ಯೋಚನೆ ಮಿದುಳಿನಲ್ಲಿ ಪರಿಣಾಮ ಉದರದಲ್ಲಿ
ಜಗತ್ತಿನಲ್ಲಿರುವ ದೇಹಗಳಲ್ಲಿ ನಮ್ಮದೂ ಒಂದು. ನಮ್ಮ ದೇಹದೊಳಗೂ ಹಲವು ಪ್ರಪಂಚಗಳಿವೆ; ಆದರೆ ಅವು ನಮ್ಮ ಬೆತ್ತಲೆ ಇಂದ್ರಿಯಗಳಿಗೆ ಗೋಚರಿಸುವುದಿಲ್ಲ. ನಮ್ಮ ದೇಹದೊಳಗಿನ ಪ್ರತಿಯೊಂದು ಅಂಗವೂ ಮಿಲಿಯಗಟ್ಟಲೆ ಜೀವಕೋಶಗಳ ಒಂದು ಸಹಕಾರಿ ಘಟಕ. ಆ ಒಂದೊಂದು ಘಟಕದಲ್ಲಿರುವ ಒಂದೊಂದು ಜೀವಕೋಶವೇ ಒಂದು ಪ್ರತ್ಯೇಕ ಜಗತ್ತು! ಏಕೆಂದರೆ; ಪ್ರತಿಯೊಂದು ಜೀವಕೋಶದಲ್ಲಿಯೂ ವಿವಿಧ ಹಂತಗಳ ಶ್ರೇಣೀಕೃತ ವ್ಯವಸ್ಥೆಯಿದೆ; ಅಣುಗಳು, ಪರಮಾಣುಗಳು ಗುನುಗುವ ಒಂದೊಂದು ಬ್ರಹ್ಮಾಂಡವೇ ಇದೆ!
ಇಷ್ಟೆಲ್ಲಾ ವಿವರಣೆ ಏಕೆಂದರೆ, ನಮ್ಮ ಪ್ರತಿ ಆಲೋಚನೆ, ಆ ಆಲೋಚನೆಗೆ ಮೂಡಿಬರುವ ಪ್ರತಿಯೊಂದು ಪ್ರತಿಕ್ರಿಯೆ, ಆ ಪ್ರತಿಕ್ರಿಯೆಗೆ ಸ್ಫುರಿಸುವ ಪ್ರತಿಸ್ಪಂದನೆ, ಪ್ರತಿಸ್ಪಂದನೆಯಿಂದ ಉಂಟಾಗುವ ಭಾವನೆ, ಭಾವನೆಯಿಂದ ಹೊರಹೊಮ್ಮುವ ಪರಿಣಾಮ-ಹೀಗೆ ಪ್ರತಿಯೊಂದು ಘಟನಾವಳಿಯೂ ಪ್ರತೀ ಜೀವಕೋಶದಲ್ಲಿ ನಿರಂತರವಾಗಿ ದಾಖಲಾಗುತ್ತಲೇ ಇರುತ್ತದೆ. ಈ ಸರಣಿ ದಾಖಲಾತಿಯೇ ನಮ್ಮ ಕರ್ಮ. ಇದು ದಿನನಿತ್ಯ ಪ್ರತಿಕ್ಷಣ ನಮ್ಮಲ್ಲಿ ನಡೆಯುವ ಪ್ರಕ್ರಿಯೆ. ಇವೆಲ್ಲವುಗಳಿಗೆ ಮೂಲ ಮಿದುಳಿನಲ್ಲಿ ಪ್ರತಿಕ್ಷಣ ಸೃಷ್ಟಿಯಾಗುವ ಯೋಚನೆಗಳು. ಅದೂ ಎಷ್ಟಂದರೆ, ಪ್ರತಿದಿನ ಸರಾಸರಿ ೬೦,೦೦೦-೭೦,೦೦೦ದಷ್ಟು. ಒಂದು ಆಶ್ಚರ್ಯಕರ ಸಂಗತಿಯೆಂದರೆ; ಈ ಯೋಚನೆಗಳ ಪರಿಣಾಮ ಉಂಟಾಗುವುದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ. ಅದರಲ್ಲೂ ಮುಖ್ಯವಾಗಿ ಉದರದಲ್ಲಿ! ಹೀಗಾಗಿ ನಮ್ಮ ಉದರ ಅಥವಾ ಜೀರ್ಣಾಂಗ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ನಾವು ವಿವೇಚನೆಯಿಂದ ನಿರ್ಧರಿಸಿಕೊಂಡರೆ ಯೋಚನೆಗಳನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಬಗೆ ಹೇಗಿರಬೇಕು ಎಂಬುದನ್ನೂ ನಿರ್ಧರಿಸಬಹುದು! ನಾವು ಋಣಾತ್ಮಕ ವಿಚಾರಗಳ ಮೇಲೆ ಹೆಚ್ಚು ಕೇಂದ್ರೀಕೃತರಾಗದೆ ಸಕಾರಾತ್ಮಕವಾಗಿ ಸಾಧನೆಯನ್ನು ಹೆಚ್ಚಿಸುತ್ತಾ ಹೋಗುವುದು ನಾವು ಪ್ರಕೃತಿಗೆ ಪ್ರತಿಯಾಗಿ ನೀಡಬಹುದಾದ ಯೋಗ್ಯ ಪಾಲುದಾರಿಕೆಯಾಗುತ್ತದೆ. ಈ ಪಾಲುದಾರಿಕೆ ‘ವಿಶ್ವಕಲ್ಯಾಣ’ದಲ್ಲಿ ನಮ್ಮ ಕೊಡುಗೆ. ಈ ಎಲ್ಲಾ ಪ್ರಕ್ರಿಯೆಗಳ ಮೂಲಸ್ಥಾನ ಆಜ್ಞಾಚಕ್ರ. ಆಜ್ಞಾಚಕ್ರವು ಭ್ರೂಮಧ್ಯದಲ್ಲಿದೆ. (ಹುಬ್ಬುಗಳ ನಡುವಿನ ಬಿಂದು). ಈ ಚಕ್ರದ ವೈಶಿಷ್ಟ್ಯವೇನೆಂದರೆ; ನಮ್ಮ ದೇಹವು ಪರಮಾತ್ಮನಿಂದ ಆಜ್ಞೆಗಳನ್ನು ಈ ಚಕ್ರದ ಮೂಲಕ ಸ್ವೀಕರಿಸುತ್ತದೆ ಎಂಬುದು. ಮಾತ್ರವಲ್ಲ; ಆಜ್ಞಾಚಕ್ರವು ಪಿಟ್ಯುಟರಿ ಗ್ರಂಥಿ, ಕೆಳಮೆದುಳು, ಬೆನ್ನುಹುರಿ, ಎಡಗಣ್ಣು, ಮೂಗು, ಕಿವಿ ಮೇಲೆ ಪ್ರಭಾವ ಬೀರುತ್ತದೆ. ಬುದ್ಧಿಶಕ್ತಿ, ಜ್ಞಾಪಕಶಕ್ತಿ, ಏಕಾಗ್ರತೆ, ಶ್ರದ್ಧೆ, ಚೇತನ, ಅತೀಂದ್ರಿಯ ಶಕ್ತಿಯ ಸಾಧನೆಗೆ ಸಹಕರಿಸುತ್ತದೆ.
ನಾವು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗಿನ ಸಮಯಾವಧಿಯಲ್ಲಿ ನಮ್ಮಲ್ಲಿ ಮೂಡುವ ಆಲೋಚನೆಗಳು, ಅವುಗಳಿಗೆ ನಮ್ಮ ಪ್ರತಿಕ್ರಿಯೆಗಳು, ಇಡೀ ದಿನದ ನಮ್ಮ ಓಡಾಟ, ನಡವಳಿಕೆ, ಸಹವಾಸ, ಕಾರ್ಯಚಟುವಟಿಕೆಗೆ ಸಂಬಂಧಿಸಿದ ಪ್ರತಿಯೊಂದು ಆಲೋಚನೆಯೂ ನಮ್ಮ ಆಹಾರದೊಂದಿಗೆ ಮಿಳಿತವಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಸೇರಿಕೊಳ್ಳುತ್ತದೆ. ಅಂದರೆ; ಆ ದಿನದ ಒಟ್ಟು ಫಲಿತಾಂಶದ ಆಧಾರದ ಮೇಲೆ ನಮ್ಮ ಮರುದಿನದ ‘ಉದರಸ್ಥಿತಿ’ ನಿರ್ಧರಿಸಲ್ಪಡುತ್ತದೆ! ಬಹುಶಃ ಈ ವಿವರಣೆಯಿಂದ ಮಿದುಳು ಮತ್ತು ಉದರದ ನಡುವಿನ ಅವಿನಾಭಾವ ಸಂಬಂಧವನ್ನು ತಿಳಿದುಕೊಳ್ಳಲು ನಿಮಗೆ ಸಾಧ್ಯವಾಗಿರಬಹುದು. ನಾಭಿ ಅಥವಾ ಹೊಕ್ಕಳು ಭಾಗವನ್ನು ‘ಮಣಿಪುರ ಚಕ್ರ’ವೆಂದು ಗುರುತಿಸಲಾಗಿದೆ. ಮಣಿಪುರ ಚಕ್ರವೆಂಬ ಈ ನಾಭಿಕೇಂದ್ರವು ಸೋಲಾರ್ ಪ್ಲೆಕ್ಸಸ್ ಬಳಿಯಿದ್ದು ಇದು ಮಿದುಳು ನಿರ್ವಹಿಸುವ ಒಟ್ಟು ಕೆಲಸದ ಅರ್ಧಭಾಗದಷ್ಟು ಕಾರ್ಯನಿರ್ವಹಿಸುತ್ತದೆ. ಹೀಗಾಗಿಯೇ ನಾಭಿ ಅಥವಾ ಹೊಕ್ಕಳು ಭಾಗವನ್ನು ಎರಡನೆಯ ಮಿದುಳು ಎನ್ನಲಾಗುತ್ತದೆ. ಮಣಿಪುರ ಚಕ್ರವು ಕ್ರಿಯಾಶಕ್ತಿ, ಇಚ್ಛಾಶಕ್ತಿ, ಮನೋಭಾವಗಳ ಸಮ್ಮಿಲನ ಕೇಂದ್ರ. ಇಲ್ಲಿ ಆಕಾಶ ಮತ್ತು ಪೃಥ್ವಿಶಕ್ತಿಗಳು ಸಮ್ಮಿಲನಗೊಂಡು ಉಷ್ಣತೆ ಉತ್ಪತ್ತಿಯಾಗುತ್ತದೆ. ಸಿಟ್ಟು, ಹೆದರಿಕೆ, ಚಿಂತೆ, ಗಡಿಬಿಡಿ, ದ್ವೇಷ, ಹೊಟ್ಟೆಕಿಚ್ಚುಗಳಿಂದ ಮುಕ್ತಿಗೆ ಮಣಿಪುರ ಚಕ್ರವು ಸಮತೋಲನದಲ್ಲಿರಬೇಕು. ಮಣಿಪುರ ಚಕ್ರವು ಸಮತೋಲನದಲ್ಲಿದ್ದಾಗ ಜಠರ, ಪಿತ್ತಜನಕಾಂಗ, ಕರುಳು, ಅಡ್ರಿನಾಲಿನ್ ಗ್ರಂಥಿಗಳು, ಮೇದೋಜೀರಕ ಗ್ರಂಥಿ, ಹೃದಯಬಡಿತ, ಸಕ್ಕರೆ ಪ್ರಮಾಣ, ಶ್ವಾಸೋಚ್ಛ್ವಾಸ ಕ್ರಮಬದ್ಧವಾಗುವುದು. ಈ ಚಕ್ರವು ಅಸಮತೋಲನಕ್ಕೆ ಒಳಗಾದಾಗ ವಿವಾಹ ಸಂಬಂಧಿ ಸಮಸ್ಯೆಗಳು, ಕೌಟುಂಬಿಕ ಸಂಬಂಧಗಳಲ್ಲಿ ಏರುಪೇರುಂಟಾಗುತ್ತವೆ.
ಮನಸ್ಸು-ಆಲೋಚನೆ-ಭಾವನೆಗಳ ನಡುವಿನ ಸಂಯೋಜನೆಯನ್ನು, ಸಂಬಂಧವನ್ನು ಸರಿಯಾಗಿ ಅರ್ಥೈಸಿಕೊಂಡವರಿಗೆ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವುದು ಕಡಿಮೆ. ಆಧುನಿಕ ಜೀವನಪದ್ಧತಿ ಮತ್ತು ಜೀವನಶೈಲಿಯಲ್ಲಿ ಮಿಂದೇಳುತ್ತಿರುವ ನಮಗೆ ನಮ್ಮ ದೇಹದೊಳಗಿರುವ ಅಂಗಾಂಗಗಳ ವ್ಯವಸ್ಥೆ ಮತ್ತು ಸಂಯೋಜನೆಯನ್ನು ತಿಳಿದುಕೊಳ್ಳುವ ಪ್ರೇರಣೆ ಉಂಟಾಗುವುದು ಸಾಮಾನ್ಯವಾಗಿ ಉದರಸಂಬಂಧಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗಲೇ! ನಾವು ಉಂಡ ಆಹಾರದ ಸ್ಥೂಲಭಾಗ ಮಲರೂಪದಲ್ಲಿ ವಿಸರ್ಜಿಸಲ್ಪಡುತ್ತದೆ; ಮಧ್ಯಮಭಾಗವು ಶರೀರವಾಗುತ್ತದೆ ಮತ್ತು ಸೂಕ್ಷ್ಮಭಾಗವು ಮನಸ್ಸಾಗುತ್ತದೆ. ಇದು ಪ್ರಕೃತಿ ಅಳವಡಿಸಿರುವ ನಿಯಮ. ಮನಸ್ಸೊಂದರಲ್ಲಿಯೇ ಪ್ರಕೃತಿ ನಿಯಮಗಳಂತೆ ಕೆಲಸ ಮಾಡುವ ಭಾಗವನ್ನು ಮನಸ್ಸೆಂದೂ; ಪ್ರಾಕೃತಿಕ ಪ್ರಚೋದನೆಗಳ ಯೋಗ್ಯಾಯೋಗ್ಯತೆಗಳನ್ನು ಅನುಸರಿಸಿ ಉಂಟಾಗುವ ಪರಿಣಾಮಗಳ ಆಧಾರದ ಮೇಲೆ ನಿರ್ಧರಿಸಿ ಅವುಗಳಿನುಸಾರ ಕೆಲಸ ಮಾಡುವ ಅಥವಾ ಮಾಡದಿರುವ ನಿರ್ಧಾರ ಮಾಡುವ ಭಾಗವನ್ನು ಬುದ್ಧಿ, ವಿವೇಕ, ಜ್ಞಾನ, ವಿಜ್ಞಾನ ಎಂಬುದಾಗಿ ಕರೆಯುತ್ತಾರೆ. ಈ ವಿಜ್ಞಾನವೇ ವಿಜ್ಞಾನಮಯಕೋಶ. ನಮಗೆ ಬುದ್ಧಿಯಿದೆಯೇ ವಿನಃ ನಾವೇ ಬುದ್ಧಿ ಅಥವಾ ವಿಜ್ಞಾನವಲ್ಲ!
ಗರ್ಭಸ್ಥ ಶಿಶು, ಮೊಟ್ಟೆಯಲ್ಲಿರುವ ಮರಿ ಉಸಿರಾಡುವುದಿಲ್ಲ; ಆದರೂ ಅವು ಸತ್ತಿರುವುದಿಲ್ಲ. ದ್ರವಸಾರಜನಕದಲ್ಲಿ ಬಹಳ ಕಾಲದವರೆಗೂ ಇರುವ ಶೇಖರಿತ ವೀರ್ಯಾಣುಗಳಿಗೆ ಉಸಿರಾಡುವ ಸಾಧ್ಯತೆಯೇ ಇಲ್ಲವಾದರೂ ಅವುಗಳಿಂದಲೇ ಕೃತಕ ಗರ್ಭಧಾರಣೆಯಿಂದ ಜೀವಿಗಳ ಜನನವಾಗುತ್ತದೆ. ಬೀಜಗಳು ಉಸಿರಾಡುವುದಿಲ್ಲವಾದರೂ ಅವುಗಳಿಂದಲೇ ಗಿಡಗಳು ಹುಟ್ಟುತ್ತವೆ. ಆಯಾಸ, ನಿರಾಶೆ, ದುಃಖ, ಚಿಂತೆ, ನಿರುತ್ಸಾಹಗಳಿದ್ದಾಗ ದೇಹ ಮತ್ತು ಪ್ರಾಣಗಳಿದ್ದರೂ ಶರೀರವು ಸುಮ್ಮನಿರುತ್ತದೆ. ಏಕೆಂದರೆ ಆಗ ಏನನ್ನಾದರೂ ಮಾಡಬೇಕೆಂಬ ಸಂಕಲ್ಪ, ಆಶೆ, ಉತ್ಸಾಹಗಳಿರುವುದಿಲ್ಲ. ಈ ಆಶೆ, ಉತ್ಸಾಹ, ಸಂಕಲ್ಪ, ದುಃಖ, ಸುಖ ಮುಂತಾದ ಭಾವನೆಗಳನ್ನೆಲ್ಲ ‘ಮನಸ್ಸು’ ಎಂಬ ಒಂದೇ ಶಬ್ದದಿಂದ ಶಾಸ್ತ್ರವು ಕರೆಯುತ್ತದೆ. ಶರೀರ ಮತ್ತು ಪ್ರಾಣಗಳು ಮನಸ್ಸಿನ ಸಾಧನಗಳು ಮಾತ್ರ. ಎಂದರೆ ಮನಸ್ಸೇ ಕ್ರಿಯೆಯನ್ನು ಪ್ರಚೋದಿಸುತ್ತದೆ. ಮನಸ್ಸು ಪ್ರಚೋದಿಸದಿದ್ದರೆ ದೇಹವು ಜಡವಾಗಿಯೇ ಇರುತ್ತದೆ. ಪ್ರಾಣ ಮತ್ತು ದೇಹಗಳಿಗೆ ಚೈತನ್ಯವನ್ನು ನೀಡುವುದು ಮನಸ್ಸೇ. ಈ ಮನಸ್ಸೇ ಮನೋಮಯಕೋಶ. ನಮಗೆ ಮನಸ್ಸಿದೆ; ಆದರೆ ನಾವೇ ಮನಸ್ಸಲ್ಲ!
ನಮ್ಮ ಅನಿಸಿಕೆಗಳೇ ನಮ್ಮನ್ನು ಪುನಃ ಪುನಃ ನಿಶ್ಯಕ್ತನನ್ನಾಗಿಯೂ, ಸಶಕ್ತನನ್ನಾಗಿಯೂ ಮಾಡುವುದು. ನಮ್ಮ ಸುಪ್ತಪ್ರಜ್ಞೆಯ ನಿರೀಕ್ಷೆಗೆ ಅನುಗುಣವಾಗಿಯೇ ಆರೋಗ್ಯ ಕರಾರುವಾಕ್ಕಾಗಿ ಪರಿಣಾಮ ಕಾಣುತ್ತದೆ. ವಿದ್ಯುಚ್ಛಕ್ತಿ ಅಥವಾ ಗುರುತ್ವಾಕರ್ಷಣ ಶಕ್ತಿಯಂತೆಯೇ ಭಾವನೆಯೂ ಒಂದು ಶಕ್ತಿ. ಪರಮಾತ್ಮನ ಸರ್ವಪ್ರಜ್ಞೆಯ ಒಂದು ಕಿಡಿ ಮಾನವ ಮನಸ್ಸು. ಮನಸ್ಸು ತೀವ್ರತರವಾಗಿ ಏನೆಲ್ಲವನ್ನು ನಂಬಿಕೊಳ್ಳುವುದೋ ಅದು ಆ ಕೂಡಲೇ ನಡೆದುಹೋಗುತ್ತದೆ. ಯಾವುದಾರೊಂದು ಭಾವನೆಯು ನಮ್ಮ ಮನಸ್ಸಿನಲ್ಲಿ ಬೆಳೆದಾಗ ಬೆಳೆಯುತ್ತ ಬೆಳೆಯುತ್ತ ಮನಸ್ಸಿನಲ್ಲಿ ಅತಿಯಾಗಿ ತುಂಬಿಕೊಂಡು, ನಮ್ಮನ್ನಿಡಿಯಾಗಿ ಆವರಿಸಿಕೊಂಡುಬಿಡುತ್ತದೆ. ಭಾವನೆಯ ಒತ್ತಡ ಹೆಚ್ಚಾಗಿ ಅದನ್ನು ಯಾವುದಾದರೊಂದು ರೂಪದಿಂದ ಹೊರಹೊಮ್ಮಿಸುತ್ತದೆ; ವಾತಾವರಣದಲ್ಲಿ ಆವಿಯ ಒತ್ತಡ ಹೆಚ್ಚಿ ಮಳೆ ಸುರಿಯುವಂತೆ! ಅದು ಅಸ್ವಸ್ಥತೆ, ಆವೇಶ, ಆವೇಗ, ಭಾವಾವೇಶ-ಹೀಗೆ ಯಾವುದೇ ಸ್ಥಿತಿಯನ್ನು ತಲುಪಬಹುದು; ಕವಿತೆಯಾಗಿ ಹೊರಬರಬಹುದು; ಕಲಾಕೃತಿಯಾಗಿ ಬರಬಹುದು; ರಾಗವಾಗಿ ಬರಬಹುದು; ಕಥೆಯಾಗಿ ಬರಬಹುದು; ಮಧುರಗೀತೆಯಾಗಬಹುದು. ಇದನ್ನೇ ‘ತನ್ಮಯತೆ’ ಎನ್ನುವುದು. ತನ್ಮಯತೆಯ ಮೂಲವೇ ಸೃಜನಶೀಲ ಚಿಂತನೆ.