For the best experience, open
https://m.samyuktakarnataka.in
on your mobile browser.

ರಕ್ತಸಿಕ್ತ ಇತಿಹಾಸ

03:06 AM Aug 15, 2024 IST | Samyukta Karnataka
ರಕ್ತಸಿಕ್ತ ಇತಿಹಾಸ

ಇದು ಸುಮಾರು ನೂರೈವತ್ತರಿಂದ ಎರಡು ನೂರು ವರ್ಷಗಳ ಹಿಂದೆ ನಡೆದದ್ದು ಎಂದು ಹಿರಿಯರು ಹೇಳುತ್ತಾರೆ. ಬೀಳಗಿಯ ದೇಶಪಾಂಡೆಯವರು ಮತ್ತು ಹತ್ತಿರದ ಮತ್ತೊಂದು ಊರಿನ ದೇಶಪಾಂಡೆಯವರು ದಾಯಾದಿಗಳು. ಇಬ್ಬರೂ ದೊಡ್ಡ ಜಮೀನುದಾರರು. ಯಾವ ಸಮೃದ್ಧಿಗೂ ಕೊರತೆ ಇರಲಿಲ್ಲ. ಬೇರೆ ವೈರಗಳಿಗಿಂತ ದಾಯಾದಿ ವೈರ ಬಲು ಕೆಟ್ಟದ್ದು. ಎರಡೂ ಮನೆತನಗಳ ನಡುವೆ ಆಗಾಗ ಸಣ್ಣಪುಟ್ಟ ವಾದವಿವಾದಗಳಾಗುತ್ತಿದ್ದವು. ನಿಧಾನಕ್ಕೆ ಕೆಂಡಮುಟ್ಟಿದ ಬೂದಿಯಂತಿದ್ದ ದ್ವೇಷ ಭುಗಿಲೆದ್ದು ಪ್ರಜ್ವಲವಾಯಿತು. ಹೊರಗಡೆ ತೋರಿಕೆಗೆ ಇವರು ಬಂಧುಗಳೇ. ಆದರೆ ಇಬ್ಬರ ನಡುವೆ ಶೀತಲ ಕಲಹ ನಡೆಯುತ್ತಿತ್ತು.
ಒಂದು ದಿನ ಮತ್ತೊಂದು ಊರಿನ ದೇಶಪಾಂಡೆಯವರು ಬೀಳಗಿಗೆ ಬಂದು ದೇಶಪಾಂಡೆ ಮನೆತನದ ಎಲ್ಲರನ್ನೂ ಕರೆದು ಕೂಡ್ರಿಸಿ ತಮ್ಮ ಊರಿಗೆ ಬರುವಂತೆ ಆಮಂತ್ರಣ ನೀಡಿದರು. ಮನೆಯಲ್ಲಿ ಅತ್ಯಂತ ಸಂಭ್ರಮದ ಸತ್ಯನಾರಾಯಣ ವ್ರತದ ಪೂಜೆ ಇರುವುದರಿಂದ ಮನೆತನದ ಪುಟ್ಟ ಮಕ್ಕಳು, ವೃದ್ಧರು, ಬಸುರಿ ಹೆಂಗಸರು ಎಲ್ಲರೂ ತಪ್ಪದೇ ಬರಬೇಕು. ಈ ಸಂದರ್ಭದಿಂದಾದರೂ ಎರಡೂ ಮನೆತನಗಳ ನಡುವಿನ ದ್ವೇಷ ಕೊಚ್ಚಿ ಹೋಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಬೀಳಗಿಯ ದೇಶಪಾಂಡೆಯವರು ಇದನ್ನು ನಂಬಿದರು. ಸತ್ಯನಾರಾಯಣ ಪೂಜೆಗೆ ಬರುವುದಿಲ್ಲವೆಂದು ಹೇಳಲಾಗುತ್ತದೆಯೇ? ಆಯ್ತು ಎಲ್ಲರೂ ಬರುತ್ತೇವೆ ಎಂದು ಮಾತು ಕೊಟ್ಟರು. ಹೊರಡುವ ತಯಾರಿಗಳು ನಡೆದವು. ಮನೆಗೆ ಒಂದೋ ಎರಡೋ ಎತ್ತಿನ ಬಂಡಿಗಳಂತೆ ಸುಮಾರು ಇಪ್ಪತ್ತೈದು ಎತ್ತಿನ ಬಂಡಿಗಳು ತಯಾರಾದವು. ಬಂಡಿಯ ಒಳಗೆ ಹುಲ್ಲು ಹಾಕಿ, ಮೆತ್ತನೆಯ ಜಮಖಾನೆ ಹಾಸಿ, ಬಂಡಿಯ ಮೇಲೆ ಕಮಾನಾಕಾರದ ಸವಾರಿ ಕಟ್ಟಿ ಅದರ ಮೇಲೆ ಒಂದು ಜಮಾಖಾನೆ ಹೊಚ್ಚಿ ನೆರಳು ಮಾಡಿ ಸಿದ್ಧಮಾಡಿದರು ಆಳುಗಳು. ಎತ್ತುಗಳ ಮೈತೊಳೆದು, ಕೋಡುಗಳಿಗೆ ಬಣ್ಣ ಹಚ್ಚಿ, ಕೊರಳಲ್ಲಿ ಸೊಬಗಿನ ಜತಿಗಿ ಕಟ್ಟಿ ಬಂಡಿಗಳು ಸಿದ್ಧವಾದವು.
ಪೂಜೆಯ ದಿನ ಬೀಳಗಿ ದೇಶಪಾಂಡೆಯವರ ಎಲ್ಲ ಮನೆಗಳಲ್ಲಿ ಸಂಭ್ರಮ. ಬೆಳಿಗ್ಗೆ ಎಲ್ಲರೂ ಎದ್ದು ಸ್ನಾನ ಪೂಜೆಗಳನ್ನು ಮುಗಿಸಿ, ಮಕ್ಕಳನ್ನೆಲ್ಲ ಸಿದ್ಧಪಡಿಸಿ, ಬೇಗ ಬೇಗ ಉಪಾಹಾರ ಮಾಡಿ, ಹೊಸ ಬಟ್ಟೆಗಳನ್ನುಟ್ಟುಕೊಂಡು ತಮ್ಮ ತಮ್ಮ ಸವಾರಿ ಬಂಡಿಗಳನ್ನೇರಿದರು. ಹೆಣ್ಣುಮಕ್ಕಳ ಕಲಕಲ ಧ್ವನಿ, ಮಕ್ಕಳ ಅಳು, ಕೂಗಾಟಗಳು, ಹಿರಿಯ ಯಜಮಾನರ, “ಹಾಂ, ನಡೀರಿನ್ನ, ತಡಾ ಆತು. ಪೂಜಿ ಮುಗಿಯೂದ್ರಾಗ ಅಲ್ಲಿರಬೇಕು, ಅವಸರಾ ಮಾಡ್ರಿ” ಗರ್ಜನೆಗಳು ಇವುಗಳಿಂದ ಸಂಭ್ರಮ ಮುಗಿಲಿಗೇರಿತ್ತು. ಸಾಲಾಗಿ ಬಂಡಿಗಳು ಹೊರಟವು. ಆದರೆ ಗೋದವ್ವ ಎಂಟು ತಿಂಗಳ ಬಸುರಿ. ಅವಳಿಗೆ ಉಳಿದವರ ಹಾಗೆ ಬೇಗ ಬೇಗ ಮಾಡಲಾಗಲಿಲ್ಲ. ಪಕ್ಕದ ಮನೆಯ ಹಿರಿಯರಾದ ಕಾರಜೋಳ ಆಚಾರ್ಯರು “ಸಾವಕಾಶ ಮಾಡವಾ, ಧಾವತೀ ಮಾಡಕೋಬ್ಯಾಡ. ಅವರೆಲ್ಲ ಮುಂದ ಹೋಗಲಿ, ನಾವು ಸಾವಕಾಶ ಹೋಗೋಣಂತ. ನಮ್ಮ ಬಂಡಿ ಇಟಗೊಂಡೇನಿ. ಅದರಾಗ ನಾನೂ, ನೀನೂ ಹೋಗೋಣಂತ” ಎಂದು ಸಮಾಧಾನ ಮಾಡಿದರು.
ಕೊರಳಗಂಟೆಗಳ ಸದ್ದು ಮಾಡುತ್ತ, ಗೋಣು ಅಲ್ಲಾಡಿಸುತ್ತ ದನಗಳು ಬಂಡಿಗಳನ್ನೆಳೆದು ನಡೆದವು. ಬಂಡಿಗಳ ಒಳಗೆ ಜನರ ಮಾತು, ಹೆಣ್ಣುಮಕ್ಕಳ ಹಾಡು, ಹರಟೆ, ಮಕ್ಕಳ ಕುಣಿದಾಟ ಇವುಗಳಲ್ಲಿ ದಾರಿ ಸವೆದದ್ದು ತಿಳಿಯಲಿಲ್ಲ. ಇನ್ನೇನು ಆ ಊರು ಎರಡು ಮೈಲಿ ಇದೆ ಎನ್ನುವಾಗ ತುಂಬ ಇಕ್ಕಟ್ಟಿನ ದಾರಿ ಬಂತು. ಅಲ್ಲಿ ಬಂಡಿಗಳು ತೀರ ಇಳಿಮುಖವಾಗಿ ನಡೆದು ತುಸು ನಿಂತು ಮತ್ತೆ ಏರಿಯಲ್ಲಿ ನಡೆಯಬೇಕು. ಅಲ್ಲಿ ಕೆಲವು ಗಂಡಸರು ದಾರಿಯಲ್ಲಿ ನಿಂತು ಒಂದೊಂದಾಗಿಯೇ ಬಂಡಿಗಳು ಹೋಗುವಂತೆ ಮಾರ್ಗದರ್ಶನ ಮಾಡುತ್ತಿದ್ದರು. ಹೀಗಾಗಿ ಒಂದೊಂದು ಬಂಡಿಯೂ ಸುಮಾರು ಹದಿನೈದು ನಿಮಿಷ ಅಲ್ಲಿ ನಿಲ್ಲಬೇಕಿತ್ತು. ಅಲ್ಲಿ ಮುಂದೆ ನಡೆದಿತ್ತು ರುದ್ರನರ್ತನ! ಬೀಳಗಿ ದೇಶಪಾಂಡೆಯವರು ಹೋದದ್ದು ಸತ್ಯನಾರಾಯಣ ಪೂಜೆಗಲ್ಲ, ಮಾರಣ ಹೋಮಕ್ಕೆ! ತಲೆಮಾರುಗಳ ದ್ವೇಷ ಈ ರೀತಿಯ ಕೊನೆಯನ್ನು ಸಿದ್ಧಪಡಿಸಿತ್ತು. ಈ ದೇಶಪಾಂಡೆಯವರ ಮನೆತನದ ಒಂದು ಜೀವವೂ ಬದುಕಿ ಉಳಿಯದಂಥ ಹಂಚಿಕೆ ಇದು. ಒಂದು ಬಂಡಿ ಏರಿಯನ್ನು ಏರಿದೊಡನೆ ಹಿರಿದ ಕತ್ತಿಯೊಂದಿಗೆ ಸಿದ್ಧರಾದ ಹತ್ತಾರು ಜನ ನಿಂತಿದ್ದವರು ಬಂಡಿಯಲ್ಲಿಯ ಜನರನ್ನು ಹೊರಗಳೆದು ಬರ್ಬರವಾಗಿ ಕತ್ತರಿಸಿ ಬಿಸಾಕಿ ಬಂಡಿಯನ್ನು ದೂರ ತೆಗೆದುಕೊಂಡು ಹೋಗಿ ಬಿಡುತ್ತಿದ್ದರು. ಮತ್ತೆ ಮುಂದಿನ ಬಂಡಿ ಬಲಿಗಾಗಿ ಬರಬೇಕು. ಹೀಗೆ ಬಂಡಿಯ ನಂತರ ಮತ್ತೊಂದು ಬಂಡಿಯಂತೆ ಜನರು ಆಹುತಿಯಾದರು. ತಂದೆ-ತಾಯಂದಿರ ಎದುರಿಗೆ ಮಕ್ಕಳ ಹತ್ಯೆ, ಮಕ್ಕಳ ಮುಂದೆಯೇ ತಾಯಿ ತಂದೆಯವರ ಹನನ, ತಮಗೆ ಅತ್ಯಂತ ಪ್ರಿಯರ ಸಾವನ್ನು ಕಣ್ಣಾರೆ ನೋಡುವ ದೌರ್ಭಾಗ್ಯ ಅವರೆಲ್ಲರದು. ಚೀರಾಡಲೂ ಸಾಧ್ಯವಿಲ್ಲದ ಸ್ಥಿತಿ. ಅಲ್ಲಿ ಬಿದ್ದ ಹೆಣಗಳ ರಾಶಿ, ರಕ್ತದ ಚೆಲ್ಲಾಟ ಅವರನ್ನು ಭಯಭೀತರನ್ನಾಗಿ ಮಾಡಿತ್ತು. ಚೀರಿದರೂ ಕೇಳದಷ್ಟು ದೂರದಲ್ಲಿದ್ದವು ಹಿಂದಿನ ಬಂಡಿಗಳು. ಒಂದು ತಾಸಿಗೂ ಮಿಕ್ಕು ನಡೆಯಿತು ನರಮೇಧ. ಹೀಗೊಂದು ಬಂಡಿ ಏರಿಯನ್ನೇರುವಾಗ ಅದನ್ನು ನಡೆಯಿಸುವ ಹರೆಯದ ಆಳು ಮನುಷ್ಯ ಯಾಕಿಷ್ಟು ತಡವಾಗುತ್ತದೆ ಎಂದು ನೊಗದ ಮೇಲೆ ಕಾಲಿಟ್ಟು ಎದ್ದು ನಿಂತು ನೋಡಿದ. ಅವನಿಗೆ ದೂರದಲ್ಲಿ ಹತ್ತಾರು ಜನ ನಿಂತದ್ದು, ಕೆಲವರ ಕೈಯಲ್ಲಿಯ ಕತ್ತಿ ಕಾಣಿಸಿತು. ಅವನು ಬಹಳ ಚುರುಕು ಬುದ್ಧಿಯ ಹುಡುಗ. ಆತ ಹಾಗೆ ನೊಗದಿಂದಲೇ ಕೆಳಗೆ ಹಾರಿ ಹಿಂದೆ ತಿರುಗಿ ಕೂಗುತ್ತ ಓಡತೊಡಗಿದ.
“ಅಪ್ಪಾ ಅವರ, ಅವ್ವಾ ಅವರ, ಏನೋ ಘಾತದ ಕೆಲಸ ನಡದೈತಿ, ಮುಂದ ಹೋಗಬ್ಯಾಡ್ರಿ. ಘಾತ ಅತು, ಘಾತ ಆತು” ಎಂದು ಚೀರುತ್ತ ಓಡತೊಡಗಿದ. ಕೊನೆಗೆ ಉಳಿದಿದ್ದ ಎರಡು ಬಂಡಿಗಳು ಹಾಗೆಯೇ ನಿಂತುಬಿಟ್ಟವು. ಈ ತರುಣ ಬೀಳಗಿಯ ಕಡೆಗೆ ಮುಖ ಮಾಡಿ ಓಡುತ್ತಲೇ ಇದ್ದ. ಕತ್ತಿ ಹಿರಿದು ನಿಂತಿದ್ದ ಜನಕ್ಕೆ ಈ ಧ್ವನಿ ಕೇಳಿಸಿತು. ಅವರು ಬಂಡಿಗಳ ಕಡೆಗೆ ಧಾವಿಸಿ ಬಂದು ಎರಡೂ ಬಂಡಿಗಳಲ್ಲಿದ್ದ ಜನರನ್ನು ಅಲ್ಲಿಯೇ ಕೊಂದು ಹಾಕಿದರು. ಇನ್ನಿಬ್ಬರು ಓಡುತ್ತಿದ್ದ ತರುಣನನ್ನು ಬೆನ್ನಟ್ಟಿದರು. ಗಾಬರಿಯಾದ ತರುಣ ಎಷ್ಟು ಓಡಿಯಾನು? ದಾಂಡಿಗರು ಹಿಂದೆ ಬಂದು ಅವನನ್ನು ನಿಲ್ಲಿಸಿ ರಸ್ತೆ ಮಧ್ಯದಲ್ಲೇ ಕತ್ತರಿಸಿ ಹಾಕಿದರು. ಇನ್ನು ಬೀಳಗಿಯ ದೇಶಪಾಂಡೆಯವರ ಸಂತತಿಯ ಒಂದು ಪಿಳ್ಳೆಯೂ ಬದುಕಲಿಲ್ಲ ಎಂಬ ತೃಪ್ತಿ ಅವರಿಗಾಯಿತು. ಹಿಂದೆ ಯಾವ ಬಂಡಿಯೂ ಇಲ್ಲ! ಕೈ ಝಾಡಿಸಿಕೊಂಡು ರಕ್ತಸಿಕ್ತವಾದ ಮೈಯನ್ನು ಹೊತ್ತು ತಮ್ಮ ಊರೆಡೆಗೆ ನಡೆದರು. ಸಂತತಿಯೇ ನಿರ್ನಾಮವಾದ ಮೇಲೆ ದ್ವೇಷ ಎಲ್ಲಿಯದು? ಸತ್ಯನಾರಾಯಣನ ನೆವದಲ್ಲಿ ಯಮನಾರಾಯಣನ ಸಂತರ್ಪಣೆ ಭರ್ಜರಿಯಾಗಿ ನಡೆದಿತ್ತು. ಮೃತ್ಯುದೇವತೆ ಅಬ್ಬರಿಸಿ ನಕ್ಕಿತ್ತು.