ಯತ್ನಾಳ-ಜಾರಕಿಹೊಳಿ ನೇತೃತ್ವದ್ದು ಗುಪ್ತ ಸಭೆಯಲ್ಲ ಬಹಿರಂಗ ಸಭೆ
ಧಾರವಾಡ: ಬಿಜೆಪಿ ಮುಖಂಡರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದಿದ್ದು ಗುಪ್ತಸಭೆಯಲ್ಲ, ಅದು ಬಹಿರಂಗ ಸಭೆ ಎಂದು ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳ ಹಾಗೂ ರಮೇಶ ಜಾರಕಿಹೊಳಿ ಅವರು ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಮಾಧ್ಯಮಗಳ ವರದಿಯಿಂದ ಗೊತ್ತಾಗಿದೆ. ಯತ್ನಾಳ ಅವರ ನಡೆ ಸರಿಯೋ ತಪ್ಪೋ ಗೊತ್ತಿಲ್ಲ. ಅವರು ಆಯೋಜಿಸುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೋ ಇಲ್ಲವೋ ಎಂಬ ಕುರಿತು ಈಗಲೇ ಏನೂ ಹೇಳುವುದಿಲ್ಲ. ಸಭೆಯ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಇದು ಪಕ್ಷದ ಆಂತರಿಕ ವಿಷಯವಾಗಿದ್ದು, ಯತ್ನಾಳ ಹಾಗೂ ಜಾರಕಿಹೊಳಿ ಅವರ ಅಭಿಪ್ರಾಯಗಳ ಕುರಿತು ಪಕ್ಷದೊಳಗೆ ಈ ಕುರಿತು ಚರ್ಚಿಸುವ ಅವಶ್ಯಕತೆಯಿದೆ. ಪ್ರತಿಯೊಂದು ರಾಜಕೀಯ ಪಕ್ಷದಲ್ಲಿಯೂ ಮುಖಂಡರ ಮಧ್ಯೆ ಅಭಿಪ್ರಾಯ ಭೇದಗಳು ಇರುವುದು ಸಹಜ. ಆದರೆ ಎಲ್ಲ ವಿಷಯಗಳನ್ನು ಮಾಧ್ಯಮಗಳ ಎದುರು ಚರ್ಚಿಸುವುದು ಸೂಕ್ತವಲ್ಲ ಎಂದರು.