For the best experience, open
https://m.samyuktakarnataka.in
on your mobile browser.

ಮಿಲ್ಟನ್ ಈ ಹೊತ್ತು ನೀನು ಬದುಕಿರಬೇಕಾಗಿತ್ತು!

01:15 AM Feb 16, 2024 IST | Samyukta Karnataka
ಮಿಲ್ಟನ್ ಈ ಹೊತ್ತು ನೀನು ಬದುಕಿರಬೇಕಾಗಿತ್ತು

ಭಾಷೆಯ ಸಮೃದ್ಧಿ ಬದುಕಿನ ಸಮೃದ್ಧಿಯನ್ನು ಅವಲಂಬಿಸಿರುತ್ತದೆ. ಭಾಷೆ ವ್ಯಕ್ತಿಯ ವಿಶ್ವಾಸಾರ್ಹತೆಯನ್ನು, ವ್ಯಕ್ತಿತ್ವದ, ನೈತಿಕತೆಯನ್ನು ವಿಶ್ಲೇಷಿಸುತ್ತದೆ, ವ್ಯಾಖ್ಯಾನಿಸುತ್ತದೆ ಮತ್ತು ವಿವರಿಸುತ್ತದೆ. ಭಾಷೆ ಮತ್ತು ಬದುಕು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿರುತ್ತವೆ. ಭಾಷೆಗೂ ತನ್ನದೇ ನೈತಿಕತೆ ಇರುತ್ತದೆ. ಆದರೆ ಇದು ಭಾಷೆಯನ್ನಾಡುವ ವ್ಯಕ್ತಿಯ ನೈತಿಕತೆಯನ್ನು ಅವಲಂಬಿಸಿರುತ್ತದೆ, ಹಾಗೆಯೇ ಆ ಭಾಷೆಯನ್ನಾಡುವ ಒಟ್ಟು ನಾಡಿನ ನೈತಿಕತೆಯನ್ನೂ ಅವಲಂಬಿಸಿರುತ್ತದೆ. ಹೀಗಾಗಿ ಜನರ, ನಾಡಿನ ನೈತಿಕತೆಯ ಅಧಃಪತನ ಭಾಷೆಯ ಅಧಃಪತನವೂ ಆಗುತ್ತದೆ. ಜೀವನದ ಮೌಲಿಕತೆ ಕಡಿಮೆಯಾದಂತೆ ಭಾಷೆ ತನ್ನ ಸತ್ವ ಕಳೆದುಕೊಳ್ಳುತ್ತದೆ. ಶಬ್ದಗಳು ಕೇವಲ ಸಪ್ಪಳ ಮಾಡುತ್ತವೆ, ಅರ್ಥ ಹೊರಡಿಸುವುದಿಲ್ಲ. ಶಬ್ದ ಅರ್ಥದಿಂದ ಬೇರ್ಪಡುತ್ತದೆ. ಇದು ವ್ಯಕ್ತಿಯ ಅವಸಾನ ಮಾತ್ರ ಸೂಚಿಸುವುದಿಲ್ಲ ನಾಡಿನ ಅವಸಾನದ ಕಡೆಗೂ ಬೆರಳು ಮಾಡುತ್ತದೆ. ಭಾಷೆಯ ಅರ್ಥದ ಸ್ಥರಗಳು ಮೌಲಿಕತೆ, ಪ್ರಸ್ತುತತೆ ಕಳೆದುಕೊಂಡು ಶಬ್ದಗಳು ಸವಕಲ ನಾಣ್ಯಗಳಾಗುತ್ತವೆ. ಇದರಿಂದ ಪಾರಾಗಲು ದಾರಿಗಳೇ ಇಲ್ಲವೆ? ಶಬ್ದಾರ್ಥಗಳ ನಡುವೆ ಜೈವಿಕ ಸಂಬಂಧ ಕುದುರಿಸಲು ಸಾಧ್ಯವೇ ಇಲ್ಲವೆ? ದಾರಿಯಿದೆ. ಆದರೆ ಬಹಳ ಕಷ್ಟಕರವಾದ, ಕಠಿಣಾತೀಕಠಿಣವಾದ ದಾರಿ. ನಮ್ಮ ಬದುಕನ್ನು ಹಸನಗೊಳಿಸುವುದರ ಮೂಲಕ, ನಮ್ಮ ಅಂತರಂಗ-ಬಹಿರಂಗ ಪಾವನಗೊಳಿಸುವುದರ ಮೂಲಕ, ಆತ್ಮಸಾಕ್ಷಿಯ ಅಣತಿಯಂತೆ, ಮನಸಾಕ್ಷಿಯ ನಿರ್ದೇಶನದಂತೆ, ವಿವೇಕದ ಬೆಳಕಿನಲ್ಲಿ ಜೀವನ ನಡೆಸುವುದರ ಮೂಲಕ ಶಬ್ದಗಳಲ್ಲಿ ಅರ್ಥ ತುಂಬಲು ಸಾಧ್ಯ.
ವ್ಯಕ್ತಿತ್ವದ ವಿಶ್ವಾಸಾರ್ಹತೆ ಬಹಳ ಮಹತ್ವದ್ದು. ವಿಶ್ವಾಸಾರ್ಹತೆ ವೈಯಕ್ತಿಕ ಮಟ್ಟದಲ್ಲೂ ಸಾಮುದಾಯಿಕ ಮಟ್ಟದಲ್ಲೂ ಕಾಪಾಡಿಕೊಂಡು ಹೋಗುವ ಅಗತ್ಯ ಇದೆ. ಹಾಗೆಯೇ ನಾಡಿಗೂ, ದೇಶಕ್ಕೂ ನೈತಿಕ ವಿಶ್ವಾಸಾರ್ಹತೆ ಇರುತ್ತದೆ. ಆಧುನಿಕತೆ ಸೃಷ್ಟಿಸಿದ ಅನೇಕ ಅವಾಂತರಗಳಲ್ಲಿ ಭಾಷೆಯ ಅಪಮೌಲೀಕರಣ ಕೂಡ ಒಂದು. ಆಧುನಿಕತೆ ಪ್ರಗತಿ ಮತ್ತು ಅಭಿವೃದ್ಧಿಗೆ ಒತ್ತು ನೀಡುತ್ತದೆ. ಪ್ರಗತಿಗಾಗಿ, ಅಭಿವೃದ್ಧಿಗಾಗಿ ಏನಾದರೂ ಮಾಡಬಹುದು, ಏನೂ ಮಾಡಿದರೂ ತಪ್ಪಲ್ಲ ಎಂಬ ನಿಲುವಿಗೆ ಜನರು ಅಷ್ಟೇ ಅಲ್ಲ ಸರ್ಕಾರಗಳು ಕೂಡ ಬಂದು ನಿಂತಿರುವುದು ದುರದೃಷ್ಟಕರ. ಆದರೆ ನೈತಿಕತೆಯನ್ನು ಬಲಿಗೊಟ್ಟು, ವಿಶ್ವಾಸಾರ್ಹತೆಯನ್ನು ಕಳೆದುಕೊಂಡು, ಸೂಕ್ಷ್ಮತೆ ಸಂವೇದನಾಶೀಲತೆಯನ್ನು ಬಿಟ್ಟುಕೊಟ್ಟು ಸಾಧಿಸಿದ ಪ್ರಗತಿಗೆ ಅರ್ಥವೂ ಇಲ್ಲ ಸಾರ್ಥಕತೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ಇಂಗ್ಲಿಷ್ ಪ್ರಸಿದ್ಧ ರೋಮ್ಯಾಂಟಿಕ್ ಕವಿ ವಿಲಿಯಂ ವರ್ಡ್ಸ್ ವರ್ತ್ ಬರೆದ "ಮಿಲ್ಟನ್, ಈ ಹೊತ್ತು ನೀನು ಬದುಕಿರಬೇಕಾಗಿತ್ತು" ಎಂಬ ಕವನವನ್ನು ವಿಶ್ಲೇಷಿಸಬಹುದು.
ಮಿಲ್ಟನ್‌ನ ಬಗ್ಗೆ ವರ್ಡ್ಸ್ ವರ್ತ್ನಿಗೆ ಅಪಾರ ಆದರ, ಪ್ರೀತಿ ಇತ್ತು. "ಮಿಲ್ಟನ್, ಈ ಹೊತ್ತು ನೀನು ಬದುಕಿರಬೇಕಾಗಿತ್ತು" ಎಂದು ವರ್ಡ್ಸ್ ವರ್ತ್ ಹೇಳುತ್ತಾನೆ. ಇಂಗ್ಲೆಂಡ್‌ಗೆ ಈಗ ನಿನ್ನ ಅಗತ್ಯ ಬಹಳವಿದೆ. ಏಕೆಂದರೆ ಇಂಗ್ಲೆಂಡ್ ನಿಂತ ನೀರಿನಂತಾಗಿದೆ, ಜಡವಾಗಿದೆ, ತನ್ನ ಕ್ರಿಯಾಶೀಲತೆ, ಸೃಜನಶೀಲತೆ ಕಳೆದುಕೊಂಡು ಬಡವಾಗಿದೆ. ಇಂಗ್ಲಿಷ್ ಸಂಸ್ಕೃತಿ ತನ್ನ ಗತವೈಭವ ಕಳೆದುಕೊಂಡು, ತನ್ನ ಆಂತರಿಕ ಸುಖ, ಶಾಂತಿ ನೆಮ್ಮದಿ ನಷ್ಟಮಾಡಿಕೊಂಡು ಮಾನಸಿಕವಾಗಿ, ತಾತ್ವಿಕವಾಗಿ ತೀವ್ರ ಸ್ವರೂಪದ ಬಡತನ ಎದುರಿಸುತ್ತಿದೆ. ಜನರು ಸ್ವಾರ್ಥಿಯಾಗಿದ್ದಾರೆ. ಇಡೀ ನಾಗರಿಕತೆ ಪ್ರಪಾತದಲ್ಲಿ ಬಿದ್ದಿದೆ. ಅವಸಾನದ ಅಂಚಿಗೆ ಬಂದು ನಿಂತಿದೆ ಎಂದು ವರ್ಡ್ಸ್ ವರ್ತ್ ಹೇಳುತ್ತಾನೆ.
ಈ ಪ್ರಪಾತದಿಂದ ಜನರನ್ನು ಮಿಲ್ಟನ್ ಮಾತ್ರ ಮೇಲೆತ್ತಬಲ್ಲ ಎಂದು ವರ್ಡ್ಸ್ ವರ್ತ್ ನಂಬಿದ್ದಾನೆ. "ನಮ್ಮನ್ನು ಮೇಲಕೆತ್ತು, ನಮ್ಮ ಪೂರ್ವದ ನಡವಳಿಕೆ, ನೈತಿಕತೆ, ಸ್ವಾತಂತ್ರ‍್ಯ ಮತ್ತು ಧೀಶಕ್ತಿ ನಮಗೆ ನೀಡು" ಎಂದು ಮಿಲ್ಟನ್‌ಗೆ ವರ್ಡ್ಸ್ ವರ್ತ್ ಮೊರೆಯಿಡುತ್ತಾನೆ. ನಾಗರಿಕತೆಯ ಉತ್ತುಂಗ ಸ್ಥಾನದಲ್ಲಿದ್ದ ಇಂಗ್ಲೆಂಡ್ ತನ್ನ ಸ್ವಂತಿಕೆ, ಶ್ರೀಮಂತಿಕೆ, ಕ್ರಿಯಾಶೀಲತೆ, ಸೃಜನಶೀಲತೆ ಕಳೆದುಕೊಂಡು ಆಧುನಿಕತೆಯ ಆಕರ್ಷಣೆಗೆ ಬಲಿಯಾಗಿ, ಯಂತ್ರಗಳ ಗುಲಾಮರಾಗಿ ಪಾತಾಳದಲ್ಲಿ ಬಿದ್ದು ನಲಗುತ್ತಿದೆ. ಈ ದೇಶವನ್ನು, ಈ ನಾಗರಿಕತೆಯನ್ನು ಮೇಲಕೆತ್ತುವ ಶಕ್ತಿ ಮಿಲ್ಟನ್‌ನಲ್ಲಿ ಮಾತ್ರವಿದೆ. ಹೀಗಾಗಿ ಅವನು ಈ ಹೊತ್ತು ಬದುಕಿರಬೇಕಾಗಿತ್ತು ಎಂದು ವರ್ಡ್ ವರ್ತ್ ಹೇಳುತ್ತಾನೆ. ಪ್ರತ್ಯೇಕವಾಗಿ ಬದುಕುವ, ನಕ್ಷ ತ್ರಮಿಲ್ಟನ್‌ನ ಆತ್ಮ , ಸಮುದ್ರದ ಅಲೆಗಳ ಸಪ್ಪಳದಂತಿರುವ ಅವನ ಕಂಠ, ನಗ್ನ ಆಕಾಶದಷ್ಟು ಪರಿಶುದ್ಧವೂ ಭವ್ಯವೂ ಸ್ವತಂತ್ರವೂ ಆದ ಅವನ ವ್ಯಕ್ತಿತ್ವ ಕಂದರದಲ್ಲಿ ಬಿದ್ದಿರುವ ತನ್ನ ದೇಶ, ತನ್ನ ನಾಗರಿಕತೆಯನ್ನು ಮೇಲೆತ್ತಬಹುದು ಎನ್ನುತ್ತಾನೆ. ಆನಂದಭರಿತ ದೇವಸಂಭೂತನಂತೆ ಜೀವನದ ದಾರಿಯ ಮೇಲೆ ನಡೆದು ಬರುವ ಮಿಲ್ಟನ್‌ನ ಪ್ರತೀಕ್ಷೆಯಲ್ಲಿ ತಾನಿರುವೆ ಎಂದು ವರ್ಡ್ಸ್ ವರ್ತ್ ಹೇಳುತ್ತಾನೆ.
ಭಾರತೀಯರಿಗೆ ಪುನರ್ಜನ್ಮದಲ್ಲಿ ಮತ್ತು ಅವತಾರಗಳಲ್ಲಿ ಅಚಲ ನಂಬಿಕೆಯಿದೆ. ಅಜ್ಜ ಮೊಮ್ಮಗನ ರೂಪದಲ್ಲಿಯೂ ಅಜ್ಜಿ ಮೊಮ್ಮಗಳ ರೂಪದಲ್ಲಿಯೂ ಹುಟ್ಟಿ ಬರುತ್ತಾರೆ. ಸದೃಢ, ಸುಸ್ಥಿರ ಕುಟುಂಬ ಕಟ್ಟಿ ಬೆಳೆಸಿದ ಹಿರಿಯರು ಮತ್ತೆ ಹುಟ್ಟಿ ಬಂದು ಕುಟುಂಬದ ಯೋಗಕ್ಷೇಮ ನೋಡಿಕೊಳ್ಳುತ್ತಾರೆ ಎಂಬುದು ಕುಟುಂಬದ ಸದಸ್ಯರ ಬಯಕೆ. ಹಾಗೆಯೇ ಊರು ಕಟ್ಟಿದ ಗೌಡ, ನಾಡ ಕಟ್ಟಿದ ದೊರೆ ಮತ್ತು ದೇಶ ನಿರ್ಮಿಸಿದ ರಾಜ ಮತ್ತೆ ಜನ್ಮವೆತ್ತಿ ಬರಲಿ ಎಂದು ಜನತೆ ಬಯಸುತ್ತದೆ.
ಆದರೆ ಯಾವಾಗ ಇಂಥ ಬಯಕೆಯನ್ನು ನಾವು ಬಹಳ ತೀವ್ರವಾಗಿ ವ್ಯಕ್ತಪಡಿಸುತ್ತೇವೆ?
ಕುಟುಂಬ ಶಿಥಿಲಗೊಂಡಾಗ, ಅಭದ್ರತೆ, ಅಸ್ಥಿರತೆ ಎದುರಿಸಿದಾಗ, ಕುಟುಂಬಕ್ಕೆ ಭದ್ರತೆ ಒದಗಿಸಿದ, ಸುಸ್ಥಿರಗೊಳಿಸಿದ ಯಜಮಾನನ್ನು ಸ್ಮರಿಸುತ್ತೇವೆ. ಈಗ ನೀನು ಬದುಕಿರಬೇಕಾಗಿತ್ತು, ನೀನು ಇದ್ದಿದ್ದರೆ ನಮ್ಮನ್ನು ಇಂಥ ಸಂಕಷ್ಟದಿಂದ ಪಾರು ಮಾಡುತ್ತಿದ್ದೆ, ನೆಲ ಕಚ್ಚಿ ಕುಳಿತ ನಮ್ಮ ರಟ್ಟೆ ಹಿಡಿದು ಮೇಲೆತ್ತುತ್ತಿದ್ದೆ ಎಂದುಕೊಳ್ಳುತ್ತೇವೆ. ಹಾಗೆಯೇ ಹಳ್ಳಿಗೆ, ನಾಡಿಗೆ, ದೇಶಕ್ಕೆ ಆಪತ್ತು ಬಂದಾಗ ನಾವು ಗೌಡನನ್ನೋ, ರಾಜನನ್ನೋ ದೊರೆಯನ್ನೋ ಸ್ಮರಿಸುತ್ತೇವೆ. ಇನ್ನು ಧರ್ಮಕ್ಕೆ ಕುತ್ತು ಬಂದರೆ? ಧರ್ಮ ಅವನತಿಯತ್ತ ಸಾಗಿದರೆ? ಆಗಲೂ ಭಾರತೀಯರು ಭಯಪಡುವ ಅಗತ್ಯವಿಲ್ಲ. ಏಕೆಂದರೆ ಗೀತೆಯಲ್ಲಿ ಸ್ವತಃ ಕೃಷ್ಣನೇ ಹೇಳಿದ್ದಾನೆ. ಧರ್ಮದ ಆಚರಣೆಗೆ ಸಂಕಷ್ಟ ಒದಗಿದಾಗ ತಾನು ಅವತಾರಿಸಿ ಬಂದು ಧರ್ಮ ಸ್ಥಾಪನೆ ಮಾಡುವುದಾಗಿ ಕೃಷ್ಣ ಅಭಯ ನೀಡಿದ್ದಾನೆ.
ಧರ್ಮದ ನಡೆ, ಧರ್ಮಾಚರಣೆ ಮಾತ್ರ ನಮ್ಮನ್ನು ಸಭ್ಯರನ್ನಾಗಿ, ಸುಸಂಸ್ಕೃತ ನಾಗರಿಕರನ್ನಾಗಿ ಮಾಡುತ್ತದೆ. ಆದರೆ ಧರ್ಮಾಚರಣೆಗೆ ಈ ಹೊತ್ತಿನಲ್ಲಿ ಕೆಲವು ಬಾಹ್ಯ ಮತ್ತು ಆಂತರಿಕ ಶಕ್ತಿಗಳಿಂದ ಅಡತಡೆ ಉಂಟಾಗುತ್ತಿದೆ, ಆಗಾಗ ದುಷ್ಟಶಕ್ತಿಗಳ ಕೈ ಮೇಲಾಗುತ್ತಿದೆ. ಆದರೆ ಇದು ಕೇವಲ ಭಾರತದಲ್ಲಿ ಘಟಿಸುವ ವಿದ್ಯಮಾನವಲ್ಲ, ಇದು ಕಾಲದೇಶ ಮೀರಿದ ಸಾರ್ವಕಾಲಿಕ ವಿದ್ಯಮಾನ. ಏಕೆಂದರೆ ಧರ್ಮವಂತರು ಜನಿಸುವಂತೆ ಅಧರ್ಮಿಗಳೂ ಜನಿಸುತ್ತಾರೆ. ಸಮಾಜದ ಸ್ವಾಸ್ಥ÷್ಯ, ನಾಗರಿಕತೆ, ಸಾಹಿತ್ಯ- ಸಂಸ್ಕೃತಿಯ ಅಳಿವು ಉಳಿವು ಅಷ್ಟೇ ಏಕೆ, ಧರ್ಮದ ಉನ್ನತಿ-ಅವನತಿ ಧರ್ಮಿಗಳನ್ನು ಅಥವಾ ಅಧರ್ಮಿಗಳನ್ನು ಅವಲಂಬಿಸಿದೆ. ಧರ್ಮ ಸಂಸ್ಥಾಪನೆ ಮಾಡುವಂಥ ದೊರೆ ಸಿಂಹಾಸನದಲ್ಲಿದ್ದರೆ ದೇಶದಲ್ಲಿ ಸುವ್ಯವಸ್ಥೆ ನೆಲೆಸಿ, ನಾಗರಿಕರು ನೆಮ್ಮದಿಯಿಂದ ಧರ್ಮದ ತಳಹದಿಯ ಮೇಲೆ ಬದುಕನ್ನು ಕಟ್ಟಿಕೊಂಡು ವಿಶ್ವಕ್ಕೆ ಶಾಂತಿ ಮಂತ್ರ ಬೋಧಿಸುತ್ತಾರೆ. ಇಲ್ಲದಿದ್ದರೆ ದುರಾಡಿಳಿತ ಪ್ರಾರಂಭಗೊಂಡು, ಅಶಾಂತಿ, ಹಿಂಸೆ, ಅರಾಜಕತೆ ಹೆಚ್ಚುತ್ತದೆ. ಇಡೀ ದೇಶ, ಇಡೀ ಜಗತ್ತು ಹಿಂಸ್ರಕ್ಕೆ, ಕೌರ್ಯಕ್ಕೆ ಬಲಿಯಾಗುತ್ತದೆ. ಆಗ ನಾವು ಆಕಾಶದ ಕಡೆ ಮುಖ ಮಾಡಿ ನಿಲ್ಲಬೇಕಾಗುತ್ತದೆ ಕೃಷ್ಣನ ಆಗಮನದ ದಾರಿ ಕಾಯುತ್ತ.
ಕೃಷ್ಣನ ಸಂದೇಶವನ್ನು ಕೇವಲ ಭಾರತದ ಹಿನ್ನೆಲೆಯಲ್ಲಿ ಗ್ರಹಿಸದೆ ಸೃಷ್ಟಿಚಕ್ರದ ದೇಶಕಾಲಾತೀತ ನಡೆಯ ಸಮಷ್ಟಿಭಾವದಿಂದ ಗ್ರಹಿಸಿದಾಗ ಅದರ ಸರಿಯಾದ ಅರ್ಥ ಗ್ರಹಿಸಲು ಸಾಧ್ಯ. ಕವಿ ವರ್ಡ್ಸ್ ವರ್ತ್ ಮಿಲ್ಟನ್ ಈ ಹೊತ್ತಿನಲ್ಲಿ ಬದುಕಿರಬೇಕಾಗಿತ್ತು ಪ್ರಪಾತದಲ್ಲಿ ಬಿದ್ದಿರುವ ತಮ್ಮ ಕೈ ಹಿಡಿದು ಮೇಲೆತ್ತಲು ಎಂದು ಹೇಳುವಂತೆ ನಾವೂ ಆಗಾಗ ಇಂಥ ಬಯಕೆ ವ್ಯಕ್ತಪಡಿಸುತ್ತೇವೆ.
ಆದರೆ ಒಳಿತು-ಕೆಡಕುಗಳ ನಡುವಿನ ಕಾಳಗಕ್ಕೆ ಕೊನೆ ಮೊದಲೆಂಬುದೇ ಇಲ್ಲ. ಇದು ಆದಿ-ಅನಾದಿಗಳಿಲ್ಲದ ನಿರಂತರ ಹೋರಾಟ. ಶಾಂತಿಯ ಹಿಂದೆ ಮುಂದೆ ಅಶಾಂತಿ ಇರುವಂತೆ, ಧರ್ಮದ ಹಿಂದೆ ಮುಂದೆ ಅಧರ್ಮ ಇದೆ. ಆದರೆ ಕೆಲವರ ತ್ಯಾಗ ಬಲಿದಾನದ ಫಲವಾಗಿ, ಕಠಿಣ ಪರಿಶ್ರಮದ ಫಲವಾಗಿ ನಾವು ಸುಭಿಕ್ಷೆ, ಸ್ಥಿರತೆ ಅನುಭವಿಸುತ್ತೇವೆ. ನಿರ್ಭಯವಾಗಿ ನಿಶ್ಚಂತಿಯಿಂದ ಧರ್ಮಾಧಾರಿತ ಬದುಕು ನಡೆಸುತ್ತೇವೆ. ಆದರೆ ಇದೇ ಸ್ಥಿತಿ ಎಲ್ಲಾ ಕಾಲಕ್ಕೂ ಇರುತ್ತದೆ ಎಂದು ಹೇಳಲಾಗದು. ಅಧರ್ಮಿಯರ ಕೈ ಮೇಲಾದಾಗ ಮತ್ತೆ ಜನರ ಶಾಂತಿ, ನೆಮ್ಮದಿ ಕೆಡುತ್ತದೆ, ಕೆಡಗಾಲ ಶುರುವಾಗುತ್ತದೆ.