ಮುದ್ರಾಂಕ ಡಿಜಿಟಲೀಕರಣ ಸಮಸ್ಯೆ ನಿವಾರಣೆ ಎಂದು?
ರಾಜ್ಯ ಸರ್ಕಾರದ ಆದಾಯದ ಮೂಲಗಳಲ್ಲಿ ಮುದ್ರಾಂಕ ಶುಲ್ಕವೂ ಒಂದು. ಅಬಕಾರಿ ಮತ್ತು ಮೋಟಾರು ವಾಹನ ತೆರಿಗೆಯಿಂದ ಬರುವ ಆದಾಯವನ್ನು ಹೊರತುಪಡಿಸಿದರೆ ಮುದ್ರಾಂಕ ಶುಲ್ಕವೇ ಹೆಚ್ಚು. ಎಲ್ಲ ಸರ್ಕಾರಗಳು ಇದನ್ನು ಹೆಚ್ಚಿಸಿಕೊಳ್ಳಲು ನೋಡುತ್ತದೆಯೇ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಡುವುದರತ್ತ ಗಮನಹರಿಸುವುದಿಲ್ಲ. ಈಗ ಡಿಜಿಟಲೀಕರಣ ಎಲ್ಲ ಕ್ಷೇತ್ರಗಳಲ್ಲಿ ಕಾಲಿರಿಸಿದೆ. ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಇದು ಮಹತ್ವದ ಪಾತ್ರವಹಿಸುತ್ತಿದೆ. ಈಗ ಆಸ್ತಿ ನೋಂದಣಿ ಡಿಜಿಟಲೀಕರಣ ಕಡ್ಡಾಯ ಮಾಡಿರುವುದರಿಂದ ರಾಜ್ಯದಲ್ಲಿ ರಾಜಸ್ವ ಸಂಗ್ರಹದಲ್ಲಿ ೫ ಸಾವಿರ ಕೋಟಿ ರೂ. ಕೊರತೆ ಉಂಟಾಗಲಿದೆ. ಇದಕ್ಕೆ ಡಿಜಿಟಲೀಕರಣ ಕಡ್ಡಾಯ ಮಾಡಿರುವುದು ಕಾರಣ ಎಂದು ಹೇಳಲಾಗಿದೆ. ಸರ್ಕಾರದ ವಿಳಂಬ ಧೋರಣೆಗೆ ಡಿಜಿಟಲೀಕರಣ ಕಾರಣವಲ್ಲ. ಅಧಿಕಾರಿಗಳಲ್ಲಿರುವ ಜಡತ್ವ ಕಾರಣ.
ಕಂದಾಯ ಸಚಿವರು ಆಗಸ್ಟ್ ೩೧ ರಂದು ಡಿಜಿಟಲ್ ಪೋಡಿ ಅಭಿಯಾನ ಆರಂಭಿಸಿದರು. ಅವರ ವೇಗಕ್ಕೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಸಚಿವರ ಮೃದು ಧೋರಣೆ ಕೆಲಸ ಮಾಡುವುದಿಲ್ಲ. ಇದಕ್ಕೆ ಸರ್ಕಾರ ಚಾಟಿ ಬೀಸಬೇಕು. ಸಚಿವರ ಮಾತಿನಲ್ಲಿ ಇರುವ ವೇಗ ಕ್ರಿಯೆಯಲ್ಲಿ ಕಂಡುಬರುತ್ತಿಲ್ಲ. ನಮ್ಮಲ್ಲಿ ಹಿಂದಿನಿಂದಲೂ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಇದ್ದೇ ಇದೆ. ಇದನ್ನು ಕಂಪ್ಯೂಟರೀಕರಣದಿಂದ ಕಡಿಮೆ ಮಾಡಬಹುದೇ ಹೊರತು ಸಂಪೂರ್ಣವಾಗಿ ತೊಡೆದು ಹಾಕುವುದು ಕಷ್ಟ. ಜನ ಕೂಡ ಮಧ್ಯವರ್ತಿಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಅವರಿಗೆ ನೋಂದಣಿ ಕೆಲಸ ಸುರಳಿತವಾಗಿ ನಡೆದರೆ ಸಾಕು. ಇದಕ್ಕೆ ಡಿಜಿಟಲೀಕರಣವೊಂದೇ ಈಗ ಕಂಡುಬಂದಿರುವ ಮಾರ್ಗ. ಇದಕ್ಕೆ ಇಂಟರ್‌ನೆಟ್ ಸಂಪರ್ಕ ಅಗತ್ಯ. ಅಂದರೆ ಸರ್ವರ್ ಸಾಮರ್ಥ್ಯ ಚೆನ್ನಾಗಿರಬೇಕು. ದಾಖಲೆಗಳ ಡಿಜಿಟಲೀಕರಣದಿಂದ ಹಿಡಿದು ಮುದ್ರಾಂಕ ಶುಲ್ಕ ಪಾವತಿವರೆಗೆ ಎಲ್ಲವೂ ಆನ್‌ಲೈನ್ ನಡೆಯಬೇಕು. ಈಗ ಸರ್ಕಾರಕ್ಕೆ ಬರಬೇಕಾದ ಶುಲ್ಕ ಸಕಾಲಕ್ಕೆ ಬರುತ್ತಿದೆ. ಮಧ್ಯವರ್ತಿಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಒಟ್ಟು ೨೫೬ ಸಬ್ ರಿಜಿಸ್ಟ್ರಾರ್ ಕಚೇರಿಗಳಿವೆ. ಇವುಗಳಿಗೆ `ಕಾವೇರಿ' ತಂತ್ರಾಂಶದ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಪ್ರತಿಯೊಂದು ಪ್ರಕರಣಕ್ಕೂ ನಿಗದಿತ ಸಮಯ ನಿಗದಿಪಡಿಸಿ ಅವರು ಆ ಕಾಲಕ್ಕೆ ಸರಿಯಾಗಿ ಕಚೇರಿಯಲ್ಲಿರುವಂತೆ ಮಾಡಲು ಈಗ ಅವಕಾಶವಿದೆ. ಇದರಿಂದ ಜನ ಬಂದು ಕಚೇರಿಗಳಲ್ಲಿ ಗಂಟೆಗಟ್ಟಲೆ ಕಾಯುವುದು ತಪ್ಪಿದೆ.
ಆದರೆ ಈಗ ಪ್ರತಿಯೊಂದು ದಸ್ತಾವೇಜು ಡಿಜಿಟಲೀಕರಣಗೊಳ್ಳಬೇಕು. ಇದು ಕಡ್ಡಾಯ. ಹೀಗಾಗಿ ವಿಳಂಬವಾಗಿದ್ದು ಸರ್ಕಾರಕ್ಕೆ ಬರುವ ಆದಾಯ ಇಳಿಮುಖಗೊಂಡಿದೆ. ಬಜೆಟ್‌ನಲ್ಲಿ ಮುದ್ರಾಂಕ ಶುಲ್ಕದಿಂದ ೨೬ ಸಾವಿರ ಕೋಟಿ ಬರುತ್ತದೆ ಎಂದು ಹೇಳಲಾಗಿತ್ತು. ಆದರೆ ಬಂದಿದ್ದು ೨೦ ಸಾವಿರ ಕೋಟಿ ರೂ. ನಿಂತಿತ್ತು. ಈಗಲೂ ಶೇ. ೩೭.೮೦ ಮಾತ್ರ ಗುರಿ ತಲುಪಿದೆ. ಇದಕ್ಕೆ ಅಧುನಿಕ ತಂತ್ರಜ್ಞಾನ ಕಾರಣ ಎಂಬ ಮಾತು ಸರಿಯಲ್ಲ. ನಮ್ಮ ಸರ್ಕಾರಿ ಸಿಬ್ಬಂದಿಗೆ ಅಧುನಿಕ ತಂತ್ರಜ್ಞಾನ ಇಷ್ಟವಿಲ್ಲದ ಸಂಗತಿ. ಅವರ ಆದಾಯಕ್ಕೆ ಇವುಗಳು ಅಡ್ಡಿಯಾಗುತ್ತವೆ. ಡಿಜಿಟಲೀಕರಣ ಕಡ್ಡಾಯವಾದಲ್ಲಿ ನೋಂದಣಿ ವಿಳಂಭವಾಗುವುದು ಸಹಜ. ರೆವಿನ್ಯೂ ನಿವೇಶನದ ನೋಂದಣಿ ಸ್ಥಗಿತಗೊಂಡಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಹಿಂದೆ ಹಳೆಯ ಪದ್ಧತಿಯಲ್ಲಿ ದಾಖಲೆಗಳು ನೋಂದಣಿಯಾಗಿದ್ದವು. ಅವುಗಳು ಡಿಜಿಟಲ್ ಸ್ವರೂಪ ಪಡೆಯಬೇಕು. ಅಧಿಕಾರಿಗಳು ಹೊಸ ತಂತ್ರಜ್ಞಾನದ ವಿಳಂಬವನ್ನು ತೋರಿಸಿ ಹಳೆಯ ಪದ್ಧತಿಗೆ ಹೋಗಲು ಯತ್ನಿಸುವುದು ಸರ್ಕಾರಕ್ಕೆ ತಿಳಿಯದ ಸಂಗತಿ ಏನಲ್ಲ. ಸರ್ಕಾರ ತ್ವರಿತಗತಿಯಲ್ಲಿ ಡಿಜಿಟಲೀಕರಣವನ್ನು ಕೈಗೊಂಡಲ್ಲಿ ಸರ್ಕಾರದ ಆದಾಯ ಅಧಿಕಗೊಳ್ಳುವುದಲ್ಲದೆ, ಸಬ್ ರಿಜಿಸ್ಟಾçರ್ ಕಚೇರಿ ಹೋಗಲು ಇನ್ನು ಮುಂದೆ ಸರ್ಕಾರಿ ನೌಕರರು ಬಯಸುವುದಿಲ್ಲ. ಅದು ತನ್ನ ಆಕರ್ಷಣೆ ಕಳೆದುಕೊಳ್ಳುವ ಕಾಲ ದೂರವಿಲ್ಲ.
೨೦೦೨-೦೩ರಲ್ಲಿ ಮುದ್ರಾಂಕ ಶುಲ್ಕದಿಂದ ೧೧೧೫ ಕೋಟಿ ರೂ. ಆದಾಯ ಬಂದಿತ್ತು. ೨೦೨೧-೨೨ ರಲ್ಲಿ ೧೨೬೫೫ ಕೋಟಿ ರೂ. ಆಗಿತ್ತು. ೨೦೧೮-೧೦ ರಲ್ಲಿ ಒಟ್ಟು ಆದಾಯದಲ್ಲಿ ಮುದ್ರಾಂಕ ಶುಲ್ಕ ಶೇ. ೧೯.೪ ಇತ್ತು. ಅದು ೨೦೨೨-೨೩ರಲ್ಲಿ ಅದು ಶೇ. ೯.೨೫ಕ್ಕೆ ಇಳಿಯಿತು. ಕೊರೊನಾ ಕಾಲದಲ್ಲಿ ಆದಾಯ ಇಳಿಮುಖಗೊಂಡಿದ್ದು ಸಹಜ. ಆದರೆ ಕೊರೊನಾ ಹೋದ ಮೇಲೆ ಆದಾಯ ಅಧಿಕಗೊಂಡಿದೆ. ಈಗ ಡಿಜಿಟಲೀಕರಣ ತಂತ್ರಜ್ಞಾನ ಆದಾಯ ಕಡಿತಕ್ಕೆ ಕಾರಣವಾಗಬಾರದು. ಅದಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಎಲ್ಲ ರಂಗದಲ್ಲಿ ಡಿಜಿಟಲೀಕರಣ ಉತ್ತಮ ಫಲಿತಾಂಶ ನೀಡುತ್ತಿರುವಾಗ ಮುದ್ರಾಂಕ ಶುಲ್ಕದಲ್ಲಿ ಮಾತ್ರ ಅಡ್ಡಿಯಾಗಲು ಸಾಧ್ಯವಿಲ್ಲ. ಬ್ಯಾಂಕಿಂಗ್ ರಂಗದಲ್ಲಿ ಡಿಜಿಟಲೀಕರಣ ಉತ್ತಮ ಬೆಳವಣಿಗೆಗೆ ಕಾರಣವಾಗಿದೆ. ಮಾರಿಷಸ್ ಕೂಡ ನಮ್ಮ ಡಿಜಿಟಲೀಕರಣವನ್ನು ಒಪ್ಪಿಕೊಳ್ಳಲು ಮುಂದೆ ಬಂದಿರುವಾಗ ಆಸ್ತಿ ನೋಂದಣಿಯಲ್ಲಿ ಮಾತ್ರ ಮೀನಮೇಷ ಎಣಿಸುವುದು ಸರಿಯಲ್ಲ. ಈಗ ಎಲ್ಲವೂ ಜನರ ಸಮ್ಮುಖದಲ್ಲೇ ನಡೆಯುವುದರಿಂದ ಜನಸಾಮಾನ್ಯರಿಗೆ ತಮ್ಮ ಆಸ್ತಿ ರಕ್ಷಿಸಿಕೊಳ್ಳಲು ಸಾಧ್ಯವಾಗಲಿದೆ. ಅದರಲ್ಲೂ ಮಹಾನಗರಪಾಲಿಕೆಗಳು ಮನೆ ಮತ್ತು ಆಸ್ತಿ ದಾಖಲೆಗಳನ್ನು ಸುರಕ್ಷಿತವಾಗಿಡುವುದು ಮುಖ್ಯ. ಒಂದು ದೇಶದ ಮಾಹಿತಿಯನ್ನು ಮತ್ತೊಂದು ದೇಶದಲ್ಲಿ ಕಾಪಾಡುವ ಕೆಲಸಗಳು ಈಗ ನಡೆಯುತ್ತಿರುವಾಗ ಜನಸಾಮಾನ್ಯರ ಆಸ್ತಿ ದಾಖಲೆ ರಕ್ಷಿಸುವುದು ಕಷ್ಟದ ಕೆಲಸವೇನಲ್ಲ.