For the best experience, open
https://m.samyuktakarnataka.in
on your mobile browser.

ಮೂರು ಹಂತಗಳ ಆಧ್ಯಾತ್ಮಿಕ ಅಭ್ಯಾಸ

04:45 AM Aug 31, 2024 IST | Samyukta Karnataka
ಮೂರು ಹಂತಗಳ ಆಧ್ಯಾತ್ಮಿಕ ಅಭ್ಯಾಸ

ಮೂರು ಹಂತಗಳ ಆಧ್ಯಾತ್ಮಿಕ ಅಭ್ಯಾಸಗಳಿವೆ. ಮೊದಲನೆಯದು ಅಣವೋಪಾಯ. ಎರಡನೆಯದು ಶಕ್ತೋಪಾಯ. ಮೂರನೆಯದು ಶಂಭವೋಪಾಯ. ಅಣವ, ಶಕ್ತಿ, ಶಿವ-ಜಗತ್ತಿನ ಎಲ್ಲಾ ಅಭ್ಯಾಸಗಳನ್ನೂ ಈ ಮೂರು ಹಂತಗಳಲ್ಲಿ ವಿಂಗಡಿಸಬಹುದು. ಅಣವೋಪಾಯವು ಕೆಳಗಿನ ಮಟ್ಟದ್ದು, ಎಂದರೆ ಆರಂಭ. ಎಲ್ಲಾ ಜಪ, ಮಂತ್ರಗಳು, ಪೂಜೆಗಳು, ಯೋಗಾಸನಗಳು, ಉಸಿರಿನ ನಿಯಂತ್ರಣ, ಎಲ್ಲವೂ ಅಣವೋಪಾಯ.
ಉಪಾಯಗಳೆಂದರೆ ಪರಿಹಾರ, ದಾರಿ. ಇದರ ಮೇಲಿರುವುದು ಶಕ್ತೋಪಾಯ. ಶಕ್ತೋಪಾಯವು ಕೇವಲ ಮಾನಸಿಕವಾದದ್ದು, ಎಂದರೆ ಆಂತರ್ಯದ್ದು. ಇದರಲ್ಲಿ ಬಾಹ್ಯದ ವಿಷಯಗಳಿರುವುದಿಲ್ಲ, ಮಂತ್ರಗಳಿರುವುದಿಲ್ಲ. ಇದು ಧ್ಯಾನಸ್ಥ ಸ್ಥಿತಿಯ ಪ್ರಭಾವ. ಇದನ್ನು ಶಕ್ತೋಪಾಯ ಎನ್ನುತ್ತಾರೆ. ಹಾಡಿದಾಗ, ಧ್ಯಾನ, ಪ್ರಾಣಾಯಾಮ ಮಾಡಿದಾಗ, ಸುದರ್ಶನಕ್ರಿಯೆ ಮಾಡಿದಾಗ, ಇವೆಲ್ಲವೂ ಅಣವೋಪಾಯದಿಂದ ಪ್ರಾರಂಭವಾಗಿ, ಶಕ್ತೋಪಾಯದೆಡೆಗೆ ನಿಮ್ಮನ್ನು ಕರೆದೊಯ್ಯುತ್ತವೆ.
ಈ ಹಂತದಲ್ಲಿ ನೀವು ಕೇವಲ ಶಕ್ತಿಯಾಗಿರುತ್ತೀರಿ. ಇಲ್ಲಿ ಪ್ರಯತ್ನವಿಲ್ಲ, ಮಾಡುವುದೇನೂ ಇಲ್ಲ. ಸ್ವಲ್ಪವೇ ಸ್ವಲ್ಪ ಪ್ರಯತ್ನರಹಿತವಾದ ಪ್ರಯತ್ನವಿದೆ. ನಂತರ ಶಿವ ಉಪಾಯ ಅಥವಾ ಶಂಭವೋಪಾಯ. ಇದು ಶುದ್ಧವಾದ ಅರಿವಿನ ಸ್ಥಿತಿ, ಕೇವಲ ಅರಿವಿನ ಸ್ಥಿತಿ. ಶಂಭವೋಪಾಯ ಎಂದರೆ ಇದನ್ನು ಸಾಧಿಸುವ ದಾರಿಯಿಲ್ಲ, ಉಪಾಯವಿಲ್ಲ. ಇದು ತಾನಾಗಿಯೇ, ಸ್ವಯಂ ಆಗಿಯೆ ಆಗುವಂತದ್ದು. ಆದರೂ ಸಹ ಅದನ್ನು ಉಪಾಯ ಎನ್ನುತ್ತಾರೆ. ಆದ್ದರಿಂದ, ಅಣವೋಪಾಯ ಮತ್ತು ಶಕ್ತೋಪಾಯದ ಉದ್ದೇಶ ನಿಮ್ಮನ್ನು ಶಂಭವೋಪಾಯದೆಡೆಗೆ ಕರೆದೊಯ್ಯುವುದು.
ಈ ಸ್ಥಿತಿಯಲ್ಲಿ ನೀವು ಚೈತನ್ಯದ ಚತುರ್ಥಾವಸ್ಥೆಯಲ್ಲಿ ಲಯವಾಗುತ್ತೀರಿ. ಈ ಸ್ಥಿತಿಯಲ್ಲಿ ಎರಡೆಂಬುದಿಲ್ಲ, ಕರ್ತೃತ್ವ ಭಾವನೆಯಿಲ್ಲ. ನೀವೇ ಶಿವ. ಇದೇ ಶಂಭವೋಪಾಯ. ಈ ಸ್ಥಿತಿಯನ್ನು ಅನುಭವಿಸಿದವರು ಕೆಳಗಿನ ಎರಡು ಸ್ಥಿತಿಗಳನ್ನು ಕಡೆಗಾಣಿಸಿದರು. ಆದ್ದರಿಂದ ಅವರು ಪ್ರಾಣಾಯಾಮ, ಮಂತ್ರೋಚ್ಚಾರಣೆ ಅಥವಾ ಪೂಜೆ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಬಿಡುತ್ತಾರೆ.
ಆದರೆ ಈ ಅಭ್ಯಾಸಗಳಿಗೂ ತಮ್ಮದೇ ಆದ ಸ್ಥಾನವಿದೆ. ಉದಾಹರಣೆಗೆ ನೀವು ದೇಶದ ಪ್ರಧಾನಮಂತ್ರಿಗಳ ಬಳಿ ಹೋಗಬಹುದಾದರೆ ನಗರದ ಮಹಾಪೌರರನ್ನು ಅಷ್ಟಾಗಿ ಪರಿಗಣಿಸಬೇಕಾಗಿಲ್ಲ. ಆದರೆ ಮಹಾಪೌರರ ಸಮ್ಮತಿಯೂ ಬೇಕಾಗಿದ್ದರೆ ಅವರಿಂದ, ಅಧಿಕಾರಿಗಳಿಂದ ಅಡಚಣೆಗಳು ಬರಬಹುದು. ಆದ್ದರಿಂದ ಪ್ರಾಚೀನ ಪದ್ಧತಿಯಲ್ಲಿ ಎಲ್ಲದ್ದಕ್ಕೂ ತಮ್ಮದೇ ಆದ ಸರಿಯಾದ ಸ್ಥಾನಮಾನವನ್ನು ಕೊಡಲಾಗಿದೆ. ಅಣವೋಪಾಯ, ಶಕ್ತೋಪಾಯ, ಎಲ್ಲದ್ದಕ್ಕೂ ಒಂದು ಉದ್ದೇಶವಿರುವುದರಿಂದ ಅವುಗಳನ್ನು ಮುಂದುವರಿಸಿಕೊಂಡು ಬರಲಾಗಿದೆ. ಆಧ್ಯಾತ್ಮಿಕ ಪಥದ ಆರಂಭದ ಹಂತದಲ್ಲಿ ಇರುವವರಿಗೆ ಇದು ಮೇಲೆರುವ ಮೆಟ್ಟಿಲುಗಳು. ಇದು ಆಳವಾದ ಜ್ಞಾನ.