ಯತ್ನಾಳ್ ವಿರುದ್ಧದ ಕೇಸ್ ರದ್ದು
ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಸಚಿವ ಶಿವಾನಂದ ಎಸ್. ಪಾಟೀಲ್ ದಾಖಲಿಸಿದ್ದ ಮಾನನಷ್ಟ ಪ್ರಕರಣ ಸಂಬಂಧ ನಗರದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನೋಟಿಸ್‌ನ್ನು ಹೈಕೋರ್ಟ್ ರದ್ದುಪಡಿಸಿದ್ದು. ಹೊಸದಾಗಿ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಶಿವಾನಂದ ಪಾಟೀಲ್ ಅವರ ಖಾಸಗಿ ದೂರು ಪರಿಗಣಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾರಿಗೊಳಿಸಿದ್ದ ನೋಟಿಸ್ ರದ್ದುಪಡಿಸುವಂತೆ ಕೋರಿ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.
ಯತ್ನಾಳ್ ಅವರಿಗೆ ನೋಟಿಸ್ ಜಾರಿ ಮಾಡಿರುವ ಪ್ರಕ್ರಿಯೆಯಲ್ಲಿ ಕಾನೂನು ಲೋಪ ಕಂಡುಬಂದಿದೆ. ಆದ್ದರಿಂದ ಯತ್ನಾಳ್ ಅವರ ವಿರುದ್ಧದ ನೋಟಿಸ್ ರದ್ದುಪಡಿಸಲಾಗುತ್ತಿದೆ ಎಂದು ತಿಳಿಸಿದ ನ್ಯಾಯಪೀಠ, ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿದೆ. ಮುಂದಿನ ನಾಲ್ಕು ವಾರದಲ್ಲಿ ಹೈಕೋರ್ಟ್ ಆದೇಶದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನದಲ್ಲಿ ಇರಿಸಿಕೊಂಡು ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸಬೇಕು ಎಂದು ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿದೆ.