For the best experience, open
https://m.samyuktakarnataka.in
on your mobile browser.

ಯೋಗ-ಕ್ಷೇಮಂ ವಹಾಮ್ಯಹಂ

04:59 AM Oct 17, 2024 IST | Samyukta Karnataka
ಯೋಗ ಕ್ಷೇಮಂ ವಹಾಮ್ಯಹಂ

ಭಕ್ತಿಯ ಪರಾಕಾಷ್ಠತೆ ತಲುಪಿದಾಗ ಬರುವುದೇ ನವವಿಧ ಭಕ್ತಿಯಲ್ಲಿ ಕೊನೆಯದಾದ ಭಕ್ತಿಯೇ ಆತ್ಮನಿವೇದನ.
ಅದು ಪರಮಭಕ್ತಿ. ಎಲ್ಲ ಹಂತಗಳನ್ನೂ ದಾಟಿ ತನ್ನ ಸರ್ವಸ್ವವನ್ನೂ-ಮನಸ್ಸು-ಬುದ್ಧಿ-ಹೃದಯ-ಆತ್ಮವನ್ನೇ ಭಗವಂತನಿಗೆ ಸಮರ್ಪಣೆ ಮಾಡಿಕೊಳ್ಳುವಂತಹ ಸ್ಥಿತಿ. ಹುಟ್ಟಿದ ಮಗು ತಾಯಿ ನನ್ನ ಕಾಪಾಡುತ್ತಾಳೆ ಎಂಬ ಅಚಲವಾದ ನಂಬಿಕೆ ಇಂದ ತಾಯಿಯ ಬಳಿಯಲ್ಲಿ ಹೋಗುತ್ತದೆಯೋ ಹಾಗೆ ತಾಯಿ ಮಗುವಿಗೆ ಕಾಲ ಕಾಲಕ್ಕೆ ಬೇಕಾದ ಆಹಾರ ರಕ್ಷಣೆ ಮಾಡುತ್ತಾಳೋ ಹಾಗೆ ದೇವರು ನಮ್ಮ ಎಲ್ಲಾ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಾನೆ ಎಂಬ ಶಾಂತ ಮನಸ್ಸಿನ ಸ್ಥಿತಿ ಆತ್ಮನಿವೇದನೆಯ ಮೊದಲ ಘಟ್ಟ.
ಒಳ್ಳೆಯದಿರಲಿ, ಕೆಟ್ಟದಿರಲಿ, ಬಾಹ್ಯ ಅಥವಾ ಆಂತರಿಕವಿರಲಿ, ಅದೆಲ್ಲವನ್ನೂ ಜಗತ್ಪ್ರಭುವಾದ ದೇವರಲ್ಲಿ ಸಂಪೂರ್ಣ ತೆರೆದ ಮನಸ್ಸಿನಿಂದ ಮಂಡಿಸುವುದು. ನಮ್ಮ ಎಲ್ಲ ಭಾರವನ್ನು ದೇವರಿಗೆ ವಹಿಸಿದರೆ ದೇವರು ಖಂಡಿತ ನಮ್ಮನ್ನು ರಕ್ಷಿಸುತ್ತಾನೆ. ಕೆಲವರು ಆತ್ಮನಿವೇದನೆ ಅಸಹಾಯಕ ತನದ ಕೊನೆಯ ಹಂತ ಎಂದು ಜರಿಯುತ್ತಾರೆ. ನಿಜ ಅರ್ಥದಲ್ಲಿ ಎಲ್ಲವೂ ಇದ್ದು ಎಲ್ಲವನ್ನು ತ್ಯಜಿಸಿ ದೇವರಲ್ಲಿ ನೀನೆ ರಕ್ಷಕ ಎಂದು ದೃಢಭಕ್ತಿಯಿಂದ ದೇವರ ಆರಾಧನೆ ಮಾಡುವುದೇ ಆತ್ಮನಿವೇದನೆ ಅದೇ ಭಕ್ತಿಯ ಪರಾಕಾಷ್ಠತೆ. ಅಷ್ಟು ಸುಲಭವಾಗಿ ಭಕ್ತಿಯ ಪರಾಕಾಷ್ಠತೆ ಹಂತ ತಲುಪಲು ಸಾಧ್ಯವಿಲ್ಲ. ಆದರೆ ನೈಜ ಜ್ಞಾನ, ಸತ್ಸಂಗ ಸಾಧನೆಯ ಮೂಲಕ ಭಕ್ತಿಯ ಪರಾಕಾಷ್ಠತೆ ಹಂತ ತಲುಪಬಹುದು.
ದೇವರ ಹತ್ತಿರ ಮನಸ್ಸಿನ ದ್ವಂದ್ವವನ್ನು ತ್ಯಜಿಸಿ, ಭಕ್ತಿಯಿಂದ, ಸತ್ಯ, ಧರ್ಮ ನಿಷ್ಠೆಯಿಂದ, ಎಲ್ಲ ವಿಚಾರಗಳನ್ನು ದೇವರಲ್ಲಿ ನಿವೇದನೆ ಮಾಡಿಕೊಂಡಾಗ ಮನಸ್ಸಿಗೆ ನೆಮ್ಮದಿ ಕಾಣಬಹುದು, ಜೊತೆಗೆ ಜೀವನೋತ್ಸಾಹ ಹೆಚ್ಚಾಗಬಹುದು. ಕಷ್ಟ ಒದಗಿದಾಗ ಕೆಲವೊಮ್ಮೆ ಅವರ ಮೊರೆಯಿಲ್ಲದೆಯೇ ಭಗವಂತನು ಅವರುಗಳನ್ನು ಕಾಯುತ್ತಾನೆ. ಅದನ್ನು ಭಗವಂತ ಸ್ವತಃ ಶ್ರೀಮದ್ಭಗವತದಲ್ಲಿ ಅರ್ಜುನನಿಗೆ ಉಪದೇಶ ಮಾಡುವಾಗ ಹೀಗೆ ಹೇಳಿದ್ದಾನೆ.
ಅನನ್ಯಾಃ ಚಿಂತಯಂತೋ ಮಾಂ ಯೇ ಜನಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಂ ಯೋಗ-ಕ್ಷೇಮಂ ವಹಾಮ್ಯಹಂ ||
ಎಲ್ಲಾ ಚಿಂತೆಗಳನ್ನು, ಮಾಡುವ ಕಾರ್ಯಗಳನ್ನು, ನಿತ್ಯದಲ್ಲಿ ದೇವರಿಗೆ ಅರ್ಪಿಸಿ ದೇವರಲ್ಲಿ ಸಂಪೂರ್ಣ ಶರಣಾಗುತ್ತಾರೋ ಅವರಿಗೆ ವಹಾಮಿ ಅಹಮ್, ಅಂದರೆ "ನಾನು ವೈಯಕ್ತಿಕವಾಗಿ ಅಂಥ ಭಕ್ತರ ನಿರ್ವಹಣೆಯ ಹೊರೆಯನ್ನು ನಾನು ಹೊಂದುತ್ತೇನೆ" ಎಂದು ಹೇಳಿದ್ದಾನೆ.
ದೇವರು ಎರಡು ವಿಷಯಗಳನ್ನು ಭರವಸೆ ನೀಡುತ್ತಾನೆ. ಮೊದಲನೆಯದು ಯೋಗ-ಅವನು ತನ್ನ ಭಕ್ತರಿಗೆ ಅವರು ಹೊಂದಿರದ ಆಧ್ಯಾತ್ಮಿಕ ಮನಸ್ಸನ್ನು ಯೋಗದ ಮೂಲಕ ನಿಯಂತ್ರಿಸಿ ಸದಾ ಆರೋಗ್ಯವಾದ ಮನಸ್ಥಿತಿಯನ್ನು ದಯಪಾಲಿಸುತ್ತಾನೆ. ಎರಡನೆಯದು ಕ್ಷೇಮ-ಆತನ ಭಕ್ತರು ಈಗಾಗಲೇ ಹೊಂದಿರುವ ಆಧ್ಯಾತ್ಮಿಕ ಆಸ್ತಿಗಳನ್ನು, ಇಹದಲ್ಲೂ ಹಾಗೂ ಪರದಲ್ಲೂ ರಕ್ಷಿಸುತ್ತಾನೆ.
ದೇವರ ನಿಯಮವು ಒಂದೇ ಆಗಿದೆ. ನಾವು ನಮ್ಮ ಸ್ವತಂತ್ರ ಇಚ್ಛೆಯಿಂದ ವರ್ತಿಸಿದಾಗ, ನಾವು ನಮ್ಮ ಕಾರ್ಯಗಳನ್ನು ಮಾಡುವವರು ಎಂದು ಭಾವಿಸಿ, ಮತ್ತು ನಮ್ಮ ಸ್ವಂತ ಪರಾಕ್ರಮ ಮತ್ತು ಸಾಮರ್ಥ್ಯಗಳ ಮೇಲೆ ಅವಲಂಬಿತರಾದಾಗ, ದೇವರು ತನ್ನ ಅನುಗ್ರಹವನ್ನು ನೀಡುವುದಿಲ್ಲ. ಅವನು ಕೇವಲ ನಮ್ಮ ಕರ್ಮಗಳನ್ನು ಗಮನಿಸಿ ಫಲಿತಾಂಶವನ್ನು ನೀಡುತ್ತಾನೆ. ನಾವು ಆತನಿಗೆ ಭಾಗಶಃ ಶರಣಾದಾಗ ಮತ್ತು ಭಾಗಶಃ ಭೌತಿಕ ಊರುಗೋಲುಗಳ ಮೇಲೆ ಅವಲಂಬಿತರಾದಾಗ, ದೇವರು ನಮಗೆ ಭಾಗಶಃ ತನ್ನ ಕೃಪೆಯನ್ನು ನೀಡುತ್ತಾನೆ. ಮತ್ತು ನಾವು ಆತನಿಗೆ ನಮ್ಮನ್ನು ಸಂಪೂರ್ಣವಾಗಿ ಶರಣಾಗತಿಯಿಂದ ಆತ್ಮ ಅರ್ಪಿಸಿದಾಗ, ಮಾಮೇಕಂ ಶರಣಾಂ ವ್ರಜ, ದೇವರು ತನ್ನ ಸಂಪೂರ್ಣ ಕೃಪೆಯನ್ನು ನೀಡುತ್ತಾನೆ ಮತ್ತು ನಮ್ಮಲ್ಲಿರುವದನ್ನು ಸಂರಕ್ಷಿಸುವ ಮೂಲಕ ಮತ್ತು ನಮ್ಮಲ್ಲಿ ಕೊರತೆ ಒದಗಿಸುವ ಮೂಲಕ ಸಂಪೂರ್ಣ ಜವಾಬ್ದಾರಿಯನ್ನು ತಾನೇ ತೆಗೆದುಕೊಳ್ಳುತ್ತಾನೆ.