ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮೌಲ್ಯಾಧಾರಿತ ರಾಜಕಾರಣದ ರೂವಾರಿ

03:53 AM Aug 29, 2024 IST | Samyukta Karnataka

(ಇಂದು ಹೆಗಡೆ ಜನ್ಮದಿನ)
ಮೌಲ್ಯಾಧಾರಿತ ರಾಜಕಾರಣದ ರೂವಾರಿ ಎಂದು ಪ್ರಸಿದ್ಧಿ ಪಡೆದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮಾರ್ಗದರ್ಶನ ಪಡೆದದ್ದು, ಆಚಾರ್ಯ ವಿನೋಭಾಭಾವೆರವರ ಆಶ್ರಮದಲ್ಲಿ. ೧೯೨೬ ಆಗಸ್ಟ್ ೨೯ರಂದು ಜನಿಸಿದ ಅವರು ವಿದ್ಯೆಯ ಜೊತೆಗೆ ವಿನಯ ಮತ್ತು ಸಂಸ್ಕಾರವಂತಿಕೆಯನ್ನು ಮೈಗೂಡಿಸಿಕೊಂಡಿದ್ದರು.
ಸ್ವಾತಂತ್ರ‍್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆಮನೆ ವಾಸ ಅನುಭವಿಸಿ ಮಹಾತ್ಮ ಗಾಂಧೀಜಿ ಮತ್ತು ವಿನೋಭಾಭಾವೆ ವಿಚಾರಧಾರೆಗಳಿಗೆ ಪ್ರಭಾವಿತರಾಗಿ, ಕಾಂಗ್ರೆಸ್ ಪಕ್ಷದ ಜಿಲ್ಲಾ ಮಟ್ಟದ ಪದಾಧಿಕಾರಿಯಾಗಿ ಸಾರ್ವಜನಿಕ ಜೀವನಕ್ಕೆ ಬಂದವರು. ೧೯೫೭ರಲ್ಲಿಯೇ ವಿಧಾನಸಭೆಯ ಸದಸ್ಯರಾಗಿ ಸಚಿವರಾಗಿ ಆಡಳಿತದ ಅನುಭವ ಪಡೆದುಕೊಂಡಿದ್ದರು.
೧೯೬೨ರಲ್ಲಿ ಪಂಚಾಯತ್ ರಾಜ್ ಮಸೂದೆ ಮಂಡನೆಗೆ ಬೆಂಬಲ ಸಿಗಲಿಲ್ಲವೆಂದು ಪ್ರಥಮ ಬಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ನಿಜಲಿಂಗಪ್ಪನವರ ಮಾತಿನಂತೆ ಬೇರೆ ಖಾತೆಯನ್ನು ವಹಿಸಿಕೊಂಡವರು. ೧೯೭೭ರಲ್ಲಿ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ೧೯೮೪ರಲ್ಲಿ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಬರಲಿಲ್ಲವೆಂದು ನೈತಿಕ ಕಾರಣದಿಂದ ಸರ್ಕಾರವನ್ನು ವಜಾಗೊಳಿಸಿ ಚುನಾವಣೆಗೆ ಹೊರಟವರು.
ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆಪಾದನೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಅನೇಕ ಬಾರಿ ರಾಜೀನಾಮೆಯನ್ನು ಕೊಟ್ಟವರು. ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ನಂತರ ತಮ್ಮ ಜಾತ್ಯತೀತ ನಿಲುವನ್ನು ಪ್ರಕಟಿಸುವುದರ ಹಿನ್ನೆಲೆಯಲ್ಲಿ ಯಾವುದೇ ಸಚಿವರು ತಮ್ಮನ್ನು ಒಳಗೊಂಡಂತೆ ತಮ್ಮ ಕಚೇರಿಗಳಲ್ಲಿ ತಮ್ಮ ಬಂಧುಗಳನ್ನು ಅಥವಾ ತಮ್ಮ ಜಾತಿಯ ಜನರನ್ನು ನೇಮಕ ಮಾಡಿಕೊಳ್ಳಬಾರದು ಎಂಬ ಆದೇಶವನ್ನು ಹೊರಡಿಸಿದವರು. ಜೆಪಿರವರ ವಿಚಾರಧಾರೆಗೆ ಬದ್ಧರಾಗಿ ವಂಶಪಾರಂಪರ್ಯದ ರಾಜಕಾರಣಕ್ಕೆ ಅವಕಾಶ ನೀಡದೆ ನಿಷ್ಠೆಯಿಂದ ನಡೆದುಕೊಂಡವರು. ಈ ಕಾರಣದಿಂದಾಗಿ ಇವರ ಕುಟುಂಬದ ಸದಸ್ಯರು ಯಾರು ಸಹ ರಾಜಕಾರಣದಲ್ಲಿ ಸಣ್ಣ ಹುದ್ದೆಯನ್ನು ಅನುಭವಿಸಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಆಗಿದ್ದಾಗಲೂ ಸಾಮಾನ್ಯ ನಾಗರಿಕರಂತೆ ಅನವಶ್ಯಕವಾದ ಪೊಲೀಸ್ ಸಿಬ್ಬಂದಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗದೆ ಸಿಗ್ನಲ್ ದೀಪದ ಆದೇಶಗಳಿಗೆ ಕಾಯುತ್ತಿದ್ದರು. ಜನತಾದರ್ಶನ ಎಂಬುದು ಪ್ರಚಾರದ ಕಾರ್ಯಕ್ರಮವಾಗಿರದೆ ಪ್ರತಿದಿನವೂ ತಾವು ಪ್ರವಾಸದಲ್ಲಿ ಇಲ್ಲದೆ ಇರುವ ಸಂದರ್ಭದಲ್ಲಿ ಮನೆಯ ಮುಂದೆ ಸಾರ್ವಜನಿಕರ ಸಮಸ್ಯೆಗಳನ್ನು ಕೇಳುತ್ತ ಅದನ್ನು ಪರಿಹರಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡಿದರು.
ಕನ್ನಡ ಭಾಷೆಯ ಬಗ್ಗೆ ಗೌರವ ಹೊಂದಿದ್ದ ಅವರು ಪ್ರಥಮ ಬಾರಿಗೆ ಕನ್ನಡ ಕಾವಲು ಸಮಿತಿಯನ್ನು ರಚಿಸಿದರು.
ಕನ್ನಡಿಗರಿಗೆ ಕೇಂದ್ರ ಸರ್ಕಾರದ ಹುದ್ದೆಗಳು ಲಭ್ಯವಾಗಬೇಕೆಂದು ಸರೋಜಿನಿ ಮಹಿಷಿರವರ ಸಮಿತಿಯನ್ನು ರಚಿಸಿದರು. ರಾಜ್ಯೋತ್ಸವ ಪ್ರಶಸ್ತಿ ಮತ್ತು ಸಾಹಿತಿ ಕಲಾವಿದರಿಗೆ ಸೌಕರ್ಯಗಳನ್ನು ಒದಗಿಸಿಕೊಡುವ ಸಂದರ್ಭದಲ್ಲಿ ಉದಾರತೆಯನ್ನು, ಸೂಕ್ಷ್ಮತೆಯನ್ನು ಪ್ರದರ್ಶಿಸಿ ರುತ್ತಾರೆ.
ಅಧಿಕಾರ ವಿಕೇಂದ್ರೀಕರಣದ ಅನುಷ್ಠಾನಕ್ಕಾಗಿ ಸತತ ಪ್ರಯತ್ನ ನಡೆಸಿ ಅಬ್ದುಲ್ ನಜೀರ್‌ಸಾಬ್‌ರಂತಹ ಪ್ರಾಮಾಣಿಕರ ಸಹಕಾರದಿಂದ ಅದನ್ನು ಜಾರಿಗೆ ತಂದರು. ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ವ್ಯವಸ್ಥೆ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ, ದೇಶದಲ್ಲಿ ಮಹಿಳಾ ಅಭಿವೃದ್ಧಿ ನಿಗಮ ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಕೊಂಕಣ ರೈಲ್ವೆ ಯೋಜನೆಯ ಅನುಷ್ಠಾನದ ಹಿಂದೆ ಇವರ ಶ್ರಮವೂ ಇದೆ. ಅದೇ ರೀತಿಯಲ್ಲಿ ಕೇಂದ್ರದ ಸಚಿವರಾಗಿ ವಾಣಿಜ್ಯ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿರುತ್ತಾರೆ.
ಅನವಶ್ಯಕವಾಗಿ ರಾಜಕಾರಣದ ಮಾತುಗಳಿಗೆ ಅವಕಾಶ ಇರುತ್ತಿರಲಿಲ್ಲ. ಯಾರನ್ನು ಸಹ ಏಕವಚನದಲ್ಲಿ ಸಂಬೋಧಿಸಿದಂತಹ ಉದಾಹರಣೆಯೇ ಇಲ್ಲ. ಇಂದಿಗೂ ಸಹ ಕರ್ನಾಟಕದ ರಾಜಕಾರಣದ ವಿಚಾರದಲ್ಲಿ ಗೂಂಡಾ ಸಂಸ್ಕೃತಿ ದಮನ ಮಾಡಿದ ರೀತಿ, ಆಡಳಿತ ವ್ಯವಸ್ಥೆ, ಜನಪರ ಕಾರ್ಯಕ್ರಮಗಳನ್ನು ರಾಜಕೀಯ ಬಿಕ್ಕಟ್ಟುಗಳ ಸನ್ನಿವೇಶದಲ್ಲಿ ಹೆಗಡೆರವರು ಅನುಸರಿಸಿದ ಮಾರ್ಗದ ಬಗ್ಗೆ ಚರ್ಚೆಯ ಸಂದರ್ಭದಲ್ಲಿ ಪ್ರಸ್ತಾಪವಾಗುತ್ತಲೇ ಇರುತ್ತದೆ.
ಈ ರೀತಿ ಇಂದಿಗೂ ಸಹ ರಾಜಕಾರಣದಲ್ಲಿ ಪ್ರಸ್ತುತವಾಗಿಯೇ ಇವರ ನಡವಳಿಕೆ, ಕಾರ್ಯವೈಖರಿ, ನಿರ್ಧಾರಗಳು ಉಳಿದುಕೊಂಡಿವೆ.

ಕೆ.ಎಸ್.‌ ನಾಗರಾಜ್‌, ಬೆಂಗಳೂರು

Next Article