For the best experience, open
https://m.samyuktakarnataka.in
on your mobile browser.

ಮೋಕ್ಷದಲ್ಲಿ ಮಾತ್ರ ನೈಜ ಸುಖಾನುಭೂತಿ

04:36 AM Aug 08, 2024 IST | Samyukta Karnataka
ಮೋಕ್ಷದಲ್ಲಿ ಮಾತ್ರ ನೈಜ ಸುಖಾನುಭೂತಿ

ಆತ್ಮ ತನ್ನ ಕರ್ಮಾನುಸಾರವಾಗಿ ಹುಟ್ಟು ಸಾವಿನ ಚಕ್ರದಲ್ಲಿ ವಿವಿಧ ಜೀವಿಯ ರೂಪದಲ್ಲಿ ಅವತರಿಸುತ್ತದೆ. ಆ ದೇಹದ ಗುಣಲಕ್ಷಣಗಳ ಸಾಧ್ಯತೆಗೆ ಅನುಗುಣವಾಗಿ ತನ್ನ ಕರ್ಮಗಳನ್ನು ಮಾಡಿ ಸಾಧನೆ ಮಾಡುತ್ತ ಹೋಗುತ್ತದೆ. ಮುಕ್ತಿ ಸಂಪಾದನೆಗೆ ಪರಮಾತ್ಮನ ಅಪರೋಕ್ಷ ಜ್ಞಾನವು ಅವಶ್ಯ. ಅದು ಅಖಂಡ ಭಕ್ತಿಯಿಂದ ಸಾಧ್ಯ. ದೇವರ ಮಹಿಮೆಯ ಜ್ಞಾನವುಳ್ಳ ಅಚಲ ಸ್ನೇಹವೇ ಭಕ್ತಿ.
ಈ ಭೂಮಿಯ ಮೇಲೆ ಇರುವ ೮೪ ಲಕ್ಷ ಜೀವಿಗಳಲ್ಲಿ ಉತ್ತಮವಾದ ಜೀವಿ ಮನುಷ್ಯ. ೮೪ ಲಕ್ಷ ಜೀವಿಯಾಗಿ ಅವತರಿಸಿದ ನಂತರ ಮನುಷ್ಯ ಜನ್ಮ ಪ್ರಾಪ್ತಿಯಾಗುತ್ತದೆ. ಮನುಷ್ಯ ಚೇತನ ಜೀವಿ. ಮಾನವನಿಗೆ ಮನಸ್ಸು, ಬುದ್ಧಿ, ವಿವೇಚನಾಶಕ್ತಿ ಇದ್ದು ಎಲ್ಲ ಉಳಿದ ಜೀವರಾಶಿಗಳಿಗಿಂತ ವಿಭಿನ್ನ. ಆದುದರಿಂದ ಯಾವುದೇ ಆತ್ಮ, ಮಾನವ ದೇಹದ ರೂಪದಲ್ಲಿ ಭೂಮಿ ಮೇಲೆ ಜನಿಸಿದಾಗ, ಜನ್ಮದತ್ತವಾಗಿ ಪ್ರಾಪ್ತವಾದ ಮನಸ್ಸನ್ನು ಸರಿಯಾಗಿ ಉಪಯೋಗಿಸಿ ಜ್ಞಾನ ಸಂಪಾದನೆ ಮಾಡಬೇಕು. ಭಗವಂತನ ಬಗ್ಗೆ ನೈಜ ಜ್ಞಾನ ಪಡೆದು, ಮುಕ್ತಿಯನ್ನು ಪಡೆಯಲು ಪ್ರಯತ್ನಿಸಬೇಕು. ಮುಕ್ತಿಗೆ ಮಾರ್ಗ ಯಾವುದು ಎಂದರೆ ದೇವರ ಪೂಜೆ, ಧ್ಯಾನ, ತೀರ್ಥಯಾತ್ರೆ, ದಾನ, ಧರ್ಮ, ಪರೋಪಕಾರ ಇತ್ಯಾದಿ. ಸಾಧನಾ ಶರೀರವಿದು ನೀ ದಯದಿ ಕೊಟ್ಟಿದ್ದು' ಎಂದು ದಾಸರಾಯರು ತಿಳಿಸಿದ್ದಾರೆ. ಈ ಶರೀರವನ್ನು ದಯಪಾಲಿಸಿದ ದೇವರನ್ನು ನಿತ್ಯವೂ ಸ್ಮರಿಸುತ್ತ, ಈ ದೇಹದ ಸಹಾಯದಿಂದ ಸಾಧನೆಯ ಮಾರ್ಗದಲ್ಲಿ ದೇವರನ್ನು ಸಾಕ್ಷಕರಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಿಸಬೇಕು. ಮೋಕ್ಷ ಸಾಧನೆಗೆ ಹಲವಾರು ಮಾರ್ಗಗಳಿವೆ. ಪ್ರತಿಯೊಬ್ಬ ಜೀವನು ವಿಭಿನ್ನನಾಗಿರುವುದರಿಂದ, ಮೋಕ್ಷ ಸಾಧನೆ ಜ್ಞಾನ ಪಡೆಯಲು ಎಲ್ಲರೂ ಅವರವರ ಯೋಗ್ಯತಾನು ಸಾರ ಪ್ರಯತ್ನಿಸಬೇಕು. ಜಪ, ತಪ, ಅನುಷ್ಠಾನ, ಕಠಿಣ ತಪಸ್ಸು ಕಲಿಯುಗದಲ್ಲಿ, ಅದೂ ಇಂದಿನ ಈ ವೇಗದ ಯುಗದಲ್ಲಿ ದಿನನಿತ್ಯದ ಕೆಲಸಗಳ ಮಧ್ಯ ಮಾಡಲು ಅಡಚಣೆಗಳು ಇರುವುದು ಸಹಜ. ಇಂಥಾ ಅಡಚಣೆ ಹಾಗು ಸಮಯದ ಅಭಾವದ ಮಧ್ಯೆಯೂ ದೇವರನ್ನು ಒಲಿಸಿಕೊಳ್ಳುವುದು ಹೇಗೆ ಎಂದರೆ ಅದಕ್ಕೆ ಇರುವ ಸುಲಭ ಮಾರ್ಗ ಧ್ಯಾನ.ಮನಯೇವ ಮನುಷ್ಯಾಣಾಂ ಕಾರಣಯೋ ಬಂಧನ ಮೋಕ್ಷಯಃ' ಎಂದು ತಿಳಿಸಿದಂತೆ, ಮನಸ್ಸನ್ನು ನಿಯಂತ್ರಸುವುದು ಧ್ಯಾನದಿಂದ ಮಾತ್ರ ಸಾಧ್ಯ.
ಪ್ರತಿಯೊಬ್ಬರೂ ದಿನನಿತ್ಯ ದೇವರನ್ನು ಕುರಿತು ಧ್ಯಾನ ಮಾಡಬೇಕು. ಕನಿಷ್ಠ ಪಕ್ಷ ಮುಂಜಾನೆ ೨೦ ನಿಮಿಷವಾದರೂ ಧ್ಯಾನಕ್ಕೆ ಮೀಸಲಿಡಬೇಕು. ಈ ಧ್ಯಾನದ ಪಕ್ವತೆ ಸಾಧ್ಯವಾಗುವುದು ಯೋಗದಿಂದ. ಯೋಗದ ಸಾಧನೆಯಲ್ಲಿ ಆಳವಾಗಿ ಇಳಿದಾಗ ಸೃಷ್ಟಿಯ ರಹಸ್ಯ ಬಯಲಾಗುತ್ತಾ ಹೋಗುತ್ತದೆ. ಸೃಷ್ಟಿಯ ರಹಸ್ಯತಿಳಿಯುತ್ತಾ ಹೋದಾಗ, ಮನಸ್ಸಿನಲ್ಲಿ ಕವಿದ ಮಬ್ಬು ಕರಗಿ, ಜ್ಞಾನದ ಮಾರ್ಗ ಗೋಚರವಾಗುತ್ತದೆ. ಅದಕ್ಕಾಗಿ ಯೋಗಿಗಳು ತಮ್ಮ ಕಠಿಣ ಸಾಧನೆಗೆ ಆರಿಸಿಕೊಂಡ ಮಾರ್ಗ ಯೋಗ, ಧ್ಯಾನ. ಈ ಭೂಮಿಯ ಮೇಲೆ ಅವತರಿಸಿದ ಈ ದೇಹದ ಒಳಗೆ ಆತ್ಮ ಇರುವವರೆಗೆ, ಸಾಧ್ಯವಾದಷ್ಟು ಸುಜ್ಞಾನ ಸಂಪಾದನೆಮಾಡಲು ಉಪಯೋಗಿಸಿಕೊಳ್ಳಬೇಕು. ಸತ್ಕರ್ಮಗಳನ್ನು ಆಚರಿಸುತ್ತ, ಯೋಗದಿಂದ, ಧ್ಯಾನದಿಂದ ದೇವರನ್ನು ಸಾಕ್ಷಾಕರಿಸಿಕೊಳ್ಳಲು ನಿತ್ಯದಲ್ಲೂ ಜೀವಿ ಪ್ರಯತ್ನಿಸುತ್ತಲೇ ಇರಬೇಕು. `ಮುಕ್ತಿ: ನೈಜ ಸುಖಾನುಭೂತಿಃ' ಎಂಬ ಆಚಾರ್ಯರ ವಾಕ್ಯದಂತೆ, ಈ ಜೀವನ್ಮರಣದ ಚಕ್ರದಿಂದ ಹೊರಗೆ ಬಂದರೆ ಮಾತ್ರ ಅದು ಮೋಕ್ಷ. ಮೋಕ್ಷ ಪಡೆದ ಆತ್ಮಕ್ಕೆ ಮಾತ್ರ ನಿಜವಾದ ಆನಂದ, ಸುಖಾನುಭೂತಿ. ಅಂಥ ಸುಖವನ್ನು ಪಡೆಯಲು ನಾವು ನಿತ್ಯದಲ್ಲೂ ದೇವರ ಧ್ಯಾನದಲ್ಲಿ ಪ್ರವೃತ್ತರಾಗಬೇಕು.