For the best experience, open
https://m.samyuktakarnataka.in
on your mobile browser.

ಯತ್ನಾಳ ಆಕ್ಷೇಪ: ಬಿಜೆಪಿ ತಂಡ ಪುನಾರಚನೆ

10:38 PM Oct 28, 2024 IST | Samyukta Karnataka
ಯತ್ನಾಳ ಆಕ್ಷೇಪ  ಬಿಜೆಪಿ ತಂಡ ಪುನಾರಚನೆ

ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ರೈತರಿಗೆ ವಕ್ಫ್ ಆಸ್ತಿ ವಿಚಾರಕ್ಕಾಗಿ ಜಿಲ್ಲಾಧಿಕಾರಿ ನೋಟಿಸ್ ಕೊಟ್ಟಿರುವ ಪ್ರಕರಣದ ಪರಿಶೀಲನೆಗೆ ರಾಜ್ಯ ಬಿಜೆಪಿ ಘಟಕ ರಚಿಸಿದ್ದ ಸತ್ಯಶೋಧನಾ ತಂಡಕ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಂಡವನ್ನು ಪುನಾರಚನೆ ಮಾಡಲಾಗಿದೆ.
ರೈತರ ಜಮೀನುಗಳು ವಕ್ಫ್ ಸಂಸ್ಥೆಗೆ ಸೇರಿದೆ ಎಂದು ಡಿಸಿ ನೀಡಿರುವ ನೋಟಿಸ್‌ನಿಂದ ಜಿಲ್ಲೆಯಾದ್ಯಂತ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈ ವಿಚಾರದಲ್ಲಿ ಪರಿಶೀಲನೆ ನಡೆಸಿ, ಸತ್ಯಶೋಧನಾ ವರದಿ ತಯಾರಿಸಲು ಸಂಸದ ಗೋವಿಂದ ಕಾರಜೋಳ, ಶಾಸಕರಾದ ಹರೀಶ್ ಪೂಂಜಾ, ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಅರುಣ ಶಹಾಪುರ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಅಕ್ಟೋಬರ್ ೨೯ರಂದು ವಿಜಯಪುರ ಜಿಲ್ಲೆಗೆ ಭೇಟಿ ನೀಡಲಿದೆ.
ಈ ಮಧ್ಯೆ ಸೋಮವಾರ ವಿಜಯಪುರದಲ್ಲಿ ಶಾಸಕ ಯತ್ನಾಳ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಸಮಿತಿಯಲ್ಲಿ ಇರುವ ಬಹುತೇಕರಿಗೆ ವಿಜಯಪುರ ಜಿಲ್ಲೆಯ ಬಗೆಗೆ ಯಾವುದೇ ಮಾಹಿತಿ ಇಲ್ಲ. ವಿಜಯೇಂದ್ರ ಟೀಮ್ ಆಟ ಇಲ್ಲಿ ನಡೆಯುವುದಿಲ್ಲ ಎಂದು ಟೀಕಾಪ್ರಹಾರ ನಡೆಸಿದ್ದರು.
ಇದರ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಬಿಜೆಪಿ ಘಟಕ ತಂಡ ಪುನಾರಚಿಸಿ, ತಂಡದಲ್ಲಿ ಹಾಲಿ ೫ ಸದಸ್ಯರ ಜೊತೆಗೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ, ವಿಜಯಪುರ ಶಾಸಕ ಯತ್ನಾಳ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ.ಜಿರಲಿ ಅವರ ಹೆಸರುಗಳನ್ನು ಸೇರ್ಪಡೆ ಮಾಡಿದೆ. ಆದರೆ ರಾಜ್ಯ ಬಿಜೆಪಿ ಘಟಕದ ನಿರ್ಧಾರವನ್ನು ಸಂಸದ ಜಿಗಜಿಣಗಿ ಮತ್ತು ಶಾಸಕ ಯತ್ನಾಳ ಒಪ್ಪುವುದು ಅನುಮಾನ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಲ್ಲದೇ ಇಬ್ಬರೂ ನಾಯಕರು ಪ್ರತ್ಯೇಕ ಹೋರಾಟ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.