ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಯಶಸ್ಸಿನ ಶಿಖರದಲ್ಲಿ ಪ್ರಧಾನಿ ಮೋದಿ ಒಂಟಿ

02:15 AM Feb 19, 2024 IST | Samyukta Karnataka

ಬಹುಶ: ಸ್ವತಂತ್ರ ಭಾರತವನ್ನಾಳಿದ ಪ್ರಧಾನಮಂತ್ರಿಗಳ ಪೈಕಿ ಈ ನರೇಂದ್ರ ಮೋದಿಯವರಿಗಿರುವಷ್ಟು ಭಾರೀ ಪ್ರಮಾಣದ ಆರಾಧಕರು ಮತ್ತು ಅಷ್ಟೇ ಪ್ರಮಾಣದ ನಿಂದಕರು ಬಹುಶ: ಇನ್ನಾರಿಗೂ ಇದ್ದಿರಲಾರರು ಅನ್ನಿಸುತ್ತದಲ್ಲವೆ? ಹಿಂದೊಮ್ಮೆ ಇಂದಿರಾ ಗಾಂಧಿಯವರೂ ಇಂತಹದ್ದೇ ಸನ್ನಿವೇಶವನ್ನು ಎದುರಿಸಿದ್ದರಾದರೂ ಅವರಿಗಿದ್ದ ಚಾರಿತ್ರಿಕ ಬಳುವಳಿ, ಕೌಟುಂಬಿಕ ಹಿನ್ನೆಲೆ ಮತ್ತು ರಾಜಕೀಯ ಪ್ರಭಾವಳಿಗಳ ಸ್ವರೂಪವೇ ಬೇರೆಯದ್ದಾಗಿತ್ತು.
ಮೊನ್ನೆ ಶನಿವಾರ, ಫೆಬ್ರವರಿ ೧೦ರಂದು ವಿಧ್ಯುಕ್ತವಾಗಿ ಮುಕ್ತಾಯಗೊಂಡ ೧೭ನೇ ಲೋಕಸಭೆಯ ಅವಧಿಯುದ್ದಕ್ಕೂ ಮತ್ತೆ ಮತ್ತೆ ಪ್ರಜ್ವಲಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ ಎರಡು ದಶಕಗಳ ಸುದೀರ್ಘಾವಧಿ ಆಡಳಿತ ಹಾಗೂ ಕುತೂಹಲಕಾರಿ ರಾಜಕೀಯ ನೀತಿ-ನಿರ್ಧಾರಗಳ ಕುರಿತ ಟೀಕೆ, ಟಿಪ್ಪಣಿ, ಹೊಗಳಿಕೆ ಮತ್ತು ಗುಣಗಾನದ ವಾಕ್ಪಟುತ್ವದ ಪ್ರದರ್ಶನವೇ. ಇಷ್ಟೂ ಸಾಲದೆಂಬಂತೆ ದಿಢೀರನೆ ಒಂದು ದಿನದ ಮಟ್ಟಿಗೆ ವಿಸ್ತರಿಸಲಾದ ಉಭಯ ಸದನಗಳಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆಯಂತಹ ಧಾರ್ಮಿಕ ಉತ್ಸವದ ಐತಿಹ್ಯಕ್ಕೂ ಸಂವಿಧಾನಾತ್ಮಕ ಸಿಂಧುತ್ವವನ್ನು ನೀಡುವ ಉದ್ದೇಶದ ಅಧಿಕೃತ ನಿರ್ಣಯದ ಮಂಡನೆ, ಚರ್ಚೆ ಹಾಗೂ ಧ್ವನಿಮತದ ಅಂಗೀಕಾರವೂ ನಡೆದುಹೋಯಿತು.
"ಭಾರತದ ಭವ್ಯ ಪರಂಪರೆ ಹಾಗೂ ಸಾಂಸ್ಕೃತಿಕ ವೈಶಿಷ್ಟö್ಯತೆಗಳನ್ನು ಚಿರಸ್ಥಾಯಿಯಾಗಿಸಬಲ್ಲ ಸೌಹಾರ್ದತೆಯ ಸಂದೇಶವನ್ನು ಯುವಪೀಳಿಗೆಗೆ ರವಾನಿಸುವ ಉದ್ದೇಶದಿಂದಲೇ ಸಂಸತ್ತಿನಲ್ಲಿ ಈ ಐತಿಹಾಸಿಕ ನಿರ್ಣಯವನ್ನು ಪಾಸು ಮಾಡಲಾಗಿದೆ" ಎಂದು ಸ್ವತ: ಪ್ರಧಾನಿಯೇ ವ್ಯಾಖ್ಯಾನಿಸುವ ಮೂಲಕ ಅಯೋಧ್ಯೆಯ ಜನ್ಮಸ್ಥಾನದಲ್ಲಿ ಶ್ರೀರಾಮನ ಮಂದಿರ ಸ್ಥಾಪನೆಯ ಕೈಂಕರ್ಯ ಈಡೇರಿದ ಬಗ್ಗೆ ಸಾರ್ಥಕತೆಯ ಭಾವವನ್ನು ಬಿತ್ತರಿಸಿದರು.
ಇದುವೇ ಮೋದಿ ಶೈಲಿಯ ರಾಜಕಾರಣ, ಇದನ್ನೇ ಈಗ್ಗೆ ೧೦ ವರ್ಷಗಳ ಹಿಂದೆ ಜರುಗಿದ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಜನತೆಯ ಮುಂದಿಟ್ಟು ಪ್ರಚಂಡ ಗೆಲುವು ಸಾಧಿಸಲು ಕಾರಣವಾದ ಅವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಔರ್ ಸಬ್ ಕಾ ವಿಶ್ವಾಸ್ ಎಂಬ ತ್ರಿವಳಿ ಘೋಷಣೆಗಳ ತಾತ್ಪರ್ಯ ಎಂದು ಅರ್ಥೈಸಬಹುದೇನೋ. ಈಗಾಗಲೇ ಸತತವಾಗಿ ಎರಡು ಅವಧಿಗಳನ್ನು ಪೂರೈಸಿದ ನಂತರವೂ ನರೇಂದ್ರ ಮೋದಿಯವರ ಆತ್ಮವಿಶ್ವಾಸ ಎಳ್ಳಷ್ಟೂ ಕುಂದಿರುವಂತಿಲ್ಲ. ಸಂಸತ್ತಿನೊಳಗೂ ಅದೇ ಅದಮ್ಯ ಉತ್ಸಾಹ ಹಾಗೂ ದೇಶದ ವಿವಿಧೆಡೆ ಏರ್ಪಾಟಾದ ಸಾರ್ವಜನಿಕ ವೇದಿಕೆಗಳಿಂದಲೂ "ನನ್ನ ಮೂರನೆಯ ಅವಧಿಯಲ್ಲಿ ಭಾರತವನ್ನು ಜಗತ್ತಿನ ೩ನೇ ಅತ್ಯಂತ ಬಲಿಷ್ಠ ಆರ್ಥಿಕ ಶಕ್ತಿಯನ್ನಾಗಿ ಮಾರ್ಪಾಟು ಮಾಡಿಯೇ ತೀರುತ್ತೇನೆ" ಎಂಬ ಖಚಿತ ಆಶಾವಾದ.
ಮುಂಬರುವ ೨೦೨೪ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಖಂಡಿತವಾಗ್ಯೂ ಗೆದ್ದೇ ಗೆಲ್ಲುತ್ತೇನೆಂಬ ಮೋದಿಯವರ ಇಂತಹ ನಂಬಿಕೆಗೆ ತಮ್ಮ ಇದುವರೆಗಿನ ಜನಪ್ರಿಯತೆಯ ಅಲೆ ಹೀಗೆಯೇ ಅಬಾಧಿತವಾಗಿ ಮುಂದುವರಿಯಲಿದೆ ಎಂಬ ಗ್ರಹಿಕಾರಣರಾಗಿರಬಹುದು. ಹಾಗೆಯೇ ತಾನು ದಿಲ್ಲಿಯ ಗದ್ದುಗೆಗೇರಿದಾಗನಿಂದಲೂ ತಮ್ಮನ್ನು ನಿರಂತರವಾಗಿ ಖಂಡಿಸುತ್ತಾ, ನಿಂದಿಸುತ್ತಾ ಹಾಗೂ ತೀಕ್ಷ್ಣವಾಗಿ ವಿರೋಧಿಸುತ್ತಲೇ ಬಂದಿರುವ ಬಿಜೆಪಿಯೇತರ ಸ್ವಘೋಷಿತ ಸೆಕ್ಯುಲರ್ ಪಾರ್ಟಿಗಳ 'ಇಂಡಿಯಾ' ಎಂಬ ಹೆಸರಿಟ್ಟುಕೊಂಡ ಮೈತ್ರಿಕೂಟ ಶಿಥಿಲಗೊಳ್ಳುವುದೂ ಖಾತ್ರಿ ಎಂಬ ಸನ್ನಿವೇಶವೂ ಮೋದಿಯವರ ಮರುಗೆಲುವಿನ ಕನಸಿಗೆ ಇಂಬುಕೊಟ್ಟಿರುವುದು.
ಯಾರೂ ಏನೇ ಹೇಳಲಿ, ಈ ನರೇಂದ್ರ ಮೋದಿ ಎಂಬ ಸಂಕೀರ್ಣ ವ್ಯಕ್ತಿತ್ವದ ನಾಯಕನ ಗಟ್ಟಿ ಸಂಕಲ್ಪ, ಹುಂಬ ಧೈರ್ಯ, ನಿರಂತರ ದುಡಿಮೆ ಮತ್ತು ಕಾರ್ಯಕ್ಷಮತೆಯ ಜೊತೆಗೆ ತಾನು ಮಾಡಿದ್ದೆಲ್ಲವನ್ನೂ ಯಾವ ರೀತಿ ರಾಷ್ಟçದ ಜನತೆಯ ಮುಂದಿಡಬೇಕೆಂಬುದನ್ನೂ ಕರಾರುವಾಕ್ಕಾಗಿ ನಿರೂಪಿಸುವ ಪ್ರದರ್ಶನ ಕಲೆಯೂ ಅವರಿಗೆ ಸಿದ್ಧಿಸಿರುವುದಂತೂ ಸ್ಪಷ್ಟ. ಇಂತಹ ಬಹುಮುಖ ಪ್ರತಿಭೆ ಮತ್ತು ಪರಿಶ್ರಮದ ಫಲವಾಗಿಯೇ ತನ್ನನ್ನು ಇಷ್ಟು ಎತ್ತರಕ್ಕೇರಿಸಲು ಕಾರಣವಾದ ಸಂಘ ಪರಿವಾರದ ಪೂರ್ವಾಶ್ರಮದ ತಾತ್ವಿಕ ಸಂಕೋಲೆಗಳನ್ನು ಮೋದಿ ಒಂದೊಂದಾಗಿ ಕಳಚಿಕೊಳ್ಳುತ್ತಾ ಬಂದಿರುವುದನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ ಗುರುತಿಸಬಹುದು.
೧೩ ವರ್ಷಗಳ ಕಾಲ ಗುಜರಾತಿನಂತಹ ಮಧ್ಯಮ ಗಾತ್ರದ ಆದರೆ ಉದ್ಯಮಶೀಲ ರಾಜ್ಯದ ಮುಖ್ಯಮಂತ್ರಿಯಾಗಿ ಪಡೆದುಕೊಂಡ ಅನುಭವವನ್ನು ಮುಂದೆ ಇಡೀ ರಾಷ್ಟçದ ಮತದಾರರೆದುರು "ಗುಜರಾತ್ ಮಾಡೆಲ್" ಎಂಬ ಚಿತ್ರಿಸಿ, ನಿಚ್ಚಳ ಬಹುಮತದೊಂದಿಗೆ ಪ್ರಧಾನಮಂತ್ರಿ ಹುದ್ದೆಗೇರಿ ಅಲ್ಲೂ ಒಂದಿಲ್ಲೊಂದು ರೀತಿಯ ಚಮತ್ಕಾರಿಕ ನಿರ್ಧಾರಗಳ ಮೂಲಕವೇ ಸ್ಥಾನ ಭದ್ರಪಡಿಸಿಕೊಳ್ಳುತ್ತಾ ಸಾಗಿದರು ಮೋದಿ. ಒಟ್ಟು ೨೩ ವರ್ಷಗಳಿಂದಲೂ ನಂಬರ್ ೧ ಸ್ಥಾನದಲ್ಲಿಯೇ ಈ ನಾಯಕ ಮುಂದುವರಿದಿರುವುದು ನಮ್ಮ ಪ್ರಜಾತಂತ್ರದ ವಿಸ್ಮಯವೇ ಸರಿ. ಅದರಲ್ಲೂ ೨೦೦೧ರ ಅಕ್ಟೋಬರ್ ೪ವರೆಗೂ ಒಂದೇ ಒಂದು ಮುನಿಸಿಪಾಲಿಟಿ ಚುನಾವಣೆಯಲ್ಲೂ ಸ್ಪರ್ಧಿಸಿರದ, ಸ್ವಂತ ಮನೆ ಅಡ್ರೆಸ್ಸು ಮತ್ತು ಬ್ಯಾಂಕ್ ಖಾತೆಯೂ ಇಲ್ಲದ, ಜಾತಿಬಲ ಹಾಗೂ ರಾಜಕೀಯ ಕೌಟುಂಬಿಕ ಹಿನ್ನೆಲೆಯೂ ಇರದ ಈ ಆಸಾಮಿ ಯಶಸ್ಸಿನ ಶಿಖರಕ್ಕೇರಿರುವಂತೆಯೇ ಆತಂಕದ ಅಲೆಗಳೂ ಗೋಚರಿಸಲಾರಂಭಿಸಿವೆ.
ಸುದ್ದಿ ಮಾಧ್ಯಮಗಳಲ್ಲಿ, ಚುನಾವಣಾ ಸಮೀಕ್ಷೆಗಳಲ್ಲಿ, ಮೋದಿಯ ಮರುಯಶಸ್ಸು ಖಚಿತ ಎಂದೆಷ್ಟೇ ಪ್ರಚಾರ ದೊರೆಯುತ್ತಿದ್ದರೂ, ನರೇಂದ್ರ ಮೋದಿಯವರು ಜನಪ್ರಿಯತೆಯ ಉತ್ತುಂಗಕ್ಕೇರಿರುವುದೇ ಅವರ ಅವನತಿಗೂ ನಾಂದಿಯಾಗಬಲ್ಲ ಅಂಶವಾದೀತು. ಇವತ್ತು ಅವರ ಸರ್ಕಾರದಲ್ಲೂ ಮತ್ತು
ಇಡೀ ಭಾಜಪ ಸರ್ಕಾರದಲ್ಲೂ ಮೋದಿಯ ಒಂಟಿತನ ಎದ್ದುಕಾಣುತ್ತಿದೆ. ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಮಿಂಚುವ ಮೋದಿಯ ಸಾಧನೆಗಳ ಮಹತ್ವವನ್ನು ಬೇರುಮಟ್ಟದಲ್ಲಿ ನಿಖರವಾಗಿ ತಲುಪಿಸಬಲ್ಲ ಸಶಕ್ತ ಕಾಲಾಳುಗಳೇ ಕಾಣೆಯಾಗಿದ್ದಾರೆ. ಅವರ ಮಂತ್ರಿ ಸಹೋದ್ಯೋಗಿಗಳೇ ಮೂಕಪ್ರೇಕ್ಷಕರಾಗಿದ್ದಾರೆ.

Next Article