ಯಾರಿಗೆ ಯಾರುಂಟು
ತನ್ನ ಪತ್ನಿಯರಿಗಾಗಲೀ, ಪುತ್ರರಿಗಾಗಲೀ ಪ್ರಿಯವಲ್ಲದ ಕಾರ್ಯವನ್ನು ಸ್ವಲ್ಪ ಮಾಡಿದರೂ ಸಾಕು. ಯಾರಿಗೆ ಯಾರು ಎಂಬುದು ತಿಳಿಯುತ್ತದೆ. ಯಾರಲ್ಲಿ ಯಾರು ಹೇಗೆ ಇರುತ್ತಾರೆಂಬುದೂ ಕೂಡ ಸ್ಪಷ್ಟವಾಗಿ ತಿಳಿಯುತ್ತದೆ.
ಈ ಲೋಕದಲ್ಲಿ ಯಾರೊಬ್ಬರೂ ಕೂಡ ಅಪ್ರಿಯವಾದದ್ದನ್ನು ಸಹಿಸಿಕೊಳ್ಳುವುದಿಲ್ಲ. ಅಚಾತುರ್ಯದಿಂದ ಅಪ್ರಿಯವಾದದ್ದನ್ನು ಮಾಡಿದರೆ ನಮ್ಮನ್ನು ದ್ವೇಷಿಸುತ್ತಾರೆ. ಉಳಿದವರಿರಲಿ, ಹೆಂಡತಿ ಮಕ್ಕಳೂ ಕೂಡ ಅಪ್ರಿಯವಾದದ್ದನ್ನು ಸಹಿಸಲಾರರು. ಹಿಂದೆ ಎಷ್ಟೇ ಪ್ರೀತಿಯನ್ನು ತೋರಿಸಿದ್ದರೂ ಒಂದು ಬಾರಿ ಅಪ್ರಿಯವಾದದ್ದನ್ನು ಆಚರಿಸಿದರೆ ಅಪ್ರಿಯವಾದದ್ದನ್ನಷ್ಟೇ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಅಪ್ರಿಯವಾದ ಕಾರ್ಯವನ್ನು ಮಾಡಿದರೆ ಸಂಬಂಧಿಯೇ ಅಲ್ಲವೆಂಬ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ತಮಗೆ ಇವನಿಂದ ಎಷ್ಟು ಉಪಯೋಗವಿದೆ ಎಂಬುದನ್ನಷ್ಟೇ ಅವರು ಗಮನಿಸುತ್ತಿರುತ್ತಾರೆ. ಅವನಿಂದ ತಮಗೆ ಯಾವುದೇ ಉಪಯೋಗವಿಲ್ಲವೆಂದು ತಿಳಿದ ಮೇಲೆ ಅವನನ್ನು ಮೂಲೆಗುಂಪನ್ನಾಗಿ ಮಾಡುತ್ತಾರೆ. ಮುಪ್ಪಿನ ಕಾಲದಲ್ಲಿ ದೇಹವು ಯಾರಿಗೂ ಬೇಡವಾದಾಗ ಸಂಪೂರ್ಣವಾಗಿ ಉಪೇಕ್ಷಿಸುತ್ತಾರೆ. ಆದ್ದರಿಂದ ಯಾರು ಹೆಂಡತಿ, ಯಾರು ಮಗ. ಈ ಸಂಸಾರ ಎಷ್ಟ್ಟು ವಿಚಿತ್ರ, ನೀನು ಯಾರು. ಅವನು ಯಾರು. ಎಲ್ಲ ವಿಷಯವನ್ನು ಗಮನಿಸಿದಾಗ ಸಂಸಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲವೆಂದು ಮನದಟ್ಟಾಗುತ್ತದೆ.
ಜೀವನದಲ್ಲಿ ಹೇಗಿರಬೇಕು ಎಂದರೆ ಯಾರು ಭಗವಂತನನ್ನು ಪ್ರೀತಿ ಮಾಡುತ್ತಾರೋ, ಅವರನ್ನಷ್ಟೇ ನಾವು ಪ್ರೀತಿ ಮಾಡಬೇಕು. ಅದರಲ್ಲೂ ಕೂಡ ಇವನು ಹರಿಭಕ್ತನಾಗಿದ್ದಾನೆ. ಇವನಿಂದ ನನ್ನಲ್ಲಿ ಹರಿಭಕ್ತಿ ಅಭಿವೃದ್ಧಿವಾಗುತ್ತದೆಂದಷ್ಟೇ ಭಾವನೆಯಿರಬೇಕು. ಹರಿಭಕ್ತನಲ್ಲಿಯೂ ಕೂಡ ವ್ಯಾವಹಾರಿಕವಾದ ಸಂಬಂಧಗಳನ್ನು ಇಟ್ಟುಕೊಳ್ಳಬಾರದು.
ಅಧ್ಯಾತ್ಮ ಬಾಂಧವ್ಯವನ್ನಷ್ಟೇ ಇಟ್ಟುಕೊಳ್ಳಬೇಕು. ಯಾರು ಹರಿಭಕ್ತನಾಗಿರುವುದಿಲ್ಲವೋ ಅಂಥವನನ್ನು ಹರಿಭಕ್ತರನ್ನಾಗಿ ಮಾಡಲು ಪ್ರಯತ್ನಿಸಬೇಕು ಅಥವಾ ಹರಿಭಕ್ತನೇ ಆಗಿದ್ದರೂ ಹರಿಭಕ್ತಿಯು ಅವನಲ್ಲಿ ಅಭಿವೃದ್ಧಿ ಆಗುವಂತೆ ಅವನ ಜೊತೆ ಸಂಬಂಧವನ್ನು ಬೆಳೆಸಬೇಕು. ಹರಿಭಕ್ತರಲ್ಲದವರನ್ನು ಅಥವಾ ಹರಿಭಕ್ತರಲ್ಲದ ವಿಷಯದಲ್ಲಷ್ಟೇ ದ್ವೇಷ ತಾತ್ಸಾರಗಳನ್ನು ಮಾಡಬೇಕು. ಇದನ್ನು ಬಿಟ್ಟು ನನಗೆ ಪ್ರಿಯವನ್ನು ಮಾಡುವವನನ್ನು ಪ್ರೀತಿಸುವುದು, ನನಗೆ ಪ್ರಿಯವನ್ನು ಮಾಡದಿರುವನನ್ನು ದ್ವೇಷಿಸುವುದು ಸರ್ವಥಾ ತಪ್ಪು.
ಹೀಗೆ ಮಾಡುವುದರಿಂದ ಜೀವನದಲ್ಲಿ ಅನಂತ ದುಃಖಗಳನ್ನೇ ಎದುರಿಸಬೇಕಾಗುತ್ತದೆ. ಪ್ರಾಮಾಣಿಕ ಜೀವನವೆಂದರೆ ಇದು ಮಾತ್ರ ಮತ್ತೊಂದಲ್ಲ ಎಂಬುದು ಇಲ್ಲಿನ ಅಭಿಪ್ರಾಯ. ಅಂದಮಾತ್ರಕ್ಕೆ ಯಾರಿಗೂ ಪ್ರಿಯವನ್ನೇ ಮಾಡಬಾರದ ಉಪಕಾರವನ್ನು ಮಾಡಬಾರದು ಎಂದಭಿಪ್ರಾಯವಲ್ಲ. ಪ್ರಿಯವನ್ನು ಮಾಡಿದರೂ ಅದು ಭಗವಂತನಿಗೆ ಸಮರ್ಪಿತವಾಗು ಎಂಬ ಅನುಸಂಧಾನವಿರಬೇಕು. ಅಚಾತುರ್ಯದಿಂದ ಮತ್ತೊಬ್ಬರಿಗೆ ಅಪ್ರಿಯವು ನಡೆದರೆ ಅದರಿಂದ ಸಂಸಾರದ ಸ್ವರೂಪವನ್ನು ಅರ್ಥಮಾಡಿಕೊಂಡು ವಿರಕ್ತನಾಗಬೇಕು.