For the best experience, open
https://m.samyuktakarnataka.in
on your mobile browser.

`ಮೂಡಾ, ಧೂಡಾ, ಸೂಡಾ’ ತನಿಖೆ ಆಗಲಿ

03:00 AM Aug 05, 2024 IST | Samyukta Karnataka
 ಮೂಡಾ  ಧೂಡಾ  ಸೂಡಾ’ ತನಿಖೆ ಆಗಲಿ

ಕಳೆದ ೭೫ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೂರಾರು ಯೋಜನೆಗಳನ್ನು ಜಾರಿಗೊಳಿಸಿದ್ದರೂ ಇವುಗಳ ಲಾಭ ಯಾರಿಗೆ ಆಗಿದೆ? ಐಆರ್‌ಡಿಪಿ, ಗರೀಬಿ ಹಠಾವೊದಿಂದ ಹಿಡಿದು ಇಂದಿನ ಉದ್ಯೋಗ ಖಾತ್ರಿ ಯೋಜನೆವರೆಗೆ ಲಕ್ಷಾಂತರ ಕೋಟಿ ರೂ. ಹರಿದು ಹೋಗಿದೆ. ಆದರೂ ನಿರುದ್ಯೋಗ ಹೆಚ್ಚಾಗುತ್ತಲೇ ಇದೆ. ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ಮೂಲಸೌಲಭ್ಯ ಕಲ್ಪಿಸಲಾಗಿಲ್ಲ. ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ವ್ಯವಸ್ಥೆಯನ್ನೂ ಕಾಣದ ಕುಗ್ರಾಮಗಳು ಇನ್ನೂ ಕಾಣಸಿಗುತ್ತಿವೆ. ಸರ್ಕಾರಗಳು ರೂಪಿಸುವ ಎಲ್ಲ ಯೋಜನೆಗಳೂ ಅತ್ಯುತ್ತಮವಾದವೇ. ಆದರೆ ಅವುಗಳ ಫಲ ಮಾತ್ರ ಸೀಮಿತ ಜನರಿಗೆ ಸಿಕ್ಕಿದೆ. ಹಾಗಾದರೆ ಯೋಜನೆ ರೂಪಿಸುವುದರಲ್ಲಿ ಏನಾದರೂ ತಪ್ಪಾಗಿದೆಯಾ?, ಇಲ್ಲವೆ ಅನುಷ್ಠಾನದಲ್ಲಿ ಲೋಪವಾಗಿದೆಯಾ?, ಸಾರ್ವಜನಿಕರ ಹಣ ಎಲ್ಲಿ ಪೋಲಾಗಿದೆ ಎಂಬುದನ್ನು ಕಂಡುಕೊಂಡು ಸರಿಪಡಿಸಬೇಕಾದ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಇಂತಹ ಯೋಜನೆಗಳಿಂದಲೇ ತಮ್ಮ ಸಂಪತ್ತು ವೃದ್ಧಿ ಮಾಡಿಕೊಳ್ಳತೊಡಗಿದರು. ಬಡತನ ನಿರ್ಮೂಲನೆ, ನಿರುದ್ಯೋಗ ನಿವಾರಣೆ ಹೆಸರಿನಲ್ಲಿ ತಮ್ಮ ಶ್ರೀಮಂತಿಕೆ ಹೆಚ್ಚಿಸಿಕೊಂಡರು. ಸರ್ಕಾರದಿಂದ ಅಭಿವೃದ್ಧಿಗೆಂದು ೧೦೦ ರೂ. ಬಿಡುಗಡೆ ಆದರೆ ೪೦ ರೂ. ಮಾತ್ರ ಬಳಕೆಯಾಗುತ್ತದೆ, ಉಳಿದ ಹಣ ಸೋರಿಕೆಯಾಗುತ್ತದೆ ಎಂಬುದು ಬಹಿರಂಗ ಸತ್ಯ. ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರೇ ಈ ಮಾತನ್ನು ಒಪ್ಪಿಕೊಂಡಿದ್ದರು. ರಾಜ್ಯದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ೧೮೭ ಕೋಟಿ ರೂ. ಹಗರಣವೇ ಇದಕ್ಕೆ ನಿದರ್ಶನ. ಸರ್ಕಾರಗಳು ಇಂಥಹ ಭ್ರಷ್ಟಾಚಾರದ ಪ್ರಕರಣಗಳಿಗೆ ಮೌನ ಸಮ್ಮತಿ ನೀಡತೊಡಗಿದ್ದರಿಂದ ಸರ್ಕಾರದ ಖಜಾನೆಯಲ್ಲಿನ ಹಣದ ದುರುಪಯೋಗ ಹೆಚ್ಚಾಗತೊಡಗಿತು. ಆರ್ಥಿಕ ಅಸಮಾನತೆ ಬೆಟ್ಟದಷ್ಟು ಏರಿಕೆ ಕಂಡಿತು. ಇಂತಹ ಭ್ರಷ್ಟಾಚಾರ ಪ್ರಕರಣವನ್ನು ನಾಚಿಕೆ ಇಲ್ಲದಂತೆ ಸಮರ್ಥನೆ ಮಾಡಿಕೊಳ್ಳುವ ಸರ್ಕಾರ ನಡೆಸುವ ರಾಜಕೀಯ ನಡೆ ಕೂಡ ಪ್ರಶ್ನಾರ್ಹವಾಗಿದೆ.
ಕೇಂದ್ರ ಸರ್ಕಾರದ ವಸತಿ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ಆಶ್ರಯ ಯೋಜನೆಯಡಿ ಕೋಟ್ಯಂತರ ಮನೆಗಳನ್ನು ರಾಜ್ಯದಲ್ಲಿ ನಿರ್ಮಿಸಿದ್ದರೂ ಇನ್ನೂ ಮನೆ ಇಲ್ಲದವರ ಸಂಖ್ಯೆ ಬೆಳೆಯುತ್ತಲೇ ಇದೆ ಏಕೆ? ವಸತಿ ಯೋಜನೆಗಳು ನಿಜವಾದ ಫಲಾನುಭವಿಗಳನ್ನು ತಲುಪುತ್ತಲೇ ಇಲ್ಲ. ಒಂದು ಕಡೆ ಸಾವಿರ ಮನೆಗಳನ್ನು ನಿರ್ಮಿಸಿ ವಿತರಣೆ ಮಾಡಲಾಗುತ್ತದೆ ಎಂದರೆ ೯೦೦ ಮನೆಗಳು ಅನರ್ಹ ಫಲಾನುಭವಿಗಳನ್ನು ತಲುಪುತ್ತವೆ. ಈ ಹಿಂದೆ ದಾವಣಗೆರೆ ನಗರದಲ್ಲಿ ಆಶ್ರಯ ಯೋಜನೆಯಡಿ ೧೦ ಸಾವಿರ ಮನೆಗಳನ್ನು ನಿರ್ಮಿಸಿ ವಿತರಿಸಲಾಗಿತ್ತು. ಆದರೆ ಬಹುತೇಕ ಫಲಾನುಭವಿಗಳು ರಾಜಕೀಯ ಪಕ್ಷವೊಂದರ ಕಾರ್ಯಕರ್ತರೆ ಆಗಿದ್ದಾರಲ್ಲದೆ, ಒಬ್ಬೊಬ್ಬರೂ ೩-೪ ಮನೆಗಳನ್ನೂ ಪಡೆದುಕೊಂಡಿರುವುದು ವ್ಯವಸ್ಥೆಯ ದೌರ್ಬಲ್ಯವನ್ನು ಬಿಂಬಿಸುತ್ತಿದೆ. ಇನ್ನು ನಗರಾಭಿವೃದ್ಧಿ ಪ್ರಾಧಿಕಾರಗಳ ಸ್ವಜನಪಕ್ಷಪಾತ, ಮಿತಿಮೀರಿದ ಭ್ರಷ್ಟಾಚಾರದಿಂದ ಮಧ್ಯಮ ವರ್ಗದವರು ಮನೆ ಕಟ್ಟಿಕೊಳ್ಳುವ ಕನಸು ನನಸಾಗುತ್ತಿಲ್ಲ. ಹೀಗಾದರೆ ವಸತಿಹೀನರ
ಸಮಸ್ಯೆ ನಿವಾರಣೆ ಆಗುವುದು ಯಾವಾಗ?
ಪ್ರಸ್ತುತ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ)ದ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಹಗರಣ ವಿರೋಧ ಪಕ್ಷಗಳಿಗೆ ಅಸ್ತçವಾಗಿದೆ. ವಿಚಿತ್ರ ಎಂದರೆ ಎಲ್ಲ ರಾಜಕೀಯ ಪಕ್ಷಗಳ ನೇತಾರರೂ ಇದರಲ್ಲಿ ಫಲನಾಭವಿಗಳಿದ್ದಾರೆ. ಬಡವರಿಗೆ, ಮಧ್ಯಮ ವರ್ಗದವರಿಗೆ ಸಿಗಬೇಕಾದ ನಿವೇಶನಗಳನ್ನು ನಿಯಮಗಳೆನ್ನೆಲ್ಲ ಗಾಳಿಗೆ ತೂರಿ ರಾಜಕೀಯ ನಾಯಕರೇ ಕಬಳಿಸಿಕೊಂಡಿರುವುದು ರಾಜ್ಯದ ಜನತೆಯಲ್ಲಿ ವಾಕರಿಕೆ ಮೂಡಿಸುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳ ಮುಖಂಡರ ಜೊತೆಗೆ ಅವರ ಮರಿ-ಪುಡಿ ಪುಡಾರಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಇಲ್ಲಿ ಲಾಭ ಮಾಡಿಕೊಂಡಿದ್ದಾರೆ. ಇವರಿಗೆ ಉನ್ನತ ಮಟ್ಟದ ಅಧಿಕಾರಿಗಳು, ಪ್ರಾಧಿಕಾರದಲ್ಲಿ ಒಂದೇ ಕಡೆ ನೌಕರಿ ಮಾಡುತ್ತಿರುವ ಇಂಜಿನಿಯರ್‌ಗಳು, ನೌಕರರು ಸಾಥ್ ನೀಡದೆ ಇರುವುದಿಲ್ಲ. ಯಾವುದೇ ಲಂಚ-ರುಸುವತ್ತುಗಳಿಗೆ ಬಲಿಯಾಗದೆ ತಮ್ಮ ನಿವೃತ್ತಿ ಆಗುವವರೆಗಿನ ಎಲ್ಲ ಉಳಿತಾಯಗಳನ್ನೂ ಒಟ್ಟುಗೂಡಿಸಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಒಂದು ನಿವೇಶನ ಪಡೆದು ಮನೆ ನಿರ್ಮಿಸಿಕೊಳ್ಳಬೇಕು ಎಂಬ ಮಧ್ಯಮ ವರ್ಗದವರ ಕನಸಿಗೆ ಕೊಳ್ಳಿ ಇಡಲಾಗುತ್ತಿದೆ. ನಮಗೂ ಒಂದು ನಿವೇಶನ ಕೊಡಿ ಎಂದು ಅರ್ಜಿ ಸಲ್ಲಿಸುವ ಇಂತಹ ನಾಗರಿಕರ ಶಾಪ ರಾಜಕೀಯ ನಾಯಕರಿಗೆ ತಟ್ಟದೆ ಇರಲಾರದು.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ
ಇದು ಕೇವಲ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ಪ್ರಶ್ನೆಯಲ್ಲ. ಮಧ್ಯ ಕರ್ನಾಟಕದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ಧೂಡಾ), ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ), ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರಗಳೂ ಹಗರಣಗಳಿಂದ ಹೊರತಾಗಿಲ್ಲ. ಆದರೆ ಇಂತಹ ಪ್ರಕರಣಗಳು ಬೆಳಕಿಗೆ ಬಂದು ತನಿಖೆ ನಡೆದು ತಾರ್ಕಿಕ ಅಂತ್ಯ ಕಂಡಿದ್ದು ಬಹಳ ಅಪರೂಪ.
ಇಲ್ಲಿ ಬಿಜೆಪಿ, ಕಾಂಗ್ರೆಸ್ ಆಡಳಿತದ ಅವಧಿ ಎಂದೇನೂ ಇಲ್ಲ. ಎಲ್ಲರ ಅಧಿಕಾರವಧಿಯಲ್ಲಿಯೂ ನಿವೇಶನ ಹಂಚಿಕೆಯಲ್ಲಿ ತಾರತಮ್ಯ, ಸ್ವಜನ ಪಕ್ಷಪಾತ, ಹಣ ಪಡೆದು ನಿವೇಶನ ಹಂಚಿಕೆ ಮಾಡಿರುವ ನಿದರ್ಶನಗಳು ಸಾಕಷ್ಟಿವೆ. ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಜೆ.ಎಚ್.ಪಟೇಲ್ ಬಡಾವಣೆಯ ಮೊದಲ ಹಂತದಲ್ಲಿ ಬಿಜೆಪಿ ಆಡಳಿತದಲ್ಲಿ ನಿವೇಶನ ಹಂಚಿಕೆ ಮಾಡಿದರೆ, ಎರಡನೇ ಹಂತದಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಕನಸಿನ ಮನೆ ಕಟ್ಟಿಕೊಳ್ಳಬೇಕೆಂಬ ಅರ್ಹ ಫಲಾನುಭವಿಗೆ ಇಲ್ಲಿ ನಿವೇಶನ ದಕ್ಕಿರುವುದು ಕಡಿಮೆ. ಆಯಾ ಪಕ್ಷಗಳ ಕಾರ್ಯಕರ್ತರೇ ಹೆಚ್ಚಿನ ಪ್ರಮಾಣದ ಫಲಾನುಭವಿಗಳಾಗಿದ್ದು, ಈ ಬಗ್ಗೆ ಲೋಕಾಯುಕ್ತ ತನಿಖೆಯೂ ನಡೆಯುತ್ತಿದೆ. ಪತಿ-ಪತ್ನಿ, ತಂದೆ-ಮಗ, ಹೀಗೆ ಒಂದೇ ಮನೆಯಲ್ಲಿ ಇಬ್ಬಿಬ್ಬರಿಗೆ ನಿವೇಶನ ಹಂಚಿಕೆ ಮಾಡಿದ ನಿದರ್ಶನಗಳೂ ಇವೆ. ಇನ್ನು ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಿದ್ದರೂ ಒಂದೊಂದು ನಿವೇಶನಕ್ಕೂ ಹಣ ನಿಗದಿ ಮಾಡಿ ಮೊದಲೇ ಹಣ ನೀಡಿದವರ ಹೆಸರುಗಳು, ಮುಖಂಡರು ನೀಡಿದ ಹೆಸರುಗಳ ಪಟ್ಟಿಯಲ್ಲಿದ್ದ ಹೆಸರುಗಳು ಮಾತ್ರ ಲಾಟರಿಯಲ್ಲಿ ಬರುತ್ತವೆ ಎಂದರೆ ಇದೊಂದು ಪವಾಡವೇ ಸರಿ. ಲಾಟರಿ ಮೂಲಕ ನಿವೇಶನ ಹಂಚಿಕೆ’ ಎಂಬುದು ಅರ್ಹ ಫಲಾನುಭವಿಗಳ ಎದುರೇ ಮಾಡುವ ಬಹಿರಂಗ ವಂಚನೆಯೇ ಸರಿ. ಈ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಹಣದ ವ್ಯವಹಾರ ನಡೆಯುತ್ತದೆ. ರಿಯಲ್ ಎಸ್ಟೇಟ್‌ದಾರರಕೈ’ ಮೇಲಾಗುತ್ತದೆ. ಆದರೆ ಮನೆ ಕಟ್ಟಿಕೊಳ್ಳಬೇಕೆಂಬ ಮಧ್ಯಮ ವರ್ಗದ ಅರ್ಜಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇರುತ್ತದೆ. ಆದರೆ ಕಳೆದ ೨೦ ವರ್ಷಗಳಿಂದ ದಾವಣಗೆರೆಯಲ್ಲಿ ಪ್ರಾಧಿಕಾರದಿಂದ ಹೊಸ ಬಡಾವಣೆ ನಿರ್ಮಿಸಿಲ್ಲ, ಇದೇ ಅವಧಿಯಲ್ಲಿ ನೂರಾರು ಖಾಸಗಿ ಬಡಾವಣೆಗಳಿಗೆ ಅನುಮತಿ ನೀಡಲಾಗಿದೆ. ನಗರದಲ್ಲಿ ಸಾವಿರಾರು ನಿವೇಶನಗಳು ಖಾಲಿ ಇದ್ದರೂ ಎಲ್ಲವೂ ರಿಯಲ್ ಎಸ್ಟೇಟ್ ಉದ್ದಿಮೆಗಳ ವಶದಲ್ಲಿದ್ದು, ದುಪ್ಪಟ್ಟು, ಮೂರುಪಟ್ಟು ಬೆಲೆ ಏರಿಕೆ ಮಾಡುತ್ತಲೇ ಇದ್ದಾರೆ. ಒಬ್ಬ ಮಧ್ಯಮ ವರ್ಗದ ವ್ಯಕ್ತಿ ೧೨೦೦ ಅಡಿಯ ಒಂದು ನಿವೇಶನ ಖರೀದಿಸಬೇಕೆಂದರೆ ನಗರದ ೫ ಕಿ.ಮೀ ವ್ಯಾಪ್ತಿಯೊಳಗೆ ಎಲ್ಲಿಯೂ ಸಿಗುವುದಿಲ್ಲ, ಸಿಕ್ಕರೂ ೫೦-೬೦ ಲಕ್ಷ ರೂ. ಆತನಲ್ಲಿರಬೇಕಾಗುತ್ತದೆ.
ಹಾಗೆಯೇ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ(ಸೂಡಾ) ವತಿಯಿಂದ ನಿರ್ಮಿಸಿರುವ ವಾಜಪೇಯಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡುವಲ್ಲಿಯೂ ಸಾಕಷ್ಟು ಗೋಲ್‌ಮಾಲ್ ನಡೆದಿರುವುದು ಬಹಿರಂಗವಾಗಿ ಅಲ್ಲಿಯೂ ಕೂಡ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಇನ್ನು ಚಿತ್ರದುರ್ಗ ನಗರದಲ್ಲಿ ೧೫-೨೦ ವರ್ಷಗಳಿಂದ ಪ್ರಾಧಿಕಾರದಿಂದ ನೂತನ ಬಡಾವಣೆ ನಿರ್ಮಾಣ ಆಗಿಲ್ಲ, ಹಾಗಂತ ನಿವೇಶನ ಕೋರಿ ಅರ್ಜಿಗಳು ಇಲ್ಲ ಎಂದಲ್ಲ, ಸಾವಿರಾರು ನಾಗರಿಕರ ಅರ್ಜಿಗಳು ಕಡತದಲ್ಲಿಯೇ ಇವೆ. ನಗರಕ್ಕೆ ಹತ್ತಿರದಲ್ಲಿ ಭೂಮಿ ಸಿಗುತ್ತಿಲ್ಲ ಎಂಬ ಕುಂಟು ನೆಪ ಅಧಿಕಾರಿಗಳಿಂದ ಉತ್ತರ ಸಿದ್ಧವಿರುತ್ತದೆ. ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದಲೂ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ ಅದಕ್ಕಿನ್ನೂ ಗಟ್ಟಿಧ್ವನಿ ಸಿಕ್ಕಿಲ್ಲ. ರಾಜ್ಯದಲ್ಲಿರುವ ಬಹುತೇಕ ನಗರಾಭಿವೃದ್ಧಿ ಪ್ರಾಧಿಕಾರಿಗಳ ಮೂಲಕ ಇದುವರೆಗೆ ಹಂಚಿಕೆ ಆಗಿರುವ ನಿವೇಶನಗಳ ಪ್ರಕರಣಗಳನ್ನು ಸಮಗ್ರ ತನಿಖೆಗೆ ಒಳಪಡಿಸಿ ಕಾನೂನುಬಾಹಿರವಾಗಿ ಪಡೆದುಕೊಂಡಿರುವ ನಿವೇಶನಗಳನ್ನು ಮುಲಾಜಿಲ್ಲದೆ ಮರುಸ್ವಾಧೀನ ಮಾಡಿಕೊಂಡು ಅರ್ಹ ನಿವೇಶನ ಅರ್ಜಿದಾರರಿಗೆ ಹಂಚಿಕೆ ಮಾಡಲು ಸರ್ಕಾರ ಮುಂದಾಗಬೇಕು.