ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದೀರಿ
11:26 AM Jan 05, 2024 IST | Samyukta Karnataka
ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದೀರಿ ಎಂದು ವಿಪಕ್ಷ ನಾಯಕ ಆರ್. ಅಶೋಕ ವಾಗ್ದಾಳಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಕರಸೇವಕ ಶ್ರೀಕಾಂತ್ ಪೂಜಾರಿ ಅವರ ಮೇಲೆ 16 ಪ್ರಕರಣಗಳು ಬಾಕಿ ಇದೆ ಎಂದು ಹಸಿ ಸುಳ್ಳು ಹೇಳಿದರಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಆ ಪ್ರಭು ಶ್ರೀರಾಮನು ನಿಮ್ಮನ್ನ ಎಂದಿಗೂ ಕ್ಷಮಿಸಲಾರ.
ಶ್ರೀಕಾಂತ್ ಪೂಜಾರಿ ಅವರ ಮೇಲೆ ಇದ್ದ 16 ಪ್ರಕರಣಗಳಲ್ಲಿ 15 ಪ್ರಕರಣಗಳು ಈಗಾಗಲೇ ತಾರ್ಕಿಕ ಅಂತ್ಯ ಕಂಡಿದ್ದು, ಬಾಕಿ ಇರುವ ಒಂದು ಪ್ರಕರಣ ಸಹ 1992ರಲ್ಲಿ ಅವರು ನಾಪತ್ತೆಯಾಗಿದ್ದರು ಎಂಬ ಕಾರಣಕ್ಕೆ ದಾಖಲಾಗಿದ್ದು.
ಈಗ ಉಳಿದಿರುವುದು ಎರಡು ಸಾಧ್ಯತೆಗಳು ಮಾತ್ರ.
- ಒಂದು ತಮಗೆ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಕೈತಪ್ಪಿ, ಕಾಣದ ಕೈಗಳು ತಮ್ಮನ್ನು ದಿಕ್ಕು ತಪ್ಪಿಸುತ್ತಿವೆ.
- ಇಲ್ಲವಾದರೆ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಕೆಣಕಲು ಉದ್ದೇಶಪೂರ್ವಕವಾಗಿ ಈ ಪ್ರಕರಣಕ್ಕೆ ಮರುಜೀವ ನೀಡಿದ್ದೀರಿ.
ಇವೆರಡರಲ್ಲಿ ಯಾವುದು ಸತ್ಯವಾದರೂ ತಾವು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದೀರಿ. ಆದ್ದರಿಂದ ಈ ಕೂಡಲೇ ತಮ್ಮ ತಪ್ಪನ್ನು ಒಪ್ಪಿಕೊಂಡು ಶ್ರೀಕಾಂತ್ ಪೂಜಾರಿ ಅವರನ್ನು ಬಿಡುಗಡೆ ಮಾಡಿ. ರಾಜ್ಯದ ಜನರಲ್ಲಿ ಕ್ಷಮಾಪಣೆ ಕೋರಿ ರಾಜೀನಾಮೆ ನೀಡಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಒಬ್ಬ ಸಮರ್ಥ ಮುಖ್ಯಮಂತ್ರಿಗೆ ದಾರಿ ಮಾಡಿಕೊಡಿ ಎಂದು ಬರೆದುಕೊಂಡಿದ್ದಾರೆ.