ಯಶಸ್ವಿಯಾದ ಆಪರೇಶನ್ ಕಾಳಿ
ಕಾರವಾರ: ಸೇತುವೆ ಕುಸಿದು ಕಾಳಿ ನದಿಗೆ ಬಿದ್ದಿದ್ದ ಲಾರಿಯನ್ನು ಎರಡು ದಿನದ ಕಾರ್ಯಾಚರಣೆ ಬಳಿಕ ಕೊನೆಗೂ ಗುರುವಾರ ಸಂಜೆ ಕ್ರೇನ್ ಮೂಲಕ ಎಳೆದು ನದಿ ದಡಕ್ಕೆ ತರಲಾಗಿದೆ. ಮುಳುಗು ತಜ್ಞ ಈಶ್ವರ್ ಮಲ್ಪೆ, ಕಾರ್ಮಿಕ ಸಣ್ಯಾ ಸಿದ್ದಿ ನೀರಿನಾಳದ ಸಾಹಸಮಯ ಕಾರ್ಯಾಚರಣೆಗಳು ಯಶಸ್ವಿಯಾಗಿ ಲಾರಿ ಎಳೆಯಲು ಸಹಕಾರಿಯಾಗಿದ್ದು ಇದು ಮೆಚ್ಚುಗೆಗೆ ಪಾತ್ರವಾಗಿದೆ.
ಐಆರ್‌ಬಿ ಕಂಪೆನಿ ಜೊತೆಗೆ ಎನ್‌ಡಿಆರ್‌ಎಫ್, ಕರಾವಳಿ ಕಾವಲು ಪಡೆ, ಪೊಲೀಸರು ಗೃಹರಕ್ಷಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮುಂಜಾನೆಯಿಂದಲೇ ಆರಂಭಗೊಂಡಿದ್ದ ಕಾರ್ಯಾಚರಣೆಯಲ್ಲಿ ಈಶ್ವರ್ ಮಲ್ಪೆ ತಂಡ ಹಾಗೂ ಇಮ್ರಾನ್ ಕ್ರೇನ್ ಸರ್ವಿಸಸ್ ಕಾರ್ಮಿಕರು ನದಿಯ ಆಳದಲ್ಲಿ ಸೇತುವೆ ಸ್ಲ್ಯಾಬ್ ಮೇಲಿದ್ದ ಲಾರಿಗೆ ರೋಪ್ ಬಿಗಿಯಲು ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿದ್ದರು. ಬಳಿಕ ಎರಡು ಕ್ರೇನ್‌ನ ರೋಪ್ ಮೂಲಕ ಲಾರಿ ಎಳೆಯಲು ಪ್ರಯತ್ನಿಸಲಾಗಿತ್ತಾದರೂ ಲಾರಿ ಸ್ಲ್ಯಾಬಿನಿಂದ ನೀರಿನ ಆಳಕ್ಕೆ ಬಿದ್ದಿತ್ತು.
ಬಳಿಕ ಮತ್ತೊಂದು ರೋಪ್ ಕಟ್ಟಿಕ್ಕೊಂಡು ಮತ್ತೊಮ್ಮೆ ಕ್ರೇನ್ ಮೂಲಕ ಎಳೆಯುವಾಗ ಲಾರಿ ನದಿಯ ಅರ್ಧಕ್ಕೆ ಬಂದ ವೇಳೆ ಬಂಡೆಗೆ ಸಿಲುಕಿ ಸಣ್ಣ ರೋಪ್ ಕಟ್ ಆಗಿ ಮತ್ತೆ ಕಾರ್ಯಾಚರಣೆಗೆ ಅಡಚಣೆಯಾಗಿತ್ತು. ಕೊನೆಗೆ ಮತ್ತೊಮ್ಮೆ ಲಾರಿಯ ಹಿಂಭಾಗದಲ್ಲಿ ರೋಪ್ ಕಟ್ಟಿಕೊಂಡು ಕಾರ್ಯಾಚರಣೆ ನಡೆಸಿದ ತಂಡ ಬಂಡೆಯನ್ನು ತಪ್ಪಿಸಿ ಯಶಸ್ವಿಯಾಗಿ ದಡದತ್ತ ಎಳೆಯುವಲ್ಲಿ ಸಫಲವಾಗಿದೆ. ಮೂರು ರೋಪ್ ಎರಡು ಕ್ರೇನ್, ಮೂರು ಟೋಯಿಂಗ್ ವಾಹನ ಮತ್ತು ಎರಡು ಎರಡು ಬೋಟ್ ಮೂಲಕ ೫೦ಕ್ಕೂ ಹೆಚ್ಚು ಕಾರ್ಮಿಕರು ೯ ಗಂಟೆಗಳಿಂದ ಕಾರ್ಯಾಚರಣೆ ನಡೆಸಲಾಯಿತು. ಈ ಮೂಲಕ ಕಳೆದ ೮ ದಿನಗಳಿಂದ ನದಿಯಲ್ಲಿದ್ದ ತಮಿಳುನಾಡು ಮೂಲದ ಸೆಂಥಿಲ್‌ಕುಮಾರ್ ಮಾಲಿಕತ್ವದ ಲಾರಿಯನ್ನು ಎಳೆದು ಕಾರ್ಯಾಚರಣೆ ಯಶಸ್ವಿಗೊಳಿಸಲಾಗಿದೆ.