For the best experience, open
https://m.samyuktakarnataka.in
on your mobile browser.

ಯುದ್ಧೋನ್ಮಾದ ಮನಸ್ಸಿನಿಂದ ಎಲ್ಲವೂ ನಾಶ

04:04 AM Mar 28, 2024 IST | Samyukta Karnataka
ಯುದ್ಧೋನ್ಮಾದ ಮನಸ್ಸಿನಿಂದ ಎಲ್ಲವೂ ನಾಶ

ದಂಡೆತ್ತಿ ಹೋಗಿ ಒಂದು ರಾಷ್ಟ್ರದ ಮೇಲೆ ಯುದ್ಧ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಶ್ರೀರಾಮಚಂದ್ರನಿಗೆ ಲಂಕೆಯ ಮೇಲೆ ಯುದ್ಧ ಸಾರುವದು ತೀರಾ ಕಷ್ಟಕರವೇ ಆಗಿತ್ತು.
ಸ್ವರ್ಣಪುರಿ ಲಂಕೆಯ ರಾಜ ರಾವಣನದು ಆಗಲೇ ವ್ಯವಸ್ಥಿತವಾದ ಸೈನ್ಯವಾಗಿತ್ತು. ಅದರೆ ಇದಾವುದರ ಯುದ್ಧ ಸಿದ್ಧತೆಗಳು ಶ್ರೀರಾಮನ ಸೈನ್ಯದಲ್ಲಿರಲಿಲ್ಲ. ವಿಶೇಷವೆಂದರೆ ಸೈನ್ಯವೆಂದರೆ ವಾನರರು. ವಾನರರಲ್ಲಿ ವಿಶೇಷವೆಂದರೆ ಎದುರಾಳಿಯನ್ನು ತನ್ನ ಗುಣವಿಶೇಷದಿಂದಲೇ ದಿಕ್ಕುತಪ್ಪಿಸಿ ನೆಲಕ್ಕುರುಳಿಸುವುದು. ಇದೊಂದು ತಂತ್ರ ಬಿಟ್ಟರೆ ಬೇರೆ ಏನಿಲ್ಲ. ಇದ್ದದ್ದು ಸ್ವಾಮಿನಿಷ್ಠೆ ಮತ್ತು ಶ್ರೀರಾಮನಲ್ಲಿ ಅಚಲ ಭಕ್ತಿ.
ಯುಕ್ತಿ ಇರಬೇಕು ನಿಜ; ಅದರೊಟ್ಟಿಗೆ ಭಕ್ತಿ ಮೇಳೈವಿಸಿದ್ದರೆ, ಅದು ಹೆಚ್ಚಿನ ಬಲ ತಂದುಕೊಡುತ್ತದೆ. ಆದರೆ ರಾವಣನ ಸೈನ್ಯದಲ್ಲಿ ಎಲ್ಲ ರೀತಿಯ ಮಾಯಾತಂತ್ರಗಳು ಇದ್ದರೂ ಕೂಡ ಸ್ವಾಮಿನಿಷ್ಠೆಯ ಕೊರತೆ ಕಾಡುತ್ತಿತ್ತು. ಯುದ್ಧದ ಉದ್ದೇಶವೇ ತನಗೆ ಅಷ್ಟು ಸಂಬಂಧಿಸಿಲ್ಲವೆಂದಾಗ ಮನಸ್ಸುಗೊಟ್ಟು ಹೋರಾಟ ಮಾಡುವದು ಕ್ವಚಿತವೇ.
ಲಂಕಾಪಟ್ಟಣಕ್ಕೆ ಪ್ರವೇಶಿಸಿದ ಕೂಡಲೇ ಶ್ರೀರಾಮಚಂದ್ರನು ಅಂಗದನನ್ನು ರಾಯಭಾರಿಯನ್ನಾಗಿ ರಾವಣನ ಬಳಿ ಕಳುಹಿಸಿದನು. ಆದರೆ ಮದೋನ್ಮತ್ತನಾದ ರಾವಣನು ಅಂಗದನ ಮಾತಿಗೆ ಬೆಲೆ ಕೊಡದೇ ಯುದ್ಧಕ್ಕೆ ಸಿದ್ಧನಾದ. ಯುದ್ಧ ಯಾವಾಗಲೂ ಕೆಟ್ಟದ್ದು ಎಂಬ ಸಂಗತಿ ಶ್ರೀರಾಮಚಂದ್ರನಿಗೆ ಚನ್ನಾಗಿ ತಿಳಿದಿತ್ತು. ಹೀಗಾಗಿ ಲಂಕೆಯ ಪ್ರವೇಶ ಮಾಡುತ್ತಲೇ ಯುದ್ಧ ಬೇಡ, ರಾಜಿ ಸಂಧಾನಕ್ಕೆ ಅಂಗದನನ್ನು ಕಳುಹಿಸಿದ ಅಂಗದ ಪರಿಪರಿಯಿಂದ ತಿಳಿಸಿ ಹೇಳಿದರೂ ರಾವಣ ಕೇಳುವ ಸ್ಥಿತಿಯಲ್ಲಿರಲಿಲ್ಲ. ಅನಿವಾರ್ಯವಾಗಿ ಯುದ್ಧವೇ ಅಂತಿಮವೆಂದಾಗ ಆಗ ಅನುಕಂಪ, ಕರುಣೆ, ಮತ್ತೊಂದು ಮುಗದೊಂದು ವಿಚಾರ ಸಲ್ಲದು. ಶ್ರೀರಾಮ ಲಕ್ಷö್ಮಣರು ಯುದ್ಧಕ್ಕೆ ಸಿದ್ಧರಾಗಿ ಲಂಕೆಯ ನಾಲ್ಕುದ್ವಾರಗಳನ್ನು ಕಪಿಸೈನ್ಯಗಳನ್ನು ಕಳುಹಿಸಿ ಮುತ್ತಿಗೆ ಹಾಕಿಸಿದನು. ರಾವಣನು ಮದನೋನ್ಮತ್ತನಾಗಿದ್ದರಿಂದಲೂ ರಾವಣನು ಪಶ್ಚಿಮ ದಿಕ್ಕಿಗೆ ಇಂದ್ರಜಿತನ್ನೂ ಪೂರ್ವದಿಕ್ಕಿಗೆ ಪ್ರಹಸ್ತನನ್ನೂ ದಕ್ಷಿಣ ದಿಕ್ಕಿಗೆ ವಜ್ರದಂಷ್ಟ್ರನನ್ನು ಯುದ್ಧ ಮಾಡಲು ಕಳುಹಿಸಿ, ಉತ್ತರ ದಿಕ್ಕಿಗೆ ತಾನೇ ಹೊರಟನು. ಶ್ರೀರಾಮಚಂದ್ರನು ಇಂದ್ರಜಿತನ ಜೊತೆಗೆ ಯುದ್ಧಮಾಡಲು ಹನುಮಂತನನ್ನು ಕಳುಹಿಸಿದನು. ಪ್ರಹಸ್ತನನ್ನು ಎದುರಿಸಲು ನೀಲನನ್ನು ವಜ್ರದಂಷ್ಟನನ್ನು ಎದುರಿಸಲು ಅಂಗದನನ್ನು ನಿಯೋಜನೆ ಮಾಡಿದನು. ರಾವಣನ ಎದುರು ಯುದ್ಧಮಾಡಲು ಸುಗ್ರೀವನ ಜೊತೆ ತಾನೇ ಹೊರಟನು. ನೀಲ ಹಾಗೂ ವಿಭೀಷಣರು ಪ್ರಹಸ್ತನನ್ನು ಸಂಹಾರ ಮಾಡಿದರು. ಅಂಗದನು ವಜ್ರದಂಷ್ಟನನ್ನು ಬೀಳಿಸಿದನು. ಶಿವ ವರದಿಂದ ಅವಧ್ಯರಾದ ಧೂಮ್ರನೇತ್ರ ಹಾಗೂ ಅಕಂಪನರೆಂಬ ರಾಕ್ಷಸರು ಹನುಮಂತನಿಂದ ಸತ್ತುಹೋದರು. ರಾತ್ರಿಯ ಕಾಲದಲ್ಲಿ ಕಪಿಗಳು ಪುನಃ ರಾಮನ ಅಪ್ಪಣೆಯಂತೆ ಲಂಕೆಯನ್ನು ಸುಟ್ಟುಹಾಕಿದರು. ಯುದ್ಧೋನ್ಮಾದಗಳು ಎಲ್ಲವನ್ನು ಕಳೆಯುತ್ತವೆ.