For the best experience, open
https://m.samyuktakarnataka.in
on your mobile browser.

ಮಿಥುನ್ ಪಯಣದ ಹಾದಿ ಪ್ರೇರಣಾದಾಯಕ

03:35 AM Oct 21, 2024 IST | Samyukta Karnataka
ಮಿಥುನ್ ಪಯಣದ ಹಾದಿ ಪ್ರೇರಣಾದಾಯಕ

ಅಸಫಲತೆ, ಸಂಘರ್ಷ, ಅವಮಾನ ಹಾಗೂ ಸೋಲು ಹೀಗೆ ಬದುಕಿನಲ್ಲಿ ಸಾಲು ಸಾಲು ಸೋಲುಗಳ ಸವಾಲುಗಳನ್ನು ಎದುರಿಸುವ ಯುವ ಮನಸ್ಸುಗಳು ಕೆಲವೊಮ್ಮೆ ಬದುಕೆಂಬ ಬದುಕಿಗೆ ಕೊಳ್ಳಿ ಇಟ್ಟು ಜೀವ ಹಾಗೂ ಜೀವನವನ್ನು ಕೈ ಚೆಲ್ಲಿದ ಹಲವಾರು ಉದಾಹರಣೆಗಳಿವೆ. ಅಂತವರೆಲ್ಲರೂ ಒಮ್ಮೆ ಮಿಥುನ್ ಬಣ್ಣದ ಬದುಕಿನ ಪಯಣದ ಹಾದಿಯನ್ನು ಗಮನಿಸಬೇಕು. ಮಿಥುನ್ ಪಯಣಿಸಿದ ಹಾದಿ ನಿಜಕ್ಕೂ ಒಂದು ಪ್ರೇರಣಾದಾಯಕ ಸಂಗತಿ. ಮಿಥುನ್ ಅವರಿಗೆ ಚಿತ್ರ ಜಗತ್ತಿನ ಅತ್ಯುನ್ನತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಅರಸಿ ಬಂದಿದೆ. ರಾಜಕಪೂರ್ ನಂತರ ಇಂಟರ್‌ನ್ಯಾಷನಲ್ ಫೇಮ್ ಪಡೆದವರ ಸಾಲಿನಲ್ಲಿ ಮಿಥುನ್ ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಮಿಥುನ್ ಐ ಆಮ್ ಎ ಡಿಸ್ಕೋ ಡ್ಯಾನ್ಸರ್ ಎಂದೋ ಜಿಮ್ಮಿ ಜಿಮ್ಮಿ ಎಂದೋ ಒಂದಿಡೀ ಯುರೋಪ್, ಅಂದಿನ ಸೋವಿಯತ್ ಯೂನಿಯನ್, ಜಪಾನ್ ಹಾಗೂ ಭರತ ಖಂಡವನ್ನು ತನ್ನ ತಾಳಕ್ಕೆ ಕುಣಿಸಿದ ಪರಿ ನಿಜಕ್ಕೂ ಅಚ್ಚರಿ ಮೂಡಿಸುವಂತಹದು. ಹೀಗೆ ಪ್ರಪಂಚದ ನಾನಾ ಪ್ರಾಂತ್ಯಗಳಲ್ಲಿ ತನ್ನ ನೃತ್ಯ ಕೌಶಲ್ಯದಿಂದ ಹುಚ್ಚೆದ್ದು ಕುಣಿಸುವಂತೆ ಮಾಡಿದ್ದ ಮಿಥುನರ ಬದುಕು ಪ್ರಾರಂಭದಲ್ಲಿ ಇನ್ನಿಲ್ಲದಂತೆ ನಾನಾ ಸವಾಲುಗಳ ತಾಳಕ್ಕೆ ಕುಣಿಸಿತ್ತು ಎಂಬುದು ಕೂಡ ಅಷ್ಟೇ ಸತ್ಯ. ಕಾಲೇಜು ದಿನಗಳಲ್ಲಿ ಒಂದು ಬಗೆಯ ಕ್ರಾಂತಿಕಾರಿ ಚಿಂತನೆಗಳಿಂದ ಪ್ರೇರಿತರಾಗಿದ್ದ ಅವರು ಕಾಲ ಕಳೆದಂತೆ ನಕ್ಸಲ್ ಚಿಂತನೆಗಳತ್ತ ಹೊರಳಿದ್ದರು. ಅಂದಿನ ಕಮ್ಯುನಿಸ್ಟ್ ಹಾಗೂ ನಕ್ಸಲ್ ನಾಯಕ ಚಾರು ಮಝುಂದಾರ್‌ರೊಂದಿಗೆ ಪ್ರಬಲವಾದ ನಂಟನ್ನು ಹೊಂದಿದ್ದರು. ಪರಿಣಾಮವಾಗಿ ನಕ್ಸಲ್ ಚಟುವಟಿಕೆಗಳಲ್ಲಿಯೂ ಭಾಗಿಯಾಗುವ ಪ್ರಮೇಯಗಳು ಬಂದೊದಗಿದ್ದವು. ಆದರೆ ಪೋಷಕರಿಗೆ ಅದರಲ್ಲಿಯೂ ಅವರ ತಾಯಿಗಂತೂ ಹೊತ್ತು ಗೊತ್ತಿಲ್ಲದೇ ಕಾಣೆಯಾಗುತ್ತಿದ್ದದು, ಹೊತ್ತಲ್ಲದ ಹೊತ್ತಿನಲ್ಲಿ ಮನೆ ಸೇರುತ್ತಿದ್ದದ್ದು ಮಗನ ಬದುಕಿನ ಬಗ್ಗೆ ಚಿಂತೆಯನ್ನುಂಟು ಮಾಡಿತ್ತು. ಯಾವುದೇ ಕ್ಷಣದಲ್ಲೂ ಪೊಲೀಸರ ಬಂದೂಕಿನ ನಳಿಕೆಯ ಗುಂಡು ಆತನ ಎದೆ ಸೀಳುವ ಸಂಭವವಿತ್ತು, ಆದರೆ ಬದಲಾದ ಸನ್ನಿವೇಶದಲ್ಲಿ ಸಹೋದರನ ಸಾವು ಹಾಗೂ ತಾಯಿಯ ಮಮತೆ ನಕ್ಸಲ್ ವಾದವನ್ನು ಬಿಟ್ಟು ಕೋಲ್ಕತ್ತಾ ನಗರವನ್ನು ತೊರೆಯುವಂತೆ ಮಾಡಿತ್ತು. ಅಂದಿನ ಆ ಒಂದು ನಿರ್ಣಯ ಇಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯವರೆಗೆ ತಂದು ನಿಲ್ಲಿಸಿದೆ.
ನಕ್ಸಲ್ ಚಿಂತನೆ ಹಾಗೂ ಕೋಲ್ಕತ್ತಾದ ಮಧ್ಯಮವರ್ಗದ ಬದುಕಿನ ಸವಾಲುಗಳು ಒಂದು ಬಗೆಯದಾಗಿದ್ದರೆ ಮುಂಬೈ ಬದುಕಿನ ಸವಾಲುಗಳೇ ಬೇರೆಯದಾಗಿದ್ದವು. ಅಲ್ಲಿ ಇರಲು ಸೂರಿನಿಂದಾದಿಯಾಗಿ ಮಹಾನಗರಿಯ ಒಂಟಿತನದವರೆಗೆ ಬದುಕಿನ ನಾನಾ ಮಜುಲುಗಳು ದರ್ಶನವಾಗುತ್ತಿತ್ತು. ಮೊದ ಮೊದಲು ತನ್ನ ನೆಂಟರಿಷ್ಟರ ಮನೆಯಲ್ಲುಳಿದು ಮುಂಬೈ ಬದುಕಿಗೆ ಆಗ ತಾನೇ ಕಣ್ ತೆರೆಯುತ್ತಿದ್ದ ಮಿಥುನ್‌ಗೆ ಇನ್ನಿಲ್ಲದಂತೆ ಕಾಡಿದ್ದು ನಕ್ಸಲ್ ಛಾಯೆಯ ಆ ದಿನಗಳು. ನೆಂಟರಿಷ್ಟರು ಹಿಂದಿದ್ದ ನಕ್ಸಲ್ ನಂಟನ್ನು ಪ್ರಸ್ತಾಪಿಸಿ ಮನೆಗಳಿಂದ ಹೊರದಬ್ಬಿದ್ದರು. ಆದರೆ ಛಲ ಬಿಡದ ಛಲದಂಕ ಮಲ್ಲನಂತೆ ಮುಂಬೈ ಬೇಡಿದ ಎಲ್ಲ ಸುಂಕವನ್ನು ಕಾಲದಿಂದ ಕಾಲಕ್ಕೆ ಕಟ್ಟುತ್ತಾ ನಟನಾಗುವ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದರು. ಈ ಹಾದಿಯಲ್ಲಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಮುಂಬೈನಲ್ಲಿ ಹಾಗೂ ಹೀಗೂ ರಸ್ತೆಗಳಲ್ಲಿ ಜೀವನ ಕಳೆದು ಅಲ್ಲಿಯೇ ಕೆಲವು ಸ್ನೇಹಿತರನ್ನು ಸಂಪಾದಿಸಿ ಮುಂಬೈನ ಒಂಟಿತನಕ್ಕೆ ಸಡ್ಡು ಹೊಡೆದಿದ್ದರು. ರಾತ್ರಿ ೧೨ ಗಂಟೆಗಳವರೆಗೆ ರಸ್ತೆಯಲ್ಲಿ ಅಡ್ಡಾಡಿಕೊಂಡು ಕಾಲ ಕಳೆದು ನಂತರ ಸ್ನೇಹಿತರ ಹಾಸ್ಟೆಲ್‌ಗಳಲ್ಲಿ ವಾಸವಿದ್ದು ಬೆಳ್ಳಂ ಬೆಳಗ್ಗೆ ನಾಲ್ಕರ ಆಸು ಪಾಸಿನಲ್ಲಿ ಹಾಸ್ಟೆಲ್‌ನಿಂದ ಹೊರಗೆ ಬಂದು ಹಾಸ್ಟೆಲ್ ಎದುರೇ ಇದ್ದ ಸುಲಭ ಶೌಚಾಲಯಗಳಲ್ಲಿ, ಜಮಖಾನದಲ್ಲಿ ಬೆಳಗಿನ ನಿತ್ಯ ಕರ್ಮಗಳನ್ನು ಮುಗಿಸಿ ಲೋಕಲ್ ರೈಲುಗಳಲ್ಲಿ, ಜುಹೂ ಕಿನಾರೆಯಲ್ಲಿ ಪೆನ್ನು, ಕಾಸೆಮಿಟಿಕ್ಸ್ಗಳನ್ನೂ ಮಾರಿ ಜೀವನ ಸಾಗಿಸುತ್ತಿದ್ದರು. ಹಾಗಿದ್ದಾಗ್ಯೂ ಗಮ್ಯದೆಡೆಗಿದ್ದ ಲಕ್ಷ್ಯ ಮಾತ್ರ ಬದಲಾಗಿರಲಿಲ್ಲ. ಅದೇ ಸಮಯದಲ್ಲಿ ಪುಣೆಯ ಎಫ್‌ಟಿಟಿಐ ಫಿಲಂ ಅಂಡ್ ಟೆಲಿವಿಷಿನ್ ಇನ್ಸಿಟ್ಯೂಟ್ ಆಫ್ ಇಂಡಿಯಾದಲ್ಲಿ ಸೇರಬೇಕೆಂದು ತನ್ನ ಸ್ನೇಹಿತನ ಸಹಾಯದಿಂದ ಅರ್ಜಿ ಸಲ್ಲಿಸಿ ಮನೆಯವರ ಇಚ್ಛೆಯ ವಿರುದ್ಧ ಎಫ್‌ಟಿಟಿಐನಲ್ಲಿ ಸಂದರ್ಶನ ಕೊಟ್ಟು ಸೀಟು ಗಿಟ್ಟಿಸಿಕೊಂಡಿದ್ದರು. ಆದರೆ ಅಂದು ಎಫ್‌ಟಿಟಿಐನಲ್ಲಿದ್ದವರೆಲ್ಲರೂ ದೊಡ್ಡ ದೊಡ್ಡ ಸ್ಥಾನಗಳಲ್ಲಿದ್ದವರ ಮಕ್ಕಳು, ದೊಡ್ಡ ದೊಡ್ಡ ನಗರಗಳ ವಿದ್ಯಾರ್ಥಿಗಳು ಅವರೊಡನೆ ಒಡನಾಡುವಾಗ ಮಿಥುನ್ ಕೆಲವೊಮ್ಮೆ ಕುಗ್ಗಿ ಹೋಗುತ್ತಿದ್ದರಂತೆ, ಅದೇ ಕಾರಣಕ್ಕೆ ಹೊಸ ಬಟ್ಟೆಗಳನ್ನು ಹೋಲಿಸಿ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಹೇರ್ ಕಟ್ ಮಾಡಿಸಿಕೊಂಡು ಬಂದಿದ್ದರಂತೆ. ಮಿಥುನ್ ತನ್ನ ಗುರಿ ಮುಟ್ಟಲು ಏನೇನು ಬೇಕೋ ಅದೆಲ್ಲವನ್ನು ಎಷ್ಟೇ ಕಷ್ಟ ಬಂದರು ಮಾಡಿಯೇ ಸಿದ್ಧ ಎಂಬ ನಿರ್ಧಾರಕ್ಕೆ ಬಂದಾಗಿತ್ತು. ಎಫ್‌ಟಿಟಿಐನಲ್ಲಿದ್ದ ಬಂಗಾಳಿ ವಿದ್ಯಾರ್ಥಿಗಳನ್ನು ಕಡೆಗಣಿಸಿ ರ‍್ಯಾಗಿಂಗ್‌ನಂತಹ ಪ್ರಸಂಗಗಳು ನಡೆದಾಗ ಬಂಗಾಳಿ ಅಸ್ಮಿತೆ ಜಾಗ್ರತರಾಗಿ ಸಿಡಿದೇಳುತ್ತಿದ್ದರಂತೆ. ಹೀಗೆ ಎಫ್‌ಟಿಟಿಐ ನಟನೆಯ ಪಾಠವನ್ನೇನೋ ಕಲಿಸಿತು ಎಫ್‌ಟಿಟಿಐನಲ್ಲಿ ಕಲಿತವರೆಲ್ಲರೂ ನಟರಾಗಿ ಯಶಸ್ವಿಯಾಗಬೇಕೆಂದಿಲ್ಲವಲ್ಲ. ಎಫ್‌ಟಿಟಿಐ ನಂತರದ ದಿನಗಳು ಅಷ್ಟೇ ಪ್ರಯಾಸದಾಯಕವಾಗಿದ್ದವು. ಆದರೆ ಅವರ ಗಮ್ಯದೆಡೆಗಿದ್ದ ಏಕಾಗ್ರತೆ ಬದಲಾಗಿರಲಿಲ್ಲ. ನಾನಾ ಈವೆಂಟ್‌ಗಳಲ್ಲಿ ಸಿನಿಮಾ ಜಗತ್ತಿನ ಮಂದಿ ಗುರುತಿಸಲಿ ಎಂದೇ ಯಾವ ಅಪೇಕ್ಷೆ ಇಲ್ಲದೆ ಡಾನ್ಸ್ ಮಾಡಿ ಬರುತ್ತಿದ್ದರಂತೆ. ಹಾಗಿರುವಾಗ ಖ್ಯಾತ ತಾರೆ ಹೆಲೆನ್ ಅವರ ಇವೆಂಟ್ ಶುರುವಾಗುವ ಮುನ್ನ ಅವರು ಮೂವತ್ತು ನಿಮಿಷಗಳ ಕಾಲ ಭರ್ಜರಿ ಡಾನ್ಸ್ ಪ್ರದರ್ಶನ ಮಾಡಿದ್ದರಂತೆ, ಪರಿಣಾಮ ಸಿನಿಮಾ ಸುದ್ದಿಯನ್ನು ಹಿಡಿದಿಡುವ ಪತ್ರಕರ್ತ ಮಿತ್ರರು ಅವರ ನೃತ್ಯ ಹೆಲೆನ್ ಅವರನ್ನು ಮೀರಿಸುವಂತಿತ್ತು ಎಂದು ಬರೆದಿದ್ದರಂತೆ. ಇದು ಡಿಸ್ಕೋ ಡ್ಯಾನ್ಸರ್ ಖ್ಯಾತಿಯ ನಿರ್ದೇಶಕ ಸುಭಾಷ ಅವರ ಗಮನ ಸೆಳಿದಿತ್ತು. ಆದರೆ ಸುಭಾಷ ತತಕ್ಷಣಕ್ಕೇನು ಅವಕಾಶ ಕೊಟ್ಟಿರಲಿಲ್ಲ. ತನ್ನ ಮೊದಲ ಚಲನ ಚಿತ್ರದಲ್ಲಿಯೇ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದರು. ಅಂದು ಮಿಥುನರನ್ನು ಉದ್ದೇಶಿಸಿ ನಿಮಗೆ ರಾಷ್ಟ್ರೀಯ ಪುರಸ್ಕಾರ ದೊರೆತಿದೆ ಎಂದು ಹೇಳಿದಾಗ ಈ ಪುರಸ್ಕಾರಕ್ಕೆ ಎಷ್ಟು ಸಂಭಾವನೆ ದೊರೆಯಬಹುದು ಎಂದು ಕೇಳಿದ್ದರಂತೆ. ಸಂಭಾವನೆಯೇನಿಲ್ಲ ಎಂದಾಗ ರಾಷ್ಟ್ರೀಯ ಪುರಸ್ಕಾರ ಪಡೆದ ಸಂತೋಷ ಕ್ಷಣ ಮಾತ್ರದಲ್ಲಿ ಮಾಯವಾಗಿತ್ತು. ಪುರಸ್ಕಾರಗಳು ಹಸಿವನ್ನು ನೀಗಿಸುವುದಿಲ್ಲವಲ್ಲ. ಕಾಲ ಕಳೆದಂತೆ ಅವರು ಸಣ್ಣ ಪುಟ್ಟ ಪಾತ್ರದಲ್ಲಿ ಅಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅವರ ಅದೃಷ್ಟದ ಬಾಗಿಲು ತೆರೆದಿದ್ದು "ಡಿಸ್ಕೋ ಡ್ಯಾನ್ಸರ್" ಚಿತ್ರದ ಅವಕಾಶ. ಅಂದು ಹೆಲೆನ್ ಅವರ ಈವೆಂಟ್‌ನಲ್ಲಿ ಮಿಥುನ್‌ರ ಬಗ್ಗೆ ಬರೆದಿದ್ದ ಬರವಣಿಗೆಯಿಂದ ಪ್ರಭಾವಿತರಾಗಿದ್ದ ಸುಭಾಷ ಅವರನ್ನು ಹಾಡಿ ಹೊಗಳಿದ್ದರು. ಅದೇ ಕೊನೆ, ಮಿಥುನ್ ಹಿಂದಿರುಗಿ ನೋಡಲಿಲ್ಲ. ತನ್ನ ಬಣ್ಣದ ಬಗ್ಗೆ, ಮಾತನಾಡುವ ಶೈಲಿಯ ಬಗ್ಗೆ ಟೀಕಿಸಿದ್ದ ಹಲವರಿಗೆ ಡಿಸ್ಕೋ ಡ್ಯಾನ್ಸರ್ ಮೂಲಕ ಉತ್ತರ ನೀಡಿದ್ದರು. ನಂತರ ನಡೆದಿದ್ದು ಇತಿಹಾಸ. ಒಟ್ಟಿನಲ್ಲಿ ಘಟಾನುಘಟಿ ನಾಯಕರಾದ ಅಮಿತಾಭ್, ವಿನೋದ್ ಖನ್ನಾ, ಧರ್ಮೇಂದರ್ ಇವರೆಲ್ಲರ ನಡುವೆ ಮಿಥುನ್ ತನಗೊಂದು ವಿಶಿಷ್ಟ ಸ್ಥಾನ ಸೃಷ್ಟಿಸಿಕೊಂಡಿದ್ದರು. ಅಂದು ಗೋಧಿ ಬಣ್ಣದ ಹುಡುಗ ಏನು ಮಾಡಿಯಾನು ಎಂದು ಮೂಗು ಮುರಿದಿದ್ದ ನಿರ್ದೇಶಕರು ಕಾಲ್ ಶೀಟಿಗೆ ದುಂಬಾಲು ಬಿದ್ದಿದ್ದರು.