ಯಲ್ಲಮ್ಮನಗುಡ್ಡಕ್ಕೆ ವಿಶೇಷ ಬಸ್ ವ್ಯವಸ್ಥೆ
ಹುಬ್ಬಳ್ಳಿ: ಶೀಗಿ ಹುಣ್ಣಿಮೆಯ ಪ್ರಯುಕ್ತ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಯಲ್ಲಮ್ಮನ ಗುಡ್ಡಕ್ಕೆ ವ್ಯವಸ್ಥೆ ಮಾಡಿದ್ದ ವಿಶೇಷ ಬಸ್ಸುಗಳಲ್ಲಿ ಅಕ್ಟೋಬರ್ 17ರಂದು ಗುರುವಾರ ಅಂದಾಜು 10 ಸಾವಿರಕ್ಕೂ ಹೆಚ್ಚು ಜನ ಪ್ರಯಾಣ ಮಾಡಿದ್ದಾರೆ. ಅ. 18ರಂದು ಶುಕ್ರವಾರವೂ ಸಹ ವಿಶೆಷ ಬಸ್ಸುಗಳ ವ್ಯವಸ್ಥೆ ಇರುತ್ತದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಪ್ರತಿ ವರ್ಷ ಶೀಗಿ ಹುಣ್ಣಿಮೆಗೆ ಹುಬ್ಬಳ್ಳಿ, ನವಲಗುಂದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸವದತ್ತಿಯ ಶ್ರೀ ರೇಣುಕಾ ದೇವಿಯ ದರ್ಶನಕ್ಕಾಗಿ ಯಲ್ಲಮ್ಮನ ಗುಡ್ಡಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹೋಗಿಬರುತ್ತಾರೆ. ಅದರಂತೆ, ದೇವಿಯ ವಾರದ ನಿಮಿತ್ಯ 18ರಂದು ಶುಕ್ರವಾರ ಹುಬ್ಬಳ್ಳಿ ಹೊಸೂರು ಬಸ್ ನಿಲ್ದಾಣ, ಗೋಕುಲ ರಸ್ತೆ ಬಸ್ ನಿಲ್ದಾಣ ಹಾಗೂ ನವಲಗುಂದ ಬಸ್ ನಿಲ್ದಾಣದಿಂದ ನೇರವಾಗಿ ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಹೆಚ್ಚುವರಿ ವಿಶೇಷ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ.
ಅ. 17ರಂದು ಗುರುವಾರ ಬೆಳಿಗ್ಗೆಯಿಂದಲೇ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಬರುವ ವಸತಿ ಬಸ್ಸುಗಳಲ್ಲಿ ಭಕ್ತಾದಿಗಳು ಬಸ್ ನಿಲ್ದಾಣಗಳಿಗೆ ಬರಲಾರಂಭಿಸಿದರು. ಸಂಜೆಯವರೆಗೆ ಮೂರು ಬಸ್ ನಿಲ್ದಾಣಗಳಿಂದ ಒಟ್ಟು 87 ವಿಶೇಷ ಬಸ್ಸುಗಳನ್ನು ಬಿಡಲಾಯಿತು. ಹೋಗುವ ಹಾಗೂ ಬರುವ ಎರಡೂ ಸರತಿಗಳಲ್ಲಿ ಭಕ್ತಾದಿಗಳು ಸೇರಿದಂತೆ ಅಂದಾಜು 10,500 ಜನರು ಪ್ರಯಾಣ ಮಾಡಿದ್ದಾರೆ. ಅವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರೇ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವಿಯ ವಾರದ ನಿಮಿತ್ತ ಇಂದೂ ಸಹ ವಿಶೇಷ ಬಸ್ಸುಗಳ ವ್ಯವಸ್ಥೆ ಮುಂದುವರೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹುಬ್ಬಳ್ಳಿ-ಯಲ್ಲಮ್ಮನ ಗುಡ್ಡ:
ಈ ಬಸ್ಸುಗಳು ಧಾರವಾಡ, ಅಮ್ಮಿನಭಾವಿ, ಸೌದತ್ತಿ ಮಾರ್ಗವಾಗಿ ಯಲ್ಲಮ್ಮನಗುಡ್ಡಕ್ಕೆ ಸಂಚರಿಸುತ್ತವೆ.
ನವಲಗುಂದ-ಯಲ್ಲಮ್ಮನ ಗುಡ್ಡ
ಈ ಬಸ್ಸುಗಳು ನವಲಗುಂದ ಬಸ್ ನಿಲ್ದಾಣ ದಿಂದ ಹೊರಡುತ್ತವೆ. ಗೊಬ್ಬರ ಗುಂಪಿ ಕ್ರಾಸ್, ಗೊಬ್ಬರ ಗುಂಪಿ, ಅಳಗವಾಡಿ ಹಂಚಿನಾಳ, ಹಿರೇಕುಂಬಿ ಮಾರ್ಗವಾಗಿ ಸಂಚರಿಸುತ್ತವೆ.