ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮೇಕಪ್ ಮರೆಮ್ಮಳ ಗೃಹಲಕ್ಷ್ಮೀ…

03:30 AM Nov 11, 2024 IST | Samyukta Karnataka

ಇತ್ತೀಚಿನ ದಿನಗಳಲ್ಲಿ ಗೃಹಲಕ್ಷ್ಮೀಯಲ್ಲಿ ಮಕ್ಕಳಿಗೆ ಅದು ಕೊಡಿಸಿದೆ, ನಮ್ಮ ಅತ್ತೆ, ಮಾವನಿಗೆ ಇದು ಕೊಡಿಸಿದೆ. ಫ್ರಿಡ್ಜ್ ತೆಗೆದುಕೊಂಡೆ, ವಾಷಿಂಗ್ ಮಷಿನ್ ತೆಗೆದುಕೊಂಡೆ, ಗಂಡನಿಗೆ ಧೋತರ ಕೊಡಿಸಿದೆ ಎಂದು ಮದ್ರಾಮಣ್ಣೋರಿಗೆ ಪತ್ರ ಬರೆಯುತ್ತಿದ್ದರು. ಅದು ಪೇಪರ್‌ನಲ್ಲಿ ಟಿವಿಯಲ್ಲಿ ಬಂದು ಅವರು ಫೇಮಸ್ ಆಗುತ್ತಿದ್ದರು. ನಮ್ಮ ಸಂಘದವರು ಯಾಕೆ ಫೇಮಸ್ ಆಗಬಾರದು ಎಂದು ಮಹಿಳಾ ಮಂಡಳದ ಅಧ್ಯಕ್ಷೆ ರಂಗೂಬಾಯಿ ತನ್ನ ಸಂಘದ ಎಲ್ಲ ಸದಸ್ಯೆಯರ ಸಭೆ ಕರೆದಿದ್ದಳು. ಎಲ್ಲ ಸದಸ್ಯೆಯರೂ ಸಭೆಗೆ ಹಾಜರಾಗಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಂಗೂಬಾಯಿ.. ನೋಡ್ರವಾ... ಎಲ್ಲ ಮಹಿಳೆಯರು ಗೃಹಲಕ್ಷ್ಮೀ ಹಣದಲ್ಲಿ ಏನೇನೋ ಕೊಡಿಸಿ ಫೇಮಸ್ ಆಗುತ್ತಿದ್ದಾರೆ. ನೀವು ಏನಾದರೂ ಕೊಡಿಸಿದ್ದರೆ ಓಪನ್ ಆಗಿ ಹೇಳಿ. ಅದನ್ನು ನಾನು ಮದ್ರಾಮಣ್ಣೋರಿಗೆ ಪತ್ರ ಬರೆಯುತ್ತೇನೆ. ಮಿನಿಸ್ಟರ್ ಲಕ್ಷ್ಮಮ್ಮನನ್ನು ಕರೆಯಿಸಿ ನಿಮಗೆ ಸನ್ಮಾನ ಮಾಡಿಸುತ್ತೇನೆ. ನೀವೂ ಫೇಮಸ್ ಆಗುತ್ತೀರಿ... ನಮ್ಮ ಸಂಘದವರೂ ಫೇಮಸ್ ಆಗುತ್ತಾರೆ' ಎಂದು ಹೇಳಿದಳು. ಕರಿಭಾಗೀರತಿನಾನು ಹುಜುರ್ ಚಂದ್ರನಿಗೆ ಐದರ ಬಡ್ಡಿಯ ಹಾಗೆ ಕೊಟ್ಟಿದ್ದೇನೆ' ಎಂದು ಹೇಳಿದಳು. ಕ್ವಾಟಿಗ್ವಾಡಿ ಸುಂದ್ರವ್ವ, ನಾನು ಯಂಕೋಬಿ ಅಂಗಡಿಯಲ್ಲಿ ಗೃಹಲಕ್ಷ್ಮೀ ಬಂದಾಗ ಕೊಡುತ್ತೇನೆ ಎಂದು ಉದ್ರಿ ತಂದಿದ್ದೆ, ಅದನ್ನು ಮುಟ್ಟಿಸಬೇಕು ಅಂದರೆ ರೆಗ್ಯುಲರ್ ಆಗಿ ಬರುತ್ತಿಲ್ಲ..' ಎಂದು ಹೇಳಿದಳು. ಚಾಲಾಕಿ ಮೇಕಪ್ ಮರೆಮ್ಮಳು ಯೋಚನೆ ಮಾಡಿದಳು. ನಾನು ಹೆಚ್ಚಿನದು ತೆಗೆದುಕೊಂಡೆ ಎಂದು ಹೇಳಿದರೆ ನನ್ನ ಹೆಸರು ಮದ್ರಾಮಣ್ಣನವರ ಮುಂದೆ ಪ್ರಸ್ತಾಪವಾಗುತ್ತದೆ. ಮಂತ್ರಿ ಲಕ್ಷಮ್ಮಮ್ಮ ನನಗೆ ಶಾಲು ಹೊದೆಸುತ್ತಾಳೆ, ನಾಳೆ ನನಗೆ ಪಂಚಾಯ್ತಿ ಟಿಕೆಟ್ ಸಿಕ್ಕರೂ ಸಿಗಬಹುದು ಎಂದು ಯೋಚನೆ ಮಾಡಿ...ರಂಗಮ್ನೋರೆ… ನಾನು ಗೃಹಲಕ್ಷ್ಮೀಯಿಂದಾಗಿ ಮಗನನ್ನು ಎಂಜಿನಿಯರಿಂಗ್ ಓದಿಸಿದೆ. ಮಗಳನ್ನು ಎಂಬಿಬಿಎಸ್ ಮಾಡಿಸಿದೆ. ನನ್ನ ಗಂಡನ ತಮ್ಮನ ಮಗನಿಗೆ ಡಿಪ್ಲೋಮಾ ಓದಿಸುತ್ತಿರುವೆ. ನನ್ನ ತಂಗಿಯ ಮಗಳ ಮದುವೆಗೆ ಬಂಗಾರ ತಂದುಕೊಟ್ಟೆ. ನನ್ನ ಗಂಡನಿಗೆ ಎಲೆಕ್ಟ್ರಿಕಲ್ ವೆಹಿಕಲ್ ಕೊಡಿಸಿದೆ. ಇರಲಿ ಎಂದು ನಾನೊಂದು ಆಕ್ಟೀವಾ ತೆಗೆದುಕೊಂಡೆ. ಇದ್ದ ಮನೆಯನ್ನು ಬಿಚ್ಚಿ ಹಾಕಿಸಿ ಹೊಸದಾಗಿ ಕಟ್ಟಿಸಿಕೊಂಡೆ. ಊರ ಹೊರಗೆ ನಲವತ್ತು ಅರವತ್ತು ಸೈಟ್ ಕೊಂಡುಕೊಂಡೆ. ಮುದಿಗೋವಿಂದಪ್ಪನ ಫೈನಾನ್ಸ್ನಲ್ಲಿ ಸೈಲೆಂಟ್ ಪಾರ್ಟನರ್ ಆಗಿರುವೆ' ಎಂದು ಇನ್ನೇನೋ ಹೇಳುತ್ತಿದ್ದಳು. ಈ ಸುದ್ದಿ ಮರುದಿನ ಪೇಪರ್‌ನಲ್ಲಿ ಬಂತು. ಈಗ ಮರೆಮ್ಮಳನ್ನು ಇನ್‌ಕಂ ಟ್ಯಾಕ್ಸ್‌ನವರು ವಿಚಾರಣೆ ನಡೆಸುತ್ತಿದ್ದಾರೆ.

Next Article