ಮ್ಯುಸಿಕಲ್ ಚೇರ್ ವಿನ್ನರ್ ಯಾರು?
ರಾಜ್ಯದ ಕೈ ಮಂದಿಗೆ ಡೆಲ್ಲಿಯಲ್ಲಿ ಮ್ಯುಸಿಕಲ್ ಚೇರ್ ಕಾಂಪಿಟೇಶನ್ ನಡೆಸಲಾಗುತ್ತದೆ ಎಂದಾಕ್ಷಣ ಅನೇಕರು ನನ್ನ ಹೆಸರು…ನಿನ್ನ ಹೆಸರು ಎಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ. ಕೆಂಪುಡುಗ ಯಾರು ಹೆಸರೂ ಕೊಟ್ಟರೂ ಹೂಂ..ಹೂಂ ಅನ್ನುತ್ತಿದ್ದಾನಂತೆ. ಸುಮ್ಮನೇ ನಾನ್ಯಾಕೆ ಬೇಡ ಅನ್ನಲಿ? ಅವರು ಬೇಕಾದರೆ ಆಡಿಸಿಕೊಳ್ಳಲಿ… ಅಮ್ಮೋರೂ ಇರುತ್ತಾರೆ. ಅವರೂ ಇರುತ್ತಾರೆ ಎಂದು ಮೈ ಒರೆಸಿಕೊಳ್ಳುತ್ತಿದ್ದಾರೆ. ಈ ಕಾಂಪಿಟಿಶೇನ್‌ನಲ್ಲಿ ನಾನು ಪಾಲ್ಗೊಳ್ಳಲೇಬೇಕು ಮತ್ತು ಇದು ಯಾರಿಗೂ ತಿಳಿಯಬಾರದು ಎಂದು ಕೆಲವರು ತಲೆಗೆ ಮಫಲರ್ ಸುತ್ತಿಕೊಂಡು… ಮುಖಕ್ಕೆ ಮಾಕ್ಸ್ ಹಾಕಿಕೊಂಡು ಹೋದರೆ…ಇನ್ನೂ ಹಲವರು ಉದ್ದನೆಯ ಆಫ್ ಶರ್ಟ್ ಪೈಜಾಮಾ ಹಾಕಿಕೊಂಡು ಅಲ್ಲಿಗೆ ಹೋಗಿ ಹೆಸರು ಬರೆಯಿಸಲು ಹೋಗುತ್ತಿದ್ದಾರೆ. ಹಾಗೆ ಹೆಸರು ಕೊಡಲು ಹೋದವರನ್ನು ಆ ಕೆಂಪಮನಿಷಾ ಯಾರನ್ನೂ ನಿರಾಸೆಗೊಳಿಸುವುದಿಲ್ಲ. ನೀನು ಬಂದರೂ ಬರೆದುಕೊಳ್ಳುತ್ತೇನೆ. ಅವರು ಬಂದರೂ ಬರೆದುಕೊಳ್ಳುತ್ತೇನೆ ಎಂದು ದಪ್ಪನೆಯ ನೋಟ್‌ಬುಕ್ ಇಟ್ಟುಕೊಂಡು ಹೆಸರು ಬರೆದುಕೊಳ್ಳುತ್ತಿದ್ದಾರೆ. ಈ ಆಟಕ್ಕೆ ಅಂಪೈರ್ ಅವರಿಬ್ಬರೇ.. ಅಮ್ಮೋರು ಮತ್ತು ತಾತನವರು. ಅವರಿಬ್ಬರು ಆಡಿಸುತ್ತಾರೆ ನೀವು ಆಟವಾಡಬೇಕು. ನಾನು ಕೇವಲ ಹೆಸರು ಬರೆದುಕೊಳ್ಳುತ್ತಿದ್ದೇನೆ ಅಷ್ಟೆ ಎಂದು ಹೇಳಿ ಅವರನ್ನು ಸಾಗಹಾಕುತ್ತಿದ್ದಾರೆ.
ಇಷ್ಟೆಲ್ಲ ಆದ ಮೇಲೆ ಆಟ ಶುರುವಾಯಿತು. ಮದ್ರಾಮಣ್ಣ… ಬಂಡಿಸಿವು, ಕುರಮೇಸಿ, ಕುತೀಸ್ಯಣ್ಣ, ಅಬ್ಬಬ್ಬ ಲಾಟರಿ ಮಾಮಾ, ಕೆಂಬಿಪಾ… ಮುಂತಾದವರು ಸ್ಪೋರ್ಟ್ಸ್ ಚಣ್ಣ ಹಾಕಿಕೊಂಡು ಆಡಲು ಸಜ್ಜಾದರು. ಸುತ್ತಲೂ ಕುರ್ಚಿ ಹಾಕಿದ್ದರು. ಆಟ ಶುರುವಾಯಿತು. ದೊಡ್ಡ ಟೇಪ್‌ರಿಕಾರ್ಡಿನಲ್ಲಿ ಹಾಡು ಬಂದಾಗ ಎಲ್ಲರೂ ಕುರ್ಚಿಸುತ್ತ ಓಡುತ್ತಿದ್ದರು. ಅಂಪೈರ್ ಸರ್ ಎಂದು ಸೀಟಿ ಊದಿದಾಗ ಎಲ್ಲರೂ ಟಪ್ ಎಂದು ತಮ್ಮ ತಮ್ಮ ಕುರ್ಚಿ ಹಿಡಿದುಕುಳಿತರು. ಒಬ್ಬನಿಗೆ ಕುರ್ಚಿ ಸಿಗಲಿಲ್ಲ… ಸರೀಪಾ ನೀ ಔಟ್ ಎಂದು ತಾತನವರು ಹೊರಗೆ ಕಳುಹಿಸಿದರು. ಪದೇ ಪದೇ ಹೀಗಾಗಿ ಎಲ್ಲರನ್ನೂ ಔಟ್ ಮಾಡಿದರು. ಕೊನೆಗೆ ಮದ್ರಾಮಣ್ಣ ಇನ್ನೊಬ್ಬರು ಮಾತ್ರ ಉಳಿದರು. ಅವರು ಮ್ಯುಸಿಕ್ ತಕ್ಕಂತೆ ಮೈ ಬಳಕಿಸುತ್ತ ಕುರ್ಚಿ ಸುತ್ತ ತಿರುಗುತ್ತಿದ್ದರು. ಒಂದು ರೌಂಡ್ ಆಯಿತು… ಇಬ್ಬರೂ ಸೋಲಲಿಲ್ಲ. ಎರಡು, ಮೂರು, ನಾಲ್ಕು ಹೀಗೆ ಅನೇಕ ರೌಂಡ್‌ಗಳಲ್ಲಿ ಇಕ್ವಲ್ ಆಯಿತು. ಈ ಆಟವನ್ನು ಇಲ್ಲಿಗೇ ನಿಲ್ಲಿಸೋಣ. ಕೆಲವೇ ದಿನಗಳಲ್ಲಿ ವಿನ್ನರ್ ಘೋಷಣೆ ಮಾಡುತ್ತೇವೆ ಎಂದು ಅಮ್ಮೋರು ಮೈಕಿನಲ್ಲಿ ಹೇಳಿದರು.