ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮೆಹರ್… ವಧುವಿನ ಆಪದ್ಧನ

01:14 AM Feb 23, 2024 IST | Samyukta Karnataka

ಮದುವೆ ಎಲ್ಲಾ ಧರ್ಮಗಳಲ್ಲಿ ಅತ್ಯಂತ ಶಾಸ್ತ್ರೋಕ್ತ ವಿಧಿ ವಿಧಾನಗಳಿಂದ ನೆರವೇರಿಸಲ್ಪಡುತ್ತದೆ. ವಧು ವರರ ಶೃಂಗಾರ ಆಡಂಬರ ವೈಭವೀಕರಣದ ಆಚರಣೆಗಳು ನಡೆಯುತ್ತವೆ. ವಧು ವರರು ಕೂಡಿ ಬಾಳುವ ಪ್ರತಿಜ್ಞೆಗಳ ಮಳೆಯನ್ನೇ ಸುರಿಸುತ್ತಾರೆ.
ಇಸ್ಲಾಮಿನಲ್ಲಿ ವಿವಾಹದ ವಿಧಿ ವಿಧಾನಗಳು ಧಾರ್ಮಿಕವಾಗಿ ತೀರಾ ಸರಳವಾದವುಗಳು ಅಷ್ಟೇ ಅಲ್ಲ ಬಹಳಷ್ಟು ಗಮನಿಸಬೇಕಾದ ಸಂಗತಿ ಅಂದರೆ ಇಲ್ಲಿ ವರನು ವಧುವಿಗೆ ಬಹಿರಂಗವಾಗಿ ವಧು ದಕ್ಷಿಣೆ ಸಾರಬೇಕಾಗುತ್ತದೆ . ಅದಕ್ಕೆ ಇಸ್ಲಾಮಿನಲ್ಲಿ ಮೆಹರ್ ಎಂದು ಕರೆಯಲಾಗುತ್ತದೆ.
ಮೆಹರ್ ಇಸ್ಲಾಂ ಮದುವೆಯ ಮುಖ್ಯ ಅಂಶವಾಗಿದೆ. ವರನು ವಧುವಿಗೆ ನೀಡುವುದು ಕಡ್ಡಾಯವಾಗಿದೆ. ಕುರಾನಿನ ಅಧ್ಯಾಯ ನಿಸಾ (ಮಹಿಳೆಯರು) ೪.೪ ಶ್ಲೋಕಗಳಲ್ಲಿ "ನೀವು ವಿವಾಹವಾಗುವ ಮಹಿಳೆಯ ಮೆಹರ್ ಸಂತೋಷದಿಂದ ಕೊಡಿರಿ" ಎಂದು ಇನ್ನೊಂದು ಅಧ್ಯಾಯ ಮಾಯಿದ (೫.೫) ದಲ್ಲಿ "ನೀವು ವಧುವಿನ ವಿವಾಹಧನ (ಮೆಹರ್) ನೀಡಿದ ಬಳಿಕ ವಧು ಜೊತೆಗೆ ವಿವಾಹದ ಕಟ್ಟುನಿಟ್ಟಿನ ಆಜ್ಞೆಗಳನ್ನು ಪಾಲಿಸಬೇಕು" ಎಂಬ ಆಜ್ಞೆಗಳನ್ನು ನೀಡಲಾಗಿದೆ.
ವರನು ವಧು-ದಕ್ಷಿಣೆಯನ್ನು ಮೆಹರ್ ವಧುವಿಗೆ ನೀಡ ಬೇಕೆ ಹೊರತು ಆಕೆಯ ಪೋಷಕರಿಗಲ್ಲ. ಮದುವೆಯ ಸಮಯದಲ್ಲಿ ಎಷ್ಟು ವಧುದಕ್ಷಿಣೆ ಬೇಕೆಂದು ಬೇಡಿಕೆ ಇಡುವ ಹಾಗೂ ಅದನ್ನು ಪಡೆಯುವ ಹಕ್ಕು ವಧುವಿಗೆ ಇದೆ.
ಇದು ವಧುವಿನದೇ ಸ್ವಂತ ಆಸ್ತಿ. ಇದನ್ನು ಆಕೆ ತನ್ನ ಆಪತ್ ಕಾಲದಲ್ಲಿ ಉಪಯೋಗಿಸಲಿಕ್ಕೆ ಕೂಡಿಡಬಹುದು.
ಮೆಹರ್ ವರನ ಹೊಣೆಗಾರಿಕೆಯ ಸಂಕೇತವಾಗಿದೆ. ವಧು-ದಕ್ಷಿಣೆ ವಿವಾಹ ರಜಿಸ್ಟರ್ ದಲ್ಲಿ ದಾಖಲಿಸಿ ಅದನ್ನು ಕಡ್ಡಾಯ ಹಾಗೂ ಅಧಿಕೃತವನ್ನಾಗಿ ಮಾಡಲಾಗುತ್ತದೆ. ಪ್ರತಿಯೊಬ್ಬ ಮುಸ್ಲಿಂ ವರ ವಧು-ದಕ್ಷಿಣೆಯನ್ನು ಕೊಟ್ಟೆ ವಿವಾಹವಾಗಬೇಕು. ಇಲ್ಲವಾದರೆ ಆ ವಿವಾಹವು ಧಾರ್ಮಿಕವಾಗಿ ಕಾನೂನು ಪ್ರಕಾರ ಅನಧಿಕೃತವಾಗುತ್ತದೆ. ಈ ದಕ್ಷಿಣೆ ಹಣ, ಆಸ್ತಿ ಅಥವಾ ಇನ್ಯಾವ ರೂಪದಲ್ಲಿ ಇರಬಹುದು. ಇದನ್ನು ವರನು ಹಾಗೂ ವಧುವಿನ ಪೋಷಕರ ನಡುವೆ ವಧುವಿನ ಸಮ್ಮತಿಯಿಂದ ನಿರ್ಧರಿಸಲಾಗುತ್ತದೆ.
ಪ್ರವಾದಿ ಮೊಹಮ್ಮದರು (ಸ) ತಮ್ಮ ವಿವಾಹದ ಸಂದರ್ಭದಲ್ಲಿ ಖದೀಜಾ ಅವರಿಗೆ ೧೨ ಒಂಟೆಗಳನ್ನು ನೀಡಿದ ಉಲ್ಲೇಖವಿದೆ. ಅಲ್ಲದೆ ಪ್ರವಾದಿ ಮೂಸಾ ಅವರು (ಮೊಸೆಸ್) ಒಬ್ಬ ಯುವತಿಯನ್ನು ವಿವಾಹವಾಗುವಾಗ ಮೆಹರ್ ಕೊಡಲು ಅವರಲ್ಲಿ ಏನೂ ಇರಲಿಲ್ಲ ಹೀಗಾಗಿ ಅವರು ಯುವತಿಯ ತಂದೆಯ ಹತ್ತಿರ ಆಳಾಗಿ ದುಡಿದು ಅದರಿಂದ ಬಂದ ವೇತನವನ್ನು ಮೆಹರಾಗಿ ಕೊಟ್ಟು ವಿವಾಹವಾದ ಉಲ್ಲೇಖವು ಇದೆ.
ಪ್ರತಿಯೊಬ್ಬ ಮುಸ್ಲಿಂ ವಿವಾಹಿತ ಮಹಿಳೆ ತನ್ನ ಹತ್ತಿರ ಇರುವ ಮೆಹರನ್ನು ವಿವಾಹ ವಿಚ್ಛೇದನ ಅಥವಾ ಪತಿಯಿಂದ ದೂರವಾದ ಸಂದರ್ಭಗಳಲ್ಲಿ ತನ್ನ ಆಪದ್ಧನವಾಗಿ ಉಪಯೋಗಿಸಬೇಕು. ಪತಿಯಿಂದ ಪರಿತ್ಯಕ್ತಳಾದಾಗ ಆಕೆ ಸಮಾಜದಲ್ಲಿ ಸಬಲಳಾಗಿ ಜೀವನ ಸಾಗಿಸಬೇಕೆಂಬುದೇ ಮೆಹರನ ಉದ್ದೇಶ.
ಇದನ್ನು ಪಾಲಿಸುವವರು ತೀರ ವಿರಳವೆನ್ನಬಹುದು. ಪತ್ನಿಗೆ ಆಕೆಯ ಮೆಹರ್ ಹಣ ಎಷ್ಟೋ ಸಾರೆ ಕೊಡುವುದೇ ಇಲ್ಲ . ಅನೇಕಸಾರೆ ವಾಗ್ದಾನದಲ್ಲಿಯೇ ಉಳಿದು ಬಿಡುತ್ತದೆ. ಮೆಹರಿನ ಉದ್ದೇಶ ಪಾಲಿಸಿದರೆ ಎಷ್ಟೊಂದು ಕೌಟುಂಬಿಕ ಕಲಹ ವೈಪರೀತ್ಯಗಳು, ಸಂಬಂಧಗಳು ಹಾಳಾಗಿ ಹೋಗುವುದು ತಪ್ಪುತ್ತದೆ.

Next Article