್ಲರೂ ಮಸ್ತ್..ಮಸ್ತ್ ಎಂದು ಕೂಗಿದರು. ಅಲ್ಲಿ ಬಗ್ಗಾವಿಯಲ್ಲಿ ಇನ್ನೊಬ್ಬ ಮಾಮುನ ಮಗ… ಇದೆಲ್ಲ ಏನು? ಎಲೆಕ್ಷನ್ ಅಂದರೆ ಹೀಗೇನಾ ವಾಟ್ ಈಸ್ ಧಿಸ್ ಎಂದು ಪ್ರಶ್ನೆ ಮಾಡಿದರು. ಸೀದಾ ಈ ಮಾಮುನ ಮಗನಿಗೆ ಕಾಲ್ ಮಾಡಿ..ಏನೋ ದೋಸ್ತ್ ಇದು…. ನಿಮ್ಮಪ್ಪ ಅಂಗೆ… ನಮ್ಮಪ್ಪ ಇಂಗಿ… ನಿಮ್ತಾತ ಅಂಗೆ… ನಮ್ತಾತ ಇಂಗಿ ಆದರೂ ನೀವು ಅಂಗಂಗೆ ಇರಿ ಎಂದು ಎರಡೂ ಕಡೆ ಹಿಂಗೆ ಮಾಡಿದರಾ? ಎಂದು ಕೇಳಿದಾಗ…ಈ ಕಡೆಯ ಮಾಮುನ ಮಗ ನನಗೆ ಗೊತ್ತಿಲ್ಲ ಬ್ರೋ…ಎಂದು ಫೋನಿಟ್ಟ. ಜಿಲಿಬಿಲಿ ಎಲ್ಲವ್ವ ಮಾತ್ರ ಏನ ಗಲಿ ಮಾರಾಯ…ಎರಡೂ ಹುಡುಗರು ಹೋಗಿ ತಾಯತಾ ಕಟ್ಟಿಸಿಕೊಳ್ಳಬೇಕು… ಹಾಂ… ಇನ್ನೊಬ್ಬ ಮಾಮುನ ಮಗ ಸಾರಥಿ ಆಗಿದ್ದ. ಆತನದೂ ಹೀಗಾಯಿತು… ಆತನಿಗೂ ತಾಯತ ಕಟ್ಟಿಸಬೇಕು ಎಂದು ಕರಿಲಕ್ಷಂಪತಿಗೆ ಕಾಲ್ ಮಾಡತೊಡಗಿದಳು.